ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ, ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಮತ್ತು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ಕಾಂಗ್ರೆಸ್ ಮೇಲೆ ಟೂಲ್‌ಕಿಟ್ ಆರೋಪ ಹೊರಿಸಿ ಮಾಡಿದ್ದ ಟ್ವೀಟ್ ಸಂಬಂಧ ದಾಖಲಾಗಿದ್ದ ಎಫ್‌ಐಆರ್‌ಗೆ ಛತ್ತೀಸ್‌ಘಡ ಹೈಕೋರ್ಟ್ ಇತ್ತೀಚೆಗೆ ಮಧ್ಯಂತರ ಪರಿಹಾರ ನೀಡಿ ಆದೇಶ ಹೊರಟಿಸಿದೆ. ಹೈಕೋರ್ಟ್‌ನ ಆದೇಶದ ವಿರುದ್ಧ ಛತ್ತೀಸ್‌ಗಢ ಸರ್ಕಾರ ಎರಡು ಪ್ರತ್ಯೇಕ ಮೇಲ್ಮನವಿಗಳನ್ನು ಸಲ್ಲಿಸಿರುವುದನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನು ಒಳಗೊಂಡ ಜಸ್ಟೀಸ್ ಸೂರ್ಯ ಕಾಂತ್, ಹಿಮಾ ಕೊಹ್ಲಿ ಇದ್ದ ಪೀಠವು ಈ ನಿಲುವು ತಾಳಿದೆ ಎಂದು ‘ಲೈವ್ ಲಾ’ ಹಾಗೂ ‘ದಿ ವೈರ್’ ವರದಿ ಮಾಡಿವೆ.

“ಛತ್ತೀಸ್‌ಗಢ ಹೈಕೋರ್ಟ್ ಪ್ರಕರಣವನ್ನು ಇತ್ಯರ್ಥಪಡಿಸಲಿ. ಈ ಟೂಲ್‌ಕಿಟ್ ವ್ಯವಹಾರದಲ್ಲಿ ತಡೆ ತರಲು ವಿವಿಧ ನ್ಯಾಯಾಲಯಗಳಲ್ಲಿ ಜನರಿದ್ದಾರೆ. ನಾವ್ಯಾಕೆ ಇದರ ಕುರಿತು ವಿಶೇಷ ಆದ್ಯತೆಯನ್ನು ನೀಡಬೇಕು” ಎಂದು ಸರ್ವೊಚ್ಚ ನ್ಯಾಯಾಲಯದ ಪೀಠ ಕೇಳಿದೆ.
ಕಾಂಗ್ರೆಸ್‌ನ ಛತ್ತೀಸ್‌ಗಢ ವಿದ್ಯಾರ್ಥಿ ಘಟಕವಾದ ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಅಧ್ಯಕ್ಷ ಆಕಾಶ್ ಶರ್ಮ ಅವರು, ಸಿಂಗ್ ಮತ್ತು ಪಾತ್ರ ಸೇರಿದಂತೆ ಇತರರ ಮೇಲೆ ದೂರು ನೀಡಿದ್ದರು. ನಕಲಿ ಲೆಟರ್‌ಹೆಡ್ ಬಳಸಿ ಕಾಂಗ್ರೆಸ್ ಹೆಸರಲ್ಲಿ ಕೋವಿಡ್ -19 ಕುರಿತ ಟೂಲ್‌ಕಿಟ್ ಹಂಚಿದ್ದಾರೆ ಎಂದು ಆರೋಪಿಸಿದ್ದರು.
ಜೂನ್ 11ರಂದು ಛತ್ತೀಸ್‌ಗಢ ಹೈಕೋರ್ಟ್ ಎರಡು ವಿಭಿನ್ನ ಆದೇಶಗಳನ್ನು ಹೊರಡಿಸಿ, ಸಿಂಗ್ ಮತ್ತು ಪಾತ್ರ ಮೇಲೆ ದಾಖಲಾಗಿರುವ ಎಫ್‌ಐಆರ್‌ಗೆ ಮಧ್ಯಂತರ ಬಿಡುಗಡೆಯನ್ನು ನೀಡಿತ್ತು. ರಾಜಕೀಯ ದ್ವೇಷ ಮತ್ತು ದುರುದ್ದೇಶಪೂರಿತವಾಗಿ ಎಫ್‌ಐಆರ್ ದಾಖಲಾಗಿದೆ ಎಂದಿತ್ತು.
ಇದನ್ನೂ ಓದಿ: ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ – ಫೇಕ್, ಸುಳ್ಳು ಮತ್ತು ತಿರುಚುವಿಕೆಯೇ `ಜೀವಾಳ’


