Homeಅಂಕಣಗಳುಪುಟಕ್ಕಿಟ್ಟ ಪುಟಗಳುಲಿಪಿ, ಲಿಪಿಕಾರನ ಇತಿಹಾಸ ಹಿಡಿದಿಡುವ ಷ. ಶೆಟ್ಟರ್ ಅವರ ’ಹಳಗನ್ನಡ’

ಲಿಪಿ, ಲಿಪಿಕಾರನ ಇತಿಹಾಸ ಹಿಡಿದಿಡುವ ಷ. ಶೆಟ್ಟರ್ ಅವರ ’ಹಳಗನ್ನಡ’

- Advertisement -
- Advertisement -

ಬಿಸಿಲಿಳಿದು ಕತ್ತಲಾಗುತ್ತಿದ್ದಾಗ ತಮ್ಮ ಎದುರಿಗೆ ಕುಳಿತಿದ್ದ ಇಬ್ಬರು ಶಾಲಾ ಮಕ್ಕಳಿಗೆ ಪೆನ್, ಪೆನ್ಸಿಲ್ ಮತ್ತು ಸ್ಕೆಚ್ ಪೆನ್ನುಗಳನ್ನು ಕೊಟ್ಟು ಮುಂದೆ ಏನು ಓದುತ್ತೀರಿ ಎಂದು ಇತಿಹಾಸಕಾರ ಷ. ಶೆಟ್ಟರ್ ಕೇಳಿದರು.

ಒಬ್ಬಳು ಹೋಂ ಸೈನ್ಸ್ ಎಂದರೆ, ಮತ್ತೊಬ್ಬಳು ಸೋಶಿಯಲ್ ಸೈನ್ಸ್ ಎಂದಳು. “ನೀವಿಬ್ಬರೂ ಜಾಣರಿದ್ದೀರಿ” ಎಂದು ನಕ್ಕ ಷ. ಶೆಟ್ಟರ್, “ನಾನೊಬ್ಬ ದಡ್ಡ” ಎಂದು ಮಕ್ಕಳಿಗೆ ಹೇಳುತ್ತಿದ್ದರು.

“ಸೈನ್ಸ್ ಮತ್ತು ಕಾಮರ್ಸ್ ಬಹಳ ಜಾಣರು ಮತ್ತು ಜಾಣರು ತೆಗೆದುಕೊಂಡ ಮೇಲೆ, ಇವೆರಡೂ ಸಿಗದಿದ್ದಾಗ ಆರ್ಟ್ಸ್ ತೆಗೆದುಕೊಳ್ಳುವ ದಡ್ಡ ವಿದ್ಯಾರ್ಥಿಗಳಲ್ಲಿ ನಾನೊಬ್ಬನಾಗಿದ್ದೆ. ಹಾಗೇ ನಮ್ಮ ಮನೆಯವರು ಮತ್ತು ನೆರೆಹೊರೆಯವರು ತಿಳಿದುಕೊಂಡಿದ್ದು. ಆದರೆ, ನನಗೆ ಯಾವುದು ಬೇಕೋ ಅದನ್ನೇ ತೆಗೆದುಕೊಂಡಿದ್ದೆ. ಅದಕ್ಕೆ ಸ್ಕೋಪ್ ಇದೆ, ಇದಕ್ಕೆ ಸ್ಕೋಪ್ ಇಲ್ಲ ಎನ್ನುವವರು ದಡ್ಡರು. ನೀವು ಯಾವುದೇ ವಿಷಯವನ್ನು ತೆಗೆದುಕೊಳ್ಳಿ, ಅದರಲ್ಲಿ ಆಳ ಎತ್ತರಗಳಿಗೆ ನೀವು ಹೋಗಬಲ್ಲಿರಿ. ದಡ್ಡರು ತೆಗೆದುಕೊಳ್ಳುವ ಆರ್ಟ್ಸ್ ತೆಗೆದುಕೊಂಡೇ ನಾನು ಸಂಶೋಧನೆಗಳನ್ನು ಮಾಡಿದೆ. ಬಹಳ ಮುಖ್ಯವಾದ ಅಧ್ಯಯನಗಳನ್ನು ಮಾಡಿದೆ. ದೇಶ ವಿದೇಶಗಳನ್ನು ಸುತ್ತಿದೆ. ಚೆನ್ನಾಗಿ ಸಂಪಾದನೆಯನ್ನೂ ಮಾಡಿದೆ. ಮುಖ್ಯವಾಗಿ, ಹೌದು, ಏನೋ ಮಾಡಿದ್ದೇನೆ ಎಂಬ ಆತ್ಮತೃಪ್ತಿ ಇದೆ.”

ಇದು ಷ. ಶೆಟ್ಟರ್ ಲೋಕಾಭಿರಾಮವಾಗಿ ಮಕ್ಕಳೊಂದಿಗೆ ಮಾತಾಡುತ್ತಾ ಇದ್ದದ್ದು.

ಅವರ ಹಳಗನ್ನಡ ಎಂಬ ಕೃತಿಯು ಲಿಪಿ, ಲಿಪಿಕಾರ ಮತ್ತು ಲಿಪಿ ವ್ಯವಸಾಯದ ಸಂಶೋಧನೆ ಮತ್ತು ವಿಸ್ತೃತ ಅಧ್ಯಯನವನ್ನು ಆಸಕ್ತರಿಗೆ ತೆರೆದಿಡುತ್ತದೆ. ಆರಂಭದಲ್ಲಿ ಕೃತಿಯೇ ಹೇಳಿಕೊಳ್ಳುವಂತೆ ಇದು ’ಸಾಹಿತ್ಯ ಚರಿತ್ರೆಯ ಒಂದು ಓದು, ಸಾಮಾಜಿಕ ಚರಿತ್ರೆಯ ಮರು ಓದು’ ಎಂಬುದಂತೂ ನಿಜ. ಅಶೋಕನ ಕಾಲದ ಬ್ರಾಹ್ಮೀಲಿಪಿ ಮತ್ತು ಪ್ರಾಕೃತಭಾಷಾ ಶಾಸನಗಳಿಂದ ಪ್ರಾರಂಭವಾಗುವ ಈ ಅಧ್ಯಯನ, ನಮ್ಮ ದೇಶದ ಪ್ರಪ್ರಥಮ ಲಿಪಿಯನ್ನು ಮತ್ತು ಲಿಪಿಕಾರನಾಗಿರುವ ಚಪಡ ಎಂಬುವನನ್ನು ಕರ್ನಾಟಕದಲ್ಲಿ ಶೆಟ್ಟರ್ ಗುರುತಿಸುತ್ತಾರೆ. ಚಿತ್ರದುರ್ಗ ಜಿಲ್ಲೆಯ ಮೂರು ಸ್ಥಳಗಳಲ್ಲಿ ಅಶೋಕನ ಶಾಸನ ಬರೆದ ಇವನು ಇಂದಿನ ಅಫ್ಘಾನಿಸ್ತಾನಕ್ಕೆ ಸೇರಿದ ಅಂದಿನ ಗಾಂಧಾರ ದೇಶದವನು. ಭರತಖಂಡದ ಲಿಪಿಕಾರರ ಇತಿಹಾಸ ಆರಂಭವಾಗುವುದೇ ಇಲ್ಲಿಂದ, ಇವನಿಂದ ಎನ್ನುತ್ತಾರೆ.

ಡಾ. ಎಂ.ಎಂ ಕಲಬುರ್ಗಿ ಅವರು ಬರೆದ ಮುನ್ನುಡಿಯಲ್ಲಿ ಗಮನಕ್ಕೆ ತರುವಂತೆ, ನಾವು ಶಿಲ್ಪಗಳನ್ನು ಅಭ್ಯಸಿಸಿದ್ದೇವೆ, ಶಿಲ್ಪಿಗಳನ್ನು ಮರೆತಿದ್ದೇವೆ; ಲಿಪಿಯನ್ನು ಅಭ್ಯಸಿಸಿದ್ದೇವೆ, ಲಿಪಿಕಾರರನ್ನು ಮರೆತಿದ್ದೇವೆ ಎಂದು ಎಚ್ಚರಿಸುವ ಶೆಟ್ಟರ್ ನಮ್ಮ ಶಾಸನ ಲಿಪಿಕಾರರನ್ನು ಕುರಿತು ಇನ್ನೊಬ್ಬರು ಕೈಯಿಡದಂತೆ ಪೂರ್ಣ ಅಭ್ಯಾಸವನ್ನು ಪೂರೈಸಿದ್ದಾರೆ.

ಕಳೆದ ನೂರು ವರ್ಷಗಳಿಂದ ಕನ್ನಡನಾಡಿನ ಶಾಸನಗಳನ್ನು ಬಳಸಿಕೊಂಡು ಮರುವ್ಯಾಖ್ಯಾನಗಳನ್ನು ಮಾಡಿ ಹೊಸ ಸಂಶೋಧನೆಯನ್ನು ಮುಂದಿಟ್ಟಿದ್ದಾರೆ. ವಾಸ್ತುಶಿಲ್ಪಿಗಳನ್ನು ಬಿಟ್ಟರೆ ನಮಗೆ ಲಿಪಿಶಿಲ್ಪಿಗಳ ಬಗ್ಗೆ ಒಂದು ಸ್ಥೂಲ ಕಲ್ಪನೆ ಇದೆ. ಇವರನ್ನುದ್ದೇಶಿಸಿ ಬಳಸುತ್ತಿದ್ದ ಓಜ, ಆಚಾರ್ಯ, ತ್ವಷ್ಟ, ವಿಶ್ವಕರ್ಮ ಪದಗಳ ಅರಿವಿದೆ. ಆದರೆ ಈ ಲಿಪಿಶಿಲ್ಪಿಗಳ ಸಮಾಜದ ಸ್ಪಷ್ಟ ಕಲ್ಪನೆ ಇಲ್ಲ. ಆರಂಭ ಕಾಲದಲ್ಲಿ ಶಾಸನಕ್ಕೆ ಪಠ್ಯರಚಿಸುವವನೂ ಅದನ್ನು ಕಂಡರಿಸುವವನೂ ಒಬ್ಬನೇ ಆಗಿರುತ್ತಿದ್ದನು. ಎಂಟನೆಯ ಶತಮಾನದ ನಂತರ ಈ ಕೆಲಸವನ್ನು ಹಂಚಿಕೊಳ್ಳುವ ರೂಢಿ ಆರಂಭವಾಯಿತು. ಸಂಸ್ಕೃತಭಾಷೆಯ ಮೇಲಿನ ಪ್ರಭುತ್ವ ಬ್ರಾಹ್ಮಣರಿಗಿದ್ದರೂ ಶಾಸನಗಳನ್ನು ಸಂಯೋಜಿಸಿ ಕಂಡರಿಸುವಲ್ಲಿ ಅವರ ಪಾತ್ರ ವಾಸ್ತವವಾಗಿ ಅತ್ಯಲ್ಪವಾಗಿತ್ತು. ಈ ಕ್ಷೇತ್ರದಿಂದ ಬ್ರಾಹ್ಮಣರನ್ನು ದೂರವಿಟ್ಟು ವೃತ್ತಿನಿರತ ಬ್ರಾಹ್ಮಣೇತರ ಲಿಪಿಕಾರರಾದ ತ್ವಷ್ಟರು, ವಿಶ್ವಕರ್ಮಿಗಳು ತಮ್ಮ ಏಕಸ್ವಾಮ್ಯವನ್ನು ಸ್ಥಾಪಿಸಿಕೊಂಡಿದ್ದ ಕತೆಯು ಕುತೂಹಲಕರವಾಗಿದೆ.

PC : Ruthumana, (ಷ. ಶೆಟ್ಟರ್)

ವಿಶ್ವಕರ್ಮಾಚಾರ್ಯನೆಂಬ ಲಿಪಿಕಾರನೊಬ್ಬ ಕನಿಷ್ಟ ಆರುತಾಮ್ರಪಟಗಳನ್ನು ಬರೆದು, 20 ಖಂಡುಗ ಬೀಜದ ವ್ರೀಹಿ, 10 ಖಂಡುಗ ಬೀಜದ ಕಂಗು ಕ್ಷೇತ್ರಗಳನ್ನಲ್ಲದೆ, ಬಹುಶಃ 12 ನಿವರ್ತನ ವಾಪಿ, 12 ನಿವರ್ತನ ಎರೆಭೂಮಿ ಮತ್ತು ಮೂರು ಗ್ರಾಮಗಳನ್ನು ಬ್ರಹ್ಮದೇಯ ಕ್ರಮೇಣ ಪಡೆದುಕೊಂಡ ನಿದರ್ಶನವಿದೆ. ಇಷ್ಟೊಂದು ಆಸ್ತಿಯನ್ನು ರಾಜರಿಂದ ಸಂಪಾದಿಸಿದ ವೈದಿಕ ಬ್ರಾಹ್ಮಣರ ಉದಾಹರಣೆಗಳಿಲ್ಲ. ಬ್ರಾಹ್ಮಣರೊಡನೆ ಸ್ಪರ್ಧೆಯಲ್ಲಿದ್ದ ಲಿಪಿಕಾರರು ಅಂದು ತಮ್ಮ ವೃತ್ತಿಗೊಪ್ಪುವ ಗೋತ್ರಗಳನ್ನು ಹೊಸದಾಗಿ ತಾವೇ ಸೃಷ್ಟಿಸಿಕೊಂಡಿರುವುದೂ ಉಂಟು. ಒಟ್ಟಾರೆ ಬ್ರಾಹ್ಮಣ ಮತ್ತು ಕ್ಷತ್ರಿಯರ ಸುತ್ತ ಹೆಣೆದಿದ್ದ ಇತಿಹಾಸವನ್ನು ಮಧ್ಯಮ ಮತ್ತು ಕೆಳಸ್ತರದವರೆಗೂ ವಿಸ್ತರಿಸಿ, ಸಮಾಜಕ್ಕಾಗಿ ಜೀವ ತೆತ್ತ ಗೌಡ, ಮಾದಿಗ, ಚರ್ಮಕಾರ, ಇನ್ನಿತರ ಶೂದ್ರರಿಗೆ ಇತಿಹಾಸದಲ್ಲಿ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ ಶೆಟ್ಟರ್. ಅವರ ಎರಡು ಹೊಸ ವಾದಗಳೆಂದರೆ, “ಎಂಟನೆಯ ಶತಮಾನದವರೆಗೆ ಆಳಿದ ಬಹುತೇಕ ಅರಸು ಮನೆತನಗಳು ತಮ್ಮ ಶೂದ್ರ ಹಾಗೂ ಬುಡಕಟ್ಟಿನ ಹಿನ್ನೆಲೆಯನ್ನು ಉದಾತ್ತೀಕರಿಸಿಕೊಳ್ಳುವ ಅವಸರದಲ್ಲಿ ಉತ್ತರದ ಅಹಿಚ್ಛತ್ರ ಹಾಗೂ ಗಂಗಾತೀರದ ಬ್ರಾಹ್ಮಣರನ್ನು ಬರಮಾಡಿಕೊಂಡು ಅವರಿಗೆ ಬ್ರಹ್ಮದೇಯಗಳನ್ನು ಪೂರೈಸಿ, ತಾವು ಆಳುತ್ತಿದ್ದ ನೆಲಕ್ಕೆ ಪಾವಿತ್ರ್ಯವನ್ನುಂಟು ಮಾಡಿಕೊಳ್ಳುವ ಭ್ರಮೆಯಲ್ಲಿದ್ದವು. ಸುಮಾರು ಎಂಟನೆಯ ಶತಮಾನದಲ್ಲಿ ಇದು ಬದಲಾಗಿ, ತಮ್ಮ ರಾಜ್ಯವನ್ನು ಉಳಿಸಿ ಬೆಳೆಸಲು ವೈದಿಕ ಯಜ್ಞಯಾಗಾದಿಗಳ ಮಂತ್ರಶಕ್ತಿಗಿಂತ ನೆರಳಿನಂತೆ ತಮ್ಮೊಡನಿರುವ ಶ್ರಮಿಕ-ಶೂದ್ರರ ದೈಹಿಕ ಮತ್ತು ನೈತಿಕ ಶಕ್ತಿ ಮುಖ್ಯವೆಂಬುದನ್ನು ಮನಗಂಡು, ಬ್ರಾಹ್ಮಣರನ್ನಲ್ಲದೆ ಇವರನ್ನೂ ಗೌರವಿಸತೊಡಗಿದ್ದರು.

ಇದರ ಪರಿಣಾಮವಾಗಿ ಎಂಟನೆಯ ಶತಮಾನಕ್ಕಿಂತ ಮುಂಚೆ ಅಪರೂಪವಾಗಿದ್ದ ವೀರಗೊಡುಗೆಗಳು, ಅಧಿಕಾರ ಕೊಡುಗೆಗಳು ಅನಂತರ ಹೆಚ್ಚುಗೊಂಡಿದ್ದನ್ನು ಇವರು ತೋರಿಸಿಕೊಟ್ಟಿರುವರು. ರಾಜ್ಯರಕ್ಷಣೆ, ಸಮಾಜರಕ್ಷಣೆ, ಪಶುರಕ್ಷಣೆಗೆ ಮತ್ತು ಒಡೆಯನ ಉಪ್ಪಿನ ಋಣ ತೀರಿಸಲು ದೇಹ ತೆತ್ತ ವೀರರನ್ನು ಸನ್ಮಾನಿಸಿ ಅವರ ಕುಟುಂಬಕ್ಕೆ ನೆತ್ತರ್ಪ್ಪಟ್ಟಿ, ಬಾಳ್ಗಚ್ಚು, ಕಲ್ನಾಟು, ಮೆಚುಗೊಡುಗೆ, ಪೆರ್ಜ್ಜರಪು ಮುಂತಾದ ಕೊಡುಗೆಗಳು ಜಾರಿಗೆ ಬಂದವು. ರಾಷ್ಟ್ರಕೂಟರು ಬ್ರಾಹ್ಮಣರಿಗೆ ಭೂದತ್ತಿ ಕೊಡುವುದನ್ನು ಕಡಿಮೆ ಮಾಡಿ ವೀರರನ್ನು ಪ್ರೋತ್ಸಾಹಿಸತೊಡಗಿದರು. ಹೀಗೆ ಕರ್ನಾಟಕದ ಶಾಸನ ಲಿಪಿವ್ಯವಸಾಯವನ್ನು ಕೇಂದ್ರವಾಗಿಟ್ಟುಕೊಂಡಿದ್ದರೂ ಲಿಪಿಗೆ ಸಂಬಂಧಿಸಿದ ಭಾಷೆ, ಭಾಷೆಗೆ ಸಂಬಂಧಿಸಿದ ಪಠ್ಯ, ಪಠ್ಯವನ್ನು ನಿಯಂತ್ರಿಸಿದ ಧರ್ಮ ಮತ್ತು ರಾಜಧರ್ಮ, ಇವೆಲ್ಲವುಗಳಿಗೆ ನೆಲೆಯಾದ ಸಮಾಜ ಇತ್ಯಾದಿಗಳನ್ನು ತನ್ನ ತೆಕ್ಕೆಗೆ ತಬ್ಬಿಕೊಳ್ಳುವ ಮೂಲಕ ಈ ಗ್ರಂಥ ಹಲವು ಶಿಸ್ತುಗಳ ಸಂಗಮವಾಗಿಬೆಳೆದಿದೆ ಎಂದು ಎಂಎಂ ಕಲಬುರ್ಗಿ ಅಭಿಪ್ರಾಯ ಪಡುತ್ತಾರೆ.

ಯಾವ ರೋಚಕ ಕಾದಂಬರಿಗೂ ಕಡಿಮೆ ಇಲ್ಲದಂತಹ ನಿರೂಪಣಾ ಶೈಲಿ ಶೆಟ್ಟರ್ ಅವರದು.

ಕ್ರಿ.ಪೂ. ಮೂರನೇ ಶತಮಾನದಲ್ಲಿ ಪೂರ್ವಭಾರತದ ಪಾಟಲೀಪುತ್ರದಿಂದ ಆಳುತ್ತಿದ್ದ ಮೌರ್ಯ ಚಕ್ರವರ್ತಿ ಅಶೋಕನು ಲಿಪಿಕಾರನೊಬ್ಬನನ್ನು ರಾಜ್ಯದ ದಕ್ಷಿಣ ಗಡಿಗೆ ಕಳಿಸಿ, ತನ್ನ ಸಾಮಾಜಿಕ ಸಂದೇಶವನ್ನು ಬಂಡೆಗಲ್ಲುಗಳ ಮೇಲೆ ಕೊರೆಸಿದನು. ಬ್ರಾಹ್ಮೀಲಿಪಿ, ಪ್ರಾಕೃತಭಾಷೆ ಮತ್ತು ಕಂಡರಣೆಯ ಕಲೆ, ಒಗ್ಗೂಡಿಕೊಂಡು ಇಂದಿನ ಕರ್ನಾಟಕವನ್ನು ಪ್ರವೇಶಿಸಿದ್ದು ಹೀಗೆ; ಎಂದು ಶೆಟ್ಟರ್ ಪ್ರವೇಶಿಕೆ ಒದಗಿಸುತ್ತಾರೆ.

ಅಶೋಕನು ಕಳಿಸಿದ ಲಿಪಿಕಾರನ ಹೆಸರು ಚಪಡ. ಅವನು ಹುಟ್ಟಿ ಬೆಳೆದದ್ದು ಗಾಂಧಾರ ನಾಡಿನಲ್ಲಿ; ಎಂದು ಪ್ರಾರಂಭವಾಗುವ ಕತೆ ಮುಂದೆ ಸುಮಾರು ನಾನೂರು ಪುಟಗಳ ಸುದೀರ್ಘ ಕಥನವಾಗುತ್ತದೆ.

ಅಭಿನವ ಪ್ರಕಾಶನದ ಪ್ರಕಟಣೆಯಾದ ಈ ’ಹಳಗನ್ನಡ’ ಪುಸ್ತಕ ಅಕ್ಷರ ಪ್ರಸಾರದಲ್ಲಿ ಬೌದ್ಧರ ಪಾತ್ರವನ್ನೂ ತೆರೆದಿಡುತ್ತದೆ. ಬರೆದರೆ ಅನರ್ಹರೊಡನೆ ಅರಿವನ್ನು ಹಂಚಿಕೊಳ್ಳಬೇಕಾಗುವುದೆಂಬ ಆತಂಕದಲ್ಲಿದ್ದ ಅಂದಿನ ಒಂದು ವರ್ಗವು ಅರಿವಿನ ಕೀಲಿಯನ್ನು ಕಂಠ ಸರಳುಗಳ ಹಿಂದೆ ಅಡಗಿಸಿಟ್ಟಿತ್ತು. ಇದನ್ನು ಬಿಡುಗಡೆ ಮಾಡಿ ಬರೆಯುತ್ತಾ ಬೆಳೆಯುವ ಮಾರ್ಗವನ್ನು ತಿಳಿಸಿಕೊಟ್ಟವರಲ್ಲಿ ಬೌದ್ಧರು ಮೊದಲಿಗರು ಎನ್ನುತ್ತಾರೆ ಶೆಟ್ಟರ್.

ಲಿಪಿಕಾರರ ತಾಂತ್ರಿಕ ಮತ್ತು ತಾತ್ವಿಕ ವ್ಯಾಪ್ತಿಯನ್ನು ಅನಾವರಣ ಮಾಡುತ್ತಾ ಹೋಗುವ ಲೇಖಕರು, ಆಗಿನ ರಾಜನ ನೇಮಗಳನ್ನು ಸ್ಪಷ್ಟಪಡಿಸುತ್ತಾ ಕುತೂಹಲ ಕೆರಳಿಸುತ್ತಾರೆ. ಅನಿಶ್ಚಿತ ಆಶೆ ಆಮಿಷ ಉಳ್ಳವನು ಪೂರ್ಣವಿರಲಿ ಭಾಗಶಃ ಕೂಡಾ ಏನನ್ನು ಸಾಧಿಸಲಾರ ಎಂದು ಸ್ಪಷ್ಟ ನುಡಿಯ ಎಚ್ಚರಿಕೆ ಅಶೋಕನದಿತ್ತು. ಸಂದೇಶಗಳನ್ನು ಸ್ವತಃ ಕೊಡುತ್ತಿದ್ದ ಅಶೋಕನು ಇವನ್ನು ಬದಲಿಸುವ ಸ್ವಾತಂತ್ರ್ಯವನ್ನು ಯಾರಿಗೂ ಕೊಟ್ಟಿರಲಿಲ್ಲ. ಮಹಾಮಾತ್ರರು ಮಾತ್ರ ಇವನ್ನು ಅನುಷ್ಠಾನಗೊಳಿಸುವ ಹೊಣೆ ಹೊತ್ತಿದ್ದರು.

ಹಾಗೆ ಭಾಷೆಯ ಬೆಳವಣಿಗೆ ಮತ್ತು ವ್ಯಾಕರಣದ ವಿಸ್ತಾರದ ಕತೆಯೂ ಜೊತೆಜೊತೆಗೆ ಮಿಳಿತವಾಗುತ್ತಾ ಇಡೀ ಕೃತಿಯು ಒಂದು ಬೆರಗಿನ ಪ್ರತಿಮೆಯಾಗಿ ನಿಲ್ಲುತ್ತದೆ.


ಇದನ್ನೂ ಓದಿ: ಪುಟಕ್ಕಿಟ್ಟ ಪುಟಗಳು; ಜೋಸೆಫ್ ಕ್ಯಾಂಬಲ್ ಅವರ ‘ಮಿಥಿಕದ ಶಕ್ತಿ’: ಪುರಾಣಗಳ ಶಕ್ತಿಯ ಶೋಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...