ನವದೆಹಲಿ: ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕಾಯ್ದೆ-2013 ಅನ್ನು ಸಮರ್ಪಕವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಸರಕಾರಿ ಇಲಾಖೆಗಳಲ್ಲಿ ಆಂತರಿಕ ದೂರು ಸಮಿತಿ ರಚಿಸುವಂತೆ ಎಲ್ಲ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಈ ಆಂತರಿಕ ದೂರು ಸಮಿತಿ ರಚಿಸುವ ಸಂಬಂಧ ಕೆಲವು ನಿರ್ದೇಶನಗಳನ್ನು ನೀಡಿರುವ ನ್ಯಾಯಾಧೀಶರಾದ ಬಿ.ವಿ.ನಾಗರತ್ನ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ವಿಭಾಗೀಯ ಪೀಠ ಈ ಕಾಯ್ದೆಯನ್ನು ದೇಶದೆಲ್ಲೆಡೆ ಏಕರೂಪದಲ್ಲಿ ಜಾರಿಗೊಳಿಸಬೇಕು ಎಂದು ಹೇಳಿದೆ.
ಡಿ.31ರ ಪೂರ್ವದಲ್ಲಿ ಎಲ್ಲಾ ರಾಜ್ಯಗಳು ಪ್ರತಿ ಜಿಲ್ಲೆಗೆ ಈ ಆಂತರಿಕ ದೂರು ಸಮಿತಿಗೆ ಸಂಬಂಧಿಸಿ ಒಬ್ಬ ಅಧಿಕಾರಿಯನ್ನು ನೇಮಕಾತಿ ಮಾಡಿರಬೇಕು. ಆ ಅಧಿಕಾರಿಯು ಸ್ಥಳೀಯ ದೂರು ಸಮಿತಿಯನ್ನು ಜ.31ಕ್ಕೆ ಮೊದಲು ರಚನೆ ಮಾಡಿರಬೇಕು, ತಾಲ್ಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿರಬೇಕು ಎಂದು ಸೂಚನೆ ನೀಡಲಾಗಿದೆ.
ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿಯನ್ನು ರಚಿಸಲಾಗಿದೆಯೇ ಎಂಬ ಕುರಿತು ಆಯಾ ಜಿಲ್ಲಾಧಿಕಾರಿಗಳು ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯವು ನಿರ್ದೇಶಿಸಿದೆ.
ಈ ಸುಪ್ರೀಂ ಕೋರ್ಟಿನ ಸೂಚನೆಗಳ ಪಾಲನೆಗೆ ಮಾ.31ರವರೆಗೆ ಸಮಯವನ್ನು ನಿಗಧಿಪಡಿಸಿದೆ. ಸೂಚನೆಗಳನ್ನು ಜಾರಿಗೆ ತರುವ ಕುರಿತು ಸರಕಾರದ ಮುಖ್ಯ ಕಾರ್ಯದರ್ಶಿ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದೆ.
ಮಹಿಳೆಯರ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಆರೋಪಗಳನ್ನು ತನಿಖೆ ಮಾಡಲು ಸಮಿತಿಗಳನ್ನು ಎಲ್ಲ ಸಚಿವಾಲಯ ಹಾಗೂ ಇಲಾಖೆಗಳಲ್ಲಿ ರಚಿಸಲಾಗಿದೆಯೇ ಎಂಬುದನ್ನು ಕಾಲಮಿತಿಯಲ್ಲಿ ಪರಿಶೀಲಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ 2023ರ ಮೇ ನಲ್ಲಿ ನ್ಯಾಯಾಲಯ ಸೂಚಿಸಿತ್ತು. ಇದರ ಜಾರಿಗೆ ಸಂಬಂಧಿಸಿದ ಒಂದು ಅರ್ಜಿಯ ವಿಚಾರಣೆ ನಡೆಸಿದ ಪೀಠವು ಈ ಸೂಚನೆಗಳನ್ನು ನೀಡಿದೆ.
2031ರ ಕಾಯ್ದೆಯ ಜಾರಿಯ ವಿಚಾರದಲ್ಲಿ ದೀರ್ಘ್‌ಕಾಲ ಗಂಭೀರ ಲೋಪಗಳು ಉಳಿದಿವೆ ಎಂದು ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ.
ಇದನ್ನೂ ಓದಿ…ಕದನ ವಿರಾಮ ಮುರಿದ ಇಸ್ರೇಲ್ : ಲೆಬನಾನ್ ಮೇಲೆ ದಾಳಿ ; 11 ಜನರ ಹತ್ಯೆ


