“ಹೆಣ್ಣು ಮಕ್ಕಳ ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಅಲ್ಲ” ಎಂಬ ಅಲಹಾಬಾದ್ ಹೈಕೋರ್ಟ್‌ನ ವಿವಾದಾತ್ಮಕ ತೀರ್ಪಿನ ಕುರಿತು ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿದೆ ಎಂದು ವರದಿಗಳು ಹೇಳಿವೆ.
ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ಬುಧವಾರ (ಮಾ.26) ಈ ಪ್ರಕರಣದ ವಿಚಾರಣೆ ನಡೆಸಲಿದೆ.
‘ಅತ್ಯಾಚಾರ ಆರೋಪ ಎಂದರೇನು’ ಎಂಬುದರ ಕುರಿತ ಅಲಹಾಬಾದ್ ಹೈಕೋರ್ಟ್‌ನ ಅವಲೋಕನವನ್ನು ಕಾನೂನು ತಜ್ಞರು ಖಂಡಿಸಿದ್ದರು. ನ್ಯಾಯಾಧೀಶರು ಸಂಯಮ ಪಾಲಿಸಬೇಕು ಎಂದು ಕರೆ ನೀಡಿದ್ದರು. ಇಂತಹ ಹೇಳಿಕೆಗಳಿಂದಾಗಿ ನ್ಯಾಯಾಂಗದ ಮೇಲಿನ ಸಾರ್ವಜನಿಕ ವಿಶ್ವಾಸ ಕುಸಿಯುತ್ತಿದೆ ಎಂದು ಒತ್ತಿ ಹೇಳಿದ್ದರು.
ಮಾರ್ಚ್ 17ರಂದು ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ತೀರ್ಪು ಪ್ರಕಟಿಸಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ಅವರು “ಹೆಣ್ಣು ಮಕ್ಕಳ ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರವಲ್ಲ. ಅದು ವಿವಸ್ತ್ರಗೊಳಿಸಿ ಹಲ್ಲೆ ನಡೆಸುವ ಅಪರಾಧ” ಎಂದು ಹೇಳಿದ್ದರು.
ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಇತರ ಸೆಕ್ಷನ್‌ಗಳಡಿಯಲ್ಲಿ ಸಮನ್ಸ್ ಜಾರಿ ಮಾಡಿದ್ದ ಕಾಸ್‌ಗಂಜ್ ಜಿಲ್ಲಾ ನ್ಯಾಯಾಲಯದ ದೇಶವನ್ನು ಪ್ರಶ್ನಿಸಿ ಆರೋಪಿಗಳು ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ಹಿನ್ನೆಲೆ : ಈ ಪ್ರಕರಣ 2021ರ ನವೆಂಬರ್ 10ರಂದು ನಡೆದ ಘಟನೆಗೆ ಸಂಬಂಧಿಸಿದೆ. ಅಂದು ಸಂಜೆ ದೂರುದಾರ ಮಹಿಳೆ ಮತ್ತು ಆಕೆಯ ಅಪ್ರಾಪ್ತ ಮಗಳು ತಮ್ಮ ಸಂಬಂಧಿಯ ಮನೆಯಿಂದ ತಮ್ಮೂರಿಗೆ ಮರಳುತ್ತಿದ್ದರು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ತಮ್ಮ ಗ್ರಾಮದ ಮೂವರು ಯುವಕರಾದ ಪವನ್, ಆಕಾಶ್ ಮತ್ತು ಅಶೋಕ್ ಎದುರುಗೊಂಡಿದ್ದರು. ಅವರಲ್ಲಿ ಪವನ್ ಎಂಬಾತ ಮಹಿಳೆಯ ಮಗಳನ್ನು ತನ್ನ ಬೈಕ್‌ನಲ್ಲಿ ಮನೆಗೆ ಕರೆದೊಯ್ಯುವುದಾಗಿ ಹೇಳಿದ್ದ. ಆತನನ್ನು ನಂಬಿದ ಸಂತ್ರಸ್ತೆ ಮಗಳನ್ನು ಕಳಿಸಿದ್ದರು. ಆದರೆ, ಬಾಲಕಿಯನ್ನು ಕರೆದೊಯ್ದ ಆರೋಪಿಗಳು ದಾರಿ ಮಧ್ಯೆ ಬೈಕ್ ನಿಲ್ಲಿಸಿ ಬಾಲಕಿ ಮೇಲೆ ಹಲ್ಲೆ ನಡೆಸಿದ್ದಾರೆ. ಪವನ್ ಮತ್ತು ಆಕಾಶ್ ಬಾಲಕಿಯ ಸ್ತನಗಳನ್ನು ಹಿಡಿದು, ಆಕೆಯ ಪೈಜಾಮದ ದಾರವನ್ನು ಬಿಚ್ಚಿ, ಪೈಜಾಮವನ್ನು ಕೆಳಗೆ ಎಳೆಯಲು ಯತ್ನಿಸಿದ್ದರು. ಈ ವೇಳೆಗೆ ಸ್ಥಳೀಯರು ಸ್ಥಳಕ್ಕೆ ಬಂದ ಕಾರಣ, ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ.
ಸಂತ್ರಸ್ತ ಬಾಲಕಿಯ ತಾಯಿ ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅತ್ಯಾಚಾರ ಆರೋಪದ ಮೇಲೆ ಐಪಿಸಿ ಸೆಕ್ಷನ್ 376(ಅತ್ಯಾಚಾರ) ಅಡಿಯಲ್ಲಿ ಆರೋಪಿಗಳಾದ ಪವನ್ ಮತ್ತು ಆಕಾಶ್‌ಗೆ ಸಮನ್ಸ್ ಜಾರಿ ಮಾಡಲು ಜಿಲ್ಲಾ ನ್ಯಾಯಾಲಯ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಆರೋಪಿಗಳು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ರಾಮ್ ಮೋಹನ್ ನಾರಾಯನ್ ಮಿಶ್ರಾ ಅವರು “ಸ್ತನ ಮುಟ್ಟುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರವಲ್ಲ. ಅದು ವಿವಸ್ತ್ರಗೊಳಿಸಿ ಹಲ್ಲೆ ನಡೆಸುವ ಅಪರಾಧ” ಎಂದು ಹೇಳಿದ್ದರು.
ಸೇನಾ ಅಧಿಕಾರಿ ಮೇಲೆ ಹಲ್ಲೆ | ಪಂಜಾಬ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್


