ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಘಟನೆಯ ನ್ಯಾಯಾಂಗ ತನಿಖೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ (ಏ.30) ನಿರಾಕರಿಸಿದೆ.
ಪಹಲ್ಗಾಮ್ ದಾಳಿಯ ತನಿಖೆಯನ್ನು ಮೇಲ್ವಿಚಾರಣೆಯನ್ನು ನಿವೃತ್ತ ನ್ಯಾಯಾಧೀಶರಿಂದ ಮಾಡಿಸಬೇಕು ಎಂದು ಕೋರಿದ್ದಕ್ಕಾಗಿ ಅರ್ಜಿದಾರರನ್ನು ಟೀಕಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೋಟಿಶ್ವರ್ ಸಿಂಗ್ ಅವರ ಪೀಠವು, ನಿವೃತ್ತ ನ್ಯಾಯಾಧೀಶರು ತಜ್ಞರಲ್ಲ ಎಂದು ಹೇಳಿದೆ.
“ಈ ನಿರ್ಣಾಯಕ ಸಮಯದಲ್ಲಿ, ದೇಶದ ಪ್ರತಿಯೊಬ್ಬ ನಾಗರಿಕರು ಭಯೋತ್ಪಾದನೆಯ ವಿರುದ್ಧ ಹೋರಾಡಲು ಕೈಜೋಡಿಸಿದ್ದಾರೆ. ಈ ರೀತಿಯ ಪಿಐಎಲ್ ಸಲ್ಲಿಸುವ ಮೂಲಕ ಭದ್ರತಾ ಪಡೆಗಳ ಸ್ಥೈರ್ಯ ಕುಗ್ಗಿಸಲು ನೀವು ಬಯಸುತ್ತೀರಾ? ಈ ರೀತಿಯ ಸಮಸ್ಯೆಯನ್ನು ನ್ಯಾಯಾಂಗ ವ್ಯಾಪ್ತಿಯಲ್ಲಿ ತರಬೇಡಿ” ಎಂದು ನ್ಯಾಯಪೀಠ ಹೇಳಿದೆ ಎಂದು ವರದಿಯಾಗಿದೆ.
ಅರ್ಜಿದಾರರಾದ ಫತೇಶ್ ಕುಮಾರ್ ಸಾಹು ಮತ್ತು ಇತರರಿಗೆ ಪಿಐಎಲ್ ಹಿಂಪಡೆಯಲು ನ್ಯಾಯಾಲಯ ಸೂಚಿಸಿದೆ. ಅರ್ಜಿದಾರರು ಈ ವಿಷಯದ ಸೂಕ್ಷ್ಮತೆಯನ್ನು ಅರಿತುಕೊಳ್ಳಬೇಕು ಮತ್ತು ಭದ್ರತಾ ಪಡೆಗಳ ಸ್ಥೈರ್ಯ ಕುಗ್ಗಿಸುವ ಯಾವುದೇ ಮನವಿಯನ್ನು ನ್ಯಾಯಾಲಯದಲ್ಲಿ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಕೇಳಿದೆ ಎಂದು ವರದಿ ತಿಳಿಸಿದೆ.
“ನೀವು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಲು ಕೇಳುತ್ತಿದ್ದೀರಿ. ಅವರು ತನಿಖೆಯಲ್ಲಿ ಪರಿಣತರಲ್ಲ, ಆದರೆ ಅವರು ಸಮಸ್ಯೆಯನ್ನು ನಿರ್ಣಯಿಸಬಹುದು ಮತ್ತು ನಿರ್ಧರಿಸಬಹುದು. ಆದೇಶ ಹೊರಡಿಸಲು ನಮ್ಮನ್ನು ಕೇಳಬೇಡಿ. ನೀವು ಎಲ್ಲಿಗೆ ಹೋಗಬೇಕೆಂದರೂ ಹೋಗಿ. ನೀವು ಇದರಿಂದ ಹಿಂದೆ ಸರಿಯುವುದು ಉತ್ತಮ” ಎಂದು ಪೀಠವು ಅರ್ಜಿದಾರರಲ್ಲಿ ಒಬ್ಬರಿಗೆ ಹೇಳಿದೆ ಎಂದು ವರದಿ ವಿವರಿಸಿದೆ.
ಪ್ರವಾಸಿಗರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ಜಮ್ಮು-ಕಾಶ್ಮೀರ ಆಡಳಿತಕ್ಕೆ ನಿರ್ದೇಶನ ನೀಡಬೇಕೆಂದು ಪಿಐಎಲ್ ಕೋರಿತ್ತು.
ಏಪ್ರಿಲ್ 22ರಂದು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನ ಜನಪ್ರಿಯ ಪ್ರವಾಸಿ ತಾಣ ಬೈಸರನ್‌ನಲ್ಲಿ ಭಯೋತ್ಪಾದಕರು ಗುಂಡು ಹಾರಿಸಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದಾರೆ.
ಪಹಲ್ಗಾಮ್ ದಾಳಿ ಗಮನ ಬೇರೆಡೆ ಸೆಳೆಯಲು ಮೋದಿ ಸರ್ಕಾರದಿಂದ ಜಾತಿ ಜನಗಣತಿ ಮುನ್ನೆಲೆಗೆ: ಸಂಜಯ್ ಸಿಂಗ್


