ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಅದರ ನಿರ್ದೇಶಕ ಅನಿಲ್ ಅಂಬಾನಿ ಅವರನ್ನು ‘ವಂಚನೆ’ ಎಂದು ವರ್ಗೀಕರಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಈ ಕುರಿತು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ದೂರು ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸೋಮವಾರ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.
ರಿಸರ್ವ್ ಬ್ಯಾಂಕ್‌ನ ವಂಚನೆ ಅಪಾಯ ನಿರ್ವಹಣೆಯ ಕುರಿತಾದ ನಿರ್ದೇಶನಗಳು ಮತ್ತು ವಂಚನೆಗಳ ವರ್ಗೀಕರಣ, ವರದಿ ಹಾಗೂ ನಿರ್ವಹಣೆಯ ಕುರಿತಾದ ನೀತಿಗೆ ಅನುಗುಣವಾಗಿ ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಅದರ ನಿರ್ದೇಶಕರನ್ನು ಜೂನ್ 13 ರಂದು ‘ವಂಚನೆ’ ಎಂದು ಎಸ್‌ಬಿಐ ವರ್ಗೀಕರಿಸಿದೆ. ಇದೀಗ ಸಿಬಿಐಗೆ ದೂರು ಸಲ್ಲಿಸಲು ಮುಂದಾಗಿದೆ ಎಂದು ಲೋಕಸಭೆಗೆ ನಿಡಿದ ಲಿಖಿತ ಉತ್ತರದಲ್ಲಿ ಪಂಕಜ್ ಚೌಧರಿ ತಿಳಿಸಿದ್ದಾರೆ.
ವಂಚನೆ ಎಂದು ವರ್ಗೀಕರಿಸಿರುವ ಕುರಿತು ಎಸ್‌ಬಿಐ ಜೂನ್ 24 ರಂದು ಆರ್‌ಬಿಐಗೆ ವರದಿ ಮಾಡಿದೆ. ಜುಲೈ 1 ರಂದು, ರಿಲಯನ್ಸ್ ಕಮ್ಯುನಿಕೇಷನ್ಸ್ ತನ್ನ ಬಹಿರಂಗಪಡಿಸುವಿಕೆಯ ಅನುಸರಣೆಯ ಭಾಗವಾಗಿ ವಂಚನೆ ವರ್ಗೀಕರಣದ ಬಗ್ಗೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ಗೆ ಮಾಹಿತಿ ನೀಡಿದೆ ಎಂದು ಸಚಿವ ಚೌಧರಿ ವಿವರಿಸಿದ್ದಾರೆ.
ರಿಲಯನ್ಸ್ ಕಮ್ಯುನಿಕೇಷನ್ಸ್‌ಗೆ ಎಸ್‌ಬಿಐ ನೀಡಿರುವ ಸಾಲದಲ್ಲಿ ಫಂಡ್-ಬೇಸ್ಡ್ ಪ್ರಿನ್ಸಿಪಲ್ ಬಾಕಿ 2,227.64 ಕೋಟಿ ರೂಪಾಯಿಗಳು. ಇದರ ಜೊತೆಗೆ, ಆಗಸ್ಟ್ 26, 2016 ರಿಂದ ಸಂಗ್ರಹವಾದ ಬಡ್ಡಿ ಮತ್ತು ಇತರ ವೆಚ್ಚಗಳು ಹಾಗೂ ನಾನ್-ಫಂಡ್ ಬೇಸ್ಡ್ ಬ್ಯಾಂಕ್ ಗ್ಯಾರಂಟಿ 786.52 ಕೋಟಿ ರೂಪಾಯಿ ಸೇರಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
2016ರ ದಿವಾಳಿತನ ಸಂಹಿತೆಯ ಅಡಿಯಲ್ಲಿ ಟೆಲಿಕಾಂ ಸಂಸ್ಥೆಯು ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಗೆ ಒಳಗಾಗುತ್ತಿದೆ ಎಂದು ತಿಳಿಸಿದ್ದಾರೆ.
ದಿವಾಳಿತನ ಪ್ರಕರಣಗಳನ್ನು ಪರಿಹರಿಸಲು ಮತ್ತು ನಿಷ್ಕ್ರಿಯ ಸ್ವತ್ತುಗಳನ್ನು ತ್ವರಿತವಾಗಿ ಬಿಡುಗಡೆ ಮಾಡಲು ಈ ಸಂಹಿತೆಯು ಕಾನೂನು ಚೌಕಟ್ಟನ್ನು ಒದಗಿಸುತ್ತದೆ.
ರಿಲಯನ್ಸ್ ಕಮ್ಯುನಿಕೇಷನ್ಸ್‌ಗೆ ಸಂಬಂಧಿಸಿದ ಸಾಲ ಪರಿಹಾರ ಯೋಜನೆಯನ್ನು (ರೆಸಲ್ಯೂಶನ್ ಪ್ಲಾನ್) ಕ್ರೆಡಿಟರ್‌ಗಳ ಸಮಿತಿಯು (ಕಮಿಟಿ ಆಫ್ ಕ್ರೆಡಿಟರ್ಸ್) ಅನುಮೋದಿಸಿದೆ ಎಂದು ಸಚಿವರು ತಿಳಿಸಿದ್ದು, ಈ ಯೋಜನೆಯನ್ನು ಮಾರ್ಚ್ 6, 2020 ರಂದು ಮುಂಬೈನ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್‌ಗೆ (ಎನ್‌ಸಿಎಲ್‌ಟಿ) ಸಲ್ಲಿಕೆ ಮಾಡಲಾಗಿದೆ. ಆದರೆ, ಈ ಯೋಜನೆಗೆ ಟ್ರಿಬ್ಯೂನಲ್‌ನಿಂದ ಇನ್ನೂ ಅನುಮೋದನೆ ಬಾಕಿಯಿದೆ ಎಂದಿದ್ದಾರೆ.
ಎಸ್‌ಬಿಐ ಈ ಹಿಂದೆ, ಅಂದರೆ ನವೆಂಬರ್ 2020 ರಲ್ಲಿ ಖಾತೆ ಮತ್ತು ಅಂಬಾನಿಯನ್ನು ‘ವಂಚನೆ’ ಎಂದು ವರ್ಗೀಕರಿಸಿತ್ತು ಮತ್ತು ಜನವರಿ 2021ರಲ್ಲಿ ಸಿಬಿಐಗೆ ದೂರು ಸಲ್ಲಿಸಿತ್ತು. ಆದಾಗ್ಯೂ, ಜನವರಿ 6, 2021ರಂದು ದೆಹಲಿ ಹೈಕೋರ್ಟ್ ನೀಡಿದ ‘ಯಥಾಸ್ಥಿತಿ’ ಆದೇಶದ ಹಿನ್ನೆಲೆಯಲ್ಲಿ ದೂರನ್ನು ಹಿಂತಿರುಗಿಸಲಾಗಿದೆ ಎಂದು ಸಚಿವ ಚೌಧರಿ ಹೇಳಿದ್ದಾರೆ.
ಸಾಲದಾತರು ಖಾತೆಗಳನ್ನು ವಂಚನೆ ಎಂದು ವರ್ಗೀಕರಿಸುವ ಮೊದಲು ಸಾಲಗಾರರಿಗೆ ತಮ್ಮನ್ನು ತಾವು ಪ್ರತಿನಿಧಿಸಲು ಅವಕಾಶವನ್ನು ಒದಗಿಸಬೇಕೆಂದು ಮಾರ್ಚ್ 2023ರಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದೇಶದ ಮೇರೆಗೆ, ಖಾತೆಯಲ್ಲಿನ ವಂಚನೆ ವರ್ಗೀಕರಣವನ್ನು ಸೆಪ್ಟೆಂಬರ್ 2023ರಲ್ಲಿ ಎಸ್‌ಬಿಐ ರದ್ದುಗೊಳಿಸಿತು ಎಂದು ಸಚಿವರು ಹೇಳಿದ್ದಾರೆ.
ಜುಲೈ 15, 2024 ರಂದು ಆರ್‌ಬಿಐ ಹೊರಡಿಸಿದ ಸುತ್ತೋಲೆಯ ಪ್ರಕಾರ, ವರ್ಗೀಕರಣ ಪ್ರಕ್ರಿಯೆಯನ್ನು ಪುನಃ ನಡೆಸಲಾಯಿತು ಮತ್ತು ಖಾತೆಯನ್ನು ಮತ್ತೊಮ್ಮೆ ‘ವಂಚನೆ’ ಎಂದು ವರ್ಗೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.
2019ರಲ್ಲಿ, ರಿಲಯನ್ಸ್ ಕಮ್ಯುನಿಕೇಷನ್ಸ್ ಸುಮಾರು 45,000 ಕೋಟಿ ರೂ.ಗಳ ಸಾಲವನ್ನು ಪಾವತಿಸಲು ಆಸ್ತಿಗಳನ್ನು ಮಾರಾಟ ಮಾಡಲು ವಿಫಲವಾದ ನಂತರ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ ಮೂಲಕ ದಿವಾಳಿತನಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿದೆ ಎಂದು ಹೇಳಿತ್ತು.
ಧರ್ಮಸ್ಥಳ ಸುದ್ದಿ ಪ್ರಕಟಿಸದಂತೆ ತಡೆ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಯೂಟ್ಯೂಬ್ ಚಾನೆಲ್


