ಮೃತದೇಹದೊಂದಿಗಿನ ಸಂಭೋಗ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 ಅಥವಾ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) ಅಡಿಯಲ್ಲಿ ಅತ್ಯಾಚಾರವಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್ ಹೇಳಿದೆ.
ಮೃತದೇಹದೊಂದಿಗಿನ ಸಂಭೋಗ ಅತ್ಯಂತ ಭಯಾನಕ ಕೃತ್ಯವಾಗಿದರೂ, ಐಪಿಸಿ ಸೆಕ್ಷನ್ 363, 376(3) ಹಾಗೂ 2012ರ ಪೋಕ್ಸೊ ಕಾಯ್ದೆಯ ಸೆಕ್ಷನ್ 6 ರಡಿ ಆರೋಪಿಯನ್ನು ಶಿಕ್ಷೆಗೆ ಗುರಿಪಡಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ಬಿಭು ದತ್ತಾ ಗುರು ಅವರ ಪೀಠ ತಿಳಿಸಿದೆ.
ಈ ಎರಡೂ ಕಾನೂನು ಸಂತ್ರಸ್ತೆ ಜೀವಂತವಾಗಿದ್ದರೆ ಮಾತ್ರ ಅನ್ವಯವಾಗಲಿದೆ ಎಂದು ಕೋರ್ಟ್ ವಿವರಿಸಿದೆ.
ಅಪ್ರಾಪ್ತೆಯೊಬ್ಬರನ್ನು ಅಪಹರಿಸಿ ಅತ್ಯಾಚಾರ ಮತ್ತು ಆಕೆಯ ಹತ್ಯೆಯ ನಂತರವೂ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣವೊಂದರಲ್ಲಿ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣ ಆರೋಪಿಗಳಾದ ನಿತಿನ್ ಯಾದವ್ ಹಾಗೂ ನೀಲಕಂಠ ನಾಗೇಶ ಎಂಬವರು ಐಪಿಸಿ ಹಾಗೂ ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಶಿಕ್ಷೆ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ನಿತಿನ್ ಯಾದವ್‌ನನ್ನು ಅತ್ಯಾಚಾರ, ಅಪಹರಣ ಹಾಗೂ ಕೊಲೆ ಪ್ರಕರಣದಲ್ಲಿ ದೋಷಿ ಎಂದಿದ್ದ ಕೆಳ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸಾಕ್ಷ್ಯ ನಾಶ ಹಾಗೂ ದಾರಿ ತಪ್ಪಿಸುವ ಹೇಳಿಕೆ ನೀಡಿದ ಅಪರಾಧಕ್ಕೆ ನಾಗೇಶ್‌ಗೆ 7 ವರ್ಷಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಇದೇ ಪ್ರಕರಣದಲ್ಲಿ ಮೃತದೇಹದೊಂದಿಗೆ ಸಂಭೋಗ ನಡೆಸಿದ ನಾಗೇಶ್ ಅವರ ಕೃತ್ಯವು ಅತ್ಯಾಚಾರ ಎಂದು ಪರಿಗಣಿಸಲಾಗದು ಎಂದು ಕೆಳ ನ್ಯಾಯಲಯ ತೀರ್ಪು ನೀಡಿದ್ದರೂ, ಪ್ರಾಸಿಕ್ಯೂಷನ್ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು.
ಐಪಿಸಿಯ ಸೆಕ್ಷನ್ 376 ರ ಅಡಿಯಲ್ಲಿ ಮೃತದೇಹದೊಂದಿಗಿನ ಸಂಭೋಗ ಅತ್ಯಾಚಾರವನ್ನು ಎಂದು ವರ್ಗೀಕರಿಸದಿದ್ದರೂ, ಸಂವಿಧಾನದ 21ನೇ ವಿಧಿಯು ಘನತೆಯಿಂದ ಸಾಯುವ ಹಕ್ಕನ್ನು ನೀಡಿದೆ. ಹಾಗಾಗಿ, ಮೃತದೇಹದ ಮೇಲಿನ ಅತ್ಯಾಚಾರ ತಪ್ಪು ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.
ಆದರೆ, ಹೈಕೋರ್ಟ್ ಪ್ರಾಸಿಕ್ಯೂಷನ್‌ನ ಆಕ್ಷೇಪಣೆಯನ್ನು ಒಪ್ಪಿಲ್ಲ. ಕಾನೂನಿನ ಪ್ರಕಾರ, ನಾಗೇಶ್ ಮೇಲೆ ಅತ್ಯಾಚಾರದ ಅಪರಾಧ ಹೊರಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ. ಹೈಕೋರ್ಟ್ ತೀರ್ಪಿನಿಂದ ಅಪರಾಧಿ ನಾಗೇಶ್ ಮೇಲೆ ಅತ್ಯಾಚಾರ ಆರೋಪ ಹೊರಿಸಲು ಸಾಧ್ಯವಿಲ್ಲ. ಆತನಿಗೆ ಸಾಕ್ಷ್ಯ ನಾಶ ಹಾಗೂ ದಾರಿ ತಪ್ಪಿಸುವ ಹೇಳಿಕೆ ನೀಡಿದ ಆಪರಾಧದಲ್ಲಿ ಕೆಳ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಮುಂದುವರಿಯಲಿದೆ.
ಬಾರ್ & ಬೆಂಚ್
ಇದನ್ನೂ ಓದಿ : ಛತ್ತೀಸ್‌ಗಢ ಸರ್ಕಾರದಿಂದ ಪ್ರತಿ ತಿಂಗಳು ₹1000 ಪಡೆಯುತ್ತಿರುವ ನಟಿ ಸನ್ನಿ ಲಿಯೋನ್!


