ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ ಆರೋಪದ ಮೇಲೆ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಮಾನನಷ್ಟ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ (ಜ.20) ತಡೆ ನೀಡಿದೆ.
2019ರ ಲೋಕಸಭಾ ಚುನಾವಣೆಗೆ ಮುನ್ನ ಜಾರ್ಖಂಡ್‌ನ ಚೈಬಾಸಾದಲ್ಲಿ ನಡೆದ ರ್‍ಯಾಲಿಯಲ್ಲಿ ರಾಹುಲ್ ಗಾಂಧಿ ಅಮಿತ್ ಶಾ ಅವರನ್ನು ‘ಕೊಲೆ ಆರೋಪಿ’ ಎಂದು ಉಲ್ಲೇಖಿಸಿದ ಆರೋಪವಿದೆ. ಈ ಸಂಬಂಧ ಬಿಜೆಪಿ ನಾಯಕ ನವೀನ್ ಝಾ ಅವರು ದೂರು ದಾಖಲಿಸಿದ್ದರು.
ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ನೇತೃತ್ವದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ “ವಿಚಾರಣಾ ನ್ಯಾಯಾಲಯ ಪ್ರಕರಣದ ವಿಚಾರಣೆ ಮುಂದುವರೆಸುವುದಕ್ಕೆ ತಡೆಯಾಜ್ಞೆ ನೀಡಿದೆ ಎಂದು ವರದಿಗಳು ಹೇಳಿವೆ.
ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ, ಗಾಂಧಿ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, “ನೀವು ನೊಂದ ವ್ಯಕ್ತಿಯಲ್ಲದಿರುವಾಗ ದೂರು ನೀಡಲು ಹೇಗೆ ಸಾಧ್ಯ ಎಂದು ನವೀನ್ ಝಾ ದೂರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಸಿಂಘ್ವಿ ಅವರ ಅರ್ಜಿಯನ್ನು ಆಲಿಸಿದ ನಂತರ, ಸುಪ್ರೀಂ ಕೋರ್ಟ್ ಜಾರ್ಖಂಡ್ ಸರ್ಕಾರ ಮತ್ತು ದೂರುದಾರ (ಝಾ) ಗೆ ನೋಟಿಸ್ ಜಾರಿ ಮಾಡಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಜಾರ್ಖಂಡ್ ಹೈಕೋರ್ಟ್ ತಮ್ಮ ಅರ್ಜಿಯನ್ನು ವಜಾಗೊಳಿಸಿದ ನಂತರ, ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ 2018ರ ಮಾನನಷ್ಟ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ರಾಹುಲ್ ಗಾಂಧಿಯವರ ಹೇಳಿಕೆಗಳು ‘ಪ್ರಥಮ ನೋಟಕ್ಕೆ ಮಾನನಷ್ಟಕರ’ ಎಂದು ಪರಿಗಣಿಸಿ, ಜಾರ್ಖಂಡ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಅಂಬುಜ್ ನಾಥ್ ಅವರು ಅರ್ಜಿಯನ್ನು ವಜಾಗೊಳಿಸಿದ್ದರು.
ಮಾರ್ಚ್ 18, 2018 ರಂದು ನಡೆದ ಕಾಂಗ್ರೆಸ್ ಸಮಗ್ರ ಅಧಿವೇಶನದಲ್ಲಿ ರಾಹುಲ್ ಗಾಂಧಿ ಅಮಿತ್ ಶಾ ಅವರ ವಿರುದ್ದ ಮಾನನಷ್ಟದ ಹೇಳಿಕೆ ನೀಡಿದ್ದಾರೆ ಎಂದು ಝಾ ತಮ್ಮ ದೂರಿನಲ್ಲಿ ಆರೋಪಿಸಿದ್ದರು.
ರಾಹುಲ್ ಗಾಂಧಿ ಹೇಳಿಕೆ “ಭಾರತೀಯ ಜನತಾ ಪಕ್ಷ (ಬಿಜೆಪಿ) ಗಾಗಿ ನಿಸ್ವಾರ್ಥವಾಗಿ ಕೆಲಸ ಮಾಡುತ್ತಿರುವ” ಎಲ್ಲಾ ಕಾರ್ಯಕರ್ತರು, ಬೆಂಬಲಿಗರು ಮತ್ತು ನಾಯಕರಿಗೆ ಮಾಡಿದ ಅವಮಾನ ಎಂದು ಅವರು ಹೇಳಿದ್ದರು.
ಇದನ್ನೂ ಓದಿ : ಬಾಬಾ ರಾಮ್‌ದೇವ್ ಬಂಧನಕ್ಕೆ ವಾರೆಂಟ್ ಹೊರಡಿಸಿದ ಕೋರ್ಟ್


