ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿರಿಯ ವಕೀಲ ಕಪಿಲ್ ಸಿಬಲ್ ಗೆಲುವು ಸಾಧಿಸಿದ್ದಾರೆ.
ಸಿಬಲ್ 1,066 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಹಿರಿಯ ವಕೀಲ ಪ್ರದೀಪ್ ರೈ 689 ಮತಗಳನ್ನು ಪಡೆದಿದ್ದಾರೆ. ಮರು ಆಯ್ಕೆ ಬಯಸಿದ್ದ ನಿರ್ಗಮಿತ ಅಧ್ಯಕ್ಷ, ಹಿರಿಯ ವಕೀಲ ಡಾ ಆದಿಶ್ ಸಿ ಅಗರ್ವಾಲ್ ಅವರ ಪರ 296 ಮತಗಳು ಚಲಾವಣೆಯಾಗಿತ್ತು.
ಪ್ರಿಯಾ ಹಿಂಗೋರಾಣಿ, ತ್ರಿಪುರಾರಿ ರೈ, ನೀರಜ್ ಶ್ರೀವಾಸ್ತವ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.
Celebrations at the SC library after Sibal's victory. pic.twitter.com/QJeGe9KU20
— Live Law (@LiveLawIndia) May 16, 2024
ಸಿಬಲ್ ಅವರು ಎಸ್‌ಸಿಬಿಎ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಇದು ನಾಲ್ಕನೇ ಬಾರಿಯಾಗಿದೆ. ಸಿಬಲ್ ಜೊತೆ ಉಪಾಧ್ಯಕ್ಷರಾಗಿ ರಚನಾ ಶ್ರೀವಾಸ್ತವ್ ಮತ್ತು ಕಾರ್ಯದರ್ಶಿಯಾಗಿ ವಿಕ್ರಾಂತ್ ಯಾದವ್ ಆಯ್ಕೆಯಾಗಿದ್ದಾರೆ.
ಸಿಬಲ್ ಈ ಹಿಂದೆ ಎಸ್‌ಸಿಬಿಎ ಅಧ್ಯಕ್ಷರಾಗಿ ಮೂರು ಬಾರಿ ಚುನಾಯಿತರಾಗಿದ್ದರು. ಕೊನೆಯದಾಗಿ 23 ವರ್ಷಗಳ ಹಿಂದೆ, ಅಂದರೆ 2001ರಲ್ಲಿ ಅವರು ಎಸ್‌ಬಿಎ ಅಧ್ಯಕ್ಷರಾಗಿದ್ದರು. ಅದಕ್ಕೂ ಮುನ್ನ 1995-96 ಮತ್ತು 1997-98 ಅವಧಿಯಲ್ಲೂ ಅವರು ಈ ಸ್ಥಾನಕ್ಕೆ ಆಯ್ಕೆಯಾಗಿದ್ದರು.
ನಿರ್ಗಮಿತ ಅಧ್ಯಕ್ಷ ಆದಿಶ್ ಅಗರ್ವಾಲ್ ಇತ್ತೀಚೆಗೆ ‘ಚುನಾವಣಾ ಬಾಂಡ್’ ವಿಚಾರದಲ್ಲಿ ಸುದ್ದಿಯಾಗಿದ್ದರು. ಮೋದಿ ಸರ್ಕಾರದ ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿ, ಬಾಂಡ್ ಮಾಹಿತಿಗಳನ್ನು ಸಾರ್ವಜನಿಕಗೊಳಿಸುವಂತೆ ಈ ವರ್ಷದ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಈ ಆದೇಶದ ವಿರುದ್ದ ರಾಷ್ಟ್ರಪತಿಗೆ ಪತ್ರ ಬರೆದಿದ್ದ ಆದಿಶ್ ಅಗರ್ವಾಲ್ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿದ್ದರು. ಈ ವಿಚಾರಕ್ಕೆ ಸುಪ್ರೀಂ ಕೋರ್ಟ್ ಅಗರ್ವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಎಸ್‌ಬಿಎ ಕಾರ್ಯದರ್ಶಿ ಪ್ರಕಟನೆ ಹೊರಡಿಸಿ, “ಅಗರ್ವಾಲ್ ಬರೆದ ಪತ್ರಕ್ಕೂ ನಮಗೂ ಸಂಬಂಧವಿಲ್ಲ” ಎಂದಿದ್ದರು.
ಇದನ್ನೂ ಓದಿ : ಅರವಿಂದ್ ಕೇಜ್ರಿವಾಲ್, ಎಎಪಿ ವಿರುದ್ಧ ಶೀಘ್ರದಲ್ಲೇ ಪ್ರಾಸಿಕ್ಯೂಷನ್ ದೂರು ಸಲ್ಲಿಸಲಾಗುವುದು: ಇಡಿ


