ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ದೇಶದಾದ್ಯಂತ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇವರನ್ನು ಇಂದು ಗೃಹಮಂತ್ರಿ ಅಮಿತ್ ಶಾ ಮಾತುಕತೆಗೆ ಕರೆದಿದ್ದಾರೆ. “ಇಲ್ಲಿ ರೈತರ ಬೇಡಿಕೆಗಳಿಗೆ ‘ಹೌದು ಅಥವಾ ಇಲ್ಲ’ ಎನ್ನುವ ಉತ್ತರವನ್ನಷ್ಟೆ ನೀಡಿ” ಎಂದು ಒತ್ತಾಯಿಸುತ್ತೇವೆ ಎಂದು ರೈತ ಮುಖಂಡರು ಹೇಳಿದ್ದಾರೆ.
ಕಳೆದ 13 ದಿನಗಳಿಂದ ದೆಹಲಿಯಲ್ಲಿ ದೇಶದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಇಂದು ಭಾರತ್ ಬಂದ್‌ಗೆ ಕರೆ ನೀಡಲಾಗಿತ್ತು. ಈ ನಡುವೆ ಇಂದು ಸಂಜೆ ಮಾತುಕತೆಗೆ ಬರುವಂತೆ ಪ್ರತಿಭಟನಾ ನಿರತ ರೈತರಿಗೆ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ. ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ಕೊನೆಗೊಳಿಸಲು ನಾಳೆ ಆರನೇ ಸುತ್ತಿನ ಮಾತುಕತೆಗೆ ಬರುವಂತೆ ಕೇಂದ್ರ ಸರ್ಕಾರ ಕರೆ ನೀಡಿತ್ತು. ಇದಕ್ಕೆ ಒಂದು ದಿನದ ಮೊದಲೇ ಅಮಿತ್ ಶಾ ಅವರ ಈ ನಡೆ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ರಾಜಕೀಯ ನಿವೃತ್ತಿ ಕೇವಲ ವದಂತಿಯಷ್ಟೇ: ಮಾಜಿ ಸ್ಪೀಕರ್ ರಮೇಶ್ ಕುಮಾರ್
“ಹೌದು ಅಥವಾ ಇಲ್ಲ ಎಂಬ ಉತ್ತರವನ್ನಲ್ಲದೇ ಮತ್ತೇನನ್ನೂ ಬಯಸುವುದಿಲ್ಲ. ಇದನ್ನು ಬಿಟ್ಟು ನಮಗೆ ಬೇರೆ ಮಾರ್ಗವೂ ಇಲ್ಲ. ನಮ್ಮ ಹೋರಾಟದ ಮುಂದೆ ಕೇಂದ್ರ ಸರ್ಕಾರ ತಲೆಬಾಗಿದೆ” ಎಂದು ರೈತ ಮುಖಂಡ ರುದ್ರು ಸಿಂಗ್ ಮಾನ್ಸಾ ಸಿಂಗ್ ದೆಹಲಿ-ಹರಿಯಾಣ ಗಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮತ್ತೊಬ್ಬ ನಾಯಕ ಗುರ್ನಮ್ ಸಿಂಗ್ ಚಧುನಿ ಮಾತನಾಡಿ, “ಭಾರತ್ ಬಂದ್ ಯಶಸ್ವಿಯಾಗಿದೆ. ಕೇಂದ್ರ ಸರ್ಕಾರಕ್ಕೆ ಈಗ ನಮ್ಮ ಶಕ್ತಿ ತಿಳಿದಿದೆ. ಈಗ ಅದಕ್ಕೆ ಬೇರೆ ದಾರಿ ಇಲ್ಲ” ಎಂದು ಹೇಳಿದರು.
ಇದನ್ನೂ ಓದಿ: ರೈತರನ್ನು ಬೆಂಬಲಿಸಿ ನಾಳೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕಾಲ್ನಡಿಗೆ ಜಾಥಾ
25 ರಾಜ್ಯಗಳಲ್ಲಿ ಸುಮಾರು 10,000 ಸ್ಥಳಗಳಲ್ಲಿ ರಾಷ್ಟ್ರವ್ಯಾಪಿ ಬಂದ್ ಕಂಡುಬಂದಿದೆ ಎಂದು ಸ್ವರಾಜ್ ಇಂಡಿಯಾ ನಾಯಕ ಯೋಗೇಂದ್ರ ಯಾದವ್ ಹೇಳಿದರು.
ದೇಶದಾದ್ಯಂತ ರೈತರು ರಸ್ತೆ ತಡೆದು, ರೈಲು ಸಂಚಾರವನ್ನು ಸ್ಥಗಿತಗೊಳಿಸಿ, ಹೆದ್ದಾರಿಗಳನ್ನು ನಿರ್ಬಂಧಿಸಿ, ಮಾರುಕಟ್ಟೆಗಳನ್ನು ಮುಚ್ಚಿ ಬಂದ್ ಮಾಡುತ್ತಿದ್ದಾರೆ. ಹಲವಾರು ರಾಜ್ಯಗಳಲ್ಲಿ ಬಂದ್ ಬಹುತೇಕ ಯಶಸ್ವಿಯಾಗಿದೆ.
ಇದನ್ನೂ ಓದಿ: ಭಾರತ್ ಬಂದ್: ಇದು ರೈತರು-ಕಾರ್ಪೋರೇಟ್ ಕಂಪನಿಗಳ ನಡುವಿನ ಹೋರಾಟ – AIKSCC
ಇಂದಿನ ಪ್ರತಿಭಟನೆಗೆ ಕಾಂಗ್ರೆಸ್, ಎಎಪಿ, ಡಿಎಂಕೆ, ಟಿಆರ್‌ಎಸ್ ಸೇರಿದಂತೆ ಹಲವು ಪ್ರತಿಪಕ್ಷಗಳು ಬೆಂಬಲ ನೀಡಿವೆ.
ಇದನ್ನೂ ಓದಿ: ಈ ಕೃಷಿ ಕಾನೂನುಗಳನ್ನು ಕಾಂಗ್ರೆಸ್ ಕೂಡಾ ತರಲು ಬಯಸಿತ್ತು ಎಂದ ಬಿಜೆಪಿ; ತಿರುಗೇಟು ನೀಡಿದ…
ಈ ವಿವಾದಾತ್ಮಕ ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಇದುವರೆಗೂ ನಡೆದಿರುವ ಸುಮಾರು 5 ಸುತ್ತಿನ ಮಾತುಕತೆಗಳು ವಿಫಲವಾಗಿವೆ. ಕಳೆದ ಶುಕ್ರವಾರ ಸತತ ಏಳು ಗಂಟೆಗಳ ಕಾಲ ನಡೆದ ಮಾತುಕತೆಯೂ ಕೂಡ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ವಿಫಲವಾಗಿತ್ತು.
ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿರುವ ಮೂರು ಹೊಸ ಕಾನೂನುಗಳನ್ನು ಹಿಂಪಡೆಯದ ಹೊರತು ಬೇರೇನೂ ಬೇಕಾಗಿಲ್ಲ ಎಂದು ರೈತ ಸಂಘಟನೆಗಳು ಪಟ್ಟುಹಿಡಿದಿವೆ.
ಇದನ್ನೂ ಓದಿ: ಭೂ ಸುದಾರಣೆ ಕಾಯ್ದೆ ತಿದ್ದುಪಡಿಗೆ ಅಂಗೀಕಾರ ವಿರೋಧಿಸಿ ಪ್ರತಿಭಟನೆ: ಹೋರಾಟಗಾರರ ಬಂಧನ!
ಮಾತುಕತೆಗಳ ನೇತೃತ್ವ ವಹಿಸಿದ್ದ ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್, “ಸರ್ಕಾರಕ್ಕೆ ಯಾವುದೇ ಅಹಂ ಇಲ್ಲ. ಆದರೆ ಸರ್ಕಾರ ಈ ಕಾನೂನುಗಳನ್ನು ರದ್ದು ಮಾಡುವುದಿಲ್ಲ” ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಈ ಕರಾಳ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವವರೆಗೂ ಎಲ್ಲ ಸಂಘಟನೆಗಳೂ ತಮ್ಮ ಹೋರಾಟವನ್ನು ಮುಂದುವರಿಸಲಿವೆ” ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (AIKSCC) ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಭಾರತ್ ಬಂದ್ | ಕರ್ನಾಟಕದಲ್ಲಿ ಯಶಸ್ವಿ; ಜಿಲ್ಲಾವಾರು ಹೋರಾಟದ ಚಿತ್ರಗಳು!


