Homeಮುಖಪುಟ'Serious Men' Review: `ಸೀರಿಯಸ್ ಮೆನ್’ನ ಘನ ಜಾತೀಯತೆ!

‘Serious Men’ Review: `ಸೀರಿಯಸ್ ಮೆನ್’ನ ಘನ ಜಾತೀಯತೆ!

ಈ ಚಿತ್ರವು ಸಮಾಜದ ಒಂದು ವರ್ಗವನ್ನು, ಪ್ರಗತಿಯ ಏಣಿಯನ್ನೇರಲು ಏನನ್ನಾದರೂ ಮಾಡಬಲ್ಲರು ಎಂಬಂತೆ ಬಿಂಬಿಸಲಾಗಿದೆ. ಶಿಕ್ಷಣದ ಮೂಲ ಸಮಸ್ಯೆಯನ್ನು ದಲಿತ ಸಮಸ್ಯೆ ಎಂದು ತೋರಿಸಲಾಗಿದೆ. ಮೇಲ್ವರ್ಗದವರು ಕಟ್ಟಿಕೊಟ್ಟಿರುವ ಕಥನವನ್ನೇ ಇದು ಪ್ರತಿಪಾದಿಸುತ್ತಿದೆ.

- Advertisement -
- Advertisement -

“ನನಗೆ ಐನ್‍ಸ್ಟೀನ್‍ನ ಮಿದುಳಿನ ತೂಕ ಮತ್ತು ಸಂಕೀರ್ಣತೆಯ ಬಗ್ಗೆ ಅಷ್ಟು ಆಸಕ್ತಿ ಇಲ್ಲ, ಅದರ ಬದಲಿಗೆ ಅಷ್ಟೇ ಪ್ರತಿಭೆಯುಳ್ಳ ಜನರು ಹತ್ತಿ ಹೊಲಗಳಲ್ಲಿ ಮತ್ತು ಫ್ಯಾಕ್ಟರಿಗಳಲ್ಲಿಯೇ ಬದುಕಿದ ಮತ್ತು ಸತ್ತ ವಾಸ್ತವದ ಬಗ್ಗೆ ನನಗೆ ಹೆಚ್ಚಿನ ಆಸಕ್ತಿಯಿದೆ” ಸ್ಟೀಫನ್ ಜೆ. ಗೌಲ್ಡ್

ಕೆಲವೇ ಕೆಲವು ಅಪವಾದಗಳನ್ನು ಹೊರತುಪಡಿಸಿದರೆ, ಭಾರತೀಯ ಚಿತ್ರರಂಗ ಜಾತಿಯ ಪರಿಕಲ್ಪನೆಯ ಬಗ್ಗೆ ಚರ್ಚೆ ಮಾಡುವುದಕ್ಕೆ ಅಷ್ಟು ತೆರೆದುಕೊಂಡಿಲ್ಲ ಮತ್ತು ಅದರಿಂದ ತುಂಬಾ ದೂರ ಸರಿದಿದೆ. ಅನೇಕ ದಶಕಗಳವರೆಗೆ ಭಾರತೀಯ ಸಿನೆಮಾದಲ್ಲಿ ಶ್ರೀಮಂತ ಹುಡುಗಿ ಮತ್ತು ಬಡ ಹುಡುಗನ ಮಧ್ಯೆ ಆಗುವ ಪ್ರಣಯದ ಕಥೆಗಳನ್ನು ಜಾತಿಯ ಉಲ್ಲೇಖವಿಲ್ಲದೇ ಹೆಣೆದಿದ್ದನ್ನು ನಾವು ನೋಡಿದ್ದೇವೆ. 80ರ ದಶಕದಲ್ಲಿ ‘ಆರ್ಟ್’ ಸಿನೆಮಾ ಎಂಬ ಪ್ರಕಾರದಲ್ಲಿ ಕೆಲವು ಪ್ರಯತ್ನಗಳು ನಡೆದವು. ಹಾಗೂ ಕಳೆದ 15 ವರ್ಷಗಳಲ್ಲಿ ‘ಎಲ್‍ಎಸ್‍ಡಿ’, ‘ಆರಕ್ಷಣ್’, ‘ಹಜಾರೋ ಖ್ವಾಯಿಷೇ ಐಸಿ’, ‘ದ ಡರ್ಟಿ ಪಿಕ್ಚರ್’ನಂತಹ ಕೆಲವು ಚಲನಚಿತ್ರಗಳಲ್ಲಿ ಸವರ್ಣೀಯ ದೃಷ್ಟಿಯ ಮೂಲಕ ಜಾತಿಯನ್ನು ಪ್ರತಿಬಿಂಬಿಸಲು ಪ್ರಯತ್ನಿಸಲಾಗಿದೆ.

ಹಲವಾರು ಕಾರಣಗಳಿಂದ ಕಳೆದ ಕೆಲವು ವರ್ಷಗಳಲ್ಲಿ ಹೊಸ ತರದ ನಿರ್ದೇಶಕರು ಹೊರಹೊಮ್ಮುತ್ತಿದ್ದು ಹಾಗೂ ಹೊಸ ಸ್ಟ್ರೀಮಿಂಗ್ ವೇದಿಕೆಗಳು (ನೆಟ್‍ಫ್ಲಿಕ್ಸ್, ಅಮೆಜಾನ್ ಪ್ರೈಮ್ ತರಹದ್ದು) ಶುರುವಾಗಿದ್ದು, ಧೈರ್ಯವಾಗಿ ಜಾತಿಯ ಬಗ್ಗೆ ಮಾತನಾಡುವ ಸಿನೆಮಾಗಳು ಹೊರಬಂದಿವೆ. ಆದರೆ, ಕೆಲವನ್ನು ಹೊರತುಪಡಿಸಿ ಮಿಕ್ಕ ಚಿತ್ರಗಳು ಜಾತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಮತ್ತು ಅದನ್ನು ಸೂಕ್ಷ್ಮವಾಗಿ ಚಿತ್ರಿಸುವಲ್ಲಿ ವಿಫಲವಾದಂತವು.

ಬಹಳ ಸಲ ಈ ಸಿನೆಮಾಗಳು ಬಡವ ವರ್ಸಸ್ ಶ್ರೀಮಂತ ಎಂಬ ವರ್ಗ ಕಥಾನಕದಲ್ಲಿ ಜಾತಿಯ ವಿಷಯವನ್ನು ಒಂದು ಬಾಹ್ಯ ಅಂಶ ಎಂಬಂತೆ ಬಿಂಬಿಸಿದವು. ಕಳೆದ ದಶಕದಲ್ಲಿ ‘ಮಸಾನ್’, ‘ಮಾಂಝಿ ದಿ ಮೌಂಟನ್ ಮ್ಯಾನ್’, ‘ಆರ್ಟಿಕಲ್ 15’, ‘ಪಾತಾಲ್ ಲೋಕ್’, ‘ಪಲಾಸ 1978’, ‘ಕೇ/ಆ ಕಂಚೆರಪಾಲೆಮ್’, ‘ಫಾಂಡ್ರಿ’, ‘ಸಾಯಿರಾಟ್’, ‘ರಂಗಸ್ಥಲಮ್’, ‘ಮದ್ರಾಸ್’, ‘ಕಾಲಾ’, ‘ಕಬಾಲಿ’, ‘ಪರಿಯೆರುಮ್ ಪೆರುಮಾಳ್’ ಹಾಗೂ ‘ಅಸುರನ್’ನಂತಹ ಚಿತ್ರಗಳು ಜಾತಿ ಮತ್ತು ವರ್ಗದ ವಿಷಯವನ್ನು ಬೇರೆಬೇರೆ ಸ್ತರಗಳಲ್ಲಿ ಪರದೆಯ ಮೇಲೆ ಬಿಂಬಿಸಿವೆ.

ಇದೇ ಸರಣಿಯಲ್ಲಿಯ ಇತ್ತೀಚಿನ ಚಿತ್ರ ‘ಸೀರಿಯಸ್ ಮೆನ್’. ಲೇಖಕ ಮತ್ತು ಪತ್ರಕರ್ತ ಮನು ಜೋಸೆಫ್ ಅವರು ಬರೆದ ಪುಸ್ತಕವನ್ನು ಆಧರಿಸಿದ ಈ ಚಿತ್ರವನ್ನು ನೆಟ್‍ಫ್ಲಿಕ್ಸ್ ನಿರ್ಮಿಸಿ, ಬಿತ್ತರಿಸಿತ್ತು. ಇದರಲ್ಲಿ ನವಾಜುದ್ದೀನ್ ಸಿದ್ದಿಕಿ ಪ್ರಮುಖಪಾತ್ರ ನಿರ್ವಹಿಸಿದ್ದು, ಖ್ಯಾತ ನಿರ್ದೇಶಕ ಸುಧೀರ್ ಮಿಶ್ರ ನಿರ್ದೇಶಿಸಿದ್ದಾರೆ.

ಈ ಚಿತ್ರದಲ್ಲಿ ಮುಂಬಯಿಯ ಚಾಳನಲ್ಲಿ ಬೆಳೆದ ಅಯ್ಯನ್ ಮಣಿ ಎಂಬ ತಮಿಳು ವ್ಯಕ್ತಿಯ ಕಥೆಯಿದೆ. ನಾವಾಜುದ್ದೀನ್‍ನ ಪಾತ್ರಪೋಷಣೆ ಮಾಡಿರುವ ಮಣಿ ಮುಂಬಯಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‍ನಲ್ಲಿ ಕೆಲಸ ಮಾಡುವ ಅರವಿಂದ ಆಚಾರ್ಯ ಎಂಬ ಬ್ರಾಹ್ಮಣ ವಿಜ್ಞಾನಿಗೆ ಆಪ್ತ ಸಹಾಯಕನಾಗಿದ್ದಾನೆ. ಈ ಅಯ್ಯನ್ ಮಣಿ, ತನ್ನ ಕುಟುಂಬದಲ್ಲಿ ಶಿಕ್ಷಣ ಪಡೆದಿರುವ ಮೊದಲನೇ ತಲೆಮಾರಿನವ. ತಾನು ಕೆಲಸ ಮಾಡುವ ಸಂಸ್ಥೆಯಲ್ಲಿಯ ‘ಗಂಭೀರ ವ್ಯಕ್ತಿ’ಗಳ ಭಾಷೆ ಮತ್ತು ನಡವಳಿಕೆಗಳನ್ನು ನಕಲಿಸುವ ಪ್ರಯತ್ನ ಮಾಡಿ ತನ್ನ ಮಗ ಆದಿಯನ್ನು ಒಬ್ಬ ಜೀನಿಯಸ್ ಮಾಡುವ ಕನಸನ್ನು ಕಾಣುತ್ತಿದ್ದಾನೆ. ತನ್ನ ಮಗನನ್ನು ಒಬ್ಬ ಚೈಲ್ಡ್ ಪ್ರಾಡಿಜಿ (ಚಿಕ್ಕವಯಸ್ಸಿನ ಮೇಧಾವಿ)ಯನ್ನಾಗಿ ಬ್ರ್ಯಾಂಡ್ ಮಾಡಿ ತನ್ನ ಮಗನಿಗೆ ಆಯ್ದ ಅನೇಕ ವಿಷಯಗಳನ್ನು ಕಂಠಪಾಠ ಮಾಡುವಂತೆ ಮಾಡುತ್ತಾನೆ.

2000ದ ದಶಕದಲ್ಲಿ ಸುದ್ದಿ ಮಾಡಿದ ಚೈಲ್ಡ್ ಪ್ರಾಡಿಜಿ ತಥಾಗತ್ ಅವತಾರ್ ತುಲಸಿಯ ಕಥೆಯಿಂದ ಈ ಚಿತ್ರ ಸ್ಪೂರ್ತಿ ಪಡೆದಿದೆ ಎಂದು ಅನಿಸುತ್ತದೆ. ಆ ಬಾಲಕನನ್ನೂ ಅವನ ತಂದೆಯೇ ಜೀನಿಯಸ್ ಆಗಿ ಮಾಡಿದ್ದ ಮತ್ತು ಅವನು ಹೇಗೆ ಹುಟ್ಟಿದ ಎಂಬುದರ ಕಾರಣದಿಂದ ಜೀನಿಯಸ್ ಆಗಿದ್ದಾನೆ ಎಂದು ಹೇಳಿಕೊಳ್ಳುತ್ತಿದ್ದ. ತುಳಸಿ ತನ್ನ ಹನ್ನೆರಡನೇ ವಯಸ್ಸಿನಲ್ಲಿ ಪಾಟ್ನಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದ. ಇತರ ವಿದ್ಯಾರ್ಥಿಗಳೊಂದಿಗೆ ನೊಬೆಲ್ ಪುರಸ್ಕೃತರನ್ನು ಭೇಟಿಯಾಗಲು ಅವನನ್ನು ಜರ್ಮನಿಗೆ ಕಳುಹಿಸಿಕೊಡಲಾಯಿತು. ತಾನು ಜಾಣ ಎಂದು ತೋರಿಕೊಳ್ಳಲು ವೈಜ್ಞಾನಿಕ ಜಾರ್ಗನ್‍ಗಳನ್ನು ತೇಲಿಬಿಡುತ್ತಿರುವ ನಕಲಿ ಜೀನಿಯಸ್ ಎಂದು ಅಲ್ಲಿ ಆರೋಪಿಸಲಾಯಿತು. ಆಗ ತುಳಸಿ ಮೀಡಿಯಾ ಸರ್ಕಸ್‍ನಿಂದ ಸಂಪೂರ್ಣವಾಗಿ ಕಣ್ಮರೆಯಾದ. ನಂತರ ಅವನು ಐಐಎಸ್‍ಸಿಯಲ್ಲಿ ತನ್ನ ಪಿಎಚ್‍ಡಿ ಮಾಡುತ್ತಿದ್ದ ಎಂದೂ ಮತ್ತು ಅದಾದ ನಂತರ ಐಐಟಿ-ಬಾಂಬೆಯಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ್ದಾನೆಂದು ತಿಳಿದುಬಂತು.

PC : Best Media Info (ಮನು ಜೋಸೆಫ್)

ಮಾಧ್ಯಮ ಮತ್ತು ಸಮಾಜಕ್ಕೆ ಚೈಲ್ಡ್ ಪ್ರಾಡಿಜಿಗಳ ಬಗ್ಗೆ ಇರುವ ಹುಚ್ಚು ಪ್ರೀತಿಯನ್ನು ಈ ಚಿತ್ರ ತೋರಿಸುತ್ತದೆ. ‘ಮೆರಿಟ್’ ಬಗ್ಗೆ ಭಾರತೀಯರಿಗೆ ಇರುವ ಪ್ರೀತಿಯನ್ನು ಇದು ಎತ್ತಿಹಿಡಿಯುತ್ತದೆ ಹಾಗೂ ಒಬ್ಬ ಜೀನಿಯಸ್‍ಗಿಂತ ಹೆಚ್ಚು ಮೆರಿಟ್ ಹೊಂದಿದವ ಇನ್ಯಾರಾಗಬಹುದು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುತ್ತದೆ. ಆದರೆ ನಮ್ಮ ಸಮಾಜದಲ್ಲಿ ಅನೇಕ ವ್ಯವಸ್ಥಿತ ಅಸಮಾನತೆಗಳಿವೆ, ಆ ಅಸಮಾನತೆಗಳು ಅನೇಕರಿಗೆ ಒಂದು ಘನತೆಯ ಬದುಕನ್ನು ಕಟ್ಟಿಕೊಳ್ಳಲು ಅಡ್ಡಿಯಾಗುತ್ತವೆ. ಈ ಚಿತ್ರ ಆ ವ್ಯವಸ್ಥಿತ ಅಸಮಾನತೆಗಳನ್ನು ನೋಡುವ, ಪರಿಶೀಲಿಸುವ ಅಗತ್ಯವನ್ನು ತೇಲಿಸಿ ಮುಂದೆಹೋಗುತ್ತದೆ.

ಈ ಚಿತ್ರ ಮಣಿ, ಅವನ ಮಗ ಮತ್ತು ಅವರಿಬ್ಬರ ನಡುವೆ ಇರುವ ಗುಟ್ಟಿನ ಸುತ್ತ ತಿರುಗುತ್ತದೆ. ಮಣಿಗೆ ತನ್ನ ಮಗ, ಈ ಪ್ರತಿಭಾವಂತ ಗಂಭೀರ ವ್ಯಕ್ತಿಗಳನ್ನು ಅವರದೇ ಆಟದಲ್ಲಿ ಸೋಲಿಸಬಲ್ಲ ಎಂಬ ಆತ್ಮವಿಶ್ವಾಸವಿದೆ, ಆದರೆ ಮಗ ಆದಿಯು ತನ್ನ ತಂದೆಯ ಗುಟ್ಟಿನ ಹೊರೆಯಲ್ಲಿ ಮತ್ತು ತಮ್ಮಿಬ್ಬರ ಈ ಮೋಸ ಬಯಲಾಗಬಹುದು ಎಂಬ ಭಯದಡಿಯಲ್ಲಿ ನರಳುತ್ತಿದ್ದಾನೆ. ಇದನ್ನು ಕಂಡ ತಂದೆಯ ಆತ್ಮವಿಶ್ವಾಸ ಕೂಡ ಭಯದಲ್ಲಿ ಬದಲಾಗುತ್ತದೆ. ದಿನಕಳೆದಂತೆ ಆದಿ ತನಗೆ ಹೇಳಿಕೊಟ್ಟದ್ದನ್ನು ಪುನರುಚ್ಚರಿಸಲು ಕಷ್ಟಪಡುತ್ತಾನೆ ಹಾಗೂ ಸೋಲಿನ ಆತಂಕದಲ್ಲಿ ನಲುಗುತ್ತಾನೆ. ಅದೇ ಸಮಯದಲ್ಲಿ ವಿಜ್ಞಾನಿ ಆಚಾರ್ಯ ಕೂಡ ಅನ್ಯಗ್ರಹಗಳ ಸೂಕ್ಷ್ಮಾಣುಜೀವಿಗಳ ಮತ್ತು ಅವುಗಳ ಅನ್ವಯಿಕತೆಯ ಬಗ್ಗೆ ನಕಲಿ ದತ್ತಾಂಶವನ್ನು ಸೃಷ್ಟಿಸುತ್ತಿರುವುದು ಮಣಿಗೆ ಗೊತ್ತಾಗುತ್ತದೆ.

ಕ್ಲೈಮ್ಯಾಕ್ಸ್‌ನಲ್ಲಿ ಅಯ್ಯನ್ ತನ್ನ ಕುಟುಂಬಸಮೇತ ಮುಂಬಯಿ ಬಿಟ್ಟು ಹಳ್ಳಿಗೆ ಹೋಗುತ್ತಾನೆ. ಅಲ್ಲಿ ಆದಿ ಒಬ್ಬ ಸಾಧಾರಣ ವಿದ್ಯಾರ್ಥಿಯಾಗಿದ್ದರೂ ಒಬ್ಬ ಸಂತುಷ್ಟ ಮಗುವಾಗಿರುವುದನ್ನು ತೋರಿಸುವುದರಿಂದ ಚಿತ್ರ ಮುಕ್ತಾಯಗೊಳ್ಳುತ್ತದೆ.

ಈ ಚಿತ್ರದಲ್ಲಿ ದಲಿತರು ದಲಿತ ಕಾಲನಿಯಲ್ಲಿ ಗಣೇಶ ಚತುರ್ಥಿಯನ್ನು ಆಚರಿಸುವ ದೃಶ್ಯವಿದೆ ಆದರೆ ಪುಸ್ತಕದಲ್ಲಿ ಇದರ ಬಗ್ಗೆ ಏನೂ ಬರೆದಿಲ್ಲ. ಪುಸ್ತಕದಲ್ಲಿ ಅಯ್ಯನ್ ತನ್ನ ಮಗ ಎನ್‍ಐಎಫ್‍ಆರ್ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳಲು ಆಚಾರ್ಯನ ಭ್ರಷ್ಟಾಚಾರದ ಹಗರಣವನ್ನು ಉಪೇಕ್ಷಿಸುವ ಒಪ್ಪಂದ ಮಾಡಿಕೊಳ್ಳುತ್ತಾನೆ. ಆದರೆ ಚಿತ್ರದಲ್ಲಿ ಅವನು ತನ್ನ ಹಳ್ಳಿಗೆ ಹೋಗುವಂತೆ ಮಾಡಿದ್ದಾರೆ.

ಜಾತಿ ಎಂಬ ಪೆಡಂಭೂತ

‘ಸೀರಿಯಸ್ ಮೆನ್’ ಚಿತ್ರವು ವಿಡಂಬನೆಯ ಪ್ರಕಾರವನ್ನು ಪ್ರಯತ್ನಿಸಿದೆ ಹಾಗೂ ಜಾತಿ, ವರ್ಗ ಮತ್ತು ಭ್ರಷ್ಟಾಚಾರದ ಗಂಭೀರತೆಯನ್ನು ಮನೋರಂಜನೆಯೆಂಬಂತೆ ಬಿಂಬಿಸಲು ಪ್ರಯತ್ನಿಸುತ್ತದೆ ಆದರೆ ಈ ಪ್ರಯತ್ನದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಲೇಖಕ ಮನು ಜೋಸೆಫ್ ತನ್ನ ವಿಡಂಬನಾತ್ಮಕ ಸಿನಿಕತೆ ಮತ್ತು ತನ್ನ ನಿಷ್ಠುರ ಹಾಸ್ಯಕ್ಕಾಗಿ(ಡಾರ್ಕ್ ಹ್ಯೂಮರ್) ಹೆಸರುವಾಸಿಯಾಗಿದ್ದಾರೆ. ಆದರೆ ಶೋಷಿತರ ಬಗ್ಗೆ ಬರೆಯುವಾಗ ಯಾವುದೇ ಲೇಖಕನಿಂದ ಒಂದಿಷ್ಟು ಸೂಕ್ಷ್ಮತೆಯನ್ನು ಅಪೇಕ್ಷಿಸಲಾಗುತ್ತದೆ. ಇಲ್ಲಿಯೇ ಜಾತಿಯೆಂಬ ಭೂತದ ಸಾಮಾಜಿಕ ವಾಸ್ತವದ ಬಗ್ಗೆ ಲೇಖಕನ ಮತ್ತು ಚಿತ್ರದ ತಿಳಿವಿನ ಕೊರತೆ ಎದ್ದು ಕಾಣುತ್ತದೆ.

ಚಿತ್ರದಲ್ಲಿ ಒಬ್ಬ ದಲಿತನೇ ನಾಯಕನಾಗಿದ್ದರೂ, ಅವನು ತನ್ನ ಮೇಲ್ಜಾತಿಯ ಮೇಲಾಧಿಕಾರಿಗಳನ್ನು ಸರಿಗಟ್ಟಲು ಏನು ಬೇಕಾದರೂ ಮಾಡಲು ಹೇಸದ ಸಂಚುಗಾರ ಎಂಬಂತೆ ಬಿಂಬಿಸಲಾಗಿದೆ. ಈ ಚಿತ್ರದಲ್ಲಿ, ಆದಿಯ ಖ್ಯಾತಿಯನ್ನು ಬಳಸಿಕೊಳ್ಳುವ, ಅದರಿಂದ ಕಾಂಟ್ರ್ಯಾಕ್ಟ್‌ಗಳನ್ನು ಗಿಟ್ಟಿಸಿಕೊಳ್ಳುವ ಅಂಬೇಡ್ಕರ್‌ವಾದಿ ರಾಜಕಾರಣಿಗಳನ್ನು ಪ್ರಾಪ್‍ಗಳಂತೆ ಬಳಸಿಕೊಳ್ಳಲಾಗಿದೆ. ಕೆಳಜಾತಿಯವರಿಗೆ ಸರಿಯಾಗಿ ಮಕ್ಕಳನ್ನು ಬೆಳೆಸುವುದು ತಿಳಿದಿಲ್ಲ ಎಂತಲೂ ತೋರಿಸಲಾಗಿದೆ. ಚಿತ್ರದ ಪ್ರಕಾರ ಅವರು ಮೇಲೆ ಚಲಿಸಲು ಇರುವ ಒಂದೇ ದಾರಿ ಮೋಸದ್ದು. ಮೆರಿಟ್, ಮೀಸಲಾತಿ, ಅಂಬೇಡ್ಕರ್ ಮತ್ತು ದಲಿತ ಮಹಿಳೆ ಎಂಬ ಪದಗಳನ್ನು ಯಾವದೇ ಗಂಭೀರ ಚರ್ಚೆಯಲ್ಲಿ ತೊಡಗಿಸಿಕೊಳ್ಳದೇ ಅಲ್ಲಲ್ಲಿ ತುರುಕಲಾಗಿದೆ. ಮೊದಲೇ ಇಂತಹ ವಿಷಯಗಳ ಬಗ್ಗೆ ತಪ್ಪು ಮಾಹಿತಿ ಹೊಂದಿದ ನೋಡುಗರಿಗೆ ತಪ್ಪು ಹಿನ್ನೆಲೆಯಲ್ಲಿ ಇಂತಹ ಪದಗಳನ್ನು ಕಿವಿಯಲ್ಲಿ ತುರುಕಿದರೆ ಏನಾಗಬಹುದು ಎಂಬುದನ್ನು ಸರಳವಾಗಿ ಊಹಿಸಬಹುದು.

PC : Inext Live (ಸುಧೀರ್ ಮಿಶ್ರ)

ಒಬ್ಬ ಮೇಲ್ಜಾತಿಯ ಅರವಿಂದ ಆಚಾರ್ಯನು ಹಗರಣದಲ್ಲಿ ತೊಡಗಿಸಿಕೊಂಡರೂ, ಸಂಶೋಧನೆಯ ಅನುದಾನದ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಿದರೂ ಅವನು ತನ್ನನ್ನು ತಾನು ತನ್ನ ಪಾಪಗಳಿಂದ ಸುಲಭವಾಗಿ ಬಿಡುಗಡೆ ಹೊಂದಬಲ್ಲ ಆದರೆ ಒಬ್ಬ ಕೆಳಜಾತಿಯವನಿಗೆ ವಿಮೋಚನೆಯ ಯಾವದೇ ದಾರಿ ಇರುವುದಿಲ್ಲ ಹಾಗೂ ಅವನು ತನ್ನ ತಪ್ಪಿಗೆ ತಕ್ಕ ಶಾಸ್ತಿ ಅನುಭವಿಸಲೇಬೇಕು ಎಂಬುದು ಇಲ್ಲಿ ವ್ಯಕ್ತವಾಗಿದೆ.

ಈ ಕಾದಂಬರಿ ಬರೆಯುವುದಕ್ಕೂ, ಅದರ ಮೇಲೆ ಚಿತ್ರ ಮಾಡುವುದಕ್ಕೂ ಹತ್ತು ವರ್ಷಗಳ ಅಂತರವಿದ್ದಾಗಲೂ, ಇದರ ಲೇಖಕನಿಗೆ ಈ ವಿಷಯವನ್ನು ಒಂದಿಷ್ಟೂ ಸೂಕ್ಷ್ಮತೆಯಿಂದ ನಿಭಾಯಿಸಲು ಸಾಧ್ಯವಾಗಿಲ್ಲ. 2013ರ ಜೈಪುರ ಲಿಟ್‍ಫೆಸ್ಟ್‌ನಲ್ಲಿ ಪ್ರೊ. ಆಶೀಶ್ ನಂದಿಯವರು “ಎಸ್‍ಸಿ/ಎಸ್‍ಟಿ ಮತ್ತು ಒಬಿಸಿಯಿಂದಲೇ ಅತ್ಯಂತ ಭ್ರಷ್ಟ ಜನರು ಹೊರಹೊಮ್ಮುತ್ತಾರೆ” ಎಂದು ನೀಡಿದ ಹೇಳಿಕೆ ನೆನಪಾಗುತ್ತದೆ. ಆ ಹೇಳಿಕೆಗೆ ಬಹಳಷ್ಟು ಟೀಕೆ ಮತ್ತು ವಿರೋಧ ವ್ಯಕ್ತವಾದವು. ಮೊದಲೇ ಅಂಚಿನಲ್ಲಿರುವ ಸಮುದಾಯಗಳ ಬಗ್ಗೆ ಬೇಕಾಬಿಟ್ಟಿಯಾಗಿ ಸಾಮಾನ್ಯೀಕರಿಸಿ ನೀಡುವ ಇಂತಹ ಹೇಳಿಕೆಗಳು ಇನ್ನಷ್ಟು ಹಾನಿಯುಂಟುಮಾಡುತ್ತವೆ.

ಪರೀಕ್ಷೆಯಲ್ಲಿ ಪಡೆಯುವ ಅಂಕಗಳನ್ನೇ ‘ಪ್ರತಿಭೆ’ಯ ಮಾನದಂಡಗಳು ಎಂದು ಪರಿಗಣಿಸಲಾಗುವ, ಕಂಠಪಾಠ ಮಾಡಿ, ಅದನ್ನೇ ಜ್ಞಾನ ಎಂದು ತಿಳಿದುಕೊಳ್ಳುವ ಶಿಕ್ಷಣದ ಸಮಸ್ಯೆಗಳನ್ನು ಉದ್ದೇಶಿಸಿದೇ, ಈ ಚಿತ್ರವು ಸಮಾಜದ ಒಂದು ವರ್ಗವನ್ನು, ಪ್ರಗತಿಯ ಏಣಿಯನ್ನೇರಲು ಏನನ್ನಾದರೂ ಮಾಡಬಲ್ಲರು ಎಂಬಂತೆ ಬಿಂಬಿಸಲಾಗಿದೆ. ಶಿಕ್ಷಣದ ಮೂಲ ಸಮಸ್ಯೆಯನ್ನು ದಲಿತ ಸಮಸ್ಯೆ ಎಂದು ತೋರಿಸಲಾಗಿದೆ. ಮೇಲ್ವರ್ಗದವರು ಕಟ್ಟಿಕೊಟ್ಟಿರುವ ಕಥನವನ್ನೇ ಈಗ ಈ ಚಿತ್ರವೂ ಪ್ರತಿಪಾದಿಸುತ್ತಿದೆ.

‘ಸೀರಿಯಸ್ ಮೆನ್’ ಚಿತ್ರದ ಆದಿ ಪಾತ್ರವನ್ನು ನಾವು ಇತ್ತೀಚಿಗೆ ಬಿಡುಗಡೆಯಾದ ‘ಶಕುಂತಲಾದೇವಿ’ ಚಿತ್ರಕ್ಕೆ ಹೋಲಿಸಿದರೆ, ಅವರಿಬ್ಬರ ಕಲಿಕೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಾಣುವುದಿಲ್ಲ. ಆದರೆ ಒಬ್ಬ ಮೇಲ್ಜಾತಿಯ ಶಕುಂತಲಾದೇವಿಯ ಕ್ಯಾಲ್ಕ್ಯುಲೇಟರ್ ಲೆಕ್ಕ ಗಣಿತದ (ಲೆಕ್ಕ ಹಾಕುವುದು ಗಣಿತದ ಒಂದು ಚಿಕ್ಕ ಭಾಗ ಮಾತ್ರ, ಗಣಿತಕ್ಕೂ ಲೆಕ್ಕಕ್ಕೂ ಅಜಗಜಾಂತರ ವ್ಯತ್ಯಾಸವಿದೆ) ಪ್ರದರ್ಶನವು ಎತ್ತರದಲ್ಲಿ ಯಶಸ್ವಿಯಾಗಿ ನಿಂತರೆ, ಅದೇ ವಿಧಾನಗಳನ್ನು ಬಳಸಿದ ಆದಿ ಸೋಲುತ್ತಾನೆ.

ಚಿತ್ರದಲ್ಲಿ ಒಂದು ಡೈಲಾಗ್ ಬರುತ್ತದೆ – ‘ಐ ಕಾಂಟ್ ಡೀಲ್ ವಿತ್ ಪ್ರಿಮಿಟಿವ್ ಮೈಂಡ್ಸ್’ ಅಂದರೆ ‘ನನಗೆ ಅನಾಗರಿಕ ಮನಸ್ಸುಗಳೊಂದಗೆ ವ್ಯವಹರಿಸಲು ಆಗುವುದಿಲ್ಲ’. ವಾಸ್ತವದಲ್ಲಿ ಈ ಮಾತು ಮನು ಜೋಸೆಫ್‍ನಂತಹ ಲೇಖಕರಿಗೆ ಮತ್ತು ಈ ಚಿತ್ರ ಮಾಡಿದವರಿಗೆ ಅನ್ವಯಿಸುತ್ತದೆ. ತಾವು ಗಳಿಸಿದ ಶಿಕ್ಷಣ ಮತ್ತು ಶಿಕ್ಷಣಕ್ಕೆ ಇರುವ ಅವರ ಅವಕಾಶದ ಹೊರತಾಗಿಯೂ ದೇಶದ ಸಾಮಾಜಿಕ ವಾಸ್ತವಗಳ ಬಗ್ಗೆ ಒಂದಿಷ್ಟೂ ತಿಳಿದುಕೊಳ್ಳದೆ ನಿರಾಕರಣೆಯಲ್ಲಿ ಬದುಕುವವರಿಗೆ ಇದು ಹೆಚ್ಚು ಅನ್ವಯಿಸುತ್ತದೆ.

ನವಾಜುದ್ದೀನ್ ಸಿದ್ದಿಕಿ ಮತ್ತು ಅಕ್ಷತ್ ದಾಸ್‍ಗಳೇ ಈ ಚಿತ್ರದ ನಿಜವಾದ ಸ್ಟಾರ್‌ಗಳು. ಜಾತಿಯನ್ನು ಅಪಪ್ರಚಾರ ಮಾಡುವ ಎಲ್ಲ ಪ್ರಯತ್ನಗಳ ಹೊರತಾಗಿಯೂ, ವೀಕ್ಷಕರು ಘನತೆಯುಳ್ಳ ಬದುಕಿಗಾಗಿ ನಡೆಸುವ ಸಂಘರ್ಷದೊಂದಿಗೆ ತಮ್ಮನ್ನು ತಾವು ಕಂಡುಕೊಳ್ಳುವಂತೆ ಮಾಡಿದ ಈ ನಟರು ನಿಜಕ್ಕೂ ಅಭಿನಂದನಾರ್ಹ.

  • ಭರತ್ ಹೆಬ್ಬಾಳ
    ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಇದನ್ನೂ ಓದಿ: ಬಹುಭಾಷಾ ನಟಿ ಸೌಂದರ್ಯ ಬಯೋಪಿಕ್‌ನಲ್ಲಿ ಸಾಯಿಪಲ್ಲವಿ!?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...