ಬೆಂಗಳೂರು: ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟದಲ್ಲಿ ರೈತರ ಜೊತೆ ನಾವಿದ್ದೇವೆ ಎಂದು ಸ್ಪಷ್ಟಪಡಿಸಿದ ಭಾರತೀಯ ಕಿಸಾನ್ ಯೂನಿಯನ್ (ಬಿ.ಕೆ.ಯು) ನಾಯಕ ರಾಕೇಶ್ ಟಿಕಾಯತ್, ಭೂಮಿಯನ್ನು ಕಿತ್ತುಕೊಂಡು ರೈತರನ್ನು ಬಡವರನ್ನಾಗಿ ಮಾಡುವ ಸರ್ಕಾರದ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು (ಜುಲೈ 4) ಫ್ರೀಡಂ ಪಾರ್ಕ್‌ನಲ್ಲಿ ನಡೆದ ‘ನಾಡ ಉಳಿಸಿ ಸಮಾವೇಶ’ದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಭೇಟಿಯ ನಂತರ ಹೋರಾಟದ ಮುಂದಿನ ರೂಪುರೇಷೆಗಳು ನಿರ್ಧಾರವಾಗಲಿವೆ ಎಂದು ಹೇಳಿದರು.
ಕೃಷಿ ಭೂಮಿ ವಶಪಡಿಸಿಕೊಂಡರೆ, ರೈತರು ಬಡವರಾಗುತ್ತಾರೆ: “ನಗರ ಪ್ರದೇಶಗಳಲ್ಲಿ, ವಿಮಾನ ನಿಲ್ದಾಣಗಳಿಗೆ, ಕೈಗಾರಿಕೆಗಳಿಗೆ ಎಂದು ಸರ್ಕಾರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದೆ. ಭೂಮಿಯನ್ನು ಕಿತ್ತುಕೊಂಡು ರೈತರನ್ನು ಬಡವರನ್ನಾಗಿ ಮಾಡಿ, ಭೂಮಿ ಬದಲಿಗೆ ಅಕ್ಕಿ ಕೊಡುತ್ತೇವೆಂದು ಹೇಳುತ್ತಿದ್ದಾರೆ. ಇದು ನಮಗೆ ಬೇಕಾಗಿದೆಯೇ? ಇದರ ವಿರುದ್ಧ ಹೋರಾಟ ಮುಂದುವರಿಸಬೇಕು,” ಎಂದು ಟಿಕಾಯತ್ ಪ್ರಶ್ನಿಸಿದರು.
ಕೈಗಾರಿಕೆಗಳಿಗೆ ಈಗಾಗಲೇ ನೀಡಿರುವ ಭೂಮಿಯನ್ನು ವಾಪಸ್ ಪಡೆದು ಅಲ್ಲಿ ಬೆಳೆ ಬೆಳೆಯುತ್ತೇವೆಂದರೆ ಸರ್ಕಾರ ಕೊಡುತ್ತದೆಯೇ ಎಂದು ಪ್ರಶ್ನಿಸಿದ ಅವರು, ಸರ್ಕಾರ ಭೂಮಿಯನ್ನು ಖಾಸಗಿ ಮಾಲೀಕರಿಗೆ (ಮಾಲಕರಿಗೆ) ಕೊಡುತ್ತಿರುವುದನ್ನು ತೀವ್ರವಾಗಿ ವಿರೋಧಿಸುವುದಾಗಿ ತಿಳಿಸಿದರು. ಈ ಹಿಂದೆ ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದವರು ಈಗ ಅಧಿಕಾರಕ್ಕೆ ಬಂದ ನಂತರ ಬೇರೆ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದನ್ನು ಒಪ್ಪಬಾರದು ಎಂದೂ ಟಿಕಾಯತ್ ಟೀಕಿಸಿದರು.
ಸರ್ಕಾರದ ಬೆದರಿಕೆಗಳಿಗೆ ಜಗ್ಗಬೇಡಿ: “ಈ ಆಂದೋಲನದಲ್ಲಿ ರೈತರು, ಮಹಿಳೆಯರು ಎಲ್ಲರೂ ಇದ್ದಾರೆ. ಇಲ್ಲಿಯವರೆಗೂ ಈ ಹೋರಾಟ ಶಾಂತಿಯುತವಾಗಿ ನಡೆದಿದೆ. ಈ ಚಳವಳಿ ಮುಂದುವರೆಯಬೇಕಾಗಿದೆ,” ಎಂದು ಟಿಕಾಯತ್ ಹೇಳಿದರು. ಸರ್ಕಾರಿ ಅಧಿಕಾರಿಗಳು ಭೂಮಿ ಕಿತ್ತುಕೊಳ್ಳಲು ಗ್ರಾಮಕ್ಕೆ ಬಂದಾಗ, “ನಾವೆಲ್ಲರೂ ತೀವ್ರವಾದ ಪ್ರತಿರೋಧ ಒಡ್ಡಬೇಕು. ಬೆದರಿಸಿ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಾರೆ, ಆಗ ನಾವು ಊರಿನ ಸಮಿತಿ ಒಪ್ಪಿಗೆ ಇಲ್ಲದೇ ಕೊಡುವುದಿಲ್ಲ ಎನ್ನುವ ತೀರ್ಮಾನವನ್ನು ಅವರಿಗೆ ಗಟ್ಟಿಯಾಗಿ ತಿಳಿಸಬೇಕು. ಅಷ್ಟೇ ಅಲ್ಲದೆ, ಬೆದರಿಕೆಗಳಿಗೆ ಜಗ್ಗದೇ ಹೋರಾಟ ಮುನ್ನಡೆಸುವ ತೀರ್ಮಾನ ಮಾಡಬೇಕು. ರೈತರ ಪಟ್ಟ ಜಮೀನನ್ನು (ನೋಂದಾಯಿತ ಜಮೀನನ್ನು) ಕಿತ್ತುಕೊಳ್ಳುವ ಪ್ರಯತ್ನ ಇದಾಗಿದೆ. ಇದಕ್ಕೆ ಪ್ರತಿರೋಧ ಒಡ್ಡಬೇಕು,” ಎಂದು ರೈತರಿಗೆ ಕರೆ ನೀಡಿದರು.
ಸಂಯುಕ್ತ ಹೋರಾಟಕ್ಕೆ ವಿಶ್ವಾಸ: “ಈ ಆಂದೋಲನದ ಜೊತೆಗೆ ನಾವಿದ್ದೇವೆ. ಸಂಯುಕ್ತ ಹೋರಾಟ ಕರ್ನಾಟಕದ ನಾಯಕತ್ವವಿದೆ. ಆಂದೋಲನ ಮುಂದುವರಿಸಿ, ನಿಮ್ಮ ನಾಯಕತ್ವ, ಸಮಿತಿಯ ಮೇಲೆ ವಿಶ್ವಾಸ ಇಡಿ,” ಎಂದು ಟಿಕಾಯತ್ ಹೋರಾಟಗಾರರಿಗೆ ಧೈರ್ಯ ತುಂಬಿದರು. ಜಾತಿವಾದಿಗಳಿಗೆ ಮತ್ತು ಮತೀಯವಾದಿಗಳಿಗೆ ಒಳಗಾಗದೆ, ಒಗ್ಗಟ್ಟಾಗಿ ಹೋರಾಟವನ್ನು ಮುಂದುವರಿಸಬೇಕು ಎಂದು ಅವರು ಕರೆ ನೀಡಿದರು.


