ಭಾರತ ಸಂವಿಧಾನದ 21ನೇ ವಿಧಿಯು ಬದುಕುವ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದು ಹೇಳುತ್ತದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಈ ದೇಶದ ಪ್ರತಿಯೊಬ್ಬರಿಗೂ ಈ ಹಕ್ಕಿನ ಖಾತರಿಯಾಗಿದೆಯೇ ಎಂದು ಗಮನಿಸಿದರೆ, ನಿರಾಸೆ ಮೂಡುತ್ತದೆ. ಅದರಲ್ಲೂ ಮಹಿಳೆಯರು ಇಲ್ಲಿ ತಮ್ಮ ’ಬದುಕನ್ನು ಬದುಕುತ್ತಿದ್ದಾರೆ’ ಎಂದು ಯಾರೂ ಕೂಡಾ ಪ್ರಾಮಾಣಿಕವಾಗಿ ಹೇಳಲು ಸಾಧ್ಯವಿಲ್ಲ. ಇಂತಹ ಹಲವು ಕತೆಗಳನ್ನು ಕೇರಳದಲ್ಲಿ ಹೇಮಾ ಸಮಿತಿ ಬಿಚ್ಚಿಟ್ಟಿದೆ. ನಮ್ಮ ಸಮಾಜದ ಮುಖ್ಯವಾಹಿನಿಯ ಮಹಿಳೆಯರ ಮೇಲೆಯೆ ಈ ರೀತಿಯಾದ ದೌರ್ಜನ್ಯ ನಡೆಯುತ್ತಿದ್ದರೆ, ಕೇರಳದ ಖ್ಯಾತ ನಟರು ಎನಿಸಿಕೊಂಡ ’ಪುರುಷರು’ ಎಲ್ಲರೂ ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳಲು ಶುರು ಮಾಡಿದ್ದಾರೆ. ಎಂದಿನಂತೆ ತಮ್ಮ ಡ್ಯಾಮೇಜ್ ಕಂಟ್ರೋಲ್ ಮೋಡ್‌ಗೆ ಹೋಗಿ ಚಿತ್ರರಂಗದ ಗೌರವ ಹಾಳಾಗುತ್ತಿದೆ ಎಂದು ಸುಳ್ಳುಸುಳ್ಳೇ ಆರೋಪಿಸುತ್ತಿದ್ದಾರೆ. ಆದರೆ ಸಂತ್ರಸ್ತ ಮಹಿಳೆಗೆ ನ್ಯಾಯ ಕೊಡಬೇಕು ಎಂಬ ಪ್ರಜ್ಞಾವಂತಿಕೆಯ ಮಾತನ್ನು ಗಟ್ಟಿಯಾಗಿ ಆಡುತ್ತಿಲ್ಲ. ಇದು ವಿಶ್ವದ ಯಶಸ್ವಿ ಮತ್ತು ಪ್ರಗತಿಪರ ಚಿತ್ರರಂಗ ಎನಿಸಿಕೊಂಡ ಮಲಯಾಳಂ ಚಿತ್ರರಂಗದ ಅವ್ಯವಸ್ಥೆ.
ಕೇರಳದಲ್ಲಿ ಹೇಮಾ ಸಮಿತಿ ವರದಿಯ ವಿಚಾರಗಳು ಬಹಿರಂಗಗೊಂಡು ಖ್ಯಾತನಾಮರು ಎಂದೆನಿಸಿಕೊಂಡ ಹಿರಿಯ ನಟರ ದೌರ್ಜನ್ಯದ ವಿಚಾರಗಳು ಬಹಿರಂಗಗೊಂಡು, ಅವರು ಈವರಗೆ ಕಟ್ಟಿಕೊಂಡ ’ಗಣ್ಯ’ರು ಎಂಬ ಬಿರುದುಗಳು ದಪದಪನೇ ಉದುರಿಬೀಳುತ್ತಿವೆ. ಇತ್ತ ಕನ್ನಡ ಚಿತ್ರರಂಗದಲ್ಲೂ ಹೇಮಾ ಸಮಿತಿ ಮಾದರಿಯ ಸಮಿತಿ ರಚನೆಯಾಗಬೇಕು ಎಂಬ ಚರ್ಚೆ ಪ್ರಾರಂಭವಾಗಿದೆ. ಅದಕ್ಕಾಗಿ ಕನ್ನಡ ಚಿತ್ರರಂಗದ ’ಫೈರ್’ ಸಂಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದೆ. ಈ ವೇಳೆಗೆ ಚರ್ಚೆಯ ಬಿಸಿ ಹೆಚ್ಚಾಗಿ ಮಹಿಳಾ ಆಯೋಗ ಕರ್ನಾಟಕ ಫಿಲ್ಮ್ ಚೇಂಬರ್‌ನಲ್ಲಿ ಸಭೆ ಕೂಡಾ ನಡೆಸಿದೆ. ಆದರೆ ಈ ಸಭೆಯಲ್ಲಿ ನಿರ್ಮಾಪಕರು, ಕೆಲಸದ ಸ್ಥಳಗಳಲ್ಲಿ ಇರಬೇಕಾದ ಆಂತರಿಕ ಸಮಿತಿಗಳ ರಚನೆ ಮಾಡುವುದಕ್ಕೆ ಕೂಡಾ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೆಲಸದ ಸ್ಥಳಗಳಲ್ಲಿ ಆಂತರಿಕ ಸಮಿತಿಗಳ ರಚನೆ ಮಾಡುವುದು ಲೈಂಗಿಕ ಕಿರುಕುಳ ತಡೆಗಟ್ಟುವಿಕೆ (PoSH) ಕಾಯಿದೆಯ ಪ್ರಕಾರ ಕಡ್ಡಾಯವಾಗಿದೆ. ಆದರೆ ಇಷ್ಟಕ್ಕೆ ಕನ್ನಡ ಚಿತ್ರರಂಗದ ನಿರ್ಮಾಪಕರು ಇಂತಹ ಸಮಿತಿ ರಚನೆಯಾದರೆ ಚಿತ್ರರಂಗ ಹಾಳಾಗಿ ಹೋಗುತ್ತದೆ, ಆರ್ಥಿಕ ನಷ್ಟವಾಗುತ್ತದೆ ಎಂದು ಹೇಳುತ್ತಾ ಅಸಂಬದ್ಧ ಮತ್ತು ಯಾವುದೇ ಲಾಜಿಕ್ ಇಲ್ಲದೆ ವಾದ ಮಂಡಿಸುತ್ತಿದ್ದಾರೆ.
ಅದರಲ್ಲೂ ಮುಖ್ಯವಾಗಿ, ಕನ್ನಡ ಚಿತ್ರರಂಗದಲ್ಲಿ ಇಂತಹ ಘಟನೆ ನಡೆದೇ ಇಲ್ಲ, ಇದು ಕನ್ನಡ ಚಿತ್ರರಂಗದ ಮೇಲೆ ನಡೆಯುತ್ತಿರುವ ದಾಳಿ ಎಂಬಂತೆ ಬಿಂಬಿಸುತ್ತಿದ್ದಾರೆ. ಮಹಿಳೆಯರ ಸಮಸ್ಯೆಯನ್ನು ಪರಿಹರಿಸಲು ಸೇರಿದ ಈ ಸಭೆಯಲ್ಲಿ ಇದ್ದಿದ್ದು ಕೇವಲ 15 ನಟಿಯರಷ್ಟೆ ಎಂದು ವರದಿಗಳು ಉಲ್ಲೇಖಿಸಿದ್ದವು. ಅಲ್ಲದೆ ಭಾಗವಹಿಸಿದ ಮಹಿಳೆಯರ ಮಾತನ್ನು ಕೂಡಾ ಯಾರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ವರದಿಯಾಗಿದೆ. ಅದರಲ್ಲೂ ಒಬ್ಬ ಮಹಿಳೆ ಕನ್ನಡ ಚಿತ್ರರಂಗದಲ್ಲಿ ಇಂತಹ ಘಟನೆ ನಡೆದೇ ಇಲ್ಲ ಎಂಬಂತೆ ಮಾತನಾಡಿದ್ದಾರೆ ಎಂದು ಸಭೆಯ ಭಾಗವಾಗಿದ್ದ ವ್ಯಕ್ತಿಯೊಬ್ಬರು ನಾನುಗೌರಿ.ಕಾಂಗೆ ಹೇಳಿದರು. ಆದಾಗ್ಯೂ, ಈ ಸಭೆಯ ನಂತರ ಮಾತನಾಡಿದ ನಟಿಯೊಬ್ಬರು ತೀರಾ ಇತ್ತಿಚೆಗೆ ಖ್ಯಾತ ನಿರ್ಮಾಪಕರೊಬ್ಬರು ತನ್ನನ್ನು ’ಗೋವಾ’ಗೆ ಕರೆದಿರುವ ಬಗ್ಗೆ ಮಾಧ್ಯಮಗಳಲ್ಲಿ ಬಹಿರಂಗವಾಗಿ ಹೇಳಿಕೊಂಡರು. ಇಷ್ಟಾಗ್ಯೂ ಕನ್ನಡ ಚಿತ್ರರಂಗದಲ್ಲಿ ಇದು ಯಾವುದೇ ಪ್ರಭಾವ ಬೀರಿಲ್ಲ, ಯಾವುದೇ ತಲ್ಲಣ ಮೂಡಿಸಿಲ್ಲ. ರಾಜ್ಯದ ಪೊಲೀಸರು ನಟಿಯ ಹೇಳಿಕೆ ದಾಖಲಿಸಿ ಸ್ವಯಂಪ್ರೇರಿತ ಕೇಸು ದಾಖಲಿಸಿಲ್ಲ. ಏನೂ ಆಗಿಲ್ಲ ಎಂಬಂತೆ ಚಿತ್ರರಂಗ ಮತ್ತು ನಾಡಿನ ಸಿನಿಪ್ರಿಯರು ಹಾಗೆ ಇದ್ದಾರೆ.
ಹೀಗಿದ್ದರೂ, ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿ ಮೂಡಿಸಿದ ತಲ್ಲಣ ಕನ್ನಡ ಚಿತ್ರರಂಗದಲ್ಲೂ ಪ್ರಭಾವ ಬೀರಿದ್ದು ಸುಳ್ಳಲ್ಲ. ಅದರಲ್ಲೂ ಅಂತಹದ್ದೇ ಸಮಿತಿ ರಚನೆ ಮಾಡಬೇಕು ಎಂಬ ಬೇಡಿಕೆಯನ್ನು ಕನ್ನಡ ಸಿನಿಮಾ ರಂಗದಿಂದಲೂ ಅದರಲ್ಲೂ ಮುಖ್ಯವಾಗಿ ಸಿನಿಮಾ ಕ್ಷೇತ್ರದ ನಟಿಯರು ಎತ್ತಿದ್ದಾರೆ. ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಖ್ಯಾತ ನಟಿ ನೀತು ಶೆಟ್ಟಿ ಅವರು, “ಹೇಮಾ ಸಮಿತಿ ರೀತಿಯಲ್ಲಿ ಕರ್ನಾಟಕದಲ್ಲೂ ಸಮಿತಿಯೊಂದನ್ನು ರಚನೆ ಮಾಡಿ ನಟಿಯರ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಅಧ್ಯಯನ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆವು. ಮೊದಲಿಗೆ ಮಾಧ್ಯಮಗಳು ಈ ಬಗ್ಗೆ ಸಕಾರಾತ್ಮಕ ವರದಿ ಮಾಡಿದ್ದವು. ಆದರೆ ಇದೇ ವೇಳೆ ಕೆಲವು ಮಾಧ್ಯಮಗಳು, ಲೈಂಗಿಕ ದೌರ್ಜನ್ಯದ ವಿರುದ್ಧ ಈಗಾಗಲೆ ಸುಪ್ರೀಂಕೋರ್ಟ್‌ನ ನಿರ್ದೇಶನಗಳು ಹಾಗೂ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕಾಯಿದೆ (PoSH) ಇವೆಯಲ್ಲವೆ? ಹೊಸ ಸಮಿತಿ ಯಾಕೆ ಎಂದು ಕೇಳತೊಡಗಿದರು. ಆದರೆ ಸಮಿತಿಯ ವರದಿಯಿಂದ ಆಗುವ ನಷ್ಟವೇನು? ಇವರಿಗೆ ಭಯ ಯಾಕೆ” ಎಂದು ಅವರು ಪ್ರಶ್ನಿಸುತ್ತಾರೆ.
“ಇತ್ತೀಚೆಗೆ ನಡೆದ ಫಿಲ್ಮ್ ಚೇಂಬರ್ ಮತ್ತು ಮಹಿಳಾ ಆಯೋಗದ ಸಭೆಯಲ್ಲಿ ಕೂಡ PoSH ಕಾಯಿದೆಯ, ’ಕೆಲಸದ ಸ್ಥಳಗಳಲ್ಲಿ ಆಂತರಿಕ ಸಮಿತಿಗಳ ರಚನೆ’ ಮಾಡುವುದಕ್ಕೂ ನಿರ್ಮಾಪಕರು ಒಪ್ಪುತ್ತಿಲ್ಲ. ಅದಕ್ಕೆ ತುಂಬಾ ಕ್ಷುಲ್ಲಕ ಕಾರಣಗಳನ್ನು ನೀಡುತ್ತಾ, ಕನ್ನಡ ಚಿತ್ರರಂಗಕ್ಕೆ ನಷ್ಟ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಅಂದರೆ ಇವರು ನೀಡುವ ಸಂದೇಶ ಏನು? ಮಹಿಳೆಯರಿಗೆ ದೌರ್ಜನ್ಯ ಆದರೂ ಪರವಾಗಿಲ್ಲ, ಚಿತ್ರರಂಗಕ್ಕೆ ಆರ್ಥಿಕ ನಷ್ಟ ಮಾತ್ರ ಆಗಬಾರದು ಎಂದೆ? ಈ ಸಭೆಯ ನಂತರ, ನಾವು ಯಾಕೆ ಹೋರಾಟ ಮಾಡಬೇಕು ಎಂದು ನಮಗೆ ಮತ್ತಷ್ಟು ಸ್ಪಷ್ಟತೆ ಬಂದಿದೆ. ಅಷ್ಟಕ್ಕೂ ಲೈಂಗಿಕ ದೌರ್ಜನ್ಯ ವಿರೋಧಿ ಕಾಯಿದೆ ಬಂದರೆ ಏನು ಸಮಸ್ಯೆಯಾಗುತ್ತದೆ? ನಾವು ಯಾರದ್ದೋ ತೇಜೋವಧೆ ಮಾಡುವುದಾಗಲಿ, ನಮ್ಮ ಕೈಗೆ ಅಧಿಕಾರ ಕೊಡಿ ಎಂದಾಗಲಿ ಎಂದು ಕೇಳುತ್ತಿಲ್ಲ. ಚಿತ್ರರಂಗದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ನೀಡಿ ಎಂದಷ್ಟೇ ಕೇಳುತ್ತಿದ್ದೇವೆ, ಮಹಿಳಾ ನಟರಿಗೆ ನೀಡುವ ವೇತನ ಸೇರಿದಂತೆ ಎಲ್ಲಾ ವಿಚಾರದಲ್ಲೂ ಸಮಾನತೆ ಬರುವಂತೆ ಆಗಲಿ ಎಂದು ಕೇಳುತ್ತಿದ್ದೇವೆ. ಇದರಲ್ಲಿ ತಪ್ಪೇನಿದೆ? ಮತ್ತು ಇದಕ್ಕೆ ವಿರೋಧ ಯಾಕೆ ವ್ಯಕ್ತವಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ನೀತು ಹೇಳಿದರು.

“ಇತ್ತೀಚೆಗೆ ನಮ್ಮ ತಂಡವೊಂದು ಹೊಸ ವಿಷಯವೊಂದನ್ನು ತೆಗೆದುಕೊಂಡು ಸಿನಿಮಾ ಮಾಡುವಂತೆ ನನ್ನನ್ನು ಕೇಳಿಕೊಂಡಾಗ, ಈ ಬಗ್ಗೆ ಚರ್ಚಿಸಲು ಖ್ಯಾತ ನಿರ್ಮಾಪಕರೊಬ್ಬರ ಬಳಿ ಕತೆ ಹೇಳಲು 15 ನಿಮಿಷ ಸಮಯ ಕೇಳಿದ್ದೆ. ಅವರಿಗೆ ಕತೆ ಕೇಳಲು ಇಷ್ಟವಿಲ್ಲ ಎಂದರೆ, ಈಗ ಸಿನಿಮಾ ಮಾಡುವ ಆಸಕ್ತಿ ಇಲ್ಲ ಎಂದು ಹೇಳಿ ನಿರಾಕರಿಸಬಹುದಿತ್ತು. ಆದರೆ ಅವರು ಹೇಳಿದ್ದು, ’ಇವೆಲ್ಲಾ ಬಿಡು, ನೀನು ನನ್ ಜೊತೆ ಗೋವಾಕ್ಕೆ ಬಾ’ ಎಂದು! ಅವರಿಗೆ ಎಷ್ಟು ಧೈರ್ಯ ಇರಬಹುದು ಈ ಹೇಳಿಕೆ ನೀಡಲು. ನಾನು ರಾಜ್ಯ ಪ್ರಶಸ್ತಿ ವಿಜೇತೆ ಕನ್ನಡದ ಕಲಾವಿದೆ, ಈವರೆಗೂ ಯಾವುದೇ ದೌರ್ಜನ್ಯ ಸಹಿಸಿ ಕೂತಿಲ್ಲ. ಅಲ್ಲದೆ, ನಾನು ಅವರ ವಿರುದ್ಧ ತಿರುಗಿ ಬೀಳಬಲ್ಲೆ ಎಂದೂ ಕೂಡಾ ಅವರಿಗೆ ಗೊತ್ತಿದೆ. ಆದರೂ ನನ್ನೊಂದಿಗೆ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದರೆ, ಇನ್ನು ಹೊಸದಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುವ ಮಹಿಳೆಯರ ಜೊತೆಗೆ ಇವರು ಹೇಗೆ ನಡೆದುಕೊಳ್ಳಬಹುದು?” ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.
“ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಹೀಗೆ ಇರುವುದಿಲ್ಲ ಎಂದು ಹೇಳಬಹುದು. ಆದರೆ ಇದು ಪ್ರಚಲಿತ ಸಮಸ್ಯೆ ಅಲ್ಲವೆ? ಕೇವಲ ದೈಹಿಕವಾಗಿ ತೊಂದರೆ ನೀಡಿದರೆ ಮಾತ್ರ ದೌರ್ಜನ್ಯವಲ್ಲ. Verbal exploitation ಕೂಡಾ ಲೈಂಗಿಕ ದೌರ್ಜನ್ಯವೇ ಆಗಿದೆ. ಅವರು ಈ ಮೂಲಕ ಮಹಿಳೆಯನ್ನು ಕೀಳಾಗಿ ಕಂಡು, ಮಹಿಳೆಯರು ಅಂದರೆ ಇದಕ್ಕಷ್ಟೆ ಸೀಮಿತ ಎಂಬಂತೆ ನೋಡುತ್ತಿದ್ದಾರೆ. ಇವೆಲ್ಲವೂ ನಿಲ್ಲಬೇಕು. ಮಹಿಳಾ ಆಯೋಗ ಮತ್ತು ಫಿಲ್ಮ್ ಚೇಂಬರ್ ನಡುವೆ ನಡೆದ ಸಭೆಯಲ್ಲೂ ಆಯೋಗದ ಅಧ್ಯಕ್ಷರು ಮಹಿಳೆಯರಿಗೆ ಚಿತ್ರರಂಗದಲ್ಲಿ ಕೆಲಸ ಕೊಡಲು ಲೈಂಗಿಕವಾಗಿ ಬಳಸಿಕೊಳ್ಳುವ ಸಂಪ್ರದಾಯ ನಿಲ್ಲಬೇಕು ಎಂದು ಮುಖ್ಯವಾಗಿ ಹೇಳಿದ್ದಾರೆ. ಅದಕ್ಕಾಗಿಯೇ ಚಿತ್ರರಂಗದಲ್ಲಿ PoSH ಬರಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ನಮ್ಮ ಬೇಡಿಕೆ ಇರುವುದು PoSHನ ಆಂತರಿಕ ಸಮಿತಿಯಲ್ಲ. ಅದು ಇದ್ದರೆ ಈ ಸಮಿತಿಯಲ್ಲೂ ದೌರ್ಜನ್ಯ ನಡೆಸುವವರೆ ಸೇರಿಕೊಂಡು ಮತ್ತೆ ಅದೇ ನಡೆಯುತ್ತದೆ. ನಮ್ಮ ಬೇಡಿಕೆ ಹೇಮಾ ಸಮಿತಿ ಮಾದರಿಯ ಸಮಿತಿ ರಚನೆ ಮಾಡುವುದು; ಅದನ್ನು ಸರ್ಕಾರವೇ ನಿಷ್ಪಕ್ಷಪಾತವಾಗಿ ರಚಿಸಿ ವಿಚಾರಣೆಯಾಗಬೇಕು. ನನ್ನ ಹೋರಾಟ ಮಹಿಳಾ ಸ್ನೇಹಿ ಕನ್ನಡ ಚಿತ್ರರಂಗ. ಗಂಡಸು ಎಂಬ ದುರಹಂಕಾರದಲ್ಲಿ, ನಾನು ಹೀಗೆಯೆ ಮಾತನಾಡುವುದು ಎಂಬಂತೆ ಮಾಡನಾಡುವುದು ನಿಲ್ಲಬೇಕು. ಮಹಿಳೆಯರು ಈ Verbal ಅಥವಾ ಫಿಸಿಕಲ್ ದೌರ್ಜನ್ಯವನ್ನು ಏಕೆ ಸಹಿಸಿಕೊಳ್ಳಬೇಕು? ಯಾವುದೇ ಶಿಸ್ತು ಇಲ್ಲದೆ, ವೃತ್ತಿಪರವಲ್ಲದ ಮಾತುಗಳು ಚಿತ್ರರಂಗದಲ್ಲಿ ನಿಲ್ಲಬೇಕಿದೆ” ಎಂದು ಹೇಳಿದರು.

ನ್ಯಾಯಪಥ ಪತ್ರಿಕೆಯೊಂದಿಗೆ ನಾತಿಚರಾಮಿ ಖ್ಯಾತಿಯ ಚಿತ್ರ ನಿರ್ದೇಶಕ ಮಾನ್ಸೋರೆ ಮಾತನಾಡಿ, “ನಮ್ಮ ಬೇಡಿಕೆ ಹೇಮಾ ಸಮಿತಿಯಂತಹ ಸಮಿತಿ ರಚನೆ ಮಾಡಿ ಎಂಬುದಾಗಿದೆ, ಅದರಲ್ಲಿ ಯಾವುದೇ ತಪ್ಪಿಲ್ಲ. ಅಂತಹ ಸಮಿತಿ ಮಾಡಲು ಸರ್ಕಾರಕ್ಕೆ ಚಿತ್ರರಂಗದ ಸುಮಾರು 150 ಜನರು ಸಹಿ ಹಾಕಿ ಬೇಡಿಕೆ ಸಲ್ಲಿಸಿದ್ದೇವೆ. ಆದರೆ, ಅಂತಹ ಸಮಿತಿ ರಚಿಸಲು ಫಿಲ್ಮ್ ಚೇಂಬರ್ ಒಪ್ಪಿಗೆಯನ್ನು ಸರ್ಕಾರ ಯಾಕೆ ಕೇಳಬೇಕು ಎಂಬುವುದು ನನಗೆ ಅರ್ಥವಾಗುತ್ತಿಲ್ಲ. ಉದಾಹರಣೆಗೆ, ಮನೆಯೊಂದರ ಮಹಿಳೆಯರು ನಮ್ಮ ಮೇಲೆ ದೌರ್ಜನ್ಯ ನಡೆದಿದೆ, ಅದರ ಬಗ್ಗೆ ತನಿಖೆ ನಡೆಸಿ ಎಂದು ದೂರು ನೀಡಿದರೆ, ಈ ತನಿಖೆ ನಡೆಸಲು ಮನೆಯ ಯಜಮಾನನ ಜೊತೆಗೆ ಒಪ್ಪಿಗೆ ಕೇಳುವುದು ಸರಿಯಾದ ವ್ಯವಸ್ಥೆಯೆ? ಅಷ್ಟೆ ಅಲ್ಲದೆ, ವಾಣಿಜ್ಯ ಮಂಡಳಿ ಇದಕ್ಕೆ ವಿರೋಧ ಯಾಕೆ ಮಾಡುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಆರ್ಥಿಕ ನಷ್ಟ ಆಗುತ್ತದೆ ಎಂದು ಹೇಳುವುದಾದರೆ ಇಲ್ಲೇನೋ ತಪ್ಪು ನಡೆದಿದೆ ಎಂದೇ ಅರ್ಥ ಅಲ್ಲವೆ? ಅಷ್ಟಕ್ಕೂ ಚೇಂಬರ್‌ಗೆ ಲಾಸ್ ಆಗುತ್ತದೆ ಎಂದಾದರೆ ರೇಣುಕಾ ಸ್ವಾಮಿ ಪ್ರಕರಣದಲ್ಲಿ 5 ಲಕ್ಷ ಪರಿಹಾರದ ಹಣ ಯಾಕೆ ಕೊಟ್ಟಿದ್ದಾರೆ? ಅದು ನಷ್ಟ ಅಲ್ಲವೆ? ಅಂದರೆ ಅವರಿಗೊಂದು ನ್ಯಾಯ ಚಿತ್ರರಂಗದ ಮಹಿಳೆಯರಿಗೆ ಒಂದು ನ್ಯಾಯವೆ? PoSH ಆಂತರಿಕ ಸಮಿತಿ ರಚಿಸಿದರೆ ನಷ್ಟ ಎನ್ನುವುದು ತೀರಾ ಅವಾಸ್ತವಿಕ” ಎಂದು ಹೇಳಿದರು.
ಇದನ್ನೂ ಓದಿ: ಕೇರಳದ ಹೇಮಾ ಸಮಿತಿಯಂತೆ ಕರ್ನಾಟಕದಲ್ಲೂ ಸಮಿತಿ ರಚಿಸಿ : ಸಿಎಂಗೆ FIRE ಆಗ್ರಹ
ನಿರ್ದೇಶಕಿ ಮತ್ತು ನಿರ್ಮಾಪಕಿ ಕವಿತಾ ಲಂಕೇಶ್ ಮಾತನಾಡಿ, “ಮಹಿಳಾ ಆಯೋಗ ಮತ್ತು ಫಿಲ್ಮ್ ಚೇಂಬರ್ ನಡುವೆ ಸಭೆಯ ವೇಳೆ ಯಾವುದೇ ಮಹಿಳೆಯರಿಗೆ ಮಾತನಾಡಲು ಅವಕಾಶ ನೀಡಿಲ್ಲ. ಕನ್ನಡ ಚಿತ್ರರಂಗದಲ್ಲಿ ಮಹಿಳಾ ದೌರ್ಜನ್ಯ ನಡೆದೇ ಇಲ್ಲ ಎಂದು ಸಭೆಯಲ್ಲಿ ಬಿಂಬಿಸಲು ನೋಡಿದ್ದಾರೆ. ಆದರೆ ಇವೆಲ್ಲವೂ ಸುಳ್ಳು. ಆದರೆ ಈ ಬಗ್ಗೆ ಯಾರೂ ಧ್ವನಿ ಎತ್ತಿಲ್ಲ, ಅಷ್ಟೆ. ಯಾಕೆಂದರೆ ಸಂತ್ರಸ್ತ ಮಹಿಳೆಯನ್ನೆ ಆರೋಪಿಯನ್ನಾಗಿ ಮಾಡುವುದು, ಅವರ ಚಾರಿತ್ರ್ಯವಧೆ ಮಾಡುವುದು ನಡೆಯುತ್ತಲೇ ಇರುವ ವಿದ್ಯಮಾನ. ಆದರೆ ಹೇಮಾ ಸಮಿತಿ ಮಾದರಿಯ ಸಮಿತಿ ಇದ್ದರೆ ಈ ತನಿಖೆ ಗುಪ್ತವಾಗಿ ನಡೆದು, ಚಿತ್ರರಂಗದ ಅನಾಚಾರಗಳು ಹೊರಗೆ ಬರುತ್ತವೆ. ಇದು ಕೇವಲ ನಾಯಕ ನಟಿಯರ ವಿಚಾರ ಮಾತ್ರವಲ್ಲ, ಚಿತ್ರರಂಗದಲ್ಲಿ ಕೆಲಸ ಮಾಡುವ ನಿರ್ದೇಶಕಿಯರು, ಜೂನಿಯರ್ ಕಲಾವಿದೆಯರು, ತಾಂತ್ರಿಕವಾಗಿ ಕೆಲಸ ಮಾಡುವ ಮಹಿಳೆಯರ ಮೇಲೆ ಕೂಡಾ ದೌರ್ಜನ್ಯ ನಡೆಯುತ್ತಿದೆ. ಇದನ್ನು ಕೇಳಿಸಿಕೊಳ್ಳುವ ಕಿವಿಗಳು ಕೂಡಾ ಈಗ ಇಲ್ಲ. ನಮ್ಮ ಬೇಡಿಕೆ ಕೇವಲ ದೌರ್ಜನ್ಯ ಮಾತ್ರವಲ್ಲ, ಚಿತ್ರರಂಗದಲ್ಲಿ ಇರುವ ಮಹಿಳೆಯರಿಗೆ ನೀಡುವ ಸೌಲಭ್ಯದ ಸಮಸ್ಯೆಗಳ ಬಗ್ಗೆ ಕೂಡಾ ಕೇಳುತ್ತಿದ್ದೇವೆ. ನೃತ್ಯ ಮಾಡಲು ನೂರಾರು ಮಹಿಳೆಯರು ಬಂದಿರುತ್ತಾರೆ. ಅವರಿಗೆ ಸರಿಯಾದ ಶೌಚಾಲಯದ ವ್ಯವಸ್ಥೆ ಕೂಡಾ ಇರುವುದಿಲ್ಲ. ಇವನ್ನೆಲ್ಲಾ ಕೇಳಬೇಕು ಅಲ್ಲವೆ. ಮಹಿಳೆಯರು ಮೂಲಭೂತ ಹಕ್ಕನ್ನು ಕೇಳುವುದು ಕೂಡಾ ತಪ್ಪೇ” ಎಂದು ಕೇಳಿದರು.

“ಮಹಿಳೆಯ ಮೇಲೆ ದೌರ್ಜನ್ಯ ನಡೆದಿದೆ ಎಂದರೆ ಫಿಲ್ಮ ಚೇಂಬರ್ ಲಾಭನಷ್ಟದ ಬಗ್ಗೆ ಮಾತನಾಡುತ್ತಿದೆ. ಅದರೆ ಇದು ಲಾಭನಷ್ಟದ ವಿಚಾರವಲ್ಲ. ಮಹಿಳೆಯರ ಘನತೆಯ ವಿಚಾರ. ಈ ನಿರ್ಮಾಪಕರು ಎಷ್ಟು ಭಯ ಬಿದ್ದಿದ್ದಾರೆ ಎಂದರೆ, ಈ ಸಮಿತಿ ಅಗಲೇಬಾರದು ಎಂದು ನಡುಕ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಆದರೆ ಈ ಭಯ ಯಾಕೆ ಎಂದು ನನಗೆ ತಿಳಿಯುತ್ತಿಲ್ಲ. ಮಹಿಳೆಯರಿಗೆ ಒಳ್ಳೆಯದಾಗುವ ಒಂದು ವಿಚಾರಕ್ಕೆ ಪುರುಷ ನಿರ್ಮಾಪಕರಿಗೆ ಭಯ ಯಾಕೆ ಎಂಬುವುದು ನನ್ನ ಪ್ರಶ್ನೆ. ಹೇಮಾ ಸಮಿತಿ ಮಾದರಿಯ ಸಮಿತಿ ನಮ್ಮಲ್ಲೂ ಆಗಬೇಕು, ಅದು ಆದರೆ ನಮ್ಮ ಚಿತ್ರರಂಗಕ್ಕೆ ಲಾಭವಿದೆ, ಚಿತ್ರರಂಗ ಬೆಳೆಯುತ್ತದೆ. ಈ ಬೇಡಿಕೆಯನ್ನು ನಾವು ನಾಲ್ಕು ವರ್ಷಗಳಿಂದ ಮಾಡುತ್ತಲೇ ಬರುತ್ತಿದ್ದೇವೆ. ಅಲ್ಲದೆ ನಮ್ಮ ಫೈರ್ ಸಂಘಟನೆಗೆ ಮಹಿಳೆಯರಿಂದ ಹಲವು ದೂರುಗಳು ಕೂಡಾ ಬಂದಿದ್ದವು. ನಾವು ವೈಯಕ್ತಿಕವಾಗಿ ಇವುಗಳನ್ನು ನಿಭಾಯಿಸುವುದಕ್ಕಿಂತ, ಸರ್ಕಾರವೆ ಅದನ್ನು ವಹಿಸಿಕೊಂಡರೆ ಅದಕ್ಕೊಂದು ಅಧಿಕೃತತೆ ಇರುತ್ತದೆ” ಎಂದು ಹೇಳಿದರು.
ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಮಾತನಾಡಿ, “ಕನ್ನಡ ಚಿತ್ರರಂಗ ಸೇರಿದಂತೆ ಭಾರತದ ಯಾವುದೇ ಚಿತ್ರರಂಗ ನಿಯಂತ್ರಣವಿಲ್ಲದೆ ವ್ಯಾಪಾರಿ ಉದ್ದೇಶದಿಂದ ಮತ್ತು ಲಾಭದ ಉದ್ದೇಶದಿಂದ ನಡೆಯುತ್ತಿದೆ. ಈ ಉದ್ಯಮದಲ್ಲಿ ನಿರ್ಮಾಪಕರ, ನಿರ್ದೇಶಕರ, ಕಲಾವಿದರ ಸಂಘಗಳು ಇವೆ. ಅಲ್ಲದೆ, ಫಿಲ್ಮ್ ಚೇಂಬರ್ ಕೂಡಾ ಇದೆ. ಇವೆಲ್ಲವೂ ಅವರ ಒಳಿತಿಗಾಗಿ ಇರುವ ಸಂಘಟನೆಗಳಾಗಿವೆ. ಆದರೆ ಈ ಚಿತ್ರರಂಗದಲ್ಲಿ ಯಾವುದಾದರೂ ಮಹಿಳೆ ತನ್ನ ಮೇಲೆ ಅನ್ಯಾಯ ಆಗಿದೆ ಎಂದರೆ, ಚಿತ್ರರಂಗದ ’ದೊಡ್ಡ’ ವ್ಯಕ್ತಿಗಳು ಇವರ ಮೇಲೆ ದಾಳಿ ಮಾಡಿ ಅವರ ಬಾಯಿ ಮುಚ್ಚಿಸುತ್ತಾರೆ. ಇಡೀ ಘಟನೆಗೆ ಅವರೇ ಕಾರಣ ಎಂಬಂತೆ ಬಿಂಬಿಸಿ ಅವರ ಮೇಲೆಯೆ ವ್ಯವಸ್ಥೆ ತಿರುಗಿಬೀಳುವಂತೆ ಮಾಡುತ್ತಾರೆ. ಹಾಗಾಗಿ ಇದರ ವಿರುದ್ಧ ಹೋರಾಡಲು ಒಂದು ಒಗ್ಗಟ್ಟಿನ ಸಂಘಟನೆ ಬೇಕು ಎಂದು 2017ರಲ್ಲಿ ’ಸಮಾನ ಹಕ್ಕುಗಳಿಗಾಗಿ ಚಿತ್ರರಂಗ’(ಫೈರ್)’ ಎಂಬ ಸಂಘಟನೆ ನೋಂದಣಿ ಮಾಡಿದೆವು. ಇದರ ನಂತರ ನಾವು ’ಮಿಟೂ’ ಚಳವಳಿಯ ವೇಳೆ ಕೂಡಾ ನಟಿಯರಿಗೆ ನಮ್ಮ ಸಂಘಟನೆಯಿಂದ ನೈತಿಕ ಬೆಂಬಲ ನೀಡಿದ್ದೆವು. ಕೇರಳದ ಹೇಮಾ ಸಮಿತಿ ಹೊರಬಂದ ನಂತರ, ಇಲ್ಲಿ ಕೂಡಾ ಅದೇ ಮಾದರಿಯ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದ್ದೇವೆ. ಚಿತ್ರರಂಗದ ಒಳಗೆ ಮಹಿಳೆಯರ ಮೇಲೆ ನಡೆಯುತ್ತಿರುವ ದಾಳಿ ಕೇವಲ ಅನೈತಿಕ ಮತ್ತು ಕಾನೂನುಬಾಹಿರ ಮಾತ್ರವಲ್ಲ, ಮಾನವ ಘನತೆಯ ಮೇಲೆ ನಡೆಯುತ್ತಿರುವ ದಾಳಿ ಅದು. ನಮ್ಮ ಚಿತ್ರರಂಗ ಕೂಡಾ ಆರೋಗ್ಯಕರ ಚಿತ್ರರಂಗ ಆಗಬೇಕು ಎಂಬ ಉದ್ದೇಶದಿಂದ ಈ ಒತ್ತಾಯ ಮಾಡುತ್ತಿದ್ದೇವೆ. ಇದನ್ನು ಸರ್ಕಾರ ಮಾಡುತ್ತದೆ ಎಂದು ಭಾವಿಸಿದ್ದೇವೆ” ಎಂದರು.

ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಎಲ್ಲಾ ಕನ್ನಡ ಚಿತ್ರರಂಗದ ವ್ಯಕ್ತಿಗಳು ಆಂತರಿಕ ಸಮಿತಿಯ ಜತೆಗೆ ಹೇಮಾ ಸಮಿತಿ ಮಾದರಿಯಲ್ಲಿ ನಿವೃತ್ತ ಮಹಿಳಾ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಹಲವು ತಜ್ಞರನ್ನು ಸಮಿತಿಗೆ ಸೇರಿಸಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಯಾವುದೇ ಉದ್ಯಮ ಇರಲಿ, ಸಾರ್ವಜನಿಕ ಸ್ಥಳಗಳು ಇರಲಿ, ಮಹಿಳೆಯ ಸುರಕ್ಷತೆಗೆ ಕೆಲಸ ಮಾಡುವುದು ಮತ್ತು ಅವರ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡುವುದು ಸರ್ಕಾರದ ಕರ್ತವ್ಯವಾಗಿದೆ. ಚಿತ್ರರಂಗದಲ್ಲಿ ಮುಕ್ತ ವಾತಾವರಣ ಇದ್ದರೆ ಮಾತ್ರ ಚಿತ್ರರಂಗ ಬೆಳೆಯುತ್ತದೆ. ಹೊಸ ಅಭಿರುಚಿಯ, ಕ್ರಿಯಾಶೀಲರಾಗಿರುವ ಹೊಸಬರು ಚಿತ್ರರಂಗಕ್ಕೆ ಬಂದು ಚಿತ್ರರಂಗಕ್ಕೆ ತಮ್ಮ ಕೊಡುಗೆ ಸಲ್ಲಿಸಬಹುದಾಗಿದೆ. ಸಮಸ್ಯೆಗಳು ಇರುವ ಯಾವುದೇ ಉದ್ಯಮ ಬೆಳೆಯುವುದಿಲ್ಲ. ಆದ್ದರಿಂದ ಸರ್ಕಾರ ಇನ್ನಾದರೂ ಚಿತ್ರರಂಗದ ಇಂತಹ ಧ್ವನಿಗಳಿಗೆ ಮಾನ್ಯತೆ ನೀಡಬೇಕಿದೆ.


