Homeಅಂಕಣಗಳುಪುಟಕ್ಕಿಟ್ಟ ಪುಟಗಳು; ಜೋಸೆಫ್ ಕ್ಯಾಂಬಲ್ ಅವರ 'ಮಿಥಿಕದ ಶಕ್ತಿ': ಪುರಾಣಗಳ ಶಕ್ತಿಯ ಶೋಧ

ಪುಟಕ್ಕಿಟ್ಟ ಪುಟಗಳು; ಜೋಸೆಫ್ ಕ್ಯಾಂಬಲ್ ಅವರ ‘ಮಿಥಿಕದ ಶಕ್ತಿ’: ಪುರಾಣಗಳ ಶಕ್ತಿಯ ಶೋಧ

- Advertisement -
- Advertisement -

’ದಪವರ್ ಆಫ್ ಮಿಥ್’ ಎಂಬ ಈ ಕೃತಿಯು 1988ರಲ್ಲಿ ಪಿಬಿಎಸ್ ವಾಹಿನಿಯು ನಿರ್ಮಿಸಿದ ಅಮೆರಿಕೆಯ ಜೋಸೆಫ್ ಕ್ಯಾಂಬಲ್ ಅವರ ಸಂದರ್ಶನದ ಸಾಕ್ಷ್ಯಚಿತ್ರವನ್ನು ಆಧರಿಸಿದೆ. ಪುರಾಣಗಳ ಅಥವಾ ಮಿಥಿಕಗಳ ಸಂಶೋಧಕ ವಿದ್ವಾಂಸರಾದ ಜೋಸೆಫ್ ಕ್ಯಾಂಬಲ್ ಮತ್ತು ಪತ್ರಕರ್ತ ಬಿಲ್ ಮಾಯರ್ಸ್ ನಡುವಿನ ಸಂಭಾಷಣೆಯ ಫಲವಿದು.

ಈ ಚರ್ಚೆಗಳಲ್ಲಿ ಕ್ಯಾಂಬಲ್ ವಿಶ್ವದ ವಿವಿಧ ಮಿಥಿಕಗಳ ನಡುವಿನ ತುಲನೆಯನ್ನು ಮತ್ತು ಪುರಾಣಗಳು ಮಾನವ ಸಮಾಜದ ಮೇಲೆ ಬೀರುವ ಪ್ರಭಾವವನ್ನು ತಮ್ಮ ದೃಷ್ಟಿ, ಧೋರಣೆ ಮತ್ತು ಗ್ರಹಿಕೆಯಿಂದ ವಿಶ್ಲೇಷಿಸಿದ್ದಾರೆ. ಪುರಾಣಗಳ ಬಗೆಗಿನ ತಮ್ಮ ’ದ ಹೀರೋ ವಿತ್ ಎ ಥೌಸಂಡ್ ಫೇಸಸ್’ ಕೃತಿಯ ಮುಂದುವರಿಕೆಯ ಭಾಗದಂತೆ ಈ ಕೃತಿಯು ಕಂಡರೂ, ಹಿಂದಿನ ಕೃತಿಯನ್ನು ಮತ್ತಷ್ಟು ಸ್ಪಷ್ಟಗೊಳಿಸುವ ಮತ್ತು ವಿಸ್ತರಿಸುವ ರೀತಿಯಂತೆ ಕಾಣುತ್ತದೆ.

ಯಾವುದೇ ಸಮುದಾಯ ಅಥವಾ ಸಮೂಹದ ನಾಯಕನು ತನ್ನ ಪ್ರೀತಿಯ ಜನಾಂಗವನ್ನು ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಉನ್ನತೀಕರಿಸಲು ಯತ್ನಿಸಿದ ನಂತರ ಅವನ ಮೇಲಿನ ಅಭಿಮಾನ ಮತ್ತು ಪ್ರೇಮವು ಅವನ ನಂತರದ ಜನರಿಗೆ ಮಿಥಿಕಗಳನ್ನು ಕಟ್ಟಲು ಪ್ರೇರೇಪಿಸುತ್ತದೆ. ಇಂತಹ ನಾಯಕರು ಹಲವು ಬಗೆಗಳಲ್ಲಿ ಪ್ರಕಟಗೊಳ್ಳುತ್ತಾರೆ. ಯೇಸು, ಬುದ್ಧ, ಕೃಷ್ಣ; ಯಾರೇ ಆಗಲಿ ಅವರ ವಾಸ್ತವದ ಸಾಧನೆಯನ್ನು ಮೀರಿ ಅತಿಮಾನುಷತನದಲ್ಲಿ ಪೌರಾಣಿಕವಾಗಿ ಚಿತ್ರಿಸುವುದರಲ್ಲಿ ಅವರ ಅಭಿಮಾನಿಗಳು ಹಿಂದೆ ಬೀಳಲಿಲ್ಲ. ಕ್ರಾಂತಿಕಾರಿ ಮತ್ತು ಪ್ರೇಮಮಯಿ ಯೇಸುವಿನ ವಾಸ್ತವವನ್ನು ಪವಾಡಗಳಿಂದಲೇ ತುಂಬಿರುವ ಬೈಬಲ್ಲಿನಲ್ಲಿ ಹುಡುಕಬೇಕಾಗುತ್ತದೆ. ಬುದ್ಧನೂ ಇಂತಹ ಅತಿಮಾನುಷ ಸಂಗತಿಗಳಿಂದ ಹೊರತಾಗಲಿಲ್ಲ.

ತಾಯಿ ಮಾಯಾದೇವಿಯ ಗರ್ಭದಿಂದ ಬಂದ ಕೂಡಲೇ ಹೆಜ್ಜೆಗಳನ್ನು ಇರಿಸುವಂತೆ ಮಾಡುವ ಪೌರಾಣಿಕ ಚಿತ್ರಣವು ತಾಯಿಯ ಗರ್ಭದೊಳಗೆ ಬಿಳಿಯ ಆನೆಯು ಪ್ರವೇಶಿಸುವ ಮಿಥಿಕವನ್ನು ವಿಜೃಂಭಿಸುತ್ತದೆ. ಹಾಗೆಯೇ ಕೃಷ್ಣನ ಎಲ್ಲಾ ಮಾನುಷ ಚಟುವಟಿಕೆಗಳು ಅತ್ಯುತ್ಪ್ರೇಕ್ಷೆಯಿಂದ ಕೂಡಿದ್ದು ಜಗದೋದ್ಧಾರಕನನ್ನಾಗಿಸುತ್ತದೆ. ಮಹಾನ್ ನಾಯಕರ ಇಂತಹ ಪೌರಾಣಿಕ ಚಿತ್ರಣಗಳಿಂದ ಜಗತ್ತಿನ ಯಾವುದೇ ಭಾಗವು ಮುಕ್ತವಾಗಿಲ್ಲ. ಬರೀ ಧಾರ್ಮಿಕವಾಗಿಯಷ್ಟೇ ಅಲ್ಲದೇ ಮನರಂಜನೆಯ ದೃಷ್ಟಿಯಲ್ಲಿ ಬರೆಯುವ ಸೃಜನಶೀಲ ಸಾಹಿತ್ಯ ಕೃತಿಗಳು, ಸಿನಿಮಾಗಳು ಕೂಡಾ ನಾಯಕರ ವಿಜೃಂಭಣೆಯಿಂದ ಹಿಂದೆ ಸರಿಯುವುದಿಲ್ಲ. ಕ್ಯಾಂಬಲ್ ಇವನ್ನೂ ಮನಶಾಸ್ತ್ರೀಯವಾಗಿ ಮತ್ತು ಸಾಂಸ್ಕೃತಿಕವಾಗಿ ವಿವರಿಸಲು ಯತ್ನಿಸುತ್ತಾರೆ.

ಈ ಮಿಥಿಕಗಳು ಬರಿಯ ಮನರಂಜನೆ ಮಾತ್ರವಲ್ಲದೇ ಮನಶಾಸ್ತ್ರೀಯವಾಗಿ ಗಮನಿಸಿದಾಗ, ಅವುಗಳು ತಮ್ಮ ನಾನಾ ಸಂದೇಶಗಳಿಂದ ಸಮಾಜದಲ್ಲಿ ಅನಾವರಣಗೊಳ್ಳುತ್ತವೆ. ಸಮಾಜದಲ್ಲಿ ಇರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘರ್ಷಗಳು, ದೈವತ್ವದ ಪರಿಕಲ್ಪನೆ ಮತ್ತು ಪ್ರಕೃತಿ, ನೈತಿಕತೆಗೆ ಒಗ್ಗಿಸುವ ಪಾಪಪುಣ್ಯಗಳ ನೇಮಗಳು, ಮಾನುಷ ಸಹಜವಾಗಿ ಎದುರಾಗುವ ದುಃಖ ದುಮ್ಮಾನಗಳನ್ನು ಎದುರಿಸುವಲ್ಲಿ ಮಿಥಿಗಳಿರುವ ಶಕ್ತಿ ಎಲ್ಲವೂ ಮನುಷ್ಯನಲ್ಲಿ ಸಾಫ್ಟ್-ವೇರ್ ರೀತಿಯಲ್ಲಿ ಧಾರ್ಮಿಕವಾಗಿ ಕೆಲಸ ಮಾಡುತ್ತಿರುತ್ತವೆ.
ಮಿಥಿಕಗಳನ್ನು ಸೃಷ್ಟಿಸುವವರು ಕತೆಗಾರರು. ಅವರ ಭಾವಾತಿರೇಕವು ಮತ್ತು ಅಭಿಮಾನವು ತನ್ನ ಕೇಳುಗರಿಗೆ ಚಿತ್ರಣಗಳನ್ನು ಕಟ್ಟಿಕೊಡುತ್ತದೆ. ಅವುಗಳನ್ನು ಪೀಳಿಗೆಯಿಂದ ಪೀಳಿಗೆಗೆ ಸ್ಮೃತಿಯಲ್ಲಿ ಸಾಗಿಸಲಾಗುತ್ತದೆ.

ಭೌತಿಕವಾಗಿದ್ದು ಒಂದು ದಿನ ಬಿದ್ದುಹೋಗುವ ಮನುಷ್ಯನ ಶರೀರ ಮತ್ತು ಅವನ ಜೀವನಚಕ್ರದ ಬಗ್ಗೆ ಅತೀವ ಕುತೂಹಲ ಮತ್ತು ಪ್ರೇಮವಿರುವ ಈ ಕಥನಕಾರರು ಮಿಥಿಕಗಳಿಂದ ಮತ್ತಷ್ಟು ಗಾಢಗೊಳಿಸುತ್ತಾರೆ. ಅಸ್ಮಿತೆಯ ಹುಡುಕಾಟದಲ್ಲಿ ಸಾಹಿತಿಗಳು, ಕಲಾವಿದರು ಈ ಮಿಥಿಕಗಳಿಂದ ಹೊರಬರುವುದೇ ಇಲ್ಲ. ಅದನ್ನೇ ಬೇರೆ ಬೇರೆ ಆಯಾಮಗಳಲ್ಲಿ ಚಿತ್ರಿಸುತ್ತಾ ಮುಂದುವರಿಸಿದರೆ, ಸಂಪ್ರದಾಯ ಮತ್ತು ಆಚರಣೆಗಳಲ್ಲಿ ಸಮುದಾಯಗಳು ಅವನ್ನು ಜೀವಂತವಾಗಿರಿಸಿರುತ್ತಾರೆ. ತಮಾಷೆಯೆಂದರೆ, ಸಾಂಪ್ರದಾಯಿಕ ಆಚಾರ ವಿಚಾರಗಳಲ್ಲಿ ತೊಡಗಿರುವವರಿಗೆ ತಮ್ಮ ನೇಮಗಳ ಮೂಲಸ್ವರೂಪವೇ ಗೊತ್ತಿರುವುದಿಲ್ಲ. ಜಿಜ್ಞಾಸುಗಳು ಕೇಳಿದರೆ ಪುರಾಣದ ಅಥವಾ ಮಿಥಿಕದ ಸ್ವರೂಪವನ್ನೇ ಪುನರುಚ್ಚರಿಸುತ್ತಾರೆ. ಏಕೆಂದರೆ, ತಮ್ಮ ಈ ಆಚರಣೆಗಳು ಸಾಂಕೇತಿಕವೂ ಮತ್ತು ವಾಸ್ತವದ ನೆಲೆಗಟ್ಟಿನದ್ದಲ್ಲ ಎಂದು ತಿಳಿದುಬಿಟ್ಟರೆ ಅವುಗಳನ್ನು ಈ ಕಾಲಘಟ್ಟದಲ್ಲಿ ಮುಂದುವರಿಸುವ ಅಗತ್ಯವೇ ಕಂಡುಬರುವುದಿಲ್ಲ. ಆಗ ಪುರೋಹಿತರ, ಧಾರ್ಮಿಕ ಮುಂದಾಳುಗಳ ಕೆಲಸವೇ ಇಲ್ಲದಂತಾಗುತ್ತದೆ.

ಈ ಭೀತಿ ಎಲ್ಲಾ ಸ್ಥಾಪಕ ಧರ್ಮದವರಲ್ಲಿಯೂ ಮೂಲದಲ್ಲಿ ಇದ್ದೇ ಇರುತ್ತದೆ. ಹಾಗಾಗಿಯೇ ಪಾದ್ರಿಗಳಾಗಲಿ, ಇತರ ಧಾರ್ಮಿಕ ಪುರೋಹಿತರಾಗಲಿ, ಅರ್ಚಕ ಅಥವಾ ಪ್ರವಚಕರಾಗಲಿ ಮಿಥಿಕಗಳನ್ನು ಪ್ರಸ್ತುತ ಕಾಲಕ್ಕೆ ಅನುಸಂಧಾನ ಮಾಡಿ ಹೊಸ ವಿವರಣೆಗಳನ್ನು ಕೊಡಲು ಯತ್ನಿಸುವರೇ ಹೊರತು ಮಿಥಿಕದ ಒಗಟನ್ನು ಬಿಡಿಸಿ ಜನರ ಮನಸ್ಸನ್ನು ಮುಕ್ತವಾಗಿಸುವ ಗೋಜಿಗೆ ಹೋಗುವುದಿಲ್ಲ. ಏಕೆಂದರೆ ಇಡೀ ಧಾರ್ಮಿಕ ವ್ಯವಸ್ಥೆಯೇ ಇದರಿಂದಾಗಿ ಕುಸಿದುಬೀಳುತ್ತದೆ. ಜೊತೆಗೆ ಸಾಮಾನ್ಯ ಜನರೂ ಮಿಥಿಕಗಳ ಆವರಣಗಳಿಂದ ಹೊರಗೆ ಬರುವಷ್ಟು ಪ್ರಬುದ್ಧರಾಗಿಯೂ ಇರುವುದಿಲ್ಲ. ಧಾರ್ಮಿಕ ಮತ್ತು ಸಾಮುದಾಯಿಕ ವ್ಯವಸ್ಥೆಗಳೆರಡೂ ಕುಸಿದು ಬೀಳಬಹುದು ಎಂದೇ ಸಾಂಪ್ರದಾಯಿಕ ಆಚಾರಗಳನ್ನು ಪುನಶ್ಚೇತನಗೊಳಿಸಿಕೊಂಡಿರಲು ಯತ್ನಿಸುತ್ತಾರೆ. ಆಸ್ತಿಕರಲ್ಲಿ ಇರುವಷ್ಟು ತಾತ್ವಿಕ ಗೊಂದಲಗಳು, ಪರಾಧೀನ ಸ್ಥಿತಿಗಳು, ವಿವಿಧ ಬಗೆಯ ತೊಳಲಾಟದ ಮನೋಭಾವಗಳು ನಾಸ್ತಿಕರಲ್ಲಿ ಅಷ್ಟು ಕಂಡುಬರುವುದಿಲ್ಲ. ತನ್ನ ಉತ್ಥಾನ ಮತ್ತು ಪತನಗಳಿಗೆ ತಾನೇ ಹೊಣೆಗಾರನನ್ನಾಗಿಸಿಕೊಳ್ಳುತ್ತಾನೆ. ಅಷ್ಟೂ ಆತ್ಮರತಿಯವನಾಗಿದ್ದರೆ ಇತರ ವ್ಯಕ್ತಿಗಳನ್ನು ದೂಷಿತ್ತಾನೆ, ಸಂದರ್ಭ, ಸನ್ನಿವೇಶಗಳನ್ನು ದೂರುತ್ತಾನೆ. ಆದರೆ, ಪೂರ್ವಾರ್ಜಿತ ಕರ್ಮ, ವಿಧಿ, ಹಣೆಬರಹ, ದೈವದ ಕೃಪೆ, ಶಾಪ ಇತ್ಯಾದಿಗಳಂತಹ ಅತಿಮಾನುಷ ಆರೋಪಗಳನ್ನು ಮಾಡುವುದಿಲ್ಲ.

ಕರ್ಮ ಎಂದರೆ ಮಾಡಿದ್ದುಣ್ಣೋ ಮಾರಾಯಾ ಅಷ್ಟೇ. ಮಾಡಿದ ಕೆಲಸಗಳು, ಆಲೋಚನೆಗಳು ಮನುಷ್ಯನ ಮನಸ್ಸಿನ ಸುಪ್ತಾವಸ್ಥೆಯಲ್ಲಿ ಅಡಗಿದ್ದು, ಅದು ಜಾಗೃತ ಮನಸ್ಸಿನ ಬಲವನ್ನು ಮೀರಿ ತನ್ನ ಪ್ರಭಾವಗಳನ್ನು ತೋರಿಸುವುದರಲ್ಲಿ ಯಶಸ್ವಿಯಾಗುವುದು. ಒಬ್ಬ ವ್ಯಕ್ತಿಗೆ ಲೋಕವು ಕೆಟ್ಟದ್ದು ಎಂದು ಕರೆಯುವ ಕೆಲಸವನ್ನು ಮಾಡುವುದರಲ್ಲಿ ಯಾವ ಅಪರಾಧಿ ಭಾವವೂ ಇಲ್ಲದಿದ್ದ ಪಕ್ಷದಲ್ಲಿ ಅವನಿಗೆ ಕರ್ಮ ಎಂಬುದೇ ಇಲ್ಲ. ಅದೇ ಓರ್ವ ವ್ಯಕ್ತಿ ಲೋಕವು ಸಮ್ಮತಿಸಿದ ಕೆಲಸವನ್ನು ಮಾಡಿದ್ದರೂ ಅವನಿಗೆ ಅದರ ಬಗ್ಗೆ ಅಳುಕು, ಅಂಜಿಕೆ ಮತ್ತು ಅಪರಾಧ ಪ್ರಜ್ಞೆ ಇದ್ದಲ್ಲಿ, ಅವನ ಸುಪ್ತಮನಸ್ಥಿತಿಯು ತನ್ನ ಪರಿಣಾಮವನ್ನು ಅವನ ಮೇಲೆ ಉಂಟು ಮಾಡುತ್ತದೆ. ಆಗ ಆತ ತನ್ನ ಕರ್ಮಫಲಾಧೀನ.

ಕರ್ಮ ಎಂಬುದು ಮನಶಾಸ್ತ್ರೀಯ ವಿಚಾರವೇ ಹೊರತು ಪಾಪಪುಣ್ಯಗಳ ಪ್ರತಿಫಲಗಳಲ್ಲ. ಉದಾಹರಿಸುವುದಾದರೆ, ಲೋಕವು ಖಂಡಿಸುವ ಅತ್ಯಾಚಾರದಂತಹ ಕೃತ್ಯವನ್ನು ಮಾಡಿದ್ದರೂ ಅಪರಾಧ ಪ್ರಜ್ಞೆ ಇಲ್ಲದೇ ನಿರುಮ್ಮಳನಾಗಿರುವವನಿಗೆ ಕರ್ಮ ಬಾಧೆ ಇಲ್ಲ. ಆದರೆ, ಸಮಾಜ ಸಮ್ಮತದ ವಿವಾಹವಾಗಿದ್ದರೂ ಒಲ್ಲದ ಮದುವೆ ಅದಾಗಿದ್ದರೆ ಅಥವಾ ಯಾವುದೇ ಕಾರಣಕ್ಕೆ ಅಪರಾಧ ಪ್ರಜ್ಞೆಯೋ ಮತ್ತೊಂದೋ ನಕಾರಾತ್ಮಕವಾದ ಮನಸ್ಥಿತಿ ಇದ್ದಲ್ಲಿ ಅವನಿಗೆ ಅದು ಕರ್ಮ. ಮೋಸ ಮಾಡಿ ಅಮಾಯಕ ಜನರನ್ನು ಸುಲಿಗೆ ಮಾಡಿ ಶ್ರೀಮಂತರಾಗಿರುವವರು ಅಪರಾಧ ಪ್ರಜ್ಞೆಯನ್ನು ಹೊಂದಿದ್ದವರಾಗಿದ್ದರೆ ದೇವರ ಕೆಲಸ ಅಥವಾ ಧಾರ್ಮಿಕ ಚಟುವಟಿಕೆಗಳು ಅಥವಾ ಅನಾಥಾಲಯಕ್ಕೆ ದಾನ, ಸಾಮೂಹಿಕ ಅನ್ನದಾನದಂತಹ ಇನ್ನಾವುದೇ ಸಮಾಜಸೇವೆಗಳಿಂದ ಆ ಅಪರಾಧ ಪ್ರಜ್ಞೆಯಿಂದ ಮುಕ್ತರಾಗಲು ಯತ್ನಿಸುತ್ತಿರುತ್ತಾರೆ. ಅಪರಾಧ ಪ್ರಜ್ಞೆಯೇ ಇಲ್ಲದಿದ್ದಲ್ಲಿ ಆರಾಮವಾಗಿ ವೈಭವದ ಜೀವನವನ್ನು ನಡೆಸುತ್ತಿರುತ್ತಾರೆ.

ಮಿಥಿಕಗಳು ಮತ್ತು ಆಧುನಿಕ ಜಗತ್ತು, ಅಂತರಂಗದ ಯಾನ, ಬಲಿದಾನ ಮತ್ತು ಅದರಲ್ಲಿ ದೊರಕುವ ಆನಂದ, ಸಮುದಾಯದ ನಾಯಕರ ಸಾಹಸಗಳು, ಪ್ರೇಮ ಮತ್ತು ವಿವಾಹದ ಕತೆಗಳು, ಅನಂತತೆಯ ಮುಸುಕು, ತಮ್ಮ ಅಭಿಮಾನದ ವ್ಯಕ್ತಿಗಳಿಗೆ ದೇವರ ಮುಖವಾಡವನ್ನು ತೊಡಿಸುವುದು; ಹೀಗೆ ಹಲವಾರು ವಿಷಯಗಳನ್ನು ಅನಾವರಣ ಮಾಡುತ್ತಾ ಹೋಗುವ ಕ್ಯಾಂಬಲ್ ಭಾರತದ ಪುರಾಣಗಳನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಸಲಕರಣೆಗಳನ್ನು ಒದಗಿಸುತ್ತಾರೆ.

ಸರ್ವವ್ಯಾಪಿಯಾದ ಪೌರಾಣಿಕ ಕಥನಗಳು ಮನುಕುಲದ ಚರಿತ್ರೆಯಲ್ಲಿ ಹೇಗೆ ಬೆಸೆದುಕೊಂಡೇ ಬಂದಿದೆ ಎಂಬುದನ್ನು ವಿಸ್ತಾರವಾಗಿ ಹೇಳುವ ಕ್ಯಾಂಬಲ್ ಅವರಿಗೆ ಭಾರತದ ಜಾತಿ, ಗೋತ್ರ ಮತ್ತು ಬುಡಕಟ್ಟುಗಳ ಸೂಕ್ಷ್ಮತೆ ದೇಸೀಯವಾಗಿ ಇಲ್ಲದಿದ್ದರೂ ಅಧ್ಯಯನಕ್ಕೆ ಪೂರಕವಾಗುವಂತಹ ತಾಂತ್ರಿಕ ವಿಧಾನಗಳನ್ನು ಒದಗಿಸುತ್ತಾರೆ. ಅದು ಅವರ ದೃಷ್ಟಿಕೋನವಷ್ಟೇ ಎಂದು ತೆಗೆದುಹಾಕದಿರುವಷ್ಟು ಗಂಭೀರವಾಗಿ ಸಂಶೋಧನಾ ವಿದ್ಯಾರ್ಥಿಗಳು ಪರಿಗಣಿಸಿ ನಂತರ ತಮ್ಮ ದೇಸೀಮೂಲದ ಸೂಕ್ಷ್ಮತೆಗಳಿಂದ ವಿಷಯಗಳನ್ನು ಗ್ರಹಿಸಬಹುದಾದಷ್ಟು ಅಧ್ಯಯನಕ್ಕೆ ಪೂರಕವಾದ ವಿಷಯಗಳಿವೆ.

ಬರಹದ ರೂಪದಲ್ಲಿ ದಾಖಲಿಸುವ ಮುನ್ನ ಬಾಯಿಂದ ಬಾಯಿಗೆ ದಾಟುತ್ತಾ ಬಂದಂತಹ ಕತೆಗಳು ಮತ್ತು ಐತಿಹ್ಯಗಳು ದಟ್ಟಗೊಂಡವು. ಪುರಾಣಗಳಿಗಿರುವ ಆ ಮೌಖಿಕ ಪರಂಪರೆಯ ಶಕ್ತಿಯು ಇನ್ನೂ ನಮ್ಮ ಜನರಲ್ಲಿ ಕುಂದಿಲ್ಲ. ಅದನ್ನೇ ಶ್ರದ್ಧೆ, ನಂಬುಗೆ, ವಿಶ್ವಾಸ, ನಡೆದುಕೊಂಡು ಬಂದಿರುವುದು ಎಂಬ ಇತ್ಯಾದಿ ಹೆಸರುಗಳಿಂದ ಕರೆಯುತ್ತಾ ಪ್ರಸ್ತುತವೋ ಅಪ್ರಸ್ತುತವೋ, ಸಂಪ್ರದಾಯವು ಇರಬೇಕೆನ್ನುವ ಮನಸ್ಥಿತಿ ಬಹುಪಾಲು ಜನರಲ್ಲಿ ಗಾಢವಾಗಿದೆ. ಅದರಿಂದಾಚೆಗೆ ಆಲೋಚನೆಯನ್ನೇ ಮಾಡಲಾಗದಷ್ಟು ಸೂಕ್ಷ್ಮಾವಸ್ಥೆಯಲ್ಲಿ ಪ್ರತಿಷ್ಟಾಪಿತವಾಗಿದೆ.

ಒಟ್ಟಾರೆ ಗಮನಿಸಿ ನೋಡಲು ಈ ಮಿಥಿಕಗಳು ಮಾನವನ ಸಾಂಸ್ಕೃತಿಕ ಮತ್ತು ಸಾಮಾಜಿಕ ಚರಿತ್ರೆಯನ್ನು ತನ್ನಲ್ಲಿ ಹುದುಗಿಸಿಕೊಂಡಿವೆ. ಈ ಸತ್ಯವನ್ನು ಅನಾವರಣ ಮಾಡಲು ಧಾರ್ಮಿಕರಿಗೆ ಆಸಕ್ತಿ ಇಲ್ಲ. ಏಕೆಂದರೆ ತಮ್ಮ ಗುರುತನ್ನೇ ಕಳೆದುಕೊಳ್ಳುವ ಭಯ ಮತ್ತು ಅದರಿಂದಾಗಿಯೇ ಸುಖವಾಗಿರುವ ಆಸೆ. ಆದ್ದರಿಂದಲೇ ಅಧಾರ್ಮಿಕರು, ವಾಸ್ತವವಾದಿಗಳು, ನಾಸ್ತಿಕರು ತಮ್ಮ ವಾದಗಳನ್ನು ಮುಂದಿಟ್ಟಾಗ ಅವರು ಕನಲುವುದು. ಈ ಪುರಾಣವು ಸಾಂಸ್ಕೃತಿಕ ಚೌಕಟ್ಟಿನಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂದು ವಿವರಿಸುವ ಕ್ಯಾಂಬಲ್, ತೀರಾ ಖಂಡಿಸುವ ಮತ್ತು ಮಂಡಿಸುವ ಗೋಜಿಗೆ ಹೋಗದೇ ಒಬ್ಬ ವ್ಯಕ್ತಿಯ ಹುಟ್ಟಿನಿಂದ ಮರಣದವರೆಗೆ ಅವನ ಜೀವನವನ್ನು ಈ ಮಿಥಿಕಗಳು ಎಷ್ಟರಮಟ್ಟಿಗೆ ಸೈದ್ಧಾಂತಿಕವಾಗಿ ನಿಯಂತ್ರಿಸುತ್ತಾ ಹೋಗುತ್ತದೆ ಎಂದು ತಿಳಿಸುವ ಯತ್ನ ಮಾಡುತ್ತಾರೆ.

ಪುರಾಣಗಳ ಶಕ್ತಿಗೆ ಅಧೀನವಾಗಿರುವ ಮನುಷ್ಯ ಧಾರ್ಮಿಕವಾಗಿ ಅಲ್ಲದಿದ್ದರೂ ಯಾವುದಾದರೊಂದು ಬಗೆಯಲ್ಲಿ ಮಿಥಿಕಗಳನ್ನು ವಿಜೃಂಭಿಸುತ್ತಲೇ ಇರುತ್ತಾನೆ. ಇದಕ್ಕೆ ದೇಶಕಾಲಗಳ ಇತಿಮಿತಿಗಳಿಲ್ಲ. ಧಾರ್ಮಿಕರಾಗಿಲ್ಲದವರೂ ಸಿನಿಮಾ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಿಥಿಕಗಳನ್ನು ಜೀವಂತವಾಗಿಟ್ಟಿರುತ್ತಾರೆ.

ಯಹೂದಿಗಳಿಗಿಂತ ಮುನ್ನಾ ಕಾಲದ ಬುಡಕಟ್ಟುಗಳಿಂದ ಹಿಡಿದು ನವನವೀನ ಜನಾಂಗದವರೆಗೂ ಮಿಥಿಕಗಳ ಶಕ್ತಿಯು ಮನುಷ್ಯನ ಚರಿತ್ರೆಯಲ್ಲಿ ಎಷ್ಟರಮಟ್ಟಿಗೆ ತನ್ನ ಪ್ರಭಾವವನ್ನು ಬೀರುತ್ತಲೇ ಇದೆ ಎಂಬುದನ್ನು ಬಹಳ ಪಾಂಡಿತ್ಯಪೂರ್ಣವಾಗಿ ಜೋಸೆಫ್ ಕ್ಯಾಂಬಲ್ ಪ್ರಸ್ತುತಪಡಿಸುತ್ತಾರೆ.


ಇದನ್ನೂ ಓದಿ: ಪುಟಕ್ಕಿಟ್ಟ ಪುಟಗಳು: ಇಸ್ಲಾಂ ಅರ್ಥದ ವ್ಯಾಪ್ತಿಯನ್ನು ಸ್ಪಷ್ಟಪಡಿಸುವ ಇಸ್ಲಾಂ ಸಮೀಕ್ಷೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...