ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಧೀಶರು ಅವಲೋಕನಗಳನ್ನು ಮಾಡುವಾಗ ಜಾಗರೂಕರಾಗಿರಬೇಕು ಎಂದು ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ. 2024 ರಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಮಾರ್ಚ್ 11 ರಂದು ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿದ ಆದೇಶದ ಬಗ್ಗೆ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಅಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ಈ ಹೇಳಿಕೆ ನೀಡಿದೆ. ಲೈಂಗಿಕ ದೌರ್ಜನ್ಯ
2024ರ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡುವಾಗ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್, ಪ್ರಕರಣದಲ್ಲಿ ”ಮಹಿಳೆಯೆ ಸಮಸ್ಯೆಯನ್ನು ಮೈಗೆಳೆದುಕೊಂಡಿದ್ದಾರೆ” ಎಂದು ಎಂದು ಹೇಳಿದ್ದು, ಅವರ ವಿರುದ್ಧ ನಡೆದ ಅಪರಾಧಕ್ಕೆ ಅವರೇ ಕಾರಣರಾಗಿದ್ದಾರೆ ಎಂದು ಇತ್ತೀಚೆಗೆ ಹೇಳಿದ್ದರು.
ಪ್ರತಿ ಪ್ರಕರಣದ ಸಂಗತಿಗಳನ್ನು ಅವಲಂಬಿಸಿ ಜಾಮೀನು ನೀಡುವುದು ನ್ಯಾಯಾಧೀಶರ ವಿವೇಚನೆಯಾಗಿದ್ದರೂ, ದೂರುದಾರರ ವಿರುದ್ಧ ಅನಗತ್ಯ ಅವಲೋಕನಗಳನ್ನು ತಪ್ಪಿಸಬೇಕು ಎಂದು ಮಂಗಳವಾರ ಸುಪ್ರೀಂಕೋರ್ಟ್ ಹೇಳಿದೆ.
“ಈಗ ಇನ್ನೊಬ್ಬ ನ್ಯಾಯಮೂರ್ತಿ ಮತ್ತೊಂದು ಆದೇಶ ನೀಡಿದ್ದಾರೆ. ಆರೋಪಿಗೆ ಜಾಮೀನು ನೀಡುವುದು ತಪ್ಪೇನಲ್ಲ, ಆದರೆ ‘ಮಹಿಳೆಯೆ ತೊಂದರೆ ಮೈಗೆಳೆದುಕೊಂಡಿದ್ದಾಳೆ’ ಎಂಬ ಚರ್ಚೆ ಏಕೆ ಮಾಡಬೇಕು? ವಿಶೇಷವಾಗಿ ಈ ಕಡೆಯಿಂದ [ನ್ಯಾಯಾಧೀಶರು] ಅಂತಹ ವಿಷಯಗಳನ್ನು ಹೇಳುವಾಗ ಜಾಗರೂಕರಾಗಿರಬೇಕು.” ಎಂದು ನ್ಯಾಯಮೂರ್ತಿ ಗವಾಯಿ ಹೇಳಿದ್ದಾರೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
“ಸಂಪೂರ್ಣ ನ್ಯಾಯ ದೊರಕಿಸಿಕೊಡುವುದು ಮಾತ್ರವಲ್ಲ, ನ್ಯಾಯ ದೊರಕಿಸಿಕೊಟ್ಟಿದ್ದೇವೆ ಎಂದು ಕೂಡಾ ಕಾಣುವಂತಿರಬೇಕು. ಸಾಮಾನ್ಯ ವ್ಯಕ್ತಿಯೊಬ್ಬ ಅಂತಹ ಆದೇಶಗಳನ್ನು ಹೇಗೆ ಗ್ರಹಿಸುತ್ತಾರೆ ಎಂಬುದನ್ನು ಸಹ ನೋಡಬೇಕಾಗುತ್ತದೆ” ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಹೇಳಿದ್ದಾರೆ.
ಹೆಣ್ಣು ಮಗುವಿನ ಎದೆಗಳನ್ನು ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರವಲ್ಲ. ಅದು ವಿವಸ್ತ್ರಗೊಳಿಸಿ ಹಲ್ಲೆ ನಡೆಸುವ ಅಪರಾಧ ಎಂದು ಹೇಳಿದ್ದ ಅಲಹಾಬಾದ್ ಹೈಕೋರ್ಟ್‌ನ ಮತ್ತೊಂದು ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿತ್ತು.
2021 ರಲ್ಲಿ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಹೊತ್ತಿರುವ ಇಬ್ಬರು ವ್ಯಕ್ತಿಗಳ ವಿರುದ್ಧ ವಿಚಾರಣೆ ನಡೆಸಿ ಮಾರ್ಚ್ 17 ರಂದು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ಅವರು ಈ ಅವಲೋಕನಗಳನ್ನು ಮಾಡಿದ್ದರು.
ಭಾರತೀಯ ದಂಡ ಸಂಹಿತೆಯಡಿಯಲ್ಲಿ ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿಯಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಅಡಿಯಲ್ಲಿ ವಿಚಾರಣೆಗೆ ಹಾಜರಾಗಲು ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯ ನ್ಯಾಯಾಲಯವು ಈ ಇಬ್ಬರು ವ್ಯಕ್ತಿಗಳಿಗೆ ಸಮನ್ಸ್ ನೀಡಿತ್ತು. ದೂರನ್ನು ಮೇಲ್ನೋಟಕ್ಕೆ ತೆಗೆದುಕೊಂಡರೂ ಅದು ಅತ್ಯಾಚಾರ ಯತ್ನದ ಅಪರಾಧವಾಗುವುದಿಲ್ಲ ಎಂದು ವಾದಿಸಿ ಅವರು ಸಮನ್ಸ್ ಅನ್ನು ಪ್ರಶ್ನಿಸಿದ್ದರು.
ಭಾರತೀಯ ದಂಡ ಸಂಹಿತೆಯಡಿಯಲ್ಲಿ ವಿವಸ್ತ್ರಗೊಳ್ಳುವ ಉದ್ದೇಶದಿಂದ ಹಲ್ಲೆ ನಡೆಸಿದ್ದಕ್ಕಾಗಿ ಮತ್ತು ಪೋಕ್ಸೊ ಕಾಯ್ದೆಯಡಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ವಿಚಾರಣೆ ನಡೆಸುವಂತೆ ಹೈಕೋರ್ಟ್ ಸೂಚಿಸಿತ್ತು. ಈ ರೀತಿಯ ಪ್ರಕರಣದಲ್ಲಿ ಕಡಿಮೆ ಶಿಕ್ಷೆ ವಿಧಿಸಲಾಗುತ್ತದೆ.
ಅದಾಗ್ಯೂ, ಮಾರ್ಚ್ 26 ರಂದು ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತ್ತು. ನ್ಯಾಯಮೂರ್ತಿಗಳಾದ ಬೇಲಾ ತ್ರಿವೇದಿ ಮತ್ತು ಪ್ರಸನ್ನ ಬಿ. ವರಾಳೆ ಅವರ ಮತ್ತೊಂದು ಪೀಠವು ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದ ಒಂದು ದಿನದ ನಂತರ ಪೀಠವು ಸ್ವಯಂಪ್ರೇರಿತವಾಗಿ ಈ ವಿಷಯವನ್ನು ಪರಿಗಣಿಸಿತ್ತು.
ಈ ವೇಳೆ ಹೈಕೋರ್ಟ್‌ನ ಅವಲೋಕನಗಳು “ಆಘಾತಕಾರಿ” ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಮಂಗಳವಾರ ನಡೆದ ವಿಚಾರಣೆಯ ನಂತರ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಒಂದು ತಿಂಗಳ ಕಾಲ ಮುಂದೂಡಿತು. ಲೈಂಗಿಕ ದೌರ್ಜನ್ಯ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಅತ್ಯಾಚಾರಕ್ಕೆ ಸಂತ್ರಸ್ತೆಯನ್ನೆ ಹೊಣೆಯಾಗಿಸಿದ ಅಲಹಾಬಾದ್ ಹೈಕೋರ್ಟ್!

