ದೆಹಲಿ ಗಲಭೆ ಹಿಂದಿನ ಪಿತೂರಿ ಆರೋಪ ಪ್ರಕರಣದಲ್ಲಿ ಜಾಮೀನು ಕೋರಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್ ಸಲ್ಲಿಸಿರುವ ಅರ್ಜಿಯನ್ನು ತ್ವರಿತವಾಗಿ ವಿಲೇವಾರಿ ಮಾಡುವ ಮನವಿಯನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ (ಅ.25) ದೆಹಲಿ ಹೈಕೋರ್ಟ್‌ಗೆ ಸೂಚಿಸಿದೆ. ಶಾರ್ಜೀಲ್ ಇಮಾಮ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಏಪ್ರಿಲ್ 2022 ರಿಂದ ಇತ್ಯರ್ಥವಾಗದೆ ಬಾಕಿ ಉಳಿದಿದೆ.
ತನ್ನ ಜಾಮೀನು ಅರ್ಜಿಯನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಹೈಕೋರ್ಟ್‌ಗೆ ನಿರ್ದೇಶನ ನೀಡಲು ಕೋರಿ ಇಮಾಮ್ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠ ಪರಿಗಣಿಸಿದೆ. ಆದಷ್ಟು ಬೇಗ ಜಾಮೀನು ಅರ್ಜಿಯನ್ನು ವಿಲೇವಾರಿ ಮಾಡುವಂತೆ ಹೈಕೋರ್ಟ್‌ಗೆ ಕೋರುವ ಸ್ವಾತಂತ್ರ್ಯ ಅರ್ಜಿದಾರರಿಗೆ ಇದೆ ಎಂದು ಹೇಳಿದೆ. ಇಮಾಮ್ ಅವರ ಜಾಮೀನು ಅರ್ಜಿಯನ್ನು ನವೆಂಬರ್ 25 ರಂದು ವಿಚಾರಣೆಗೆ ಹೈಕೋರ್ಟ್‌ನಲ್ಲಿ ಪಟ್ಟಿ ಮಾಡಿರುವುದನ್ನು ಇದೇ ವೇಳೆ ಪೀಠ ಗಮನಿಸಿದೆ.
ವಿಚಾರಣೆಯ ಆರಂಭದಲ್ಲಿ, ಹೈಕೋರ್ಟ್‌ನಲ್ಲಿ ವಿಷಯ ಬಾಕಿ ಇರುವಾಗ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಏಕೆ ಸಲ್ಲಿಸಿದ್ದಾರೆ? ಎಂದು ಪೀಠವು ಕೇಳಿತ್ತು.
ಇದಕ್ಕೆ ಉತ್ತರಿಸಿದ ಇಮಾಮ್ ಪರ ಹಿರಿಯ ವಕೀಲ ಸಿದ್ಧಾರ್ಥ್ ದವೆ ಅವರು, “ನಾವು ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ನೀಡುವಂತೆ ಒತ್ತಾಯಿಸುತ್ತಿಲ್ಲ. ಹೈಕೋರ್ಟ್‌ನಲ್ಲಿರುವ ಜಾಮೀನು ಅರ್ಜಿಯ ವಿಚಾರಣೆ ತ್ವರಿತಗೊಳಿಸಲು ನಿರ್ದೇಶಿಸುವಂತೆ ಮನವಿ ಮಾಡಿದ್ದೇವೆ” ಎಂದರು.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾಯ್ದೆಯ ಸೆಕ್ಷನ್ 21(2)ರ ಪ್ರಕಾರ, ಹೈಕೋರ್ಟ್ ಮೂರು ತಿಂಗಳೊಳಗೆ ಮೇಲ್ಮನವಿಯನ್ನು ತೀರ್ಮಾನಿಸಬೇಕೆಂಬ ಆದೇಶವಿದೆ ಎಂದು ದವೆ ತಿಳಿಸಿದರು. ಜಾಮೀನು ತಿರಸ್ಕಾರವನ್ನು ಪ್ರಶ್ನಿಸಿ ಇಮಾಮ್ ಅವರ ಮೇಲ್ಮನವಿಯನ್ನು ಏಪ್ರಿಲ್ 29, 2022 ರಂದು ಸಲ್ಲಿಸಲಾಗಿದೆ. ಅದನ್ನು 64 ಬಾರಿ ಮುಂದೂಡಲಾಗಿದೆ ಎಂದು ವಕೀಲ ದವೆ” ಹೇಳಿದರು.
“ನಾವು ಯಾರ ವಿರುದ್ಧ ಏನೂ ಹೇಳುತ್ತಿಲ್ಲ. ನಾವು ಯಾರನ್ನೂ ದೂಷಿಸುತ್ತಿಲ್ಲ. ಆದರೆ, ನಮ್ಮ ಕಕ್ಷಿದಾರರ ಅರ್ಜಿಯನ್ನು ಪುರಸ್ಕರಿಸಿ ಅಥವಾ ತಿರಸ್ಕರಿಸಿ ಒಟ್ಟಿನಲ್ಲಿ ಅದನ್ನು ವಿಲೇವಾರಿ ಮಾಡಿ” ಎಂದು ದವೆ ಮನವಿ ಮಾಡಿದರು.
ಅರ್ಜಿದಾರರ ವಿರುದ್ಧ ಎಂಟು ಎಫ್‌ಐಆರ್‌ಗಳಿವೆ ಎಂದು ನ್ಯಾಯಮೂರ್ತಿ ತ್ರಿವೇದಿ ಹೇಳಿದಾಗ, ಪ್ರಸ್ತುತ ವಿಷಯವು 2020ರ ದೆಹಲಿ ಗಲಭೆಯ ಹಿಂದಿನ ಪಿತೂರಿ ಆರೋಪದ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) ಅಡಿ ದಾಖಲಾದ ಕೇವಲ ಒಂದು ಎಫ್‌ಐಆರ್‌ಗೆ ಸಂಬಂಧಿಸಿದೆ ಎಂದು ದವೆ ಸ್ಪಷ್ಟಪಡಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯ ನಂತರ ಈಶಾನ್ಯ ದೆಹಲಿಯಲ್ಲಿ ನಡೆದ 2020ರ ಕೋಮು ಗಲಭೆಯ ಹಿಂದಿನ ಪಿತೂರಿಯ ಆರೋಪದ ಮೇಲೆ ಶಾರ್ಜೀಲ್ ಇಮಾಮ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಮಾಮ್ ಅವರನ್ನು ಜನವರಿ 28, 2020ರಂದು ಪೊಲೀಸರು ವಶಕ್ಕೆ ಪಡೆದಿದ್ದರು. ಅಂದಿನಿಂದ ಇಮಾಮ್ ವಿಚಾರಣಾಧೀನ ಕೈದಿಯಾಗಿ ಇಮಾನ್ ಜೈಲಿನಲ್ಲಿದ್ದಾರೆ. ಅವರ ವಿರುದ್ದ ಇದುವರೆಗೆ ಆರೋಪಗಳನ್ನು ರೂಪಿಸಲಾಗಿಲ್ಲ.
ಇದನ್ನೂ ಓದಿ : ಅವಹೇಳನಕಾರಿ ಹೇಳಿಕೆ; ತೆಲಂಗಾಣ ಸಚಿವೆ ಸುರೇಖಾಗೆ ಛೀಮಾರಿ ಹಾಕಿದ ಕೋರ್ಟ್


