“ಜಾತ್ಯತೀತತೆ ಯುರೋಪಿನ ಪರಿಕಲ್ಪನೆಯಾಗಿದ್ದು, ಅದು ಭಾರತದಲ್ಲಿ ಅಗತ್ಯವಿಲ್ಲ” ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್ ರವಿ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ.
ಸೆಪ್ಟೆಂಬರ್ 22ರಂದು ಕನ್ಯಾಕುಮಾರಿಯ ತಿರುವತ್ತೂರಿನ ‘ಹಿಂದೂ ಧರ್ಮ ವಿದ್ಯಾಪೀಠದ ಘಟಕೋತ್ಸವ’ದಲ್ಲಿ ಮಾತನಾಡಿದ ಅವರು, “ಒಬ್ಬರು ಅಸುರಕ್ಷಿತ ಪ್ರಧಾನಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೆಲ ವರ್ಗದ ಜನರನ್ನು ಸಮಾಧಾನಪಡಿಸುವ ಸಲುವಾಗಿ ಸಂವಿಧಾನದಲ್ಲಿ ಜಾತ್ಯತೀತತೆಯನ್ನು ಪರಿಚಯಿಸಿದರು” ಎಂದು ಪರೋಕ್ಷವಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ಟೀಕಿಸಿದ್ದಾರೆ.
“ಜಾತ್ಯತೀತತೆ ಎನ್ನುವುದು ಭಾರತೀಯರ ಪರಿಕಲ್ಪನೆಯಲ್ಲ, ಅದು ಯುರೋಪಿಯನ್ ಪರಿಕಲ್ಪನೆ. ಅದು ಅಲ್ಲಿಯೇ ಇರಲಿ, ಅವರು ಅದರಲ್ಲಿ ಸಂತೋಷವಾಗಿರಲಿ. ಈ ದೇಶದ ಜನರ ಮೇಲೆ ಸಾಕಷ್ಟು ವಂಚನೆಗಳನ್ನು ಮಾಡಲಾಗಿದೆ. ಅವುಗಳಲ್ಲಿ ಒಂದು ಜಾತ್ಯತೀತತೆಗೆ ತಪ್ಪು ವ್ಯಾಖ್ಯಾನ ನೀಡಲು ಪ್ರಯತ್ನಿಸಿರುವುದು” ಎಂದು ರಾಜ್ಯಪಾಲ ಹೇಳಿದ್ದಾರೆ.
'Secularism is a European concept and it has no place in India.' – RN Ravi ( Tamilnadu Governor) pic.twitter.com/fa1ZH6JCiX
— Political_News (@Political_Newss) September 23, 2024
“ಯುರೋಪಿನಲ್ಲಿ, ಚರ್ಚ್ ಮತ್ತು ರಾಜನ ನಡುವೆ ಜಗಳ ನಡೆದಿದ್ದರಿಂದ ಜಾತ್ಯತೀತತೆ ಬಂತು. ಅವರು ನೂರಾರು ವರ್ಷಗಳಿಂದ ನಡೆಯುತ್ತಿದ್ದ ಹೋರಾಟವನ್ನು ನಿಲ್ಲಿಸಲು ಬಯಸಿದ್ದರು. ಆದ್ದರಿಂದ ಚರ್ಚ್ ಮತ್ತು ರಾಜನ ನಡುವೆ ಯಾವುದೇ ಹಸ್ತಕ್ಷೇಪವಿಲ್ಲ ಎಂದು ಖಚಿತಪಡಿಸಿಕೊಳ್ಳಲು ಪ್ರತ್ಯೇಕತೆಯನ್ನು ಪ್ರತಿಪಾದಿಸಿದರು. ಭಾರತದಲ್ಲಿ ಜಾತ್ಯತೀತತೆಯ ಅಗತ್ಯವಿಲ್ಲ” ಎಂದು ರಾಜ್ಯಪಾಲ ವಿವರಿಸಿದ್ದಾರೆ.
“ಸ್ವಾತಂತ್ರ್ಯದ ಸಮಯದಲ್ಲಿ, ಸಂವಿಧಾನವನ್ನು ರಚಿಸುವಾಗ, ಜಾತ್ಯತೀತತೆ ಚರ್ಚೆಗೆ ಬಂದಿತ್ತು. ಭಾರತ ಧರ್ಮ ಕೇಂದ್ರಿತ ದೇಶವಾಗಿದೆ. ಯುರೋಪಿನಲ್ಲಿ ಕಂಡು ಬಂದಂತೆ ಯಾವುದೇ ಸಂಘರ್ಷ ನಡೆದಿಲ್ಲ ಎಂದು ಗಮನಿಸಿ ಸಂವಿಧಾನ ಸಭೆ ಅದನ್ನು ತಿರಸ್ಕರಿಸಿತು” ಎಂದು ರಾಜ್ಯಪಾಲ ಪ್ರತಿಪಾದಿಸಿದ್ದಾರೆ.
ಸಂವಿಧಾನ ಸಭೆಯ ಚರ್ಚೆಗಳನ್ನು ಉಲ್ಲೇಖಿಸಿದ ರಾಜ್ಯಪಾಲ “ಭಾರತ ಧರ್ಮದ ದೇಶ ಎಂದು ಅಲ್ಲಿ ಚರ್ಚಿಸಲಾಗಿದೆ. ಧರ್ಮದೊಂದಿಗೆ ಸಂಘರ್ಷ ಹೇಗೆ ಸಾಧ್ಯ? ಭಾರತವು ಧರ್ಮದಿಂದ ದೂರವಾಗಲು ಹೇಗೆ ಸಾಧ್ಯ? ಅದು ಸಾಧ್ಯವಿಲ್ಲ!. ಆದ್ದರಿಂದ ಅವರು ಜಾತ್ಯತೀತತೆ ಯುರೋಪಿಯನ್ ಪರಿಕಲ್ಪನೆ. ಅದು ಅಲ್ಲೇ ಇರಲಿ, ಭಾರತದಲ್ಲಿ ಜಾತ್ಯತೀತತೆಯ ಅಗತ್ಯವಿಲ್ಲ ಎಂದು ಹೇಳಿದರು ಮತ್ತು ಅದನ್ನು ಸಂವಿಧಾನದಲ್ಲಿ ಸೇರಿಸಿಲ್ಲ” ಎಂದಿದ್ದಾರೆ.
ರಾಜ್ಯಪಾಲರ ಹೇಳಿಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ‘ರಾಜ್ಯಪಾಲರು ತಮ್ಮ ಸಾಂವಿಧಾನಿಕ ಹುದ್ದೆಗೆ ಬದ್ದರಾಗಿ ಕಾರ್ಯನಿರ್ವಹಿಸಲಿ’ ಎಂದು ಹಲವರು ಹೇಳಿದ್ದಾರೆ.
“ಜಾತ್ಯತೀತತೆಯು ಭಾರತದ ಅತ್ಯಂತ ಅಗತ್ಯವಾದ ಪರಿಕಲ್ಪನೆಯಾಗಿದೆ” ಎಂದು ತಮಿಳುನಾಡಿನ ಆಡಳಿತರೂಢ ಡಿಎಂಕೆ ಹೇಳಿದೆ.
“ಸಂವಿಧಾನ 25ನೇ ವಿಧಿ ಧಾರ್ಮಿಕ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತದೆ. ಅದು ಅವರಿಗೆ (ರಾಜ್ಯಪಾಲರಿಗೆ) ಗೊತ್ತಿಲ್ಲ ಅನಿಸುತ್ತದೆ. ಅವರು ಹೋಗಿ ಸಂವಿಧಾನವನ್ನು ಸಂಪೂರ್ಣವಾಗಿ ಓದಲಿ. ನಮ್ಮ ಸಂವಿಧಾನದಲ್ಲಿ 22 ಭಾಷೆಗಳನ್ನು ಪಟ್ಟಿ ಮಾಡಲಾಗಿದೆ. ಹಿಂದಿ ಕೆಲ ರಾಜ್ಯಗಳಲ್ಲಿ ಮಾತನಾಡುವ ಭಾಷೆಯಾಗಿದೆ. ಉಳಿದ ರಾಜ್ಯಗಳು ಇತರ ಭಾಷೆಗಳನ್ನು ಮಾತನಾಡುತ್ತವೆ. ಅವರಿಗೆ ಭಾರತ ಅಥವಾ ಸಂವಿಧಾನ ತಿಳಿದಿಲ್ಲ” ಎಂದು ಡಿಎಂಕೆ ವಕ್ತಾರ ಟಿಕೆಎಸ್ ಇಳಂಗೋವನ್ ಹೇಳಿದ್ದಾರೆ.
ಸಿಪಿಐ ನಾಯಕ ಡಿ ರಾಜಾ ರಾಜ್ಯಪಾಲರ ಹೇಳಿಕೆಯನ್ನು ಖಂಡಿಸಿದ್ದು, “ಧರ್ಮ ಮತ್ತು ರಾಜಕೀಯವನ್ನು ಪ್ರತ್ಯೇಕಿಸಲು ಜಾತ್ಯತೀತತೆಯ ಅಗತ್ಯವಿದೆ” ಎಂದಿದ್ದಾರೆ.
“ಆರ್.ಎನ್.ರವಿ ನೀಡಿರುವ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಅವರಿಗೆ ಜಾತ್ಯತೀತತೆಯ ಬಗ್ಗೆ ಏನು ಗೊತ್ತು? ಅವರಿಗೆ ಭಾರತದ ಬಗ್ಗೆ ಏನು ಗೊತ್ತು? ಅವರು ರಾಜ್ಯಪಾಲರು, ಸಂವಿಧಾನಕ್ಕೆ ಬದ್ಧರಾಗಿರಬೇಕು. ಭಾರತದ ಸಂವಿಧಾನವು ಭಾರತವನ್ನು ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ವ್ಯಾಖ್ಯಾನಿಸುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಧಾರ್ಮಿಕ ಪರಿಕಲ್ಪನೆಯನ್ನು ಬಲವಾಗಿ ತಿರಸ್ಕರಿಸಿದ್ದರು. ಒಂದು ವೇಳೆ ಹಿಂದೂ ರಾಷ್ಟ್ರವು ನಿಜವಾಗಿದ್ದರೆ, ಅದು ರಾಷ್ಟ್ರಕ್ಕೆ ವಿಪತ್ತು. ಜಾತ್ಯತೀತತೆ ಎಂದರೆ ಧರ್ಮ ಮತ್ತು ರಾಜಕೀಯವನ್ನು ಪ್ರತ್ಯೇಕವಾಗಿ ಇಡುವುದಾಗಿದೆ. ರಾಜಕೀಯ ಉದ್ದೇಶಕ್ಕೆ ದೇವರನ್ನು ಎಳೆದು ತರಬೇಡಿ” ಎಂದು ಡಿ ರಾಜಾ ಹೇಳಿದ್ದಾರೆ.
ತಮಿಳುನಾಡು ರಾಜ್ಯಪಾಲರು ಜಾತ್ಯತೀತತೆಯ ಬಗ್ಗೆ ಹೇಳಿಕೆ ನೀಡಿ ವಿವಾದ ಎಬ್ಬಿಸಿರುವುದು ಇದೇ ಮೊದಲಲ್ಲ. ಕಳೆದ ವರ್ಷ “ಈ ದೇಶವನ್ನು ಒಡೆಯಲು ಮುಂದಾಗಿರುವ ಜನರು ಜಾತ್ಯತೀತತೆಯ ಬಗ್ಗೆ ವಿಕೃತ ವ್ಯಾಖ್ಯಾನ ನೀಡಿದ್ದಾರೆ” ಎಂದಿದ್ದರು.
“ನಮ್ಮ ಸಂವಿಧಾನವು ‘ಧರ್ಮ’ಕ್ಕೆ ವಿರುದ್ಧವಾಗಿಲ್ಲ. ಈ ದೇಶವನ್ನು ಒಡೆಯಲು ಬಯಸುವ ಜನರು ಜಾತ್ಯತೀತತೆಯ ವಿಕೃತ ವ್ಯಾಖ್ಯಾನವನ್ನು ನೀಡಿದ್ದಾರೆ. ನಮ್ಮ ಸಂವಿಧಾನದಲ್ಲಿರುವ ಜಾತ್ಯತೀತತೆಯ ನಿಜವಾದ ಅರ್ಥವನ್ನು ನಾವು ಗ್ರಹಿಸಿಕೊಳ್ಳಬೇಕು. ಹಿಂದೂ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಮಾತನಾಡುವವರು ಪ್ರತಿಕೂಲ ವಿದೇಶಿ ಶಕ್ತಿಗಳ ಸಹಯೋಗದೊಂದಿಗೆ ಈ ದೇಶವನ್ನು ಒಡೆಯುವ ಗುಪ್ತ ಕಾರ್ಯಸೂಚಿಯನ್ನು ಹೊಂದಿದ್ದು, ಭಾರತಕ್ಕೆ ಅಂತರ್ಗತ ಶಕ್ತಿ ಇರುವುದರಿಂದ ಅವರು ಯಶಸ್ವಿಯಾಗುವುದಿಲ್ಲ” ಎಂದು ರಾಜ್ಯಪಾಲ ರವಿ ಹೇಳಿದ್ದರು.
ಕೃಪೆ : ಟೈಮ್ಸ್ ಆಫ್ ಇಂಡಿಯಾ
ಇದನ್ನೂ ಓದಿ : ಕುಟುಂಬದಿಂದಲೇ ಅತ್ಯಾಚಾರ ಸಂತ್ರಸ್ತೆಯ ಹತ್ಯೆ : ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿ ವಿರುದ್ದ ದೂರು


