ಕಾನೂನುಬದ್ಧ ಕಾರ್ಯವಿಧಾನವನ್ನು ಅನುಸರಿಸದೆ ಆರೋಪಿಗಳ ಮನೆಗಳನ್ನು ಕೆಡವುದರ ವಿರುದ್ಧ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ನಾಗರಿಕರ ಹಕ್ಕುಗಳನ್ನು ಎತ್ತಿಹಿಡಿದಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ. ಆರ್ ಗವಾಯಿ ಸಂತಸ ವ್ಯಕ್ತಪಡಿಸಿದ್ದಾರೆ.
ಸಿಜೆಐ ಗವಾಯಿ ಅವರು ಆರೋಪಿಗಳ ಮನೆಗಳನ್ನು ಕೆಡವುವ ‘ಬುಲ್ದೋಝರ್ ಅನ್ಯಾಯ’ದ ವಿರುದ್ದ ಮಾರ್ಗಸೂಚಿಗಳನ್ನು ರೂಪಿಸಿ ಕಳೆದ ವರ್ಷ ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್ ಪೀಠದ ಭಾಗವಾಗಿದ್ದರು.
ಶನಿವಾರ (ಆ.23) ಪಣಜಿಯಲ್ಲಿ ಗೋವಾ ಹೈಕೋರ್ಟ್ ಬಾರ್ ಅಸೋಸಿಯೇಷನ್ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸಿಜೆಐ, ಒಳ ಮೀಸಲಾತಿ ತೀರ್ಪು ನೀಡುವಾಗ ಕೆನೆಪದರವನ್ನು ಉಲ್ಲೇಖಿಸಿದ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಷಣಕಾರರು ತಮ್ಮ ಐತಿಹಾಸಿಕ ತೀರ್ಪುಗಳನ್ನು ಉಲ್ಲೇಖಿಸಿದ ಬಗ್ಗೆ ಪ್ರತಿಕ್ರಿಯಿಸಿದ ಸಿಜೆಐ “ಕಾನೂನಿನ ಕಾರ್ಯವಿಧಾನಗಳನ್ನು ಅನುಸರಿಸದೆ ಮನೆಗಳನ್ನು ಕೆಡವುತ್ತಿದ್ದಾಗ ನಾಗರಿಕರ ಹಕ್ಕುಗಳನ್ನು ರಕ್ಷಿಸಲು ಸಂವಿಧಾನದ ರಕ್ಷಕನಾಗಿ ನಾವು ಏನಾದರೂ ಮಾಡಲು ಸಾಧ್ಯವಾಯಿತು ಎಂದು ನನಗೆ ನಿಜವಾಗಿಯೂ ಸಂತೋಷವಾಗಿದೆ” ಎಂದಿದ್ದಾರೆ.
ಕಾನೂನಿನಡಿಯಲ್ಲಿ ವಿಚಾರಣೆಗೆ ಒಳಗಾಗದ ಮತ್ತು ಕೆಲವು ಆರೋಪಗಳು ಹೊರಿಸಲ್ಪಟ್ಟ ಜನರ ಕಟ್ಟಡಗಳು ಅಥವಾ ಮನೆಗಳನ್ನು ಕಾನೂನಿನ ಸರಿಯಾದ ಕಾರ್ಯವಿಧಾನವನ್ನು ಅನುಸರಿಸದೆ ಕೆಡವಲಾಗುತ್ತಿತ್ತು ಎಂದು ಹೇಳಿದ್ದಾರೆ.
ಮನೆಗಳು ಕೇವಲ ಆರೋಪಿತ ವ್ಯಕ್ತಿಗೆ ಸೇರಿದ್ದಲ್ಲ. ಮನೆಗಳನ್ನು ಹಠಾತ್ ಕೆಡವುದರಿಂದ ಅದರಲ್ಲಿ ವಾಸಿಸುವ ಆರೋಪಿಯ ಕುಟುಂಬ ಸದಸ್ಯರೂ ತಮ್ಮದಲ್ಲದ ತಪ್ಪಿಗೆ ತೊಂದರೆ ಅನುಭವಿಸಬೇಕಾಗಿತ್ತು. ಒಬ್ಬ ವ್ಯಕ್ತಿ ಶಿಕ್ಷೆಗೊಳಗಾದರೂ, ಅವನು ಇನ್ನೂ ಕಾನೂನಿನ ಆಳ್ವಿಕೆಗೆ ಅರ್ಹನಾಗಿರುತ್ತಾನೆ ಎಂದು ಸಿಜೆಐ ತಿಳಿಸಿದ್ದಾರೆ.
“ದೇಶದಲ್ಲಿ ಕಾನೂನಿನ ನಿಯಮವು ಅತ್ಯುನ್ನತವಾಗಿದೆ. ನಾವು ಮಾರ್ಗಸೂಚಿಗಳನ್ನು ರೂಪಿಸಲು ಸಾಧ್ಯವಾಯಿತು ಎಂದು ನನಗೆ ಸಂತೋಷವಿದೆ. ಈ ಮೂಲಕ ಕಾರ್ಯಾಂಗ ನ್ಯಾಯಾಧೀಶರಾಗದಂತೆ ತಡೆದಿದ್ದೇವೆ” ಎಂದಿದ್ದಾರೆ.
ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗದ ಅಧಿಕಾರಗಳ ಪ್ರತ್ಯೇಕತೆಯನ್ನು ಭಾರತೀಯ ಸಂವಿಧಾನವು ಸ್ಪಷ್ಟವಾಗಿ ವಿವರಿಸಿದೆ ಎಂದ ಸಿಜೆಐ, ಕಾರ್ಯಾಂಗಕ್ಕೆ ನ್ಯಾಯಾಧೀಶರಾಗಲು ಅವಕಾಶ ನೀಡಿದರೆ, ನಾವು ಅಧಿಕಾರ ವಿಭಜನೆಯ ಪರಿಕಲ್ಪನೆಯನ್ನೇ ಹಾಳು ಮಾಡಿದಂತೆ ಎಂದು ಹೇಳಿದ್ದಾರೆ.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ಸಿಜೆಐ ಗವಾಯಿ, ತಮ್ಮದೇ ಸಮುದಾಯಕ್ಕೆ ಸೇರಿದ ಜನರಿಂದ ಈ ತೀರ್ಪಿಗಾಗಿ ವ್ಯಾಪಕ ಟೀಕೆಗೆ ಒಳಗಾಗಬೇಕಾಯಿತು ಎಂದಿದ್ದಾರೆ.
“ನಾನು ಅರ್ಥಮಾಡಿಕೊಂಡ ಕಾನೂನಿನ ಪ್ರಕಾರ ಮತ್ತು ನನ್ನ ಸ್ವಂತ ಆತ್ಮಸಾಕ್ಷಿಯ ಪ್ರಕಾರ ತೀರ್ಪು ಬರೆಯಬೇಕೇ ಹೊರತು, ಜನರ ಬೇಡಿಕೆಗಳು ಅಥವಾ ಆಸೆಯಂತಲ್ಲ ಎಂದು ನಾನು ಯಾವಾಗಲೂ ನಂಬಿದ್ದೇನೆ” ಎಂದು ತಿಳಿಸಿದ್ದಾರೆ.
“ಮೀಸಲಾತಿ ವರ್ಗದಿಂದ ಬಂದ ಮೊದಲ ತಲೆಮಾರಿನ ವ್ಯಕ್ತಿಯೊಬ್ಬರು ಐಎಎಸ್ ಅಧಿಕಾರಿಯಾದಾಗ, ಅದರ ಪ್ರಯೋಜನವು ನಂತರದ ಪೀಳಿಗೆಗೆ ವಿಸ್ತರಿಸುತ್ತದೆ ಮತ್ತು ಎರಡನೇ ಮತ್ತು ಮೂರನೇ ತಲೆಮಾರಿನವರೂ ಕೂಡ ಅದೇ ವರ್ಗದ ಮೂಲಕ ಐಎಎಸ್‌ಗೆ ಪ್ರವೇಶಿಸುತ್ತಾರೆ” ಎಂದು ಹೇಳಿದ್ದಾರೆ.
“ಮುಂಬೈ ಅಥವಾ ದೆಹಲಿಯ ಶಾಲೆಯಲ್ಲಿ ಉತ್ತಮ ಶಿಕ್ಷಣ ಪಡೆಯುವ ವ್ಯಕ್ತಿಯ ಮಗ ಅಥವಾ ಮಗಳನ್ನು ಜಿಲ್ಲಾ ಪರಿಷತ್ ಅಥವಾ ಗ್ರಾಮ ಪಂಚಾಯತ್ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಹಳ್ಳಿಯಲ್ಲಿ ಮೇಸ್ತ್ರಿ ಅಥವಾ ಕೃಷಿ ಕಾರ್ಮಿಕರ ಮಗ ಅಥವಾ ಮಗಳಿಗೆ ಸಮನಾಗಿ ಪರಿಗಣಿಸಬಹುದೇ ಎಂಬುದು ನಾನು ನನ್ನನ್ನು ಕೇಳಿಕೊಂಡ ಪ್ರಶ್ನೆ” ಎಂದಿದ್ದಾರೆ.
“ಸಂವಿಧಾನದ 14ನೇ ವಿಧಿಯು ಅಸಮಾನರ ನಡುವೆ ಸಮಾನತೆಯನ್ನು ಅರ್ಥೈಸುವುದಿಲ್ಲ. ಅಸಮಾನರನ್ನು ಅಸಮಾನವಾಗಿ ನಡೆಸಿಕೊಳ್ಳುವುದರಿಂದ ಅವರು ಸಮಾನರಾಗುತ್ತಾರೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಹಳ್ಳಿಯಲ್ಲಿ ವಾಸಿಸುವ ಕಾರ್ಮಿಕನ ಮಗುವನ್ನು ಮತ್ತು ಮುಂಬೈನಲ್ಲಿ ವಾಸಿಸುವ ಮುಖ್ಯ ಕಾರ್ಯದರ್ಶಿಯ ಮಗುವನ್ನು ಅತ್ಯುತ್ತಮ ಶಾಲೆಯಲ್ಲಿ ಓದಿಸುವುದು ಸಮಾನತೆಯ ಅತ್ಯುತ್ತಮ ಪರಿಕಲ್ಪನೆ ಎಂಬುದು ನನ್ನ ಅಭಿಪ್ರಾಯ” ಎಂದು ಸಿಜೆಐ ಹೇಳಿದ್ದಾರೆ.
ಪ್ರೊ. ಅಲಿ ಖಾನ್ ವಿರುದ್ಧದ ಆರೋಪಪಟ್ಟಿ ಪರಿಗಣಿಸದಂತೆ ವಿಚಾರಣಾ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚನೆ


