ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ವೈಜ್ಞಾನಿಕವಾಗಿ ದತ್ತಾಂಶ ಸಂಗ್ರಹಿಸಲು ರಾಜ್ಯದಾದ್ಯಂತ ನಡೆಯುತ್ತಿರುವ ಪರಿಶಿಷ್ಟ ಜಾತಿಯ ಕುಟುಂಬಗಳ ಸಮೀಕ್ಷೆಯ ಅವಧಿಯನ್ನು ಮತ್ತೆ ಜೂನ್ 30ರವರೆಗೆ ವಿಸ್ತರಿಸಲಾಗಿದೆ.
ಮೇ 5ರಿಂದ ಮನೆ ಮನೆ ಭೇಟಿ ಮೂಲಕ ಸಮೀಕ್ಷೆ ಆರಂಭಗೊಂಡಿತ್ತು. ಈವರೆಗೆ ರಾಜ್ಯದಾದ್ಯಂತ ಸಮೀಕ್ಷೆಯಲ್ಲಿ ಶೇಕಡ 91 ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇಕಡ 50ರಷ್ಟು ಪ್ರಗತಿ ಆಗಿದೆ. ಸಮೀಕ್ಷೆಯಲ್ಲಿ ಭಾಗವಹಿಸದೇ ಇರುವ ಕುಟುಂಬಗಳಿಗೆ ಅಂತಿಮ ಅವಕಾಶ ಕಲ್ಪಿಸುವ ಉದ್ದೇಶದಿಂದ ಸಮೀಕ್ಷೆಯ ಕೊನೆಯ ದಿನಾಂಕವನ್ನು ಜೂನ್ 23ರಿಂದ 30ರವರೆಗೆ ವಿಸ್ತರಿಸಲಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ನೇತೃತ್ವದ ಏಕ ಸದಸ್ಯ ಆಯೋಗ ತಿಳಿಸಿದೆ.
ನಾಗರಿಕ ಸೇವಾ ಕೇಂದ್ರಗಳಾದ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸಮೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 198 ವಾರ್ಡ್‌ಗಳಲ್ಲೂ ಪ್ರತ್ಯೇಕ ಶಿಬಿರಗಳನ್ನು ತೆರೆಯಲಾಗಿದೆ. ಅಲ್ಲದೆ, ಆನ್‌ಲೈನ್ (https://schedulecastesurvey.karnataka.gov.in/selfdeclaration) ಲಿಂಕ್ ಮೂಲಕವೂ ಸ್ವಯಂಘೋಷಣೆ ಮಾಡಿಕೊಳ್ಳಬಹುದು ಎಂದು ಆಯೋಗ ತಿಳಿಸಿದೆ.
ಈ ಕುರಿತಂತೆ ಎಲ್ಲಾ ಜಿಲ್ಲಾಧಿಕಾರಿಗಳು, ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ವಲಯ ಆಯುಕ್ತರಿಗೆ ಆಯೋಗ ಪತ್ರ ಬರೆದಿದೆ. ಸಮೀಕ್ಷೆ ಕಾರ್ಯಾವಧಿಯ ಅಂತಿಮ ವಿಸ್ತರಣೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ಮೇ 5ರಂದು ಪ್ರಾರಂಭಗೊಂಡ ಸಮೀಕ್ಷೆಯು ಆರಂಭದಲ್ಲಿ ಮೇ 17ರಂದು ಮುಕ್ತಾಯಗೊಳ್ಳಬೇಕಿತ್ತು. ಆದರೆ, ಸಮೀಕ್ಷೆಯ ಅವಧಿಯನ್ನು ಹಲವು ಬಾರಿ ವಿಸ್ತರಿಸಲಾಗಿದೆ.
ಮೊದಲಿಗೆ ಮೇ 18ರಿಂದ ಮೇ 25ರವರೆಗೆ ಮನೆ ಮನೆ ಭೇಟಿಯನ್ನು ವಿಸ್ತರಿಸಲಾಗಿತ್ತು. ಮೇ 19 ರಿಂದ 21ರವೆಗೆ ನಿಗದಿಯಾಗಿದ್ದ ವಿಶೇಷ ಶಿಬಿರಗಳನ್ನು ಮೇ 26 ರಿಂದ 28ರವರೆಗೆ ಮತ್ತು ಮೇ 19 ರಿಂದ 23 ರವರೆಗೆ ನಿಗದಿಯಾಗಿದ್ದ ಆನ್‌ಲೈನ್ ಸ್ವಯಂ ಘೋಷಣೆ ಅವಧಿಯನ್ನು ಮೇ 19 ರಿಂದ 28ಕ್ಕೆ ನಿಗದಿ ಮಾಡಲಾಗಿತ್ತು.
ಎರಡನೇ ಬಾರಿಗೆ ಆನ್‌ಲೈನ್ ಸ್ವಯಂ ಘೋಷಣೆ, ಕರ್ನಾಟಕಒನ್, ಬೆಂಗಳೂರುಒನ್ ಮತ್ತು ಗ್ರಾಮಒನ್‌ನಂತಹ ನಾಗರಿಕ ಸೇವಾ ಕೇಂದ್ರಗಳ ಮೂಲಕ ಸಮೀಕ್ಷೆಗೆ ಜೂನ್ 22ರವೆಗೆ ಅವಧಿ ವಿಸ್ತರಿಸಲಾಗಿತ್ತು. ಇದೀಗ ಮೂರನೇ ಬಾರಿಗೆ ಜೂನ್ 30ರವೆಗೆ ಸಮೀಕ್ಷಾ ಅವಧಿ ವಿಸ್ತರಣೆ ಮಾಡಲಾಗಿದೆ.
ಈ ಕುರಿತು ನಾನುಗೌರಿ.ಕಾಂಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ಬಸವರಾಜ್ ಕೌತಾಳ್ ಅವರು, “ಒಳ ಮೀಸಲಾತಿ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ಬಂದು ಒಂದು ವರ್ಷ ಆಯಿತು. ಹಾಗಾಗಿ, ಸಮೀಕ್ಷೆಯನ್ನು ಮತ್ತೆ ಮತ್ತೆ ವಿಸ್ತರಿಸುವುದು ಸರಿಯಲ್ಲ. ಸಮೀಕ್ಷೆ ಕಾರಣ ನೇಮಕಾತಿಗಳನ್ನು ತಡೆ ಹಿಡಿಯಲಾಗಿದೆ. ಇದರಿಂದ ಉದ್ಯೋಗ ಆಕಾಂಕ್ಷಿಗಳಿಗೆ ಸಮಸ್ಯೆಯಾಗುತ್ತಿದೆ. ಯುವಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ” ಎಂದಿದ್ದಾರೆ.
“ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಸಮೀಕ್ಷೆ ಯಶಸ್ವಿಯಾಗಿ ನಡೆದಿದೆ. ಬೆಂಗಳೂರು ಜನರು ಯಾಕೋ ಆಸಕ್ತಿ ತೋರಿಸುತ್ತಿಲ್ಲ. ಹಾಗಾಗಿ, ಇನ್ನು ಕಾಯುವುದರಲ್ಲಿ ಅರ್ಥವಿಲ್ಲ. ಸರ್ಕಾರ ಆಯೋಗ ವರದಿ ಕೊಡಲಿ ಎನ್ನುತ್ತಿದೆ. ಮತ್ತೆ ಮತ್ತೆ ಸಮೀಕ್ಷೆ ಅವಧಿಯನ್ನು ವಿಸ್ತರಣೆ ಮಾಡುತ್ತಾ ಒಳ ಮೀಸಲಾತಿ ಜಾರಿ ವಿಳಂಬ ಮಾಡುವುದರಿಂದ ಅದಕ್ಕಾಗಿ ಹೋರಾಟ ಮಾಡಿದವರನ್ನು ಅವಮಾನಿಸಿದಂತಾಗುತ್ತದೆ. ಅಲ್ಲದೆ, ಸರ್ಕಾರ ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡುತ್ತದೆ. ಆದ್ದರಿಂದ ನಾಗಮೋಹನ್‌ದಾಸ್ ಆಯೋಗ ತುರ್ತಾಗಿ ವರದಿ ಕೊಡುವ ಅವಶ್ಯಕತೆಯಿದೆ” ಎಂದು ಹೇಳಿದ್ದಾರೆ.
ಜೂನ್ 20ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ, ಸಮೀಕ್ಷೆ ಅವಧಿ ವಿಸ್ತರಿಸದೆ ವರದಿ ನೀಡಿ ಒಳಮೀಸಲಾತಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿತ್ತು.
ಒಳ ಮೀಸಲಾತಿ: ಜಸ್ಟೀಸ್ ನಾಗಮೋಹನದಾಸ್ ಆಯೋಗ ‘ಹೊಸ ಸಮೀಕ್ಷೆ’ಗೆ ಶಿಫಾರಸ್ಸು ಮಾಡಿದ್ದೇಕೆ?


