ಲೈಂಗಿಕ ಕೆಲಸವನ್ನು “ವೃತ್ತಿ” ಎಂದು ಗುರುತಿಸುವ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್ ನೀಡಿದೆ. ಈ ವೃತ್ತಿಯಲ್ಲಿರುವವರು ಘನತೆಯಿಂದ ಬದುಕುವುದಕ್ಕೆ, ಕಾನೂನಿನಡಿಯಲ್ಲಿ ಸಮಾನ ರಕ್ಷಣೆಗೆ ಅರ್ಹರಾಗಿದ್ದಾರೆ ಎಂದು ತಿಳಿಸಿದೆ.
ವಯಸ್ಕ ಮತ್ತು ಒಪ್ಪಿಗೆಯ ಲೈಂಗಿಕ ಕಾರ್ಯಕರ್ತರ ವಿರುದ್ಧ ಪೊಲೀಸರು ಮಧ್ಯಪ್ರವೇಶಿಸಬಾರದು ಅಥವಾ ಕ್ರಿಮಿನಲ್ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
“ವೃತ್ತಿಯ ಹೊರತಾಗಿಯೂ, ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಸಂವಿಧಾನದ 21ನೇ ಪರಿಚ್ಛೇದದ ಅಡಿಯಲ್ಲಿ ಗೌರವಯುತವಾದ ಜೀವನ ನಡೆಸುವ ಹಕ್ಕನ್ನು ಹೊಂದಿದ್ದಾರೆ ಎಂದು ಹೇಳಬೇಕಾಗಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಲೈಂಗಿಕ ಕೆಲಸಕ್ಕೆ ವೃತ್ತಿ ಮಾನ್ಯತೆ
“ಲೈಂಗಿಕ ಕಾರ್ಯಕರ್ತರು ಕಾನೂನಿನ ಸಮಾನ ರಕ್ಷಣೆಗೆ ಅರ್ಹರಾಗಿದ್ದಾರೆ. ‘ವಯಸ್ಸು’ ಮತ್ತು ‘ಸಮ್ಮತಿಯ’ ಆಧಾರದ ಮೇಲೆ ಕ್ರಿಮಿನಲ್ ಕಾನೂನು ನಿರ್ಧರಿತವಾಗುತ್ತದೆ. ಲೈಂಗಿಕ ಕಾರ್ಯಕರ್ತೆಯರು ವಯಸ್ಕರಾಗಿದ್ದು, ಒಪ್ಪಿಗೆಯೊಂದಿಗೆ ಇದರಲ್ಲಿ ತೊಡಗಿದ್ದಾರೆಂದು ಸ್ಪಷ್ಟವಾದಾಗ, ಪೊಲೀಸರು ಮಧ್ಯಪ್ರವೇಶಿಸುವಂತಿಲ್ಲ ಅಥವಾ ಯಾವುದೇ ಕ್ರಿಮಿನಲ್ ಕ್ರಮಗಳನ್ನು ತೆಗೆದುಕೊಳ್ಳುವಂತಿಲ್ಲ” ಎಂದು ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠವು ಆದೇಶ ಹೊರಡಿಸಿದೆ.
“ಯಾವುದೇ ವೇಶ್ಯಾಗೃಹದ ಮೇಲೆ ದಾಳಿ ನಡೆದಾಗ ಲೈಂಗಿಕ ಕಾರ್ಯಕರ್ತೆಯರನ್ನು ಬಂಧಿಸಬಾರದು, ದಂಡ ವಿಧಿಸಬಾರದು, ಕಿರುಕುಳ ನೀಡಬಾರದು ಅಥವಾ ಬಲಿಪಶು ಮಾಡಬಾರದು. ಏಕೆಂದರೆ ಸ್ವಯಂಪ್ರೇರಿತ ಲೈಂಗಿಕ ಕೆಲಸ ಕಾನೂನುಬಾಹಿರವಲ್ಲ. ಆದರೆ ವೇಶ್ಯಾಗೃಹವನ್ನು ನಡೆಸುವುದು ಕಾನೂನುಬಾಹಿರವಾಗಿದೆ” ಎಂದು ಕೋರ್ಟ್ ಹೇಳಿದೆ.
ಮಹಿಳೆಯೊಬ್ಬಳು ಲೈಂಗಿಕ ಕಾರ್ಯಕರ್ತೆಯಾಗಿದ್ದಾಳೆಂಬ ಕಾರಣಕ್ಕೆ ಆಕೆಯ ಮಗುವನ್ನು ತಾಯಿಯಿಂದ ಬೇರ್ಪಡಿಸಬಾರದು ಎಂದು ನ್ಯಾಯಾಲಯ ಹೇಳಿದೆ. “ಮಾನವನ ಸಭ್ಯತೆ ಮತ್ತು ಘನತೆಯ ಮೂಲಭೂತ ರಕ್ಷಣೆಯು ಲೈಂಗಿಕ ಕಾರ್ಯಕರ್ತರು ಹಾಗೂ ಅವರ ಮಕ್ಕಳಿಗೂ ವಿಸ್ತರಿಸುತ್ತದೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇದಲ್ಲದೆ, ಅಪ್ರಾಪ್ತ ವಯಸ್ಕ ಮಗು ವೇಶ್ಯಾಗೃಹದಲ್ಲಿ ಅಥವಾ ಲೈಂಗಿಕ ಕಾರ್ಯಕರ್ತರೊಂದಿಗೆ ವಾಸಿಸುತ್ತಿರುವುದು ಕಂಡುಬಂದರೆ, ಮಗುವನ್ನು ಕಳ್ಳಸಾಗಣೆ ಮಾಡಲಾಗಿದೆ ಎಂದು ಭಾವಿಸಬಾರದು ಎಂದು ಕೋರ್ಟ್ ತಿಳಿಸಿದೆ.
“ಒಂದು ವೇಳೆ ಲೈಂಗಿಕ ಕಾರ್ಯಕರ್ತೆಯು ತನ್ನ ಮಗ/ಮಗಳು ಎಂದು ಹೇಳಿಕೊಂಡರೆ, ಅವರು ಹೇಳುತ್ತಿರುವುದು ನಿಜವೇ ಎಂದು ನಿರ್ಧರಿಸಲು ಪರೀಕ್ಷೆಗಳನ್ನು ಮಾಡಬಹುದು. ನಿಜವಾಗಿದ್ದಲ್ಲಿ ಅಪ್ರಾಪ್ತ ಮಗುವನ್ನು ಬಲವಂತವಾಗಿ ಬೇರ್ಪಡಿಸಬಾರದು” ಎಂದು ನ್ಯಾಯಾಲಯ ಆದೇಶಿಸಿದೆ.
ವೈದ್ಯಕೀಯ-ಕಾನೂನು ಆರೈಕೆ
ವಿಶೇಷವಾಗಿ ಲೈಂಗಿಕ ಸ್ವರೂಪದ ಕ್ರಿಮಿನಲ್ ದೂರು ದಾಖಲಿಸುವ ಲೈಂಗಿಕ ಕಾರ್ಯಕರ್ತೆಯರ ವಿರುದ್ಧ ತಾರತಮ್ಯ ಎಸಗಬಾರದು ಎಂದು ನ್ಯಾಯಾಲಯವು ಪೊಲೀಸರಿಗೆ ಆದೇಶಿಸಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಲೈಂಗಿಕ ಕಾರ್ಯಕರ್ತೆಯರಿಗೆ ತಕ್ಷಣದ ವೈದ್ಯಕೀಯ-ಕಾನೂನು ಆರೈಕೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸೂಚಿಸಿದೆ.
ಇದನ್ನೂ ಓದಿರಿ: ‘ದ್ವೇಷ ಭಾಷಣ’: ಕೇರಳದ ಮಾಜಿ ಶಾಸಕ ಪಿ ಸಿ ಜಾರ್ಜ್‌ಗೆ 14 ದಿನಗಳ ನ್ಯಾಯಾಂಗ…
ಕಾನೂನಿನ ಹೊರತಾಗಿಯೂ, ಟ್ರಾನ್ಸ್‌ಜೆಂಡರ್ ಸಮುದಾಯವು ತಾರತಮ್ಯ ಮತ್ತು ನಿಂದನೆಯನ್ನು ಎದುರಿಸುತ್ತಿದೆ ಎಂಬುದನ್ನು ಗಮನಿಸಿರುವ ಸರ್ವೋಚ್ಚ ನ್ಯಾಯಾಲಯ, “ಲೈಂಗಿಕ ಕಾರ್ಯಕರ್ತರ ವಿರುದ್ಧ ಪೊಲೀಸರ ವರ್ತನೆ ಸಾಮಾನ್ಯವಾಗಿ ಕ್ರೂರ ಮತ್ತು ಹಿಂಸಾತ್ಮಕವಾಗಿರುತ್ತದೆ” ಎಂದಿದೆ.
“ಲೈಂಗಿಕ ಕಾರ್ಯಕರ್ತರ ಗುರುತನ್ನು ಬಹಿರಂಗ ಪಡಿಸಬಾರದು. ಬಂಧನ, ದಾಳಿ ಮತ್ತು ರಕ್ಷಣಾ ಕಾರ್ಯಾಚರಣೆಗಳ ಸಂದರ್ಭದಲ್ಲಿ ಬಲಿಪಶುಗಳ ಅಥವಾ ಆರೋಪಿಗಳ ಗುರುತನ್ನು ಬಹಿರಂಗಪಡಿಸಲು ಕಾರಣವಾಗುವ ಯಾವುದೇ ಫೋಟೋಗಳನ್ನು ಪ್ರಕಟಿಸದಂತೆ ಅಥವಾ ಪ್ರಸಾರ ಮಾಡದಂತೆ ಮಾಧ್ಯಮಗಳು ಹೆಚ್ಚಿನ ಕಾಳಜಿ ವಹಿಸಬೇಕು” ಎಂದು ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಇರುವ ‘ವಾಯೂರಿಸಂ ಕ್ರಿಮಿನಲ್ ಅಪರಾಧ’ವನ್ನು ಕೋರ್ಟ್ ಉಲ್ಲೇಖಿಸಿದೆ.
ಕಾಂಡೋಮ್ ಬಳಕೆಯಂತಹ ಕ್ರಮಗಳನ್ನು ಪೊಲೀಸರು ಲೈಂಗಿಕ ಕಾರ್ಯಕರ್ತರ ‘ಅಪರಾಧ’ದ ಪುರಾವೆಯಾಗಿ ನೋಡುವಂತಿಲ್ಲ. ಕೇಂದ್ರ ಮತ್ತು ರಾಜ್ಯಗಳು ಕಾನೂನುಗಳನ್ನು ಸುಧಾರಿಸಲು ಲೈಂಗಿಕ ಕಾರ್ಯಕರ್ತರು ಅಥವಾ ಅವರ ಪ್ರತಿನಿಧಿಗಳನ್ನು ಒಳಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.


