ಬಿಜೆಪಿಯೇತರ ಆಡಳಿತದ ದಕ್ಷಿಣ ರಾಜ್ಯಗಳ ಸಚಿವರು ಭಾಗವಹಿಸಿದ್ದ ಕೇರಳ ಸರ್ಕಾರ ಪ್ರಾಯೋಜಿತ ‘ಯುಜಿಸಿ ಕರಡು ನಿಯಮಗಳು- 2025’ರ ರಾಷ್ಟ್ರೀಯ ಸಮಾವೇಶದಲ್ಲಿ, ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುವ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಿಯಮಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ 15 ಅಂಶಗಳ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಯುಜಿಸಿ ಕರಡು ನಿಯಮಗಳು ಉನ್ನತ ಶಿಕ್ಷಣದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ದುರ್ಬಲಗೊಳಿಸುವ, ಧಾರ್ಮಿಕ ಮತ್ತು ಕೋಮು ಸಿದ್ಧಾಂತಗಳನ್ನು ಉತ್ತೇಜಿಸುವವರ ನಿಯಂತ್ರಣದಲ್ಲಿ ಶಿಕ್ಷಣ ವಲಯವನ್ನು ಇರಿಸುವ ಪ್ರಯತ್ನದ ಭಾಗ” ಎಂದಿದ್ದಾರೆ.
“ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಕಾನೂನು ರಚಿಸುವ ರಾಜ್ಯಗಳ ಅಧಿಕಾರವನ್ನು ಯುಜಿಸಿ ಕರಡು ನಿಯಮಗಳು ಕಿತ್ತುಕೊಳ್ಳಲಿದೆ. ಈ ಮೂಲಕ ಇದು ದೇಶದ ಒಕ್ಕೂಟ ವ್ಯವಸ್ಥೆಯ ಅಡಿಪಾಯವನ್ನೇ ಹಾಳು ಮಾಡಲಿದೆ” ಎಂದು ಹೇಳಿದ್ದಾರೆ.
“ಕೇಂದ್ರ ಸರ್ಕಾರ ಮತ್ತು ಯುಜಿಸಿ ರಾಜ್ಯ ಸರ್ಕಾರಗಳನ್ನು ವಿಶ್ವವಿದ್ಯಾಲಯಗಳ ಆಡಳಿತದಿಂದ ಹೊರಗಿಡಲು ಪ್ರಯತ್ನಿಸುತ್ತಿವೆ. ಹೊಸ ನಿಯಮಗಳು ಜಾರಿಯಾದರೆ, ರಾಜ್ಯ ವಿಧಾನಸಭೆಗಳು ಜಾರಿಗೆ ತಂದ ಕಾನೂನುಗಳಿಂದ ಸ್ಥಾಪಿಸಲಾದ ಮತ್ತು ರಾಜ್ಯಗಳ ಹಣಕಾಸು ಮತ್ತು ಆಡಳಿತ ಸಂಪನ್ಮೂಲಗಳನ್ನು ಬಳಸಿಕೊಂಡು ನಡೆಸುವ ವಿಶ್ವವಿದ್ಯಾಲಯಗಳ ಮೇಲೆ ರಾಜ್ಯಗಳು ನಿಯಂತ್ರಣ ಕಳೆದುಕೊಳ್ಳಲಿವೆ” ಎಂದಿದ್ದಾರೆ.
ಸಮಾವೇಶವ ಆಯೋಜಿಸಿದಕ್ಕೆ ಸರ್ಕಾರವನ್ನು ಶ್ಲಾಘಿಸಿದ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್, “ಯುಜಿಸಿ ತನ್ನ ಸಾಂವಿಧಾನಿಕ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸಬೇಕು” ಎಂದು ಹೇಳಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು ಅವರು “ಕರಡು ನಿಯಮಗಳು ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸುವುದಲ್ಲದೆ, ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ದುರ್ಬಲಗೊಳಿಸುವ ಅಪಾಯವನ್ನು ಸೂಚಿಸುತ್ತಿವೆ” ಎಂದು ತಿಳಿಸಿದ್ದಾರೆ.
ತೆಲಂಗಾಣ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಮಾತನಾಡಿ, “ಯುಜಿಸಿ ಕರಡು ನಿಯಮಗಳು ಜಾರಿಯಾದರೆ, ರಾಜ್ಯಗಳನ್ನು ತಮ್ಮದೇ ವಿಶ್ವವಿದ್ಯಾಲಯಗಳಲ್ಲಿ ಕೇವಲ ವೀಕ್ಷಕರಾಗಿ ಮಾತ್ರ ಉಳಿಯಲಿವೆ” ಎಂದು ಎಚ್ಚರಿಸಿದ್ದಾರೆ.
ಕೇಂದ್ರ ಸರ್ಕಾರ ಮತ್ತು ಯುಜಿಸಿಯ ಕರಡು ನಿಯಮಗಳ ವಿರುದ್ಧ ಇದೇ ರೀತಿಯ ಅಭಿಪ್ರಾಯಗಳನ್ನು ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಮತ್ತು ತಮಿಳುನಾಡಿ ಉನ್ನತ ಶಿಕ್ಷಣ ಸಚಿವ ಗೋವಿ ಚೆಝಿಯಾನ್ ವ್ಯಕ್ತಪಡಿಸಿದ್ದಾರೆ.
ಯುಜಿಸಿ ಕರಡು ನಿಯಮಗಳ ವಿರುದ್ದ ಫೆ.5ರಂದು ಬೆಂಗಳೂರಿನಲ್ಲಿ ಮೊದಲ ಉನ್ನತ ಶಿಕ್ಷಣ ಸಚಿವರ ಸಭೆ ನಡೆದಿತ್ತು. ಈ ಸಭೆಯಲ್ಲಿ 15 ಅಂಶಗಳ ನಿರ್ಣಯವನ್ನು ಅಂಗೀಕರಿಸಲಾಗಿದೆ. ಅದೇ ಅಂಶಗಳೊಂದಿಗೆ ಕೇರಳದಲ್ಲಿ ನಡೆದ ಎರಡನೇ ಸಭೆಯಲ್ಲೂ ನಿರ್ಣಯ ಅಂಗೀಕರಿಸಲಾಗಿದೆ.


