ಧರ್ಮಸ್ಥಳದಲ್ಲಿ ಶವಗಳ ಶೋಧ ಕಾರ್ಯ ಎರಡನೇ ದಿನವೂ ಮುಂದುವರಿಯಲಿದೆ. ವರದಿಗಳ ಪ್ರಕಾರ, ಇಂದು (ಬುಧವಾರ) ದೂರುದಾರ ತೋರಿಸಿದ ಮೂರು ಸ್ಥಳಗಳಲ್ಲಿ ಮಣ್ಣು ಅಗೆಯಲು ಎಸ್ಐಟಿ ನಿರ್ಧರಿಸಿದೆ.
ಈ ಪ್ರಕ್ರಿಯೆಗೆ ಸ್ಥಳೀಯ ಅಧಿಕಾರಿಗಳ ಸಹಕಾರ ಬೇಕಿದೆ. ಶಿಷ್ಟಾಚಾರದ ಪ್ರಕಾರ ಇದಕ್ಕೆ ಸಂಬಂಧಿತ ಅಧಿಕಾರಿಯಾದ ಪುತ್ತೂರಿನ ಎಸಿ ಸ್ಟೆಲ್ಲಾ ವರ್ಗೀಸ್ ಅವರು ಅನುಮತಿ ನಿಡಬೇಕಿದೆ. ಸಿಬ್ಬಂದಿ ಲಭ್ಯತೆ ಮತ್ತು ಇತರ ಸಾಧ್ಯತೆಗಳನ್ನು ನೋಡಿಕೊಂಡು ಉತ್ಖನನಕ್ಕೆ ಅನುಮತಿ ನೀಡುವುದು ಎಸಿಗೆ ಬಿಟ್ಟ ವಿಚಾರವಾಗಿದೆ.
ನಿನ್ನೆ (ಮಂಗಳವಾರ) ದೂರುದಾರ ತೋರಿಸಿದ ಮೊದಲ ಪಾಯಿಂಟ್ ನೇತ್ರಾವತಿ ಸ್ನಾನ ಘಟ್ಟದ ಬಳಿ ಮಣ್ಣು ಅಗೆಯಲಾಗಿದೆ. ಆದರೆ, 8 ಅಡಿ ಆಳ ಅಗೆದರೂ ಅಲ್ಲಿ ಶವಗಳನ್ನು ಹೂತಿರುವ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಸುಮಾರು 10 ಕಾರ್ಮಿಕರನ್ನು ಒಳಗೊಂಡ ತಂಡವು ಹಾರೆ, ಪಿಕಾಸಿ ಬಳಸಿ ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಣ್ಣು ಅಗೆಯುವ ಕಾರ್ಯ ಆರಂಭಿಸಿತು. ನೇತ್ರಾವತಿ ನದಿಯಿಂದ 10 ಮೀಟರ್ ದೂರದಲ್ಲಿರುವ ಈ ಜಾಗವನ್ನು ಅಗೆದಂತೆ ನೀರು ಜಿನುಗಲಾರಂಭಿಸಿತು. ಜೊತೆಗೆ ಬಿಟ್ಟು ಬಿಟ್ಟು ಧಾರಾಕಾರ ಮಳೆಯೂ ಸುರಿಯುತ್ತಿತ್ತು, ಇದರಿಂದ ಅಗೆಯುವಿಕೆಗೆ ಅಡಚಣೆಯುಂಟಾಯಿತು. ಸಂಜೆ ವೇಳೆಗೆ ಎಸ್‌ಐಟಿ ಅಧಿಕಾರಿಗಳು ಸಣ್ಣ ಜೆಸಿಬಿ ಯಂತ್ರವನ್ನು ಸ್ಥಳಕ್ಕೆ ತರಿಸಿಕೊಂಡು ಅಗೆಯಿಸಿದರು. ಕೊನೆಗೆ ಶ್ವಾನದಳ ಕರೆತಂದು ಪರಿಶೀಲನೆ ನಡೆಸಿದರು. ಆದರೂ, ಶವಗಳನ್ನು ಹೂತಿರುವ ಬಗ್ಗೆ ಯಾವುದೇ ಕುರುಹು ಪತ್ತೆಯಾಗದ ಕಾರಣ ಮೊದಲ ದಿನದ ಅಗೆಯುವ ಕಾರ್ಯವನ್ನು ಸಂಜೆ 6ರ ವೇಳೆಗೆ ಸ್ಥಗಿತಗೊಳಿಸಲಾಯಿತು.
ಇಂದು ದೂರುದಾರ ತೋರಿಸಿದ ಎರಡನೇ ಪಾಯಿಂಟ್‌ನಿಂದ ಮಣ್ಣು ಅಗೆಯುವ ಕಾರ್ಯ ನಡೆಯಲಿದೆ. ಈಗಾಗಲೇ ಗುರುತಿಸಿರುವ 12 ಪಾಯಿಂಟ್‌ಗಳಲ್ಲಿ ಅಗೆತ ಬಾಕಿಯಿದೆ.
ಮೂಲಗಳ ಪ್ರಕಾರ, ದೂರುದಾರ ತಲೆ ಬುರುಡೆಯೊಂದನ್ನು ತಂದಿರುವ ಜಾಗದಲ್ಲಿ ಇಂದು ಅಗೆತ ನಡೆಯಲಿದೆ. ಮಾನವ ಶ್ರಮದ ಮೂಲಕವೇ ಮಣ್ಣು ಅಗೆಯಲಾಗುತ್ತದೆ. ಏಕೆಂದರೆ, ಈ ಪಾಯಿಂಟ್‌ಗಳು ಮೀಸಲು ಅರಣ್ಯ ಪ್ರದೇಶದಲ್ಲಿವೆ. ಅಲ್ಲದೆ, ಅಲ್ಲಿ ನಿನ್ನೆಯಂತೆ ನೀರಿನ ಒರತೆ ಅಡ್ಡಿಯಾಗುವ ಸಾಧ್ಯತೆ ಕಡಿಮೆಯಿದೆ. ಒಂದು ವೇಳೆ ಹೂತಿಟ್ಟ ಶವಗಳ ಅಸ್ತಿಪಂಜರ ಇದ್ದರೆ, ಅದನ್ನು ಬಹಳ ಸೂಕ್ಷ್ಮವಾಗಿ ಮೇಲೆತ್ತಬೇಕಿದೆ.


