ತಿರುವನಂತಪುರಂ: ಪಾಲಕ್ಕಾಡ್ ಜಿಲ್ಲೆಯಲ್ಲಿ ಧೀರ್ಘ ಕಾಲದ ಹಿಂದುತ್ವದ ಮುಖವಾಣಿ ಮತ್ತು ಕೇರಳದ ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿರುವ ಕೃಷ್ಣ ಕುಮಾರ್ ವಿರುದ್ಧ ಮಹಿಳೆಯೊಬ್ಬರು ಗಂಭೀರ ಲೈಂಗಿಕ ದೌರ್ಜನ್ಯ ಆರೋಪವನ್ನು ಹೊರಿಸಿದ್ದಾರೆ. ಸಂತ್ರಸ್ತ ಮಹಿಳೆಯು ಕೇರಳ ರಾಜ್ಯ ಬಿಜೆಪಿಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರಿಗೆ ನೀಡಿದ ದೂರಿನಲ್ಲಿ ಹಲವು ವರ್ಷಗಳ ಹಿಂದೆ ಲೈಂಗಿಕ ದೌರ್ಜನ್ಯ ನಡೆದಿರುವ ಆರೋಪವನ್ನು ಮಾಡಿದ್ದಾರೆ.
ಇಷ್ಟು ಮಾತ್ರವಲ್ಲದೆ ಎಲಮಕ್ಕರ್‌ನಲ್ಲಿರುವ ಆರೆಸ್ಸೆಸ್ ರಾಜ್ಯ ಕಚೇರಿಯನ್ನು ಪ್ರತಿನಿಧಿಸುವ ಗೋಪಾಲನ್ ಕುಟ್ಟಿಯವರನ್ನು ಸಂಪರ್ಕಿಸಿದ್ದೇನೆ ಎಂದು ಸಂತ್ರಸ್ತೆಯು ಹೇಳಿದ್ದಾರೆ. ಆಗಿನ ಸಂಘಟನಾ ಪ್ರಧಾನ ಕಾರ್ಯದರ್ಶಿ ಸುಭಾಷ್, ಎಂ.ಟಿ.ರಮೇಶ್ ಮತ್ತು ವಿ.ಮುರಳೀಧರನ್ ಅವರಿಗೂ ದೂರನ್ನು ಸಲ್ಲಿಸಿದ್ದೇನೆ ಎಂದಿದ್ದಾರೆ.
ಈ ಎಲ್ಲ ನಾಯಕರು ಕಠಿಣ ಕ್ರಮ ತಗೆದುಕೊಳ್ಳುವ ಮತ್ತು ತನಗೆ ನ್ಯಾಯವನ್ನು ಒದಗಿಸುವ ಭರವಸೆ ನೀಡಿದ್ದಾರೆ. ಇಷ್ಟಾಗಿಯೂ ಇಲ್ಲಿಯವರೆಗೆ ಆರೋಪಿಯ ವಿರುದ್ಧ ಯಾವುದೇ ಕ್ರಮವನ್ನು ತಗೆದುಕೊಂಡಿಲ್ಲ ಮತ್ತು ನನ್ನ ದೂರನ್ನು ನಿರ್ಲಕ್ಷಿಸಲಾಗಿದೆ ಎಂದು ಸಂತ್ರಸ್ತೆ ಹೇಳಿದ್ದಾರೆ.
ಆಕೆ ತಾನು ಅವಮಾನಿತಳಾಗಿ ಮತ್ತು ಕೈಬಿಡಲ್ಪಟ್ಟಂತೆ ಭಾಸವಾಯಿತು ಎಂದು ಹೇಳಿದ್ದಾರೆ. ದೂರಿನಲ್ಲಿ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧದ ಆರೋಪಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಮತ್ತು ಕೃಷ್ಣಕುಮಾರ್‌ಗೆ ರಾಹುಲ್ ವಿರುದ್ಧ ಪ್ರತಿಭಟನೆಗಳನ್ನು ಮುನ್ನಡೆಸಲು ನೈತಿಕ ಅಧಿಕಾರವಿಲ್ಲ ಎಂದು ದೃಢಪಡಿಸಲಾಗಿದೆ. ಆಕೆ ಕೃಷ್ಣಕುಮಾರ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಕೃಷ್ಣಕುಮಾರ್ ಆರೋಪಗಳನ್ನು ತಳ್ಳಿಹಾಕಿದರು, “ಇದು ನನ್ನ ಪತ್ನಿಯ ಸಹೋದರಿಯನ್ನು ಒಳಗೊಂಡ ಆಸ್ತಿ ವಿವಾದವಷ್ಟೇ. ಇದು ಅವರ ಹಕ್ಕುಗಳನ್ನು ಬಲಪಡಿಸಲು ಸೃಷ್ಟಿಸಲಾದ ಸುಳ್ಳು ಪ್ರಕರಣವಾಗಿದೆ” ಎಂದು ಹೇಳಿದರು.
ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ದ ತಾನು ನಡೆಸುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕುವ ಉದ್ದೇಶದಿಂದ ಈ ದೂರು ಮತ್ತೆ ಸಕ್ರಿಯಗೊಂಡಿದೆ ಎಂದು ಅವರು ದೃಢಪಡಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಒಕ್ಕೂಟದ ಭಾಗವಾಗಿರುವ, ಮಾಜಿ ಬಿಜೆಪಿ ನಾಯಕ ಮತ್ತು ಈಗಿನ ಕಾಂಗ್ರೆಸ್ ವಕ್ತಾರರಾದ ಸಂದೀಪ್ ಜಿ. ವಾರಿಯರ್ ಈ ಪಿತೂರಿಯಲ್ಲಿ ಸೇರಿರುವ ಸಾಧ್ಯತೆಯಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂದೀಪ್ ವಾರಿಯರ್, “ಇದು ಆಸ್ತಿ ವಿವಾದವಲ್ಲ, ಇದು ಸಂಪೂರ್ಣ ಆಸ್ತಿ ಕಿತ್ತುಕೊಳ್ಳುವುದು ಆಗಿದೆ” ಎಂದು ಹೇಳಿದರು. ವಾರಿಯರ್ ಮಾತನಾಡುತ್ತಾ, ಪ್ರಧಾನಮಂತ್ರಿಯ ಕಚೇರಿಯು ಏಪ್ರಿಲ್ 22, 2025 ರಂದು ಕೃಷ್ಣಕುಮಾರ್ ವಿರುದ್ಧ ತನಿಖೆಗೆ ಆದೇಶಿಸಿದೆ, ಇದು ಎಸ್‌ಪಿ ಕಚೇರಿಯಲ್ಲಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಮತ್ತು ಕೃಷ್ಣಕುಮಾರ್‌ನ ಹೇಳಿಕೆಗೆ ವಿರುದ್ಧವಾಗಿ, ಲೈಂಗಿಕ ಕಿರುಕುಳ ಪ್ರಕರಣವು ಖುಲಾಸೆಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಆತ ಮುಂದುವರೆದು, “ಸಂತ್ರಸ್ತಳು ಎಲ್ಲರಿಗೂ ಒಂದು ಆಶಾಕಿರಣವಾಗಿದ್ದಾಳೆ. ಆಕೆ ಕಾನೂನು ಓದಿ, ತನ್ನದೇ ಪ್ರಕರಣವನ್ನು ಹೋರಾಡಲು ವಕೀಲೆಯಾದಳು” ಎಂದು ಹೇಳಿದರು. ಆಕೆಯ ಗುರುತನ್ನು ಬಹಿರಂಗಪಡಿಸಿದ್ದಕ್ಕಾಗಿ ಕೃಷ್ಣಕುಮಾರ್ ವಿರುದ್ಧವೂ ಪ್ರಕರಣ ದಾಖಲಿಸಬೇಕೆಂದು ಅವರು ಒತ್ತಾಯಿಸಿದರು.
ಆಕೆಯ ಧೈರ್ಯದ ಹೊರತಾಗಿಯೂ, ಸಂತ್ರಸ್ತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಅವಮಾನಿಸಲಾಗುತ್ತಿದೆ ಮತ್ತು ಕಿರುಕುಳ ನೀಡಲಾಗುತ್ತಿದೆ ಎಂದು ಆತ ಹೇಳಿದರು. “ಆಕೆ ಹೋರಾಡಲು ಮುಂದೆ ಬಂದಿದ್ದರೆ, ಆಕೆಯೊಂದಿಗೆ ನಿಲ್ಲುವುದು ಕೇರಳ ಸರಕಾರದ ಜವಾಬ್ದಾರಿಯಾಗಿದೆ” ಎಂದು ವಾರಿಯರ್ ಒತ್ತಿಹೇಳಿದರು.
ಬಿಜೆಪಿಯ ಕೋರ್ ಕಮಿಟಿಯ ಸದಸ್ಯರ ವಿರುದ್ಧ ಕಾಂಗ್ರೆಸ್ ಪಕ್ಷವು ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಮಾಡಿದಂತೆ ಕ್ರಮ ಕೈಗೊಳ್ಳುತ್ತದೆಯೇ ಎಂದು ಪ್ರಶ್ನಿಸುವ ಸಂದೇಶವನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಸೂಚ್ಯವಾಗಿ ಪೋಸ್ಟ್ ಮಾಡಿದ್ದಾರೆ.
ಕೇರಳದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಆರೋಪಗಳ ನಂತರ ಬಿಜೆಪಿಯ ವಿರುದ್ಧ ಎಕ್ಸ್‌ನಲ್ಲಿ ತೀವ್ರವಾಗಿ ವಾಗ್ದಾಳಿ ನಡೆಸಿತು.
ಬಿಜೆಪಿ ರಾಜ್ಯಾಧ್ಯಕ್ಷರ ಕಚೇರಿಯು ದೂರನ್ನು ಸ್ವೀಕರಿಸಿದ್ದನ್ನು ದೃಢಪಡಿಸಿತು, ಬೆಂಗಳೂರಿನಲ್ಲಿರುವ ಕೇರಳ ಬಿಜೆಪಿಯ ರಾಜ್ಯಾಧ್ಯಕ್ಷ ಚಂದ್ರಶೇಖರ್ ಅವರು, ತಾನು ವಾಪಸಾದ ನಂತರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ದುರಂತವೆಂದರೆ, ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರ ಹೇಳಿಕೆಯು “ನಿಷ್ಕ್ರಿಯ ಬಾಂಬ್” ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಗರು ಕೃಷ್ಣಕುಮಾರ್‌ಗೆ ಬೆಂಬಲವಾಗಿ ಒಗ್ಗೂಡಿದ್ದು, ಈ ಆರೋಪವನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ, ಕೃಷ್ಣಕುಮಾರ್‌ಗೆ ಬೆಂಬಲ ಸೂಚಿಸುವ ಪೋಸ್ಟರ್‌ಗಳು ಪಾಲಕ್ಕಾಡ್ ನಗರದಲ್ಲಿ ರಾರಾಜಿಸುತ್ತಿವೆ. ಈ ಘಟನೆಯು ಈ ಚುನಾವಣಾ ಕಣವನ್ನು ಮತ್ತಷ್ಟು ರಂಗೇರಿಸಿದೆ.
ಕೇರಳದಲ್ಲಿ ಇತ್ತೀಚೆಗೆ ಲೈಂಗಿಕ ಕಿರುಕುಳ ಆರೋಪಗಳು ರಾಜಕೀಯ ವಲಯದಲ್ಲಿ ತೀವ್ರ ಬಿರುಗಾಳಿ ಎಬ್ಬಿಸಿವೆ. ಈ ಬಿರುಗಾಳಿ ಕಾಂಗ್ರೆಸ್ ಪಕ್ಷದ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರ ಸುತ್ತ ಸುತ್ತಿಕೊಂಡಿದೆ. ಬಿಜೆಪಿ ಈ ವಿಷಯವನ್ನು ತೀವ್ರವಾಗಿ ಖಂಡಿಸಿದೆ. ಹಲವಾರು ಮಹಿಳೆಯರು ಮಾಂಕೂಟತ್ತಿತ್ತಿಲ್ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದ್ದಾರೆ. ಈ ವಿಷಯವು ರಾಜ್ಯದಲ್ಲಿ ರಾಜಕೀಯ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ತೀವ್ರ ಆಕ್ರೋಶಕ್ಕೆ ಒಳಗಾದ ಕಾಂಗ್ರೆಸ್ ಪಕ್ಷ ಮಾಂಕೂಟತ್ತಿಲ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ.
ಅಸ್ಸಾಂನಲ್ಲಿ ಬಂಗಾಳಿ ಭಾಷಿಕರ ಪರಿಸ್ಥಿತಿ ಭೀಕರ: ಸತ್ಯಶೋಧನಾ ವರದಿ ಬಿಡುಗಡೆ


