“ಡ್ರಗ್ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ” ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶುಕ್ರವಾರ (ಡಿಸೆಂಬರ್ 12) ಈ ಕುರಿತು ಪ್ರತಿಕ್ರಿಯಿಸಿರುವ ಅವರು, “ಮಾದಕವಸ್ತು ಮಾರಾಟಗಾರರ ಮನೆಗಳನ್ನು ಕೆಡವಲು ಬುಲ್ಡೋಜರ್‌ಗಳನ್ನು ಬಳಸಬಹುದು ಎಂಬ ಕರ್ನಾಟಕದ ಗೃಹ ಸಚಿವರ ವರದಿಯ ಬಗ್ಗೆ ನನಗೆ ಆತಂಕವಾಗಿದೆ. ಈ ವರದಿ ಸುಳ್ಳಾಗಿರಲಿ ಎಂಬುದು ನನ್ನ ನಿರೀಕ್ಷೆ” ಎಂದಿದ್ದಾರೆ.
“ಕಾನೂನಿನ ಸರಿಯಾದ ಪ್ರಕ್ರಿಯೆಯಿಲ್ಲದೆ ಮನೆಗಳನ್ನು ಕೆಡವುವುದು ಕಾನೂನುಬಾಹಿರ ಮತ್ತು ಕುಟುಂಬದ ಇತರ ಸದಸ್ಯರ ಮೂಲಭೂತ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ, ಯುಪಿಯಲ್ಲಿ ಆಚರಣೆಯಲ್ಲಿರುವ ‘ಬುಲ್ಡೋಜರ್ ನ್ಯಾಯ’ ತಪ್ಪು, ಕಾನೂನುಬಾಹಿರ ಮತ್ತು ಅನ್ಯಾಯ ಎಂಬುದು ಕಾಂಗ್ರೆಸ್ ಪಕ್ಷದ ದೃಷ್ಟಿಕೋನವಾಗಿದೆ. ಕರ್ನಾಟಕದಂತಹ ಕಾಂಗ್ರೆಸ್ ಆಡಳಿತದ ರಾಜ್ಯವು ಯುಪಿಯ ಅಕ್ರಮ ಹಾದಿಯಲ್ಲಿ ಸಾಗದಿರಲಿ” ಎಂದು ಚಿದಂಬರಂ ಬರೆದುಕೊಂಡಿದ್ದಾರೆ.
ಗುರುವಾರ (ಡಿಸೆಂಬರ್ 11) ವಿಧಾನಪರಿಷತ್‌ನಲ್ಲಿ ಮಾತನಾಡಿದ್ದ ಗೃಹ ಸಚಿವ ಜಿ. ಪರಮೇಶ್ವರ್, ಆಫ್ರಿಕಾದ ಅನೇಕ ವಿದ್ಯಾರ್ಥಿಗಳು ಇಲ್ಲಿಗೆ ಡ್ರಗ್ಸ್ ದಂಧೆ ಮಾಡುತ್ತಿದ್ದಾರೆ. ಅವರನ್ನು ನಾವು ಬಂಧಿಸುತ್ತೇವೆ, ಪ್ರಕರಣ ದಾಖಲಿಸುತ್ತೇವೆ. ಬಂಧನ ಆಗಬೇಕೆಂದೇ ಅವರು ಬಯಸುತ್ತಿದ್ದಾರೆ. ಕಾರಣ ಬಂಧನ ಆದರೆ, ಅವರನ್ನು ನಾವು ಅವರ ದೇಶಕ್ಕೆ ಕಳುಹಿಸಲು ಆಗುವುದಿಲ್ಲ ಎಂದು ಹೇಳಿದ್ದರು.
ಕಳೆದ ಎರಡು ವರ್ಷಗಳಲ್ಲಿ ನಾವು ಸುಮಾರು 300 ಜನ ವಿದೇಶಿ ವಿದ್ಯಾರ್ಥಿಗಳನ್ನು ಗಡಿಪಾರು ಮಾಡಿದ್ದೇವೆ. ಗಡಿಪಾರು ಮಾಡಲೂ ಹೆಚ್ಚಿನ ಪ್ರಕ್ರಿಯೆಗಳಿವೆ. ಹಾಗಾಗಿ, ನಾವು ಪ್ರತಿನಿತ್ಯ ಈ ಡ್ರಗ್ಸ್ ದಂಧೆಯ ಬಗ್ಗೆ ನಿಗಾ ಇಟ್ಟಿದ್ದೇವೆ. ದಂಧೆಕೋರರಿಗೆ ಬಾಡಿಗೆಗೆ ಮನೆ ಕೊಟ್ಟವರ ಮೇಲೂ ಕ್ರಮ ಕೈಗೊಂಡಿದ್ದೇವೆ. ಇತ್ತೀಚೆಗೆ ಬಾಡಿಗೆ ಮನೆಯನ್ನು ಒಡೆದು ಹಾಕುವ ಹಂತಕ್ಕೂ ಹೋಗಿದ್ದೇವೆ. ಬಹಳ ಕಠಿಣ ಕ್ರಮವನ್ನು ಈ ಡ್ರಗ್ಸ್ ವಿಚಾರದಲ್ಲಿ ನಾವು ತೆಗೆದುಕೊಳ್ಳುತ್ತಿದ್ದೇವೆ ಎಂದಿದ್ದರು.


