ಪರಿಶಿಷ್ಟ ಜಾತಿಗಳಲ್ಲಿ (ಎಸ್‌ಸಿ) ಒಳ ಮೀಸಲಾತಿ ಕಲ್ಪಿಸುವ ಸಂಬಂಧ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನದಾಸ್ ನೇತೃತ್ವದ ಆಯೋಗ ಇಂದು (ಮಾ. 27) ರಾಜ್ಯ ಸರ್ಕಾರಕ್ಕೆ ತನ್ನ ಮಧ್ಯಂತರ ವರದಿ ಸಲ್ಲಿಸಲಿದೆ.
ವಿಧಾನಸೌಧದಲ್ಲಿ ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಯೋಗವು ಮಧ್ಯಂತರ ವರದಿ ಸಲ್ಲಿಕೆ ಮಾಡಲಿದೆ ಎಂದು ಸಿಎಂ ಕಚೇರಿ ಅಧಿಕೃತ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ಉಪಜಾತಿಗಳಿಗೆ ಪ್ರಾತಿನಿಧ್ಯತೆ ಕಲ್ಪಿಸುವ ಕುರಿತು ಪ್ರಾಯೋಗಿಕ ಅಂಕಿ ಅಂಶ (ಎಂಫರಿಕಲ್ ಡಾಟಾ) ಪಡೆದು ಒಳಮೀಸಲಾತಿ ಜಾರಿಗೆ ಸೂಕ್ತ ಶಿಫಾರಸು ಮಾಡುವಂತೆ 14 ನವೆಂಬರ್ 2024ರಂದು ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಎರಡು ತಿಂಗಳ ಒಳಗೆ ವರದಿ ಸಲ್ಲಿಸುವಂತೆ ಆದೇಶಿಸಿತ್ತು. ಬಳಿಕ ಅವಧಿಯನ್ನು ವಿಸ್ತರಿಸಲಾಗಿತ್ತು.
ನಾಗಮೋಹನದಾಸ್ ಆಯೋಗ ಪ್ರಾಯೋಗಿಕ ಅಂಕಿ ಅಂಶ ಪಡೆದು ವರದಿ ಸಿದ್ದಪಡಿಸುತ್ತಿರುವ ನಡುವೆ ಒಳ ಮೀಸಲಾತಿ ಜಾರಿಗೆ ರಾಜ್ಯಾದ್ಯಂತ ಆಗ್ರಹ ಹೆಚ್ಚಾಗಿದೆ. ವಿವಿಧ ಸಂಘಟನೆಗಳು ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಸುದ್ದಿಗೋಷ್ಠಿ, ಪ್ರತಿಭಟನೆ ಸೇರಿದಂತೆ ಹಲವು ರೀತಿಯ ಹೋರಾಟಗಳನ್ನು ಮಾಡುತ್ತಿವೆ.
ಸಚಿವ ಮುನಿಯಪ್ಪ ಭೇಟಿ ಮಾಡಿದ ನಿಯೋಗ
ಒಳ ಮೀಸಲಾತಿ ಅನುಷ್ಠಾನದಲ್ಲಿ ಉಪಜಾತಿಯ ಗೊಂದಲ ನಿವಾರಣೆ ಮಾಡಲು ಕ್ರಮವಹಿಸುವಂತೆ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರಿಗೆ ಷಡಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದ ನಿಯೋಗ ಮನವಿ ಮಾಡಿದೆ ಎಂದು ವರದಿಯಾಗಿದೆ.
ಮಾದಿಗ ಸಮುದಾಯದ ಮೂಲ ಮಠವಾದ ಆದಿಜಾಂಬವ ಬೃಹ್ಮಠದ ಪೀಠಾಧ್ಯಕ್ಷರಾದ ಷಡಕ್ಷರಿ ಮುನಿದೇಶಿ ಕೇಂದ್ರ ಸ್ವಾಮೀಜಿ ಹಾಗೂ ರಾಜ್ಯ ಮಾತಂಗ ಜಾಗೃತಿ ಸಮಿತಿಯ ಗೌರವಾಧ್ಯಕ್ಷ ಆರ್.ಲೋಕೇಶ್ ನೇತೃತ್ವದ ನಿಯೋಗ ಸಚಿವ ಮುನಿಯಪ್ಪ ಅವರ ಮನೆಯಲ್ಲಿ ಒಳ ಮೀಸಲಾತಿ ಜಾರಿಯ ಕುರಿತಾಗಿ ಚರ್ಚಿಸಿದೆ ಎಂದು ದಿ ಫೆಡರಲ್ ವರದಿ ಮಾಡಿದೆ.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹಾಗೂ ಹಾಗೂ ಅತಿದೊಡ್ಡ ಸಂಖ್ಯೆಯಲ್ಲಿ ಇರುವ ಆದಿ ಕರ್ನಾಟಕ/ ಆದಿ ದ್ರಾವಿಡ ಜಾತಿ ಪ್ರಮಾಣ ಪತ್ರ ಹೊಂದಿರುವವರಿಗೆ ನಿರ್ದಿಷ್ಟ ಜಾತಿಯ ಪ್ರಮಾಣ ಪತ್ರವನ್ನು ಹೊಂದಲು ತಕ್ಷಣ ಕ್ರಮ ಕೈಗೊಳ್ಳುವಂತೆ ನಿಯೋಗ ಒತ್ತಾಯಿಸಿದೆ ಎಂದು ವರದಿ ತಿಳಿಸಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಅತ್ಯಂತ ಹಿಂದುಳಿದ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ 1 ಆಗಸ್ಟ್ 2024ರಂದು ಮಹತ್ವದ ತೀರ್ಪು ನೀಡಿದೆ.
ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ ಎಸ್‌ಸಿ, ಎಸ್‌ಟಿ ಒಳ ಮೀಸಲಾತಿಗೆ ಒಪ್ಪಿಗೆ ನೀಡಿತ್ತು. ಏಳು ನ್ಯಾಯಮೂರ್ತಿಗಳಲ್ಲಿ ಆರು ಮಂದಿ ಒಳ ಮೀಸಲಾತಿಯ ಪರವಾಗಿ ತೀರ್ಪು ನೀಡಿದರೆ, ಒಬ್ಬರು ಮಾತ್ರ (ನ್ಯಾ. ಬೇಲಾ ತ್ರಿವೇದಿ) ಒಳ ಮೀಸಲಾತಿಗೆ ವಿರುದ್ಧವಾಗಿ ತೀರ್ಪು ಪ್ರಕಟಿಸಿದ್ದರು. ಹಾಗಾಗಿ 6:1 ರ ಅನುಪಾತದಡಿ ಒಳ ಮೀಸಲಾತಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಪಕ್ಷ ವಿರೋಧಿ ಹೇಳಿಕೆ: ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ 6 ವರ್ಷ ಉಚ್ಚಾಟನೆ


