ಹದಿನೇಳು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಮತ್ತು ಆರ್ಥಿಕ ವಂಚನೆ ಜಾಲವನ್ನು ನಡೆಸುತ್ತಿದ್ದ ಪ್ರಕರಣದ ಆರೋಪಿ, ಸ್ವಯಂ ಘೋಷಿತ ‘ದೇವಮಾನವ’ ಸ್ವಾಮಿ ಚೈತನ್ಯಾನಂದ ಸರಸ್ವತಿ ಅಲಿಯಾಸ್ ಪಾರ್ಥ ಸಾರಥಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಒಂದು ವಾರದ ಶೋಧದ ಬಳಿಕ, ಭಾನುವಾರ (ಸೆ.28) ಬೆಳಗಿನ ಜಾವ 3.30ರ ಸುಮಾರಿಗೆ ಆಗ್ರಾದ ತಾಜ್‌ಗಂಜ್ ಪ್ರದೇಶದ ಹೋಟೆಲ್‌ನಲ್ಲಿ ಚೈತನ್ಯಾನಂದನನ್ನು ಬಂಧಿಸಲಾಗಿದೆ ಎಂದು ವರದಿಗಳು ಹೇಳಿವೆ.
ದೆಹಲಿಯ ಮ್ಯಾನೇಜ್‌ಮೆಂಟ್ ಇನ್ಸಿಟ್ಯೂಟ್‌ನ ಮಾಜಿ ಅಧ್ಯಕ್ಷನಾಗಿರುವ 62 ವರ್ಷದ ಚೈತನ್ಯಾನಂದ, ಸಂಸ್ಥೆಗೆ ಆರ್ಥಿಕ ದುರ್ಬಲ ವರ್ಗ (ಇಡಬ್ಲ್ಯೂಎಸ್) ಮೀಸಲಾತಿ ಅಡಿ ದಾಖಲಾಗುತ್ತಿದ್ದ ವಿದ್ಯಾರ್ಥಿನಿಯರನ್ನು ಶೋಷಣೆ ಮಾಡುತ್ತಿದ್ದ. ವಿದ್ಯಾರ್ಥಿನಿಯರ ಮೊಬೈಲ್ ಫೋನ್‌ಗಳು ಮತ್ತು ಶೈಕ್ಷಣಿಕ ಪ್ರಮಾಣಪತ್ರಗಳನ್ನು ತನ್ನ ಬಳಿ ಇಟ್ಟುಕೊಳ್ಳುತ್ತಿದ್ದ. ಇದರಿಂದ ಅವರು ಇಕ್ಕಟ್ಟಿಗೆ ಸಿಲುಕಿ ಶೋಷಣೆ ವಿರುದ್ದ ದೂರು ನೀಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಪೊಲೀಸರು ಆರೋಪಿಸಿದ್ದಾರೆ.
ತನಗೆ ಬೇಕಾದ ವಿದ್ಯಾರ್ಥಿನಿಯರನ್ನು ಗುರುತಿಸುತ್ತಿದ್ದ ಚೈತನ್ಯಾನಂದ, ಕಲಿಕೆಗೆ ಅಡ್ಡಿಯಾಗುತ್ತದೆ ಎಂಬ ನೆಪ ಅವರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳುತ್ತಿದ್ದ. ಬಳಿಕ ಅವರನ್ನು ಶೋಷಣೆ ಮಾಡಲು ಪ್ರಾರಂಭಿಸುತ್ತಿದ್ದ ಎಂದು ಸಂತ್ರಸ್ತೆಯೊಬ್ಬರು ಗೆಳತಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಚೈತನ್ಯಾನಂದ ವಿರುದ್ಧ ಸಂಸ್ಥೆಯ 17 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದರು. ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸುವುದು, ದೈಹಿಕ ಸಂಪರ್ಕಕ್ಕೆ ಪ್ರಯತ್ನಿಸುವುದು, ಉಚಿತ ವಿದೇಶ ಪ್ರವಾಸಗಳ ಆಮಿಷ ಒಡ್ಡುವುದು ಸೇರಿದಂತೆ ಅನೇಕ ಆರೋಪವಿದೆ. ಮಹಿಳಾ ಹಾಸ್ಟೆಲ್‌ನಲ್ಲಿ ರಹಸ್ಯ ಕ್ಯಾಮರಾಗಳನ್ನು ಅಳವಡಿಸಿದ್ದರೆಂಬ ಸಂಗತಿ ಕೂಡ ಬೆಳಕಿಗೆ ಬಂದಿದೆ.
ಪ್ರಕರಣ ಬಹಿರಂಗವಾದ ತಕ್ಷಣ ಶೃಂಗೇರಿ ಮಠದ ಆಶ್ರಮದ ಸಂಸ್ಥೆಯ ಆಡಳಿತ ಮಂಡಳಿ ಚೈತನ್ಯಾನಂದನನ್ನು ಹುದ್ದೆಯಿಂದ ವಜಾಗೊಳಿಸಿತ್ತು.
ಶುಕ್ರವಾರ ದೆಹಲಿ ನ್ಯಾಯಾಲಯವು ವಂಚನೆ, ನಕಲಿ ದಾಖಲೆ ಮತ್ತು ಪಿತೂರಿ ಪ್ರಕರಣದಲ್ಲಿ ಚೈತನ್ಯಾನಂದನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.
“ವಂಚನೆಯ ಸಂಪೂರ್ಣ ಜಾಲವನ್ನು ಪತ್ತೆ ಹಚ್ಚಲು ಕಸ್ಟಡಿ ವಿಚಾರಣೆ ಅಗತ್ಯ” ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ದೀಪ್ ಕೌರ್ ಹೇಳಿದ್ದರು.
ಕರೂರು ಕಾಲ್ತುಳಿತ | ಮೃತರ ಸಂಖ್ಯೆ 39ಕ್ಕೆ ಏರಿಕೆ; ತನಿಖೆಗೆ ಆಯೋಗ ರಚಿಸಿದ ಸಿಎಂ ಸ್ಟಾಲಿನ್



Purely negligence