ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು, ಅವರ ಮಾನಸಿಕ ಆರೋಗ್ಯ ಸುಧಾರಿಸಲು ಮತ್ತು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಠಿಯಿಂದ ಸುಪ್ರೀಂ ಕೋರ್ಟ್ ಶುಕ್ರವಾರ ಇಡೀ ದೇಶಕ್ಕೆ 15 ಅಂಶಗಳ ಮಾರ್ಗಸೂಚಿ ರೂಪಿಸಿದೆ.
ವಿಶಾಖಪಟ್ಟಣಂನಲ್ಲಿ 17 ವರ್ಷದ ನೀಟ್ ಆಕಾಂಕ್ಷಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕೆಂಬ ಮನವಿಯನ್ನು ಆಂಧ್ರ ಪ್ರದೇಶ ಹೈಕೋರ್ಟ್ ತಿರಸ್ಕರಿಸಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರಕರಣದ ಸಿಬಿಐ ತನಿಖೆಗೆ ಆದೇಶಿಸಿದೆ. ಇದೇ ವೇಳೆ 15 ಅಂಶಗಳ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ತೀರ್ಪು ಮತ್ತು 15 ಅಂಶಗಳ ಮಾರ್ಗಸೂಚಿ ಪ್ರಕಟಿಸಿದೆ. ಈ ಮಾರ್ಗಸೂಚಿಯು ಸಮರ್ಥ ಅಧಿಕಾರಿಗಳಿಂದ ಸೂಕ್ತ ಕಾನೂನು ಅಥವಾ ನಿಯಂತ್ರಕ ಕ್ರಮಗಳನ್ನು ಜಾರಿಗೆ ತರುವವರೆಗೆ ಜಾರಿಯಲ್ಲಿರುತ್ತವೆ ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ಪ್ರಕಟಿಸಿದ ಪ್ರಮುಖ ಮಾರ್ಗಸೂಚಿಗಳು
ಎಲ್ಲಾ ಶಿಕ್ಷಣ ಸಂಸ್ಥೆಗಳು UMMEED (Understand, Motivate, Manage, Empathise, Empower, Develop) ಕರಡು ಮಾರ್ಗಸೂಚಿಗಳು, Manodarpan ಉಪಕ್ರಮ ಮತ್ತು ರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವ ಕಾರ್ಯತಂತ್ರದ ಮೂಲಕ ಏಕರೂಪದ ಮಾನಸಿಕ ಆರೋಗ್ಯ ನೀತಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ಕಾರ್ಯಗತಗೊಳಿಸಬೇಕು. ಈ ನೀತಿಯನ್ನು ವಾರ್ಷಿಕವಾಗಿ ಪರಿಶೀಲಿಸಬೇಕು ಮತ್ತು ಸಂಸ್ಥೆಯ ವೆಬ್‌ಸೈಟ್‌ಗಳು ಮತ್ತು ಸೂಚನಾ ಫಲಕಗಳಲ್ಲಿ ಸಾರ್ವಜನಿಕವಾಗಿ ಪ್ರಕಟಿಸಬೇಕು.
100 ಅಥವಾ ಅದಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿರುವ ಸಂಸ್ಥೆಗಳು ಮಕ್ಕಳು ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯದ ಬಗ್ಗೆ ತರಬೇತಿ ಹೊಂದಿರುವ ಕನಿಷ್ಠ ಒಬ್ಬ ಅರ್ಹ ಸಲಹೆಗಾರ, ಮನಶ್ಶಾಸ್ತ್ರಜ್ಞ ಅಥವಾ ಸಮಾಜಿಕ ಕಾರ್ಯಕರ್ತರನ್ನು ನೇಮಿಸಬೇಕು. ಸಣ್ಣ ಸಂಸ್ಥೆಗಳು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವೃತ್ತಿಪರರ ಸಹಾಯ ಪಡೆಯಬೇಕು.
ಎಲ್ಲಾ ಸಂಸ್ಥೆಗಳು ಅತ್ಯುತ್ತಮ ವಿದ್ಯಾರ್ಥಿ-ಸಲಹೆಗಾರರ ಅನುಪಾತವನ್ನು ಖಚಿತಪಡಿಸಿಕೊಳ್ಳಬೇಕು. ಸಮರ್ಪಿತ ಮಾರ್ಗದರ್ಶಕರು ಅಥವಾ ಸಲಹೆಗಾರರನ್ನು ಸಣ್ಣ ವಿದ್ಯಾರ್ಥಿ ಬ್ಯಾಚ್‌ಗಳಿಗೆ ನಿಯೋಜಿಸಬೇಕು, ವಿಶೇಷವಾಗಿ ಪರೀಕ್ಷಾ ಅವಧಿಗಳು ಅಥವಾ ಶೈಕ್ಷಣಿಕ ಪರಿವರ್ತನೆಗಳ ಸಮಯದಲ್ಲಿ, ಸ್ಥಿರ, ಅನೌಪಚಾರಿಕ ಮತ್ತು ಗೌಪ್ಯ ಬೆಂಬಲವನ್ನು ನೀಡಬೇಕು.
ಶೈಕ್ಷಣಿಕ ಕಾರ್ಯಕ್ಷಮತೆ, ಸಾರ್ವಜನಿಕವಾಗಿ ಅವಮಾನಿಸುವುದು ಅಥವಾ ವಿದ್ಯಾರ್ಥಿಯ ಸಾಮರ್ಥ್ಯವನ್ನು ಮೀರಿದ ಶೈಕ್ಷಣಿಕ ಗುರಿಗಳನ್ನು ನಿಗದಿಪಡಿಸುವುದರ ಆಧಾರದ ಮೇಲೆ ಬ್ಯಾಚ್ ಪ್ರತ್ಯೇಕತೆಯನ್ನು ತಡೆಯಲು ತರಬೇತಿ ಮತ್ತು ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶಿಸಲಾಗಿದೆ.
ಮಾನಸಿಕ ಆರೋಗ್ಯ ಸೇವೆಗಳು, ಆಸ್ಪತ್ರೆಗಳು ಮತ್ತು ಆತ್ಮಹತ್ಯೆ ತಡೆಗಟ್ಟುವ ಸಹಾಯವಾಣಿಗಳ ಬೆಂಬಲವನ್ನು ತುರ್ತಾಗಿ ಪಡೆಯಲು ಶಿಕ್ಷಣ ಸಂಸ್ಥೆಗಳು ಲಿಖಿತ ಶಿಷ್ಟಾಚಾರಗಳನ್ನು ಹೊಂದಿರಬೇಕು. ಟೆಲಿ-ಮನಸ್ ಮತ್ತು ಇತರ ರಾಷ್ಟ್ರೀಯ ಸೇವೆಗಳನ್ನು ಒಳಗೊಂಡಂತೆ ಈ ಸಹಾಯವಾಣಿ ಸಂಖ್ಯೆಗಳನ್ನು ಹಾಸ್ಟೆಲ್‌ಗಳು, ತರಗತಿ ಕೊಠಡಿಗಳು, ಸಾಮಾನ್ಯ ಪ್ರದೇಶಗಳು ಮತ್ತು ವೆಬ್‌ಸೈಟ್‌ಗಳಲ್ಲಿ ದೊಡ್ಡ, ಸ್ಪಷ್ಟ ಮುದ್ರಣದಲ್ಲಿ ಪ್ರಮುಖವಾಗಿ ಪ್ರದರ್ಶಿಸಬೇಕು.
ಎಲ್ಲಾ ವಸತಿ ಸಂಸ್ಥೆಗಳು ಟ್ಯಾಂಪರ್ ಪ್ರೂಫ್ ಸೀಲಿಂಗ್ ಫ್ಯಾನ್‌ಗಳು ಅಥವಾ ಅದಕ್ಕೆ ಸಮಾನವಾದ ಸುರಕ್ಷತಾ ಸಾಧನಗಳನ್ನು ಸ್ಥಾಪಿಸಬೇಕು ಮತ್ತು ಸ್ವಯಂ-ಹಾನಿಯ ಹಠಾತ್ ಕೃತ್ಯಗಳನ್ನು ತಡೆಯಲು ಮೇಲ್ಛಾವಣಿಗಳು, ಬಾಲ್ಕನಿಗಳು ಮತ್ತು ಇತರ ಹೆಚ್ಚಿನ ಅಪಾಯದ ಪ್ರದೇಶಗಳಿಗೆ ಪ್ರವೇಶವನ್ನು ನಿರ್ಬಂಧಿಸಬೇಕು.
ಜೈಪುರ, ಕೋಟಾ, ಸಿಕಾರ್, ಚೆನ್ನೈ, ಹೈದರಾಬಾದ್, ದೆಹಲಿ ಮತ್ತು ಮುಂಬೈನಂತಹ ತರಬೇತಿ ಕೇಂದ್ರಗಳ ಹಬ್‌ಗಳಲ್ಲಿ ವರ್ಧಿತ ಮಾನಸಿಕ ಆರೋಗ್ಯ ರಕ್ಷಣೆಯನ್ನು ಜಾರಿಗೆ ತರಬೇಕು. ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳ ಹೆಚ್ಚಿನ ಸಾಂದ್ರತೆಗೆ ಹೆಸರುವಾಸಿಯಾದ ಈ ನಗರಗಳು ಅಸಮಾನವಾಗಿ ಹೆಚ್ಚಿನ ವಿದ್ಯಾರ್ಥಿಗಳ ಆತ್ಮಹತ್ಯೆ ದರಗಳನ್ನು ಕಂಡಿವೆ. ಆದ್ದರಿಂದ ಕೇಂದ್ರೀಕೃತ ತಡೆಗಟ್ಟುವ ಪ್ರಯತ್ನಗಳ ಅಗತ್ಯವಿದೆ.
ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಷಕ್ಕೆ ಕನಿಷ್ಠ ಎರಡು ಬಾರಿ ಕಡ್ಡಾಯ ತರಬೇತಿಗೆ ಒಳಗಾಗಬೇಕು. ಈ ತರಬೇತಿಯನ್ನು ಪ್ರಮಾಣೀಕೃತ ಮಾನಸಿಕ ಆರೋಗ್ಯ ವೃತ್ತಿಪರರು ನಡೆಸಬೇಕು. ತರಬೇತಿಯು ಮಾನಸಿಕ ಪ್ರಥಮ ಚಿಕಿತ್ಸೆ, ಎಚ್ಚರಿಕೆ ಚಿಹ್ನೆಗಳನ್ನು ಗುರುತಿಸುವುದು, ಸ್ವಯಂ-ಹಾನಿಗೆ ಪ್ರತಿಕ್ರಿಯೆ ಮತ್ತು ರೆಫರಲ್ ಕಾರ್ಯವಿಧಾನಗಳನ್ನು ಒಳಗೊಂಡಿರಬೇಕು.
ಲೈಂಗಿಕ ದೌರ್ಜನ್ಯ, ಕಿರುಕುಳ, ರ‍್ಯಾಗಿಂಗ್ ಮತ್ತು ಇತರ ಕುಂದುಕೊರತೆಗಳ ಘಟನೆಗಳನ್ನು ವರದಿ ಮಾಡಲು ಮತ್ತು ಪರಿಹರಿಸಲು ಸಂಸ್ಥೆಗಳು ಬಲಿಷ್ಠ, ಗೌಪ್ಯ ಮತ್ತು ಸುಲಭವಾಗಿ ತಲುಪಲು ಸಾಧ್ಯವಾಗುವ ವ್ಯವಸ್ಥೆಗಳನ್ನು ಸ್ಥಾಪಿಸಬೇಕು. ದೂರುಗಳ ಮೇಲೆ ತಕ್ಷಣವೇ ಕಾರ್ಯನಿರ್ವಹಿಸಲು ಮತ್ತು ಬಲಿಪಶುಗಳಿಗೆ ಮಾನಸಿಕ ಸಾಮಾಜಿಕ ಬೆಂಬಲವನ್ನು ಒದಗಿಸಲು ಆಂತರಿಕ ಸಮಿತಿಗಳನ್ನು ರಚಿಸಬೇಕು. ದೂರುದಾರರು ಅಥವಾ ಮಾಹಿತಿ ನೀಡುವವರ ವಿರುದ್ಧ ಯಾವುದೇ ಪ್ರತೀಕಾರದ ಕ್ರಮಗಳ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಕಾಯ್ದುಕೊಳ್ಳಬೇಕು.
ಈ ಮಾರ್ಗಸೂಚಿಗಳು ಭಾರತದಾದ್ಯಂತದ ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ತರಬೇತಿ ಕೇಂದ್ರಗಳು, ತರಬೇತಿ ಸಂಸ್ಥೆಗಳು, ವಸತಿ ಅಕಾಡೆಮಿಗಳು ಮತ್ತು ಹಾಸ್ಟೆಲ್‌ಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸುತ್ತದೆ.
ಈ ಮಾರ್ಗಸೂಚಿಗಳನ್ನು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕಾಳಜಿಗಳ ಕುರಿತ ರಾಷ್ಟ್ರೀಯ ಕಾರ್ಯಪಡೆಯ ನಡೆಯುತ್ತಿರುವ ಕೆಲಸಕ್ಕೆ ಸಮಾನಾಂತರವಾಗಿ ಹೊರಡಿಸಲಾಗಿದೆ ಮತ್ತು ಮಧ್ಯಂತರ ರಕ್ಷಣಾತ್ಮಕ ಚೌಕಟ್ಟಾಗಿ ಕಾರ್ಯನಿರ್ವಹಿಸುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಎಲ್ಲಾ ಸಂಸ್ಥೆಗಳು ದಾಖಲೆಗಳನ್ನು ನಿರ್ವಹಿಸಬೇಕು ಮತ್ತು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಸಂಬಂಧಿತ ಕ್ರಮಗಳು, ವಿದ್ಯಾರ್ಥಿಗಳನ್ನು ಇತರೆಡೆಗೆ ರೆಫರಲ್ ಮಾಡಿದ ಬಗ್ಗೆ, ತರಬೇತಿ ಅವಧಿಗಳು ಮತ್ತು ಮಾನಸಿಕ ಆರೋಗ್ಯ ಸಂಬಂಧಿತ ಚಟುವಟಿಕೆಗಳನ್ನು ವಿವರಿಸುವ ವಾರ್ಷಿಕ ವರದಿಯನ್ನು ಸಿದ್ಧಪಡಿಸಬೇಕು. ಈ ವರದಿಯನ್ನು ರಾಜ್ಯ ಶಿಕ್ಷಣ ಇಲಾಖೆ, ಯುಜಿಸಿ, ಎಐಸಿಟಿಇ ಅಥವಾ ಸಿಬಿಎಸ್‌ಇಯಂತಹ ಸಂಬಂಧಿತ ನಿಯಂತ್ರಕ ಪ್ರಾಧಿಕಾರಕ್ಕೆ ಸಲ್ಲಿಸಬೇಕು.
ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ನಿಯಮಿತ, ರಚನಾತ್ಮಕ ವೃತ್ತಿ ಸಮಾಲೋಚನೆ ತರಬೇತಿಯನ್ನು ಒದಗಿಸಬೇಕು. ಅರ್ಹ ಸಲಹೆಗಾರರು ನಡೆಸುವ ಈ ತರಬೇತಿಯು ಅವಾಸ್ತವಿಕ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವುದು, ವೈವಿಧ್ಯಮಯ ಶೈಕ್ಷಣಿಕ ಮತ್ತು ವೃತ್ತಿಪರ ಮಾರ್ಗಗಳ ಅರಿವನ್ನು ಉತ್ತೇಜಿಸುವುದು ಮತ್ತು ವಿದ್ಯಾರ್ಥಿಗಳು ಮಾಹಿತಿಯುಕ್ತ, ಆಸಕ್ತಿ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ಗುರಿಯನ್ನು ಹೊಂದಿರಬೇಕು. ಸಮಾಲೋಚನೆಯು ಎಲ್ಲರನ್ನೂ ಒಳಗೊಳ್ಳುವ, ಸಾಮಾಜಿಕ-ಆರ್ಥಿಕವಾಗಿ ಸೂಕ್ಷ್ಮವಾಗಿರಬೇಕು ಮತ್ತು ಅರ್ಹತೆ ಅಥವಾ ಯಶಸ್ಸಿನ ಆಧಾರದ ಮೇಲೆ ಫಲಾನುಭವಿಗಳನ್ನು ನಿರ್ಧರಿಸಬಾರದು.
ಗಾಝಾ | ಹಸಿವಿನಿಂದ ಮತ್ತೆ ಐವರು ಸಾವು: ಆಹಾರ ಖರೀದಿಸಲು ಕ್ಯಾಮರಾ, ಪ್ರೆಸ್ ಶೀಲ್ಡ್ ಮಾರಾಟಕ್ಕಿಟ್ಟ ಪತ್ರಕರ್ತ


