ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು ಮುಖ್ಯ ನ್ಯಾಯಮೂರ್ತಿಗಳ ಅಧಿಕೃತ ನಿವಾಸದಲ್ಲಿ ಅವಧಿ ಮೀರಿ ವಾಸಿಸುತ್ತಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್ ಆಡಳಿತ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಬಂಗಲೆಯನ್ನು ಖಾಲಿ ಮಾಡಲು ಸೂಚಿಸುವಂತೆ ಒತ್ತಾಯಿಸಿದೆ ಎಂದು ವರದಿಯಾಗಿದೆ.
ನವೆಂಬರ್ 2022 ರಿಂದ ನವೆಂಬರ್ 2024ರವರೆಗೆ 50ನೇ ಸಿಜೆಐ ಆಗಿ ಸೇವೆ ಸಲ್ಲಿಸಿದ್ದ ನ್ಯಾಯಮೂರ್ತಿ ಚಂದ್ರಚೂಡ್ ಅವರು, ಕೆಲಸದಿಂದ ನಿವೃತ್ತರಾಗಿ ಎಂಟು ತಿಂಗಳ ಕಳೆದರೂ ದೆಹಲಿ 5 ಕೃಷ್ಣ ಮೆನನ್ ಮಾರ್ಗದಲ್ಲಿರುವ ಟೈಪ್ VIII ಬಂಗಲೆಯನ್ನು ಖಾಲಿ ಮಾಡಿಲ್ಲ ಎನ್ನಲಾಗಿದೆ.
ಸರ್ಕಾರಿ ನಿಯಮಗಳ ಪ್ರಕಾರ, ಸೇವೆಯಲ್ಲಿರುವ ಸಿಜೆಐ ಟೈಪ್ VIII ಬಂಗಲೆಗೆ ಅರ್ಹರಾಗಿರುತ್ತಾರೆ. ನಿವೃತ್ತಿಯ ನಂತರ ಅವರು ಆರು ತಿಂಗಳವರೆಗೆ ಟೈಪ್ VII ಬಾಡಿಗೆ ಮುಕ್ತ ವಸತಿಯಲ್ಲಿ ಉಳಿಯಬಹುದು.
ಜುಲೈ 1ರಂದು ಬರೆದ ಪತ್ರದಲ್ಲಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಬಂಗಲೆಯನ್ನು ತಕ್ಷಣವೇ ಖಾಲಿ ಮಾಡಿಸಿ ನ್ಯಾಯಾಲಯದ ವಸತಿ ಪೂಲ್‌ಗೆ ಹಿಂತಿರುಗಿಸುವಂತೆ ಸುಪ್ರೀಂ ಕೋರ್ಟ್ ಆಡಳಿತ ಒತ್ತಾಯಿಸಿದೆ.
“ನ್ಯಾಯಮೂರ್ತಿ ಡಾ. ಡಿ.ವೈ ಚಂದ್ರಚೂಡ್ ಅವರಿಂದ ಕೃಷ್ಣ ಮೆನನ್ ಮಾರ್ಗದ 5 ನೇ ಬಂಗಲೆಯನ್ನು ಯಾವುದೇ ವಿಳಂಬವಿಲ್ಲದೆ ಸ್ವಾಧೀನಪಡಿಸಿಕೊಳ್ಳಲು ನಾವು ವಿನಂತಿಸುತ್ತೇವೆ. ಏಕೆಂದರೆ, ಬಂಗಲೆಯಲ್ಲಿ ಉಳಿಯಲು ಅವರಿಗೆ ನೀಡಲಾದ ಅನುಮತಿಯು ಮೇ 31, 2025 ರಂದು ಮುಕ್ತಾಯಗೊಂಡಿದೆ” ಪತ್ರದಲ್ಲಿ ತಿಳಿಸಲಾಗಿದೆ.
ಗಮನಾರ್ಹವಾಗಿ, ಚಂದ್ರಚೂಡ್ ಅವರ ಬಳಿಕ ಬಂದ ಇಬ್ಬರು ಸಿಜೆಐಗಳಾದ ನ್ಯಾಯಮೂರ್ತಿ ಸಂಜೀವ್ ಖನ್ನಾ (ಈಗ ನಿವೃತ್ತರಾಗಿದ್ದಾರೆ) ಮತ್ತು ಪ್ರಸ್ತುತ ಸಿಜೆಐ ಬಿಆರ್ ಗವಾಯಿ, 5 ಕೃಷ್ಣ ಮೆನನ್ ಮಾರ್ಗದ ಬಂಗಲೆಗೆ ಸ್ಥಳಾಂತರಗೊಳ್ಳದಿರಲು ನಿರ್ಧರಿಸಿದ್ದರು. ಇಬ್ಬರೂ ಅವರಿಗೆ ಈ ಹಿಂದೆ ಹಂಚಿಕೆಯಾದ ಬಂಗಲೆಗಳಲ್ಲಿ ವಾಸಿಸುವುದನ್ನು ಮುಂದುವರೆಸಿದ್ದಾರೆ ಎಂದು ವರದಿಗಳು ಹೇಳಿವೆ.
ನ್ಯಾಯಮೂರ್ತಿ ಚಂದ್ರಚೂಡ್ ಅವರು ಬಂಗಲೆ ಬಿಟ್ಟು ಕೊಡಲು ವಿಳಂಬ ಆಗಿರುವುದಕ್ಕೆ ಕೆಲವು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ದೇಶದ ಅತಿ ದೊಡ್ಡ ವೈದ್ಯಕೀಯ ಕಾಲೇಜು ಹಗರಣ: ಕರ್ನಾಟಕದ ಇಬ್ಬರು ಸೇರಿ 35 ಮಂದಿ ವಿರುದ್ಧ ಎಫ್‌ಐಆರ್