ಮೇ 24ರ ಬೆಳಗ್ಗೆ ಆಕಾಶದಲ್ಲೊಂದು ವಿಸ್ಮಯ ಘಟನೆ ನಡೆಯಿತು. ಸಾಮಾಜಿಕ ಜಾಲತಾಣಗಳಲ್ಲಂತೂ ಇದೇ ಸುದ್ದಿ ಮತ್ತು ಅದರ ಚಿತ್ರಗಳು ಒಮ್ಮೆಗೆ ಹರಿದಾಡಿದವು. ಈ ಚಿತ್ರಗಳನ್ನು ನೋಡಿದ ಕೆಲವರು ಮೊದಲಿಗೆ ಇದೇನೋ ಕ್ಯಾಮರಾದ ಕೈಚಳಕ ಇರಬೇಕು ಅಂದುಕೊಂಡರು. ಇನ್ನೂ ಕೆಲವರೂ ಆಶ್ಚರ್ಯಪಟ್ಟು, ಅರೆ ಇದೇನಿದು ಎಂದು ಉದ್ಗಾರ ಎಳೆದರು. ಮತ್ತಷ್ಟು ಮಂದಿ, ಹೊರಗಡೆ ಬಂದು ಆಕಾಶವನ್ನು ನೋಡಿ, ಅರೆರೆ ಏನೋ ಕಾಣ್ತಿದೆ ಸೂರ್ಯನ ಸುತ್ತ ಎಂದು ತಮ್ಮ ಕಿಸೆಯಲ್ಲಿದ್ದ ಮೊಬೈಲ್‌ಅನ್ನು ತೆಗೆದು ಚಿತ್ರಗಳನ್ನು ಕ್ಲಿಕ್ಕಿಸಿದರು. ಆ ದಿನ ತೆಗೆದ ಚಿತ್ರಗಳೆಲ್ಲಾ ಕ್ಷಣಮಾತ್ರದಲ್ಲಿ ಎಲ್ಲರ ಮೊಬೈಲ್‌ಗಳಿಗೂ ಬರಲಾರಂಭಿಸಿದವು. ಮೊದಲು ನೋಡಿದವರೂ ನೋಡಿ ಆನಂದಪಟ್ಟರು, ನೋಡಿದ್ದವರೂ ಮತ್ತೊಮ್ಮೆ ನೋಡಿ, ಅದು ಏನು ಎಂದು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಲ್ಲಿ ಪ್ರಶ್ನಿಸಲಾರಂಭಿಸಿದರು. ಇಷ್ಟೊತ್ತಿಗೆ ಗೊತ್ತಾಗಿರಬೇಕು ನಾನು ಯಾವುದರ ಬಗ್ಗೆ ಮಾತಾಡುತ್ತಿದ್ದೇನೆ ಎಂದು! ಹೌದು ಮೇ 24ರ ಬೆಳಗ್ಗೆ ಬೆಂಗಳೂರು ಮತ್ತು ಸುತ್ತಮುತ್ತಲಿನಲ್ಲಿ ನೆಲೆಸಿರುವ ಜನರಿಗೆ ಆಕಾಶದಲ್ಲಿ ಸೂರ್ಯನ ಸುತ್ತ ಒಂದು ದೊಡ್ಡದಾದ ಕಾಮನಬಿಲ್ಲಿನ ಬಣ್ಣದ ಉಂಗುರವು ಕಾಣಿಸಿದ್ದರ ಬಗ್ಗೆ.
ಇತ್ತೀಚಿನ ದಿನಗಳಲ್ಲಿ ಎಂದೂ ಈ ರೀತಿ ಸೂರ್ಯನ ಸುತ್ತ ಏನನ್ನೂ ಕಾಣದಿದ್ದ ಕೆಲವರು ಒಮ್ಮೆಲೆ ಈ ರೀತಿ ಬಣ್ಣದ ಉಂಗುರವನ್ನು ಕಂಡು ಅಪಾಯವಿದೆ, ಅಪಶಕುನ ಆಗುತ್ತೆ, ಗ್ರಹಣದ ಮುನ್ಸೂಚನೆಯೇ ಎಂದೆಲ್ಲಾ ಕಪೋಲಕಲ್ಪಿತ ಕತೆಗಳನ್ನು ಕಟ್ಟತೊಡಗಿದರು. ಆದರೆ, ಅಂದು ಸೂರ್ಯನ ಸುತ್ತ ಸುಂದರವಾದ ಕಾಮನಬಿಲ್ಲಿನ ಬಣ್ಣದ ಉಂಗುರ ಮೂಡಿರುವುದು ಭೂಮಿಯ ವಾತಾವರಣದಲ್ಲಿ ನಡೆಯುವ ಸಾಮಾನ್ಯ ವಿದ್ಯಮಾನದಿಂದ. ಇದನ್ನು Sun Halo ಅಂದರೆ ‘ಸೂರ್ಯ ಪ್ರಭಾವಲಯ’ ಎಂದು ಕರೆಯುತ್ತಾರೆ.
Sun Halo (ಸೂರ್ಯ ಪ್ರಭಾವಲಯ) ಅಂದರೆ ಏನು? ಏಕೆ ಉಂಟಾಗುತ್ತದೆ?
ಸೂರ್ಯನ ಸುತ್ತ ಅಂದರೆ ಸೂರ್ಯನು ಕೇಂದ್ರ ಬಿಂದುವಿನಲ್ಲಿರುವಂತೆ ಕಂಡು, ನಿರ್ದಿಷ್ಟ ಅಂತರದಲ್ಲಿ ಕಾಮನಬಿಲ್ಲಿನ ಬಣ್ಣಗಳನ್ನೊಂದಿರುವ ಉಂಗುರ ಮೂಡುವುದನ್ನು Sun Halo (ಸೂರ್ಯ ಪ್ರಭಾವಲಯ) ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಸೂರ್ಯನಿಂದ 22 ಡಿಗ್ರಿ ಅಂತರದಲ್ಲಿ ಈ ಸೂರ್ಯ ಪ್ರಭಾವಲಯ ಮೂಡುತ್ತದೆ (ಇದಕ್ಕೆ ಕಾರಣ ಮುಂದೆ ತಿಳಿದುಕೊಳ್ಳೋಣ). ಆದುದರಿಂದ ಇದನ್ನು 22
degree Sun Haloಎಂದೂ ಕರೆಯುವುದುಂಟು.

ಫೋಟೋ ಕೃಪೆ: ಅರುಣಾ ಜೋಸೆಫ್
ಸೂರ್ಯ ಪ್ರಭಾವಲಯ ಮೂಡಲು ಸೂರ್ಯನಲ್ಲಿ ಏನಾದರು ಬದಲಾವಣೆ ಆಗಬೇಕು ಎಂಬುದೇನಿಲ್ಲ. ಈ ಪ್ರಭಾವಲಯ ಉಂಟಾಗುವುದು ಭೂಮಿಯ ವಾತವರಣದಲ್ಲಿ [ಆಕಾಶದಲ್ಲಿ (Space) ಅಲ್ಲ]. ಯಾವುದಾದರು ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಮೇಲ್ಭಾಗದ ವಾತವರಣದಲ್ಲಿ ಸಣ್ಣ ಸಣ್ಣ ಮಂಜುಗಡ್ಡೆಯ ಹರಳು (Ice Crystals) ಹೇರಳವಾಗಿದ್ದರೆ, ಇಂತಹ ಹರಳುಗಳ ಮುಖಾಂತರ ಸೂರ್ಯನ ಕಿರಿಣಗಳು ಹಾದು ವಕ್ರೀಭವನಗೊಂಡು (refraction) ಪ್ರಸರಣ (Dispersion splitting white light into seven coors) ಹೊಂದುತ್ತವೆ. ಈ ಕಿರಣಗಳು ನಮ್ಮ ಕಣ್ಣಿಗೆ ತಲುಪಿದಾಗ, ಸೂರ್ಯನು ಕೇಂದ್ರದಲ್ಲಿದ್ದಂತೆ, ಅದರ ನಿರ್ದಿಷ್ಟ ದೂರದಲ್ಲಿ ಕಾಮನಬಿಲ್ಲಿನ ಬಣ್ಣಗಳುಳ್ಳ ಉಂಗುರವನ್ನು ನಾವು ನೋಡಬಹುದು.
ಈ ಸೂರ್ಯ ಪ್ರಭಾವಲಯ ವಿದ್ಯಮಾನ, ವಾತಾವರಣದಲ್ಲಿ ಮೂಡಲು ಬಹಳ ಮುಖ್ಯವಾಗಿರುವುದು ಸಣ್ಣ ಸಣ್ಣ ಮಂಜುಗಡ್ಡೆಯ ಹರಳುಗಳು. ಈ ಹರಳುಗಳು Hexagonal (ಷಷ್ಟಭುಜ/ ಷಡ್ಭುಜದ) ಆಕಾರ ಹೊಂದಿರಬೇಕು ಮತ್ತು ಬೆಳಕಿಗೆ ಇದು ನಿರ್ದಿಷ್ಠ ಕೋನದಲ್ಲಿ ಒರೆಯಾಗಿರಬೇಕು. ಈ ಷಡ್ಭುಜದ ಮಂಜುಗಡ್ಡೆಯ ಹರಳುಗಳು ನಾವು ಲ್ಯಾಬ್‌ನಲ್ಲಿ ಬಳಸುವ prism (ಪಟ್ಟಕ) ರೀತಿ ಕೆಲಸ ಮಾಡುತ್ತದೆ. prism ಸಹಾಯದಿಂದ ನಾವು ಲ್ಯಾಬ್‌ನಲ್ಲಿ ಸೂರ್ಯನ ಕಿರಣವನ್ನು ಏಳು ಬಣ್ಣಗಳಾಗಿ ಹೇಗೆ ವಿಂಗಡಿಸಬಹುದೋ (ಐಸಾಕ್ ನ್ಯೂಟನ್ ಮೊದಲ ಬಾರಿಗೆ ಇದನ್ನು ಗ್ರಹಿಸಿದ್ದು)
ಹಾಗೆಯೇ, ಷಡ್ಬುಜ ಆಕಾರದ ಮಂಜುಗಡ್ಡೆ ಹರಳುಗಳಿಂದ ಹಾದು ಬರುವ ಸೂರ್ಯನ ಕಿರಣಗಳು 22 ಡಿಗ್ರಿಯಲ್ಲಿ ವಕ್ರೀಭವನಗೊಂಡು ಏಳು ಬಣ್ಣಗಳಾಗಿ (VIBGYOR) ವಿಂಗಡನೆಯಾಗುತ್ತವೆ. ಅಲ್ಲದೆ, ಈ ಬಣ್ಣದ ಉಂಗುರವು ಸೂರ್ಯ ಕೇಂದ್ರದಲ್ಲಿರುವಂತೆ 22 ಡಿಗ್ರಿ ಅಂತರದಲ್ಲಿ ಮೂಡುತ್ತದೆ. ಈ ಕಾರಣದಿಂದ ಇದನ್ನು 22 ಡಿಗ್ರಿ ಸೂರ್ಯ ಪ್ರಭಾವಲಯ ಎಂದು ಕರೆಯುತ್ತಾರೆ (46 ಡಿಗ್ರಿ ಸೂರ್ಯ ಪ್ರಭಾವಲಯವು ಇದೆ). ಇದು ನಿಸರ್ಗವೇ ಸೂರ್ಯನ ಕಿರಣ ಏಳು ಬಣ್ಣಗಳಿಂದ ಕೂಡಿದೆ ಎಂದು ತೋರಿಸುವ ಒಂದು ಸುಂದರ ವಿದ್ಯಮಾನ. ಮೇ ೨೪ರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬೆಂಗಳೂರಿನ ಜನರಿಗೆ ಕಾಣಿಸಿದ ವಿದ್ಯಮಾನ ಇದೇ ಸೂರ್ಯ ಪ್ರಭಾವಲಯ.
ಚಂದ್ರ ಪ್ರಭಾವಲಯ (Moon Halo)
ಸೂರ್ಯನ ಸುತ್ತ ಹೇಗೆ ಸೂರ್ಯ ಪ್ರಭಾವಲಯ ಉಂಟಾಗುತ್ತದೋ, ಹಾಗೆಯೇ ಚಂದ್ರನ ಸುತ್ತಲೂ ಉಂಟಾಗುತ್ತದೆ. ಆದರೆಅದು ಸೂರ್ಯ ಪ್ರಭಾವಲಯದಷ್ಟು ಪ್ರಕಾಶಮಾನವಾಗಿರುವುದಿಲ್ಲಾ. ಹಾಗಾಗಿ, ಬಣ್ಣದ ಉಂಗುರದ ಬದಲು ಬಿಳಿ ಬಣ್ಣದ ಮಸುಕಾದ ಉಂಗುರವನ್ನು ಬರಿ ಕಣ್ಣಿನಿಂದ ನೋಡಬಹುದು. ಆದರೆ ಹೆಚ್ಚು Exposoure ಇರುವ ಕ್ಯಾಮರಾದಿಂದ ಫೋಟೋ ತೆಗೆದರೆ, ಚಂದ್ರ ಪ್ರಭಾವಲಯದಲ್ಲೂ VIBGYOR ಬಣ್ಣಗಳನ್ನು ಕಾಣಬಹುದು (ನಮ್ಮ ಕಣ್ಣಿಗೆ ಮಸುಕಾದ ಬೆಳಕಿನಲ್ಲಿ ಹೆಚ್ಚಾಗಿ ಬಣ್ಣಗಳನ್ನು ಗುರುತಿಸುವ ಸಾಮರ್ಥ್ಯ ಕಡಿಮೆ ಇರುತ್ತದೆ). ಈ ಚಂದ್ರ ಪ್ರಭಾವಲಯವೂ ಕೂಡ ಸೂರ್ಯ ಪ್ರಭಾವಲಯದ ರೀತಿಯಲ್ಲಿಯೇ ವಾತಾವರಣದಲ್ಲಿನ ಷಡ್ಬುಜ ಮಂಜುಗಡ್ಡೆಯ ಹರಳಿನಿಂದಲೇ ಉಂಟಾಗುವುದು. ಸೂರ್ಯ ಬದಲು ಚಂದ್ರನಿರುತ್ತಾನೆ. ಚಂದ್ರ ಸೂರ್ಯನ ಬೆಳಕನ್ನೇ ಪ್ರತಿಫಲಿಸುತ್ತಿರುತ್ತಾನೆ.
ಸೂರ್ಯ (ಚಂದ್ರ) ಪ್ರಭಾವಲಯ ಅತಿ ವಿರಳವಾದ ವಿದ್ಯಮಾನವಾ?
ಈಗಾಗಲೇ ತಿಳಿದುಕೊಂಡಂತೆ, ಸೂರ್ಯ ಅಥವಾ ಚಂದ್ರ ಪ್ರಭಾವಲಯ ಉಂಟಾಗಬೇಕೆಂದರೆ ಷಡ್ಬುಜ ಆಕಾರದ ಮಂಜುಗಡ್ಡೆಯ ಹರಳುಗಳು ನಿರ್ದಿಷ್ಟ ಕೋನದಲ್ಲಿ ಮೇಲ್ಮುಖ ವಾತಾವರಣದಲ್ಲಿ ಇರಬೇಕು. ಇಂತಹ ಹರಳುಗಳು ಇದ್ದರೆ ಯಾವ ಪ್ರದೇಶದಿಂದಲಾದರೂ ಸೂರ್ಯ ಅಥವಾ ಚಂದ್ರ ಪ್ರಭಾವಲಯ ಉಂಟಾಗಬಹುದು. ಸಾಮಾನ್ಯವಾಗಿ ಉಷ್ಣವಲಯ ಪ್ರದೇಶಗಳ ವಾತಾವರಣದಲ್ಲಿ ಮಂಜುಗಡ್ಡೆಯ ಹರಳುಗಳು ಇರುವುದಿಲ್ಲ ಅಥವಾ ಕಡಿಮೆ ಇರುತ್ತವೆ. ಆದರೆ, ಶೀತವಲಯದಲ್ಲಿ ಹೆಚ್ಚಾಗಿರುತ್ತದೆ. ಈ ಕಾರಣದಿಂದ ಶೀತವಲಯದಲ್ಲಿ ಸೂರ್ಯ ಅಥವ ಚಂದ್ರ ಪ್ರಭಾವಲಯವನ್ನು ನಿಯಮಿತವಾಗಿ ನೋಡಬಹುದು. ಭಾರತದಂತಹ ಉಷ್ಣವಲಯ ಪ್ರದೇಶಗಳಿಗೆ ವಾತಾವರಣದಲ್ಲಿ ಕಂಡುಬರುವ ಇಂತಹ ವಿದ್ಯಮಾನ ಸ್ವಲ್ಪ ವಿರಳ ಎನ್ನಬಹುದು.

ಫೋಟೋ ಕೃಪೆ: ಕೀರ್ತಿ ಕಿರಣ್
ಅಲ್ಲದೆ, ಈ ಪ್ರಭಾವಲಯವು ಆಕಾಶದಲ್ಲಿ ಕಂಡಾಗ, ಹೆಚ್ಚಾಗಿ ಆ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಅಂದರೆ, ಬೆಂಗಳೂರಿನಲ್ಲಿ ಸೂರ್ಯ ಪ್ರಭಾವಲಯ ಕಾಣುತ್ತಿದ್ದರೆ, ತುಮಕೂರಿನಲ್ಲಿಯೂ ಕಾಣುತ್ತಿದೆ ಎಂದೇನಿಲ್ಲಾ. ಈ ಷಡ್ಬುಜ ಆಕಾರದ ಮಂಜುಗಡ್ಡೆಯ ಹರಳುಗಳು ರೂಪುಗೊಳ್ಳಲು ನಿರ್ದಿಷ್ಟ ತಾಪಮಾನ, ವಾತಾವರಣದಲ್ಲಿನ ನೀರಿನ ಅಂಶ ಬಹಳ ಮುಖ್ಯ. ಹಾಗಾಗಿ ಇದೊಂದು ಸ್ಥಳೀಯ ಅಂದರೆ, ಸೀಮಿತ ಪ್ರದೇಶಕ್ಕೆ ನಡೆಯುವ ವಿದ್ಯಮಾನವಾಗಿದ್ದು, ಆ ಪ್ರದೇಶದವರು ಮಾತ್ರ ನೋಡಬಹುದಾಗಿರುತ್ತದೆ. ಆದುದರಿಂದಲೇ ಮೇ 24 ರಂದು ನಡೆದ ಸೂರ್ಯ ಪ್ರಭಾವಲಯವನ್ನು ಬೆಂಗಳೂರಿನ ಜನರು ಮಾತ್ರ ನೋಡಿದ್ದಾರೆ. ಇತರೆ ಜಿಲ್ಲೆಯ ಜನರಿಗೆ ಇದು ಕಾಣಿಸಿಲ್ಲ.
ಸೂರ್ಯ ಪ್ರಭಾವಲಯ ಮತ್ತು ಕಾಮನಬಿಲ್ಲಿಗೂ ವ್ಯತ್ಯಾಸವೇನು?
ಸೂರ್ಯ ಪ್ರಭಾವಲಯದಲ್ಲೂ ಏಳು ಬಣ್ಣಗಳ ಉಂಗುರ ಕಾಣಿಸುತ್ತೆ, ಕಾಮನಬಿಲ್ಲು ಮೂಡಿದಾಗಲೂ ಏಳು ಬಣ್ಣದಿಂದ ಕೂಡಿರುವ ಅಧ ಉಂಗುರ ಕಾಣುತ್ತದೆ, ಹಾಗಾದರೆ ಇವೆರಡರ ನಡುವೆ ವ್ಯತ್ಯಾಸವೇನು ಎಂದು ನೀವು ಪ್ರಶ್ನೆ ಹಾಕಿಕೊಳ್ಳಬಹುದು. ಇದಕ್ಕೆ ಉತ್ತರ ಹುಡುಕಿಕೊಳ್ಳಲು ಕೆಲವು ಸುಳಿವುಗಳನ್ನು ಕೊಡುವೆ! ನೀವೇ ಕಂಡುಕೊಳ್ಳಲು ಪ್ರಯತ್ನಿಸಿ..
1. ಸೂರ್ಯ ಪ್ರಭಾವಲಯ ಉಂಟಾಗುವುದು ವಾತಾವರಣದಲ್ಲಿನ ಷಡ್ಬುಜ ಆಕಾರದ ಮಂಜುಗಡ್ಡೆಯ ಹರಳುಗಳಿಂದ. ಕಾಮನಬಿಲ್ಲು ಹೇಗೆ ಉಂಟಾಗುತ್ತದೆ ಎನ್ನುವುದನ್ನು ಚರ್ಚಿಸಿ.
2. ಸೂರ್ಯ ಪ್ರಭಾವಲಯದಲ್ಲಿ ಷಡ್ಬುಜ ಆಕಾರದ ಮಂಜುಗಡ್ಡೆಯಲ್ಲಿ ಸೂರ್ಯನ ಕಿರಣವು ಲ್ಯಾಬ್‌ನಲ್ಲಿರುವ Prismನಲ್ಲಿ ನಡೆಯುವಂತೆ ವಕ್ರೀಭವನ ಮತ್ತು ಪ್ರಸರಣವಾಗುತ್ತದೆ. ಕಾಮನಬಿಲ್ಲು ಉಂಟಾಗಲು, ಸೂರ್ಯನ ಕಿರಣಗಳು ಪ್ರತಿಫಲನವಾಗುತ್ತಾ, ವಕ್ರೀಭವನವಾಗುತ್ತಾ ಅಥವಾ ಪ್ರಸರಣವಾಗುತ್ತಾ?
3. ಸೂರ್ಯ ಪ್ರಭಾವಲಯವನ್ನು ನೋಡಲು ಸೂರ್ಯನ ದಿಕ್ಕಿಗೆ ನೋಡುತ್ತೇವೆ (ಚಿತ್ರಗಳಲ್ಲಿ ಸೂರ್ಯ ಕಾಣುತ್ತಾನೆ), ಆದರೆ ಕಾಮನಬಿಲ್ಲು ಕಂಡಾಗ, ಸೂರ್ಯ ಯಾವ ದಿಕ್ಕಿನಲ್ಲಿರುತ್ತಾನೆ, ಕಾಮನಬಿಲ್ಲು ಯಾವ ದಿಕ್ಕಿನಲ್ಲಿದೆ ಎಂಬುದನ್ನು ಗಮನಿಸಿ. (ಕಾಮನಬಿಲ್ಲಿನ ಚಿತ್ರದಲ್ಲಿ ಸೂರ್ಯ ಕಾಣಸಿಗುತ್ತಾನಾ?).
4. ಸೂರ್ಯ ಪ್ರಭಾವಲಯದಲ್ಲಿ ಪೂರ್ಣ ಉಂಗುರ ಕಾಣುತ್ತೆ, ಕಾಮನಬಿಲ್ಲಿನಲ್ಲಿ ಪೂರ್ಣ ಉಂಗುರ ಕಾಣುತ್ತಾ? ಕಾಣದಿದ್ದರೆ ಕಾರಣವೇನು?

ಅಂದಹಾಗೆ, ಈ ಕಾಮನಬಿಲ್ಲು, ಸೂರ್ಯ ಮತ್ತು ಚಂದ್ರ ಪ್ರಭಾವಲಯದ ಮತ್ತೊಂದು ವಿಶೇಷವೇನೆಂದರೆ, ಪ್ರತಿಯೊಬ್ಬರೂ ತಮ್ಮದೇ ಆದ ಕಾಮನಬಿಲ್ಲು, ಸೂರ್ಯ ಮತ್ತು ಚಂದ್ರ ಪ್ರಭಾವಲಯವನ್ನು ನೋಡುತ್ತಿರುತ್ತಾರೆ. ಅಂದರೆ, ನಾನು ನೋಡುತ್ತಿರುವ ಸೂರ್ಯ ಪ್ರಭಾವಲಯವನ್ನು ಸೃಷ್ಟಿಸಿರುವ ಷಡ್ಬುಜ ಆಕಾರದ ಮಂಜುಗಡ್ಡೆ ಹರಳುಗಳಿಂದ ಬಂದ ಸೂರ್ಯ ಕಿರಣಗಳಿಂದಲೇ ನನ್ನ ಪಕ್ಕದಲ್ಲಿ ನಿಂತಿರುವ ಮತ್ತೊಬ್ಬ ವ್ಯಕ್ತಿಯು ಅದನ್ನು ನೋಡುವುದಿಲ್ಲ, ಅವನು ನೋಡುತ್ತಿರುವ ಸೂರ್ಯ ಪ್ರಭಾವಲಯ ಬೇರೊಂದು ಮಂಜುಗಡ್ಡೆಯ ಹರಳುಗಳಿಂದ ಉಂಟಾಗಿರುತ್ತದೆ. ಇದು, ಕಾಮನಬಿಲ್ಲು ಮತ್ತು ಚಂದ್ರ ಪ್ರಭಾವಲಯಕ್ಕೂ ಅನ್ವಯಿಸುತ್ತದೆ. ಹಾಗಾಗಿ, ಪ್ರತಿಯೊಬ್ಬರು ತಮ್ಮದೇ ಆದ ಸೂರ್ಯ ಪ್ರಭಾವಲಯ, ಕಾಮನಬಿಲ್ಲನ್ನು ನೋಡುತ್ತಿರುತ್ತಾರೆ!
(ಮುಂದಿನ ವಾರದಲ್ಲಿ, ಈ ಲೇಖನದಲ್ಲಿರುವ ಪ್ರಶ್ನೆಗಳಿಗೆ ಉತ್ತರ ಇರುವುದು)



Refraction..ಬಾಗುವಿಕೆ
Hexagon…ಆರುಮೋರೆ/ಆರ್ಮೋರೆ