ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬೆಂಗಳೂರಿನ ತ್ಯಾಗರಾಜ ನಗರದ ಖಾಸಗಿ ಶಾಲೆಯೊಂದರ ಮುಖ್ಯಸ್ಥ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗುರಪ್ಪ ನಾಯ್ಡು ವಿರುದ್ದ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ನವೆಂಬರ್ 26ರಂದು ಶಿಕ್ಷಕಿಯೊಬ್ಬರು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವರದಿಗಳ ಪ್ರಕಾರ, “ಶಿಕ್ಷಕಿಯರೂ ಸೇರಿದಂತೆ 75ಕ್ಕೂ ಹೆಚ್ಚು ಮಹಿಳೆಯರು ಗುರಪ್ಪ ನಾಯ್ಡು ಮುಖ್ಯಸ್ಥರಾಗಿರುವ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗುರಪ್ಪ ನಾಯ್ಡು ಕೆಲವು ಶಿಕ್ಷಕಿಯರು, ಸಿಬ್ಬಂದಿಯ ಬೆತ್ತಲೆ ಹಾಗೂ ಅಶ್ಲೀಲ ವಿಡಿಯೊಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಅವುಗಳನ್ನು ತಮ್ಮ ಬಳಿ ಇಟ್ಟುಕೊಂಡು ಹೆದರಿಸುತ್ತಿದ್ದಾರೆ. ಹೇಳಿದಂತೆ ಕೇಳದಿದ್ದರೆ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಹೆಣ್ಣು ಮಕ್ಕಳನ್ನು ಲೈಂಗಿಕ ತೃಷೆಗೆ ಬಳಸಿಕೊಂಡಿದ್ದಾರೆ” ಎಂದು ಶಿಕ್ಷಕಿ ದೂರಿನಲ್ಲಿ ಆರೋಪಿಸಿದ್ದಾರೆ.
“ಗುರಪ್ಪ ನಾಯ್ಡು ವಿರುದ್ದ ಈ ಹಿಂದೆ ದೂರು ನೀಡಲು ಕೆಲವು ಶಿಕ್ಷಕಿಯರು ಹಾಗೂ ಸಿಬ್ಬಂದಿ ನಿರ್ಧಾರ ಮಾಡಿದ್ದೆವು. ಆದರೆ, ಅವರು ಪ್ರಭಾವಿ ಹಾಗೂ ಸ್ಥಿತಿವಂತನೆಂದು ತಿಳಿದು ಸುಮ್ಮನಿದ್ದೆವು” ಎಂದು ದೂರಿನಲ್ಲಿ ಶಿಕ್ಷಕಿ ಉಲ್ಲೇಖಿಸಿದ್ದಾರೆ.
“ಗುರಪ್ಪ ನಾಯ್ಡು ಉದ್ದೇಶಪೂರ್ವಕವಾಗಿಯೇ ಅವರ ಕೊಠಡಿಗೆ ಕರೆಯುವುದು, ಯಾವಾಗ ರೆಡಿ ಆಗುತ್ತೀಯಾ? ಎಂದು ಕೇಳುವುದು, ನನ್ನ ಹಾವಾಭಾವಗಳನ್ನೇ ಗಮನಿಸುವುದು ಮಾಡುತ್ತಾರೆ. ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಲೈಂಗಿಕ ಚಟುವಟಿಕೆಗೆ ಪ್ರಚೋದಿಸಿ ತಮ್ಮ ಕೋಣೆಯಲ್ಲಿ ಕೈಹಿಡಿದು ಎಳೆದಾಡಿದ್ದಾರೆ. ಆ ರೀತಿ ವರ್ತಿಸಬೇಡಿ ಎಂದಾಗ ಕೋಪ ಮಾಡಿಕೊಂಡು ಬೂಟಿನಲ್ಲಿ ಹೊಡೆಯುತ್ತೇನೆಂದು ಬೆದರಿಕೆ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ” ಎಂದು ಶಿಕ್ಷಕಿ ದೂರಿನಲ್ಲಿ ವಿವರಿಸಿದ್ದಾಗಿ ವರದಿಯಾಗಿದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಗುರಪ್ಪ ನಾಯ್ಡು, 2008ರಲ್ಲಿ ಆರ್. ಅಶೋಕ್ ವಿರುದ್ದ ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು.
ಇದನ್ನೂ ಓದಿ : ಮುಸ್ಲಿಮರ ವಿರುದ್ಧ ದ್ವೇಷ ಭಾಷಣ : ಚಂದ್ರಶೇಖರ ಸ್ವಾಮಿ ಮೇಲೆ ಎಫ್ಐಆರ್


