ಐಐಟಿಗಳು ಮತ್ತು ಐಐಎಂಗಳು ಮೀಸಲು ವರ್ಗಗಳಿಂದ ಅಧ್ಯಾಪಕರನ್ನು ಭರ್ತಿ ಮಾಡಿಕೊಳ್ಳಲು ಅಭಿಯಾನವನ್ನು ಹಮ್ಮಿಕೊಂಡಾಗಿನಿಂದ ಎರಡು ವರ್ಷಗಳಲ್ಲಿ ಈ ಸಂಸ್ಥೆಗಳು ಒಟ್ಟಾಗಿ ನೇಮಕ ಮಾಡಿಕೊಂಡಿರುವ ಬೋಧಕರ ಪೈಕಿ ಕೇವಲ ಶೇ.10ರಷ್ಟು ಅಭ್ಯರ್ಥಿಗಳು ಪರಿಶಿಷ್ಟ ಜಾತಿಗಳು(ಎಸ್‌ಸಿ) ಮತ್ತು ಪರಿಶಿಷ್ಟ ವರ್ಗ(ಎಸ್‌ಟಿ)ಗಳಿಗೆ ಸೇರಿದವರಾಗಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯವು ಸಂಸತ್ತಿನಲ್ಲಿ ತಿಳಿಸಿದೆ ಎಂದು thewire.in ವರದಿ ಮಾಡಿದೆ.
ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಕಾಂತ ಮಜೂಮ್ದಾರ್ ಸೋಮವಾರ (ಫೆಬ್ರವರಿ 10) ಲೋಕಸಭೆಗೆ ನೀಡಿದ ಲಿಖಿತ ಉತ್ತರದ ಪ್ರಕಾರ, ಸೆಪ್ಟೆಂಬರ್ 2022ರಿಂದ ಎಲ್ಲಾ ಐಐಟಿಗಳು ಮತ್ತು ಐಐಎಂಗಳು ಎಸ್‌ಸಿ ಮತ್ತು ಎಸ್‌ಟಿ ಸೇರಿದಂತೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಭಿಯಾನದ ರೀತಿಯ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಡಿಸೆಂಬರ್ 23, 2024 ರವರೆಗೆ ಒಟ್ಟು 3,027 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, ಈ ಪೈಕಿ ಎಸ್‌ಸಿಗಳ ಸಂಖ್ಯೆ 276 ಮತ್ತು ಎಸ್‌ಟಿಗಳ ಸಂಖ್ಯೆ 52 ಇದೆ.
ಆಗಸ್ಟ್ 2021ರಲ್ಲಿ ಕೇಂದ್ರ ಸರ್ಕಾರ ಎಸ್‌ಸಿಗಳು, ಎಸ್‌ಟಿಗಳು, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳು ಹಾಗೂ ಆರ್ಥಿಕ ದುರ್ಬಲ ವರ್ಗಗಳಿಗೆ ಸೇರಿದ ವ್ಯಕ್ತಿಗಳಿಗೆ ಕೇಂದ್ರೀಯ ಉನ್ನತ ಶಿಕ್ಷಣ ಸಂಸ್ಥೆ (ಸಿಎಹೆಚ್‌ಇಐ)ಗಳ ಬೋಧಕರ ಹುದ್ದೆಗಳಲ್ಲಿ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಒದಗಿಸಲು ಕೇಂದ್ರೀಯ ಶಿಕ್ಷಣ ಸಂಸ್ಥೆಗಳ (ಬೋಧಕ ಹುದ್ದೆಗಳಲ್ಲಿ ಮೀಸಲಾತಿ) 2019ನ್ನು ಅಧಿಸೂಚಿಸಿತ್ತು. ಬ್ಯಾಕ್‌ಲಾಗ್ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ವಿಶೇಷ ಅಭಿಯಾನವನ್ನು ಆರಂಭಿಸುವಂತೆ ಅದೇ ತಿಂಗಳು ಎಲ್ಲಾ ಸಿಎಹೆಚ್‌ಇಐಗಳಿಗೆ ಸೂಚಿಸಲಾಗಿತ್ತು.
3,027 ಬೋಧಕ ಹುದ್ದೆಗಳಲ್ಲಿ 328 ಎಸ್‌ಸಿ/ಎಸ್‌ಟಿ ಹುದ್ದೆಗಳು ಮಾತ್ರ ಭರ್ತಿಯಾಗಿವೆ.
“ಸೆಪ್ಟೆಂಬರ್ 2022ರಿಂದ, ಐಐಟಿಗಳು ಮತ್ತು ಐಐಎಂಗಳು ಎಸ್‌ಸಿ ಮತ್ತು ಎಸ್‌ಟಿ ಸೇರಿದಂತೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಭಿಯಾನದ ರೀತಿಯ ನೇಮಕಾತಿ ಪ್ರಕ್ರಿಯೆ ಕೈಗೊಂಡಿತ್ತು. ಡಿಸೆಂಬರ್ 23,2024 ರವರೆಗೆ ಎಲ್ಲಾ ಸಿಹೆಚ್‌ಇಐಗಳು ಅಭಿಯಾನ ರೀತಿಯಲ್ಲಿ ಒಟ್ಟು 26,751 ಹುದ್ದೆಗಳನ್ನು ಭರ್ತಿ ಮಾಡಿದ್ದಾರೆ. ಇದರಲ್ಲಿ 15,637 ಅಧ್ಯಾಪಕರ ಹುದ್ದೆಗಳು ಸೇರಿವೆ. ಐಐಟಿಗಳು ಮತ್ತು ಐಐಎಂಗಳು ಒಟ್ಟಾರೆಯಾಗಿ 7,239 ಹುದ್ದೆಗಳನ್ನು ಭರ್ತಿ ಮಾಡಿವೆ. ಅವುಗಳಲ್ಲಿ 276 ಎಸ್‌ಸಿ ಮತ್ತು 52 ಎಸ್‌ಟಿ ಸೇರಿದಂತೆ 3027 ಅಧ್ಯಾಪಕರ ಹುದ್ದೆಗಳು ಒಳಗೊಂಡಿವೆ ಎಂದು ಸಚಿವ ಮಜೂಂದ್ದಾರ್ ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.
ಕನಿಷ್ಠ ಎರಡು ಐಐಟಿಗಳು ಮತ್ತು ಮೂರು ಐಐಎಂಗಳಲ್ಲಿ ಶೇ.90ಕ್ಕಿಂತ ಅಧಿಕ ಬೋಧಕ ಹುದ್ದೆಗಳನ್ನು ಸಾಮಾನ್ಯ ವರ್ಗದವರು ಹೊಂದಿದ್ದಾರೆ. ಹೆಚ್ಚುವರಿಯಾಗಿ ಆರು ಐಐಟಿಗಳು ಮತ್ತು ನಾಲ್ಕು ಐಐಎಂಗಳಲ್ಲಿ ಈ ಪ್ರಮಾಣ ಶೇ.80ರಿಂದ ಶೇ.90ರಷ್ಟಿದೆ ಎನ್ನುವುದನ್ನು ಡಿಸೆಂಬರ್‌ನಲ್ಲಿ ಮಾಹಿತಿ ಹಕ್ಕು(ಆರ್‌ಟಿಐ) ಕಾಯ್ದೆಯಡಿ ಪಡೆಯಲಾದ ಉತ್ತರಗಳು ಬಹಿರಂಗಗೊಳಿಸಿತ್ತು.
ಕೇಂದ್ರದ ನೀತಿಯ ಪ್ರಕಾರ, ಐಐಟಿಗಳು ಮತ್ತು ಐಐಎಂಗಳು ಸೇರಿದಂತೆ ಬಹುತೇಕ ಎಲ್ಲಾ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಶೇ.27 ರಷ್ಟು ಬೋಧಕ ಹುದ್ದೆಗಳು ಒಬಿಸಿಗಳಿಗೆ, ಶೇ.15 ರಷ್ಟು ಎಸ್‌ಸಿಗಳಿಗೆ ಮತ್ತು ಶೇ.7.5 ರಷ್ಟು ಎಸ್‌ಟಿಗಳಿಗೆ ಮೀಸಲಾಗಿವೆ.
ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS)2018-19ರಲ್ಲಿ 172 ಅಧ್ಯಾಪಕರ ಹುದ್ದೆಗಳಿಗೆ ಜಾಹೀರಾತು ನೀಡಿದ್ದು, ಅದರಲ್ಲಿ ಶೇ. 12ರಷ್ಟು ಹುದ್ದೆಗಳು ಎಸ್‌ಸಿ/ಎಸ್‌ಟಿ ವರ್ಗಗಳಿಂದ ಭರ್ತಿಯಾಗಿವೆ. 2021-22ರಲ್ಲಿ 270 ಅಧ್ಯಾಪಕರ ಹುದ್ದೆಗಳಲ್ಲಿ ಶೇ. 14 ರಷ್ಟು ಹುದ್ದೆಗಳಿಗೆ ಎಸ್‌ಸಿ/ಎಸ್‌ಟಿಗಳು ನೇಮಕಗೊಂಡಿದ್ದಾರೆ ಎಂದು ಸಚಿವ ಮಜೂಮ್ದಾರ್ ತಿಳಿಸಿದ್ದಾರೆ.
“ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಸಂಸತ್ತಿನ ಕಾಯ್ದೆಯ ಮೂಲಕ ಸ್ಥಾಪಿಸಲ್ಪಟ್ಟಿದೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಒದಗಿಸಿದ ಮಾಹಿತಿಯ ಪ್ರಕಾರ, AIIMS ದೆಹಲಿ 2018-19 ಮತ್ತು 2021-22ರಲ್ಲಿ ಕ್ರಮವಾಗಿ 172 ಮತ್ತು 270 ಅಧ್ಯಾಪಕರ ಹುದ್ದೆಗಳಿಗೆ ಜಾಹೀರಾತು ನೀಡಿದೆ. ಅದರಲ್ಲಿ ಕ್ರಮವಾಗಿ 22 ಮತ್ತು 40 ಎಸ್/ಎಸ್‌ಟಿ ಹುದ್ದೆಗಳನ್ನು ಭರ್ತಿ ಮಾಡಿದೆ” ಎಂದು ಸಚಿವರ ಉತ್ತರದಲ್ಲಿ ತಿಳಿಸಲಾಗಿದೆ.
ಸೌಜನ್ಯ : thewire.in


