ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಕಳೆದ 14 ತಿಂಗಳ ಅವಧಿಯಲ್ಲಿ ಒಂಬತ್ತು ಮಹಿಳೆಯರನ್ನು ಕೊಂದ ‘ಸರಣಿ ಹಂತಕ’ ಕುಲದೀಪ್ ಎಂಬಾತನನ್ನು ಪೊಲೀಸರು ಇಂದು (ಆ.9) ಬಂಧಿಸಿದ್ದಾರೆ.
ಕಳೆದ ವರ್ಷದಲ್ಲಿ ಶಾಹಿ-ಶೀಶ್‌ಗಢ ಪ್ರದೇಶದಲ್ಲಿ ಒಂಬತ್ತು ಮಹಿಳೆಯರು ಶವವಾಗಿ ಪತ್ತೆಯಾಗಿದ್ದರು. ಮಹಿಳೆಯರೆಲ್ಲರನ್ನು ಅವರು ಧರಿಸಿದ್ದ ಸೀರೆ ಅಥವಾ ಬಟ್ಟೆಯಿಂದಲೇ ಕತ್ತು ಬಿಗಿದು ಕೊಲೆ ಮಾಡಲಾಗಿತ್ತು. ಇದರ ಹಿಂದೆ ಓರ್ವ ವ್ಯಕ್ತಿಯ ಕೃತ್ಯ ಇರಬಹುದು ಎಂದು ಪೊಲೀಸರು ಶಂಕಿಸಿದ್ದರು.
ಎರಡು ಪೊಲೀಸ್ ಠಾಣೆಗಳ ವ್ಯಾಪ್ತಿಯ ಗ್ರಾಮಗಳನ್ನು ಒಳಗೊಂಡ 25 ಕಿಮೀ ವ್ಯಾಪ್ತಿಯಲ್ಲಿ ಈ ಘಟನೆಗಳು ಸಂಭವಿಸಿತ್ತು. ಮೃತರು 45ರಿಂದ 55 ವರ್ಷ ವಯಸ್ಸಿನವರಾಗಿದ್ದರು. ಮಧ್ಯಾಹ್ನದ ಹೊತ್ತಿಗೆ ಹೊಲಗಳಲ್ಲಿ ಮೃತದೇಹಗಳು ಪತ್ತೆಯಾಗಿತ್ತು.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪೊಲೀಸರು, “ಉತ್ತರ ಪ್ರದೇಶದ ಬರೇಲಿಯ ನಿವಾಸಿ ಕುಲದೀಪ್ 2014ರಲ್ಲಿ ವಿವಾಹವಾಗಿದ್ದು, ಆತನ ನಡವಳಿಕೆಯಿಂದ ಬೇಸತ್ತ ಪತ್ನಿ ಆತನನ್ನು ತೊರೆದಿದ್ದಳು. ಇದರಿಂದ ಆತನಿಗೆ ಮಹಿಳೆಯರ ಮೇಲೆ ದ್ವೇಷ ಬೆಳೆದಿತ್ತು. ಬಳಿಕ ಆತ ಮಹಿಳೆಯರನ್ನು ಕೊಲೆ ಮಾಡಲು ಆರಂಭಿಸಿದ್ದ” ಎಂದು ತಿಳಿಸಿದ್ದಾರೆ.
“ಆರೋಪಿ ನಿರ್ಜನ ಸ್ಥಳಗಳಲ್ಲಿ ಇರುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಲೈಂಗಿಕ ಸಂಪರ್ಕಕ್ಕೆ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದ. ಮಹಿಳೆಯರು ನಿರಾಕರಿಸಿದಾಗ ಅವರ ಮೇಲೆ ಆಕ್ರೋಶಗೊಂಡು ಅವರ ಸೀರೆಗಳನ್ನು ಬಳಸಿ ಕತ್ತು ಬಿಗಿದು ಕೊಲ್ಲುತ್ತಿದ್ದ. ನಂತರ, ಸಂತ್ರಸ್ತರ ಲಿಪ್‌ಸ್ಟಿಕ್, ಬಿಂದಿ, ಸೀರೆಯ ತುಂಡು, ಕುಪ್ಪಸದ ತುಂಡನ್ನು ಇಟ್ಟುಕೊಳ್ಳುತ್ತಿದ್ದ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಉತ್ತರ ಪ್ರದೇಶ ಪೊಲೀಸರಿಂದ ಕ್ರಮ ಕೈಗೊಂಡ ಬಗ್ಗೆ ವಿವರವಾದ ವರದಿಯನ್ನು ಕೇಳಿದೆ.
ಇದನ್ನೂ ಓದಿ : ಮುಂಬೈ | ಖಾಸಗಿ ಕಾಲೇಜು ಹೇರಿದ್ದ ಹಿಜಾಬ್ ನಿಷೇಧಕ್ಕೆ ಸುಪ್ರೀಂ ಕೋರ್ಟ್ ತಡೆ


