ದ್ವೇಷ ಭಾಷಣಗಳ ಮೇಲೆ FIR ದಾಖಲಿಸಬೇಕೆಂಬ ಪ್ರಕರಣವನ್ನು ತಿಂಗಳಾನುಗಟ್ಟಲೇ ಮುಂದೂಡುವುದು ಸರಿಯಲ್ಲ. ಈ ಶುಕ್ರವಾರ ಆಲಿಸುವಂತೆ ದೆಹಲಿ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
ದೆಹಲಿಯ 10 ಗಲಭೆ ಸಂತ್ರಸ್ತರು ಮತ್ತು ಸಾಮಾಜಿಕ ಕಾರ್ಯಕರ್ತ ಹರ್ಷ್ ಮಂದರ್ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಾ ಈ ಆದೇಶ ಹೊರಡಿಸಿದೆ.
ಬಿಜೆಪಿ ಸಂಸದ ಅನುರಾಗ್ ಠಾಕೂರ್ ಮತ್ತು ಕಪಿಲ್ ಮಿಶ್ರಾ ಸೇರಿದಂತೆ ನಾಲ್ಕು ಜನರು ದೆಹಲಿ ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಮೇಲೆ ನ್ಯಾ.ಎಸ್ ಮುರಳೀಧರ್ FIR ದಾಖಲಿಸಲು ಸೂಚಿಸಿದ್ದರು. ಆದರೆ ಅವರ ವರ್ಗಾವಣೆಯ ನಂತರ ದೆಹಲಿ ಹೈಕೋರ್ಟ್ ತನ್ನ ವಿಚಾರಣೆಯನ್ನು ನಾಲ್ಕು ವಾರಗಳವರೆಗೆ ಮುಂದೂಡಿ, ಉತ್ತರ ನೀಡಲು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಈ ಕ್ರಮ ನ್ಯಾಯಸಮ್ಮತವಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಅಸಮಾಧಾನ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಅವರು ತಮ್ಮ ತೀರ್ಪಿನಲ್ಲಿ, ನಿಗದಿತ ವಿಚಾರಣೆಯ ದಿನಾಂಕವನ್ನು ಮುಂಗಡ ತಂದು ಶುಕ್ರವಾರದಂದು ವಿಚಾರಣೆ ನಡೆಸಿ ಎಫ್‌ಐಆರ್‌ಗಳ ಕೋರಿಕೆಗಳನ್ನು ಸಾಧ್ಯವಾದಷ್ಟು ಬೇಗ ತೀರ್ಮಾನಿಸುವಂತೆ ಹೈಕೋರ್ಟ್‌ಗೆ ತಿಳಿಸಿದರು.
ದ್ವೇಷ ಭಾಷಣಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಬೇಕೆಂದು ಕೋರಿರುವ ಅರ್ಜಿಗೆ ಸ್ಪಂದಿಸಲು ಹೈಕೋರ್ಟ್ ಫೆಬ್ರವರಿ 29 ರಂದು ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿತ್ತು.
ಈ ಸಮಯದಲ್ಲಿ ಪ್ರಕರಣಗಳನ್ನು ದಾಖಲಿಸಲು ವಾತಾವರಣವು ಅನುಕೂಲಕರವಾಗಿಲ್ಲ ಎಂದು ಸಾಲಿಸಿಟರ್ ಜನರಲ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದ ನಂತರ ನ್ಯಾಯಾಲಯವು ಅನುಮತಿ ನೀಡಿತ್ತು.
ಸುಪ್ರೀಂ ಕೋರ್ಟ್ ಅರ್ಜಿಯನ್ನು ಆಲಿಸುತ್ತಿರುವಾಗಲೂ ಸಹ ಮೆಹ್ತಾ ಬುಧವಾರ ಇದೇ ರೀತಿಯ ಕಾಳಜಿಯನ್ನು ಪ್ರತಿಧ್ವನಿಸಿದರು. ಆದರೆ ಸುಪ್ರೀಂ ಕೋರ್ಟ್ ಅದನ್ನು ಒಪ್ಪಲಿಲ್ಲ.


