ಉತ್ಪಾದನೆಯ ಪ್ರಮಾಣಗಳ ಪ್ರಕಾರ ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಬ್ರಿಟಿಷ್ ಔಷಧ ತಯಾರಕ ಅಸ್ಟ್ರಾಜೆನೆಕಾ ಜೊತೆ ಅಭಿವೃದ್ಧಿಪಡಿಸುತ್ತಿರುವ ಕೊರೊನಾ ವೈರಸ್ ಲಸಿಕೆಯ ತುರ್ತು ಬಳಕೆಯ ಅನುಮತಿಗಾಗಿ ಸರ್ಕಾರದ ಅನುಮತಿಯನ್ನು ಕೋರಿದೆ ಎಂದು ಮೂಲಗಳು ತಿಳಿಸಿವೆ.
ಈ ಮೂಲಕ ಕೊರೊನಾ ಲಸಿಕೆಗಾಗಿ ಅನುಮತಿ ಕೇಳುತ್ತಿರುವ ಎರಡನೆ ಕಂಪೆನಿಯಿದು. ಈ ಹಿಂದೆ ಅಮೆರಿಕಾ ಮೂಲದ ಫೈಝರ್ ಲಸಿಕೆಯ ತುರ್ತು ಬಳಕೆಗಾಗಿ ಅನುಮತಿ ಕೋರಿತ್ತು ಎಂದು ಮೂಲಗಳು ತಿಳಿಸಿದೆ. ಫೈಝರ್ ಲಸಿಕೆಯ ವ್ಯಾಪಕ ಬಳಕೆಗೆ ಬ್ರಿಟನ್ ಮತ್ತು ಬಹರೈನ್ ದೇಶಗಳು ಈಗಾಗಲೇ ಅನುಮತಿ ನೀಡಿದೆ.
ಇದನ್ನೂ ಓದಿ: ಭಾರತದಲ್ಲಿ ಕೊರೊನಾ ಲಸಿಕೆ ಬಳಕೆಗೆ ಅನುಮತಿ ಕೋರಿದ ಫೈಝರ್
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತನ್ನ ಕೋವಿಶೀಲ್ಡ್ ಲಸಿಕೆ ಕುರಿತು ಭಾರತದಲ್ಲಿ ಪ್ರಯೋಗಗಳನ್ನು ನಡೆಸಲು ಅಸ್ಟ್ರಾಜೆನೆಕಾ ಪಿಎಲ್‌ಸಿ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. “ಕೋವಿಶೀಲ್ಡ್ ಸುರಕ್ಷಿತ ಮತ್ತು ಉತ್ತಮವಾಗಿ ಸಹಿಸಿಕೊಳ್ಳಬಲ್ಲ ಲಸಿಕೆಯಾಗಿದೆ. ಉದ್ದೇಶಿತ ಜನಸಂಖ್ಯೆಯಲ್ಲಿ ಕೊರೊನಾ ತಡೆಗಟ್ಟಲು ಪರಿಣಾಮಕಾರಿಯಾಗಿ ಬಳಸಬಹುದು” ಎಂದು ಔಷಧ ಕಂಪೆನಿಯು ಸರ್ಕಾರಿ ಔಷಧ ನಿಯಂತ್ರಕಕ್ಕೆ ನೀಡಿರುವ ಅರ್ಜಿಯಲ್ಲಿ ಹೇಳಿದ್ದಾಗಿ ಸುದ್ದಿ ಸಂಸ್ಥೆ ಪಿಟಿಐ ಮೂಲವನ್ನು ಉಲ್ಲೇಖಿಸಿ ವರದಿ ಮಾಡಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹ-ಪ್ರಾಯೋಜಿತ ಕೋವಿಶೀಲ್ಡ್‌ನ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಬ್ರಿಟನ್ ಮತ್ತು ಬ್ರೆಜಿಲ್‌ನಲ್ಲಿ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ನಡೆಸುತ್ತಿರುವ ಕ್ಲಿನಿಕಲ್ ಅಧ್ಯಯನಗಳ ಜೊತೆಗೆ ದೇಶದ ವಿವಿಧ ಭಾಗಗಳಲ್ಲಿ ನಡೆಸಲಾಗುತ್ತಿದೆ.
ಕಂಪೆನಿಯು ನಾಲ್ಕು ಕ್ಲಿನಿಕಲ್ ಪ್ರಯೋಗಗಳ ಮಧ್ಯಂತರ ಡೇಟಾವನ್ನು ಸರ್ಕಾರಿ ಔಷಧ ನಿಯಂತ್ರಕದೊಂದಿಗೆ ಹಂಚಿಕೊಂಡಿದೆ. ಭಾರತದಲ್ಲಿ ಒಂದು, ಬ್ರಿಟನ್‌ನಲ್ಲಿ ಎರಡು ಮತ್ತು ಬ್ರೆಜಿಲ್‌ನಲ್ಲಿ ಒಂದು ಕಂಪೆನಿಯ ಕ್ಲಿನಿಕಲ್ ಪ್ರಯೋಗಗಳು ನಡೆದಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಕೊರೊನಾ ಲಸಿಕೆಯ ಬಳಕೆಗೆ ಅನುಮತಿ ನೀಡಿದ ಬ್ರಿಟನ್!


