ಕೊರೊನಾ ಲಸಿಕೆಯ ವ್ಯಾಪಕ ಬಳಕೆಗೆ ಬ್ರಿಟನ್‌ನಲ್ಲಿ ಅನುಮತಿ ಪಡೆದಿರುವ ಅಮೆರಿಕದ ಔಷಧ ಕಂಪೆನಿಯಾದ ಫೈಝರ್ ಇದೀಗ ತುರ್ತು ಬಳಕೆಯ ಅಧಿಕಾರಕ್ಕಾಗಿ ಭಾರತದ ಔಷಧ ನಿಯಂತ್ರಕರಾದ DCGI-ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ-ದಿಂದ ಅನುಮತಿ ಕೋರಿದೆ ಎಂದು ಮೂಲಗಳು ತಿಳಿಸಿವೆ.
ಕಂಪೆನಿಯು ತನ್ನ ಲಸಿಕೆಯನ್ನು ಬ್ರಿಟನ್ ಮತ್ತು ಬಹ್ರೇನ್‌ನಲ್ಲಿ ಹೊರತರಲು ಸಿದ್ಧವಾಗಿದ್ದು, ಹೊರಗಡೆ ನಡೆಸಿರುವ ಪ್ರಯೋಗಗಳ ಫಲಿತಾಂಶದಿಂದ ತೃಪ್ತಿಪಟ್ಟರೆ ಔಷಧ ನಿಯಂತ್ರಕ DCGI ತುರ್ತು ಅನುಮೋದನೆ ನೀಡಬಹುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೊರೊನಾ ಲಸಿಕೆಯ ಬಳಕೆಗೆ ಅನುಮತಿ ನೀಡಿದ ಬ್ರಿಟನ್!
ಅಮೆರಿಕ ಮೂಲದ ಫೈಝರ್ ಮತ್ತು ಜರ್ಮನಿ ಮೂಲದ ಬಯೋಎನ್‌ಟೆಕ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಯ ಬಳಕೆಗೆ ಅನುಮತಿ ನೀಡಿದ ಮೊದಲ ಪಾಶ್ಚಿಮಾತ್ಯ ದೇಶವಾಗಿ ಬ್ರಿಟನ್ ಹೊರಹೊಮ್ಮಿದೆ. ಲಸಿಕೆಯು ಮೂರನೇ ಹಂತದ ಪ್ರಯೋಗಗಳಲ್ಲಿ 95% ದಷ್ಟು ದಕ್ಷತೆಯನ್ನು ವರದಿ ಮಾಡಿದೆ.
ಫೈಝರ್ ಇಂಡಿಯಾ ಶುಕ್ರವಾರದಂದು DCGI ಗೆ ಸಲ್ಲಿಸಿದ ಅರ್ಜಿಯಲ್ಲಿ ದೇಶದಲ್ಲಿ ಮಾರಾಟ ಹಾಗೂ ವಿತರಣೆಗಾಗಿ ಲಸಿಕೆಯನ್ನು ಆಮದು ಮಾಡಿಕೊಳ್ಳಲು ಅನುಮತಿ ಕೋರಿದೆ. ಭಾರತದಲ್ಲಿ 96 ಲಕ್ಷಕ್ಕೂ ಅಧಿಕ ಜನರಿಗೆ ಕೊರೊನಾ ಸೋಂಕು ತಗಲಿದ್ದು, ಮಾರಣಾಂತಿಕ ಸೋಂಕಿಗೆ ಲಸಿಕೆ ಹುಡುಕುವ ಸ್ಪರ್ಧೆ ಏರ್ಪಟ್ಟಿರುವ ನಡುವೆಯೆ DCGI ಸ್ವೀಕರಿಸಿರುವ ಮೊದಲ ಕೋರಿಕೆ ಇದಾಗಿದೆ.
ಸಾಮಾನ್ಯವಾಗಿ ಲಸಿಕೆ ಉತ್ಪಾದಿಸಲು ಹಾಗೂ ಸಂಶೋಧನೆ ಮತ್ತು ಬಳಕೆಯ ಹಂತವನ್ನು ತಲುಪಲು 10 ವರ್ಷಗಳವರೆಗೆ ತೆಗೆದುಕೊಳ್ಳುತ್ತದೆ. ಆದರೆ ಫಿಜರ್ ಮತ್ತು ಬಯೋಎಂಡೆಕ್ ಅಭಿವೃದ್ಧಿಪಡಿಸಿದ ಈ ಕೊರೊನಾ ವೈರಸ್ ಲಸಿಕೆ ಕೇವಲ ಹತ್ತು ತಿಂಗಳಿನಲ್ಲಿ ತಯಾರಾಗಿದೆ. ವಿಶ್ವದಲ್ಲೇ ಅತ್ಯಂತ ಕಡಿಮೆ ಅವಧಿಯಲ್ಲಿ ತಯಾರಾದ ಲಸಿಕೆ ಇದಾಗಿದೆ.
ಇದನ್ನೂ ಓದಿ: ಪ್ರಯೋಗಾರ್ಥ ಕೊರೊನಾ ಲಸಿಕೆ ತೆಗೆದುಕೊಂಡಿದ್ದ ಹರಿಯಾಣ ಆರೋಗ್ಯ ಸಚಿವನಿಗೆ ಕೊರೊನಾ ಪಾಸಿಟಿವ್!