ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಶುಕ್ರವಾರ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಹಿರಿಯ ವಕೀಲ ಕೆವಿ ವಿಶ್ವನಾಥನ್ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಬೋಧಿಸಿದರು ಎಂದು ಲೈವ್ ಲಾ ವರದಿ ಮಾಡಿದೆ.
ಈ ಮೂಲಕ ಸುಪ್ರೀಂ ಕೋರ್ಟ್ ಈಗ 34 ನ್ಯಾಯಾಧೀಶರ ಪೂರ್ಣ ಬಲವನ್ನು ಹೊಂದಿದೆ.
ಮೇ 16 ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ಇಬ್ಬರ ಪದೋನ್ನತಿಗೆ ಶಿಫಾರಸು ಮಾಡಿತ್ತು ಹಾಗೂ ಕೇಂದ್ರ – ಸರಕಾರವು ಈ ಇಬ್ಬರ ನೇಮಕಾತಿಯ ಕುರಿತು ಮೇ 18ರಂದು ಅಧಿಸೂಚನೆ ಹೊರಡಿಸಿತು. ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
Justice Prashant Kumar Mishra is now a judge of the #SupremeCourt. pic.twitter.com/mPZCyiaoso
— Live Law (@LiveLawIndia) May 19, 2023
ಮೂಲತಃ ಛತ್ತೀಸ್‌ಗಢ ಹೈಕೋರ್ಟ್‌ನವರಾದ ಜಸ್ಟಿಸ್ ಮಿಶ್ರಾ ಅವರು, ಈ ಹಿಂದೆ ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಅವರ ಹೆಸರನ್ನು ಪದೋನ್ನತಿಗೆ ಶಿಫಾರಸು ಮಾಡುವಾಗ, ಛತ್ತೀಸ್‌ಗಢ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ಪ್ರಾತಿನಿಧ್ಯವಿಲ್ಲ ಎಂದು ಗಮನಿಸಿದ್ದರು.
ಇದನ್ನೂ ಓದಿ: ಪರಿಶಿಷ್ಟ ಪಂಗಡಕ್ಕೆ ಮೈತಿ ಸಮುದಾಯ ಸೇರಿಸುವ ವಿಚಾರ; ಮಣಿಪುರ ಹೈಕೋರ್ಟ್ ಆದೇಶ ವಾಸ್ತವವಾಗಿ ತಪ್ಪು ಎಂದ ಸುಪ್ರೀಂ
”ಛತ್ತೀಸ್‌ಗಢದ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ ಸುಮಾರು 12 ವರ್ಷಗಳ ಅವಧಿಯಲ್ಲಿ, ನ್ಯಾಯಮೂರ್ತಿ ಮಿಶ್ರಾ ಅವರು ಕಾನೂನಿನ ವಿವಿಧ ಕ್ಷೇತ್ರಗಳಲ್ಲಿ ಅನುಭವವನ್ನು ಗಳಿಸಿದ್ದಾರೆ. ಅವರ ತೀರ್ಪುಗಳು ಕಾನೂನು ಮತ್ತು ನ್ಯಾಯಕ್ಕೆ ಸಂಬಂಧಿಸಿದ ವ್ಯಾಪಕವಾದ ಸಮಸ್ಯೆಗಳನ್ನು ಒಳಗೊಳ್ಳುತ್ತವೆ” ಎಂದು ಕೊಲಿಜಿಯಂ ಹೇಳಿದೆ.
ನ್ಯಾಯವಾದಿ ವಿಶ್ವನಾಥನ್ ಅವರು ವಕೀಲರಿಂದ ನೇರವಾಗಿ ಸುಪ್ರೀಂ ಕೋರ್ಟ್ ಪೀಠಕ್ಕೆ ನೇಮಕಗೊಂಡ ಹತ್ತನೇ ವಕೀಲರಾಗಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ. ಅವರು ಆಗಸ್ಟ್ 12, 2030 ರಿಂದ ಮೇ 25, 2031 ರವರೆಗೆ ಮುಖ್ಯ ನ್ಯಾಯಮೂರ್ತಿಯಾಗುವ ಸಾಲಿನಲ್ಲಿದ್ದಾರೆ.
ಸುಪ್ರೀಂ ಕೋರ್ಟ್ ಕೊಲಿಜಿಯಂ ಮೇ 16ರಂದು ಇಬ್ಬರು ಹೊಸ ನ್ಯಾಯಮೂರ್ತಿಗಳ ಪದೋನ್ನತಿಗೆ ಶಿಫಾರಸು ಮಾಡಿತ್ತು, ಅದರ ನಂತರ, ಕೇಂದ್ರವು ಎರಡು ದಿನಗಳಲ್ಲಿ ಅವರ ನೇಮಕಾತಿಯನ್ನು ಅಧಿಸೂಚನೆ ಮಾಡಿತ್ತು. ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಎಂಆರ್ ಷಾ ಅವರು ಈ ತಿಂಗಳು ನಿವೃತ್ತರಾದ ನಂತರ ಎರಡು ಹೊಸ ನೇಮಕಾತಿಗಳನ್ನು ಮಾಡಿಕೊಳ್ಳಲಾಗಿದೆ.


