ಬೆಂಗಳೂರು: ದೇವನಹಳ್ಳಿಯ ಚನ್ನರಾಯಪಟ್ಟಣದ ಫಲವತ್ತಾದ ಕೃಷಿ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಬಲವಂತವಾಗಿ ಭೂಸ್ವಾಧೀನಪಡಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ರೈತ ಹೋರಾಟಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಇತ್ತೀಚೆಗೆ ಸಂಯುಕ್ತ ಹೋರಾಟ ಕರ್ನಾಟಕ ಹಮ್ಮಿಕೊಂಡಿದ್ದ ‘ದೇವನಹಳ್ಳಿ ಚಲೋ’ ಸಂದರ್ಭದಲ್ಲಿ ನಡೆದ ಪೊಲೀಸ್ ದಾಳಿಯ ನಂತರ, ರೈತರು ಮತ್ತು ಹೋರಾಟಗಾರರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಭೂ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಇಂದು (ಭಾನುವಾರ) ಭೂ ಸತ್ಯಾಗ್ರಹದ ‘ಭೂಮಿ ಬಿಡಾರ’ದ ಕಾಂ. ಬಯ್ಯಾರೆಡ್ಡಿ ವೇದಿಕೆಯಲ್ಲಿ ರೈತ ಹೋರಾಟಗಾರರು ಹಾಗೂ ವಿವಿಧ ಚಳವಳಿಗಳ ಮುಖಂಡರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಜುಲೈ 4ರಂದು ಮುಖ್ಯಮಂತ್ರಿಗಳು ಕರೆದಿರುವ ಸಭೆಯಲ್ಲಿ ದೇವನಹಳ್ಳಿ ಭೂ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸುವಂತಹ ನಿರ್ಧಾರ ಕೈಗೊಳ್ಳಬೇಕೆಂದು ಈ ವೇಳೆ ಸರ್ಕಾರವನ್ನು ಆಗ್ರಹಿಸಲಾಯಿತು.
ಸಚಿವರ ಮೇಲೆ ರೈತಪರ ನಿಲುವು ವಿಶ್ವಾಸ: ಬಡಗಲಪುರ ನಾಗೇಂದ್ರ
ಕರ್ನಾಟಕ ರಾಜ್ಯ ರೈತ ಸಂಘದ ನಾಯಕರು ಹಾಗೂ ಸಂಯುಕ್ತ ಹೋರಾಟದ ಸಂಚಾಲಕರೂ ಆದ ಬಡಗಲಪುರ ನಾಗೇಂದ್ರ ಅವರು ಮಾತನಾಡಿ, “ಜುಲೈ 2ರಂದು ಕ್ಯಾಬಿನೆಟ್ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಕ್ಯಾಬಿನೆಟ್‌ನ ಎಲ್ಲ ಸಚಿವರೂ ರೈತರ ಪರವಾದ ನಿರ್ಣಯಕ್ಕೆ ಬರುತ್ತಾರೆಂಬ ವಿಶ್ವಾಸವಿದೆ” ಎಂದರು.
“ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನೂ ಒಳಗೊಂಡಂತೆ, ಕ್ಯಾಬಿನೆಟ್‌ನ ಎಲ್ಲ ಸಚಿವರೂ ಚಳವಳಿಗಳ ಮಹತ್ವವೇನು ಎಂಬುದನ್ನು ಅರಿತವರೇ ಆಗಿದ್ದಾರೆ. ಒಂದು ವೇಳೆ ಸರ್ಕಾರದ ನಿರ್ಧಾರ ರೈತರ ವಿರುದ್ಧ ಬಂದರೆ ಈ ಚಳವಳಿ ಇನ್ನಷ್ಟು ತೀವ್ರವಾಗಿ ಮುಂದುವರೆಯಲಿದೆ. ಜುಲೈ 4ರಂದು ರೈತರು, ರೈತಮಹಿಳೆಯರು, ಕಾರ್ಮಿಕರು, ವಿದ್ಯಾರ್ಥಿಗಳು, ಚಿಂತಕರು ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಫ್ರೀಡಂ ಪಾರ್ಕ್‌ನಲ್ಲಿ ಸೇರಲಿದ್ದಾರೆ. ರಾಷ್ಟ್ರೀಯ ನಾಯಕರು ಅಂದು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ” ಎಂದು ಮಾಹಿತಿ ನೀಡಿದರು.
ಇದು ಭೂಮಿ ಉಳಿಸಿಕೊಳ್ಳಲು ರೈತರ ಬದುಕಿನ ಹೋರಾಟ: ನೂರ್ ಶ್ರೀಧರ್
ನಂತರ ಮಾತನಾಡಿದ ಹೋರಾಟಗಾರ ನೂರ್ ಶ್ರೀಧರ್ ಅವರು, “ಇಂದು ರಾಜ್ಯ ಸರ್ಕಾರದ ಮೇಲೆ ದೊಡ್ಡ ಚಾರಿತ್ರಿಕ ಹೊಣೆಗಾರಿಕೆಯಿದೆ. ಈಗಲೂ ಕ್ಯಾಬಿನೆಟ್‌ನ ಹಲವು ಸಚಿವರು ಈ ಹೋರಾಟದಲ್ಲಿರುವ ರೈತರನ್ನು ಹೆಚ್ಚಿನ ಬೆಲೆಗೆ ಭೂಮಿ ಮಾರಿಕೊಳ್ಳಲು ಕಾದಿರುವವರೆಂದು ಪರಿಗಣಿಸುತ್ತಿದ್ದಾರೆಯೇ ಹೊರತು, ಈ ರೈತ ಕುಟುಂಬಗಳ ನೈತಿಕ ಶಕ್ತಿಯನ್ನು ಅರ್ಥಮಾಡಿಕೊಂಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಇದು ಪ್ರಾಮಾಣಿಕವಾಗಿ ಭೂಮಿ ಉಳಿಸಿಕೊಳ್ಳಲಿಕ್ಕಾಗಿ ರೈತರು ನಡೆಸುತ್ತಿರುವ ಬದುಕಿನ ಹೋರಾಟ. ಈ ಹೋರಾಟದಲ್ಲಿ ಸತ್ವ ಇಲ್ಲದಿದ್ದಿದ್ದರೆ, ಒಟ್ಟು 13 ಹಳ್ಳಿಗಳಲ್ಲಿ 3 ಹಳ್ಳಿಗಳ ರೈತರ ಜಮೀನನ್ನು ನೀವು ಯೋಜನೆಯಿಂದ ಹೊರಗಿಟ್ಟಾಗ ಇವರಲ್ಲಿ ಬಿರುಕು ಬಂದಿರುತ್ತಿತ್ತು. ಆದರೆ ಇಂದಿನವರೆಗೂ ಆ ಹಳ್ಳಿಗಳ ರೈತರೂ ಕೂಡಾ ಪ್ರತಿದಿನ ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಯಾಕೆಂದು ನೀವು ಯೋಚಿಸಬೇಕು. ಇದನ್ನು ಅರ್ಥಮಾಡಿಕೊಂಡು, ಜುಲೈ 2ರಂದು ನಂದಿಬೆಟ್ಟದಲ್ಲಿ ನಡೆಯುತ್ತಿರುವ ಕ್ಯಾಬಿನೆಟ್‌ನಲ್ಲಿ ದೇವನಹಳ್ಳಿಯ ಮೂಲಕವೇ ಹೋಗಿ ಬರುತ್ತಾ ಅಲ್ಲಿನ ರೈತರ ಪರವಾದ ನಿರ್ಧಾರ ತೆಗೆದುಕೊಳ್ಳಿ, ಇಲ್ಲದಿದ್ದರೆ ನಾಡಿನ ಜನತೆಗೆ ಸರ್ಕಾರ ದೊಡ್ಡ ದ್ರೋಹ ಮಾಡಿದಂತಾಗುತ್ತದೆ” ಎಂದು ನೂರ್ ಶ್ರೀಧರ್ ಆಗ್ರಹಿಸಿದರು.
ಸರ್ಕಾರದ ಕೈಗಾರಿಕಾ ನೀತಿ ದೋಷಯುಕ್ತ: ಯು. ಬಸವರಾಜ್
ಕರ್ನಾಟಕ ಪ್ರಾಂತ ರೈತ ಸಂಘದ ಯು. ಬಸವರಾಜ್ ಅವರು ಮಾತನಾಡಿ, “ಸರ್ಕಾರದ ಕೈಗಾರಿಕಾ ನೀತಿ ದೋಷಯುಕ್ತವಾಗಿದೆ, ಇದು ನೈಜ ಅಭಿವೃದ್ಧಿಯ ಪರವಾಗಿಲ್ಲ, ಲೂಟಿಕೋರರ ಪರವಾಗಿದೆ. ಸರ್ಕಾರದ ಅಧೀನದ ಕೆಐಎಡಿಬಿ ಮತ್ತು ಅನೇಕ ಸಚಿವರು ಕೈಗಾರಿಕೆಗಳ ಹೆಸರಿನಲ್ಲಿ ವಶಪಡಿಸಿಕೊಂಡ ಭೂಮಿ ವೇದಾಂತದಂತಹ ಕಾರ್ಪೊರೇಟ್‌ಗಳ ಪಾಲಾಗುತ್ತಿದೆ. ಅಲ್ಲಿ ಯಾವುದೇ ದೊಡ್ಡ ಸಂಖ್ಯೆಯ ಉದ್ಯೋಗ ತರುವ ಯೋಜನೆಗಳು ಬರುತ್ತಿಲ್ಲ” ಎಂದು ಆರೋಪಿಸಿದರು.
“ಉತ್ತರ ಕರ್ನಾಟಕದಲ್ಲಿ ನೀರಾವರಿಯಿಲ್ಲದ, ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿಯಲ್ಲಿ ಕೈಗಾರಿಕೆ ಸ್ಥಾಪಿಸಿ. ಅಲ್ಲಿ ಈಗಾಗಲೇ ನೀವು ಸ್ವಾಧೀನಪಡಿಸಿಕೊಂಡಿರುವ 50,000 ಎಕರೆಗಿಂತ ಹೆಚ್ಚು ಭೂಮಿ, ರೈತರು ಒಪ್ಪಿಕೊಟ್ಟಿರುವಂಥದ್ದು ನಿಮ್ಮ ಕೈಯಲ್ಲಿದೆ, ಅಲ್ಲಿ ಕೈಗಾರಿಕೆ ಸ್ಥಾಪಿಸಿ” ಎಂದು ಅವರು ಒತ್ತಾಯಿಸಿದರು.
ಇದು ಜನರ ಹಿತಾಸಕ್ತಿಗೆ ವಿರುದ್ಧ: ವಿ. ನಾಗರಾಜ್
ದಲಿತ ಚಳವಳಿಯ ನಾಯಕರಾದ ವಿ. ನಾಗರಾಜ್‌ರವರು ಮಾತನಾಡಿ, “ರೈತರು ಮತ್ತು ಕರ್ನಾಟಕದ ಜನರ ಆಗ್ರಹವನ್ನು ನೀವು ಅರ್ಥಮಾಡಿಕೊಳ್ಳಬೇಕು, ನಾವು ಕೈಗಾರಿಕೆ ವಿರೋಧಿಗಳಲ್ಲ, ಆದರೆ ಇಲ್ಲಿ ಭೂಸ್ವಾಧೀನ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ. ಅವರ ಬದುಕಿನ ಪರವಾಗಿ ಭಾರೀ ಕೈಗಾರಿಕಾ ಸಚಿವರಾದ ಎಂ.ಬಿ ಪಾಟೀಲ್ ಅವರು ನಿರ್ಣಯ ಕೈಗೊಳ್ಳಬೇಕು. ಇಲ್ಲದಿದ್ದರೆ ಈ ಹುದ್ದೆಯಲ್ಲಿರಲು ಅನರ್ಹರೆಂದು ಒಪ್ಪಿಕೊಂಡು ರಾಜೀನಾಮೆ ನೀಡಬೇಕೆಂದು ನಾವು ಕೇಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ಕಿಸಾನ್ ಸಭಾದ ಪರವಾಗಿ ಪಿ.ವಿ ಲೋಕೇಶ್, ಎಐಸಿಸಿಟಿಯು ಪರವಾಗಿ ನಿರ್ಮಲಾ ಮೊದಲಾದವರು ಮಾತನಾಡಿದರು. ಸಿಐಟಿಯುನ ವರಲಕ್ಷ್ಮಿ ಅವರು, “ಒಂದಲ್ಲಾ ಒಂದು ಕಾರಣ ನೀಡಿ, ನೋಟಿಫಿಕೇಶನ್ ಅನ್ನು ರದ್ದು ಮಾಡದೆ ಮುಂದೂಡಿದಲ್ಲಿ ಪರಿಣಾಮಗಳು ಗಂಭೀರವಾಗುವುದು ಶತಸಿದ್ಧ. ಇದನ್ನು ತಡೆಯಬೇಕಾದರೆ ಇಡೀ ರಾಜ್ಯ ಮತ್ತೊಮ್ಮೆ ಗಟ್ಟಿಯಾಗಿ ಕೂಗಿ ಹೇಳಬೇಕಿರುವ ಮತ್ತು ಇಡೀ ಸರ್ಕಾರ ಕಣ್ಣು ತೆರೆಯಲೇಬೇಕಾದ ವಾತಾವರಣ ನಿರ್ಮಿಸುವ ಅಗತ್ಯವಿದೆ. ಅಂತಿಮ ಗೆಲುವಂತೂ ನ್ಯಾಯದ್ದೇ ಆಗಲಿದೆ. ಅದಕ್ಕಾಗಿ ಹೋರಾಟ ಸಮಿತಿಯು ಈ ಕೆಳಕಂಡ ತೀರ್ಮಾನಗಳನ್ನು ತೆಗೆದುಕೊಂಡಿದೆ” ಎಂದು ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿದರು:
- ಜುಲೈ 2 ರಂದು ನಂದಿಬೆಟ್ಟದಲ್ಲಿ ನಡೆಯುತ್ತಿರುವ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ‘ದೇವನಹಳ್ಳಿ ಭೂ ಸಮಸ್ಯೆ’ ವಿಶೇಷ ಅಜೆಂಡಾ ಆಗಬೇಕು ಎಂದು ಒತ್ತಾಯಿಸುತ್ತಿದ್ದೇವೆ. ದೇವನಹಳ್ಳಿಯ ಮೂಲಕವೇ ಬೆಟ್ಟಕ್ಕೆ ಹೋದವರು ಬರಿಗೈಯಲ್ಲಿ ಬಾರದಿರಿ ಎಂದು ಕ್ಯಾಬಿನೆಟ್ ಸಚಿವರುಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.
- ದೇವನಹಳ್ಳಿ ವಿವಾದದ ನಿಜವಾದ ಚಿತ್ರಣ ಬಹುತೇಕ ಸಚಿವರುಗಳಿಗೆ ಹಾಗೂ ಶಾಸಕರುಗಳಿಗೆ ಸ್ಪಷ್ಟವಾಗಿಲ್ಲ. ನಿಮ್ಮ ನಿಮ್ಮ ಜಿಲ್ಲೆಯಲ್ಲಿರುವ ಶಾಸಕರು ಮತ್ತು ಸಚಿವರನ್ನು ಕಂಡು, ವಿಚಾರ ವಿವರಿಸಿ, ರೈತಪರ ನಿಲುವು ತೆಗೆದುಕೊಳ್ಳುವಂತೆ ಮನವೊಲಿಸಬೇಕು ಎಂದು ರಾಜ್ಯದ ಎಲ್ಲಾ ಹೋರಾಟಗಾರರಲ್ಲೂ ಮನವಿ ಮಾಡಿಕೊಳ್ಳುತ್ತಿದ್ದೇವೆ.
- ಸರ್ಕಾರದ ಮೇಲೆ ಸಾತ್ವಿಕ ಒತ್ತಡ ಹೆಚ್ಚಿಸುವ ದೃಷ್ಟಿಯಿಂದ ಜುಲೈ 4 ರಂದು ಇದೇ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ‘ನಾಡ ಉಳಿಸಿ ಸಮಾವೇಶ’ವನ್ನು ಸಂಘಟಿಸಲಾಗುತ್ತಿದೆ. ರಾಜ್ಯದ ಎಲ್ಲಾ ತಾಲ್ಲೂಕುಗಳಿಂದಲೂ ಸಮಾನ ಮನಸ್ಕರು ದೊಡ್ಡ ಸಂಖ್ಯೆಯಲ್ಲಿ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
- ಜುಲೈ 4 ರಂದು ಸರ್ಕಾರ ನಿಟ್ಟುಸಿರು ಬಿಡುವಂತಹ ತೀರ್ಮಾನ ತೆಗೆದುಕೊಂಡಲ್ಲಿ ಸಿದ್ಧರಾಮಯ್ಯನವರನ್ನು ಹಾಗೂ ಅವರ ಸರ್ಕಾರವನ್ನು ಅಭಿನಂದಿಸಿ ಇಲ್ಲಿಂದ ಹೊರಡುತ್ತೇವೆ. ಒಂದು ವೇಳೆ ಮತ್ತೊಮ್ಮೆ ನ್ಯಾಯ ನಿರಾಕರಣೆ ನಡೆದಲ್ಲಿ ಇನ್ನಷ್ಟು ಕಠಿಣ ಹೋರಾಟದ ದಿಟ್ಟ ತೀರ್ಮಾನವನ್ನು ಅಂದು ತೆಗೆದುಕೊಳ್ಳುತ್ತೇವೆ.
ಈ ಹೋರಾಟಕ್ಕೆ ನಾಡಿನ ಎಲ್ಲ ಚಳುವಳಿಗಳು ಮತ್ತು ಪ್ರಜ್ಞಾವಂತ ಜನತೆ ಬೆಂಬಲ ನೀಡಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿಕೊಳ್ಳಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಬಡಗಲಪುರ ನಾಗೇಂದ್ರ, ವರಲಕ್ಷ್ಮಿ, ಚಾಮರಸ ಮಾಲಿಪಾಟೀಲ್, ವಿ.ನಾಗರಾಜ್, ಯು.ಬಸವರಾಜ್, ಪಿ.ವಿ.ಲೋಕೇಶ್, ನಿರ್ವಾಣಪ್ಪ, ದೇವಿ, ಶ್ರೀನಿವಾಸ್ ಕಾರಹಳ್ಳಿ, ಪ್ರಭಾ ಬೆಳವಂಗಲ, ಕೆ.ವಿ. ಭಟ್, ನೂರ್ ಶ್ರೀಧರ್, ನಿರ್ಮಲ, ಶಿವಪ್ರಕಾಶ್, ಕುಮಾರ್ ಸಮತಳ, ಸುನಂದಾ ಮೊದಲಾದವರು ಹಾಜರಿದ್ದವರು.