ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ಹೆಸರುವಾಸಿಯಾದ ಬಿಜೆಪಿ ಸಂಸದ ಪರ್ವೇಶ್ ವರ್ಮಾ ದೆಹಲಿ ಮತದಾನ ದಿನವಾದ ಇಂದು ವಿಡಿಯೋವೊಂದನ್ನು ಹರಿಯಬಿಟ್ಟು ಮತ್ತೆ ವಿವಾದವೆಬ್ಬಿಸಿದ್ದಾರೆ. ಅವರು ಶಾಹೀನ್ ಬಾಗ್ ನಲ್ಲಿ ಜನರು ಸಾಲುಗಟ್ಟಿ ಆಮ್ ಆದ್ಮಿ ಪಕ್ಷಕ್ಕೆ ಮತ ಚಲಾಯಿಸುತ್ತಿದ್ದಾರೆ, ಯಾಕೆಂದರೆ ಅದು ಆಮ್ ಆದ್ಮಿ ಪಕ್ಷದ ಸಾಲವನ್ನು ತೀರಿಸುತ್ತಿದೆ..!! ಎಂದು ಹೇಳುವ ವೀಡಿಯೊವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
अगर शाहीन बाग के लोग लंबी-लंबी क़तारों में चिल्ला चिल्ला कर बोल सकते हैं AAP पार्टी को वोट डालो तो दिल्ली वालों आप भी घरों से निकलो और देशभक्त पार्टी को वोट डालो।@ANI @PTI_News pic.twitter.com/QYkIWj4E1s
— Parvesh Sahib Singh (@p_sahibsingh) February 8, 2020
“ದೆಹಲಿಯ ಜನರು, ಮಾಧ್ಯಮಗಳು ನಾನು ಇಲ್ಲಿಯವರೆಗೆ ಹೇಳುತ್ತಿದ್ದ ಮಾತನ್ನು ಹೇಳುತ್ತಿವೆ. ಶಾಹೀನ್ ಬಾಗ್, ಸೀಲಾಂಪುರ್ ಮತ್ತು ಜಾಮಿಯಾ ಮಿಲ್ಲಿಯಾದ ನಿರ್ದಿಷ್ಟ ಸಮುದಾಯದ ಜನರು ಉದ್ದದ ಸಾಲುಗಳಲ್ಲಿ ನಿಂತು ಎಎಪಿಗೆ ಮತ ಹಾಕುತ್ತೇವೆ ಎಂದು ಹೇಳುತ್ತಿದಾರೆ. ಯಾಕೆಂದರೆ ಆದ್ಮಿ ಪಕ್ಷವು ಒಂದು ತಿಂಗಳಿಗೂ ಹೆಚ್ಚು ಕಾಲ ಅವರಿಗೆ ಬಿರಿಯಾನಿ ನೀಡುತ್ತಿದೆ” ಎಂದು ವರ್ಮಾ ಹೇಳಿದ್ದಾರೆ.
ಪರ್ವೇಶ್ ವರ್ಮ ಇದನ್ನು ಎಎಪಿ ನೀಡಿದ “ಸಾಲದ ಮರುಪಾವತಿ” ವಿಧಾನ ಎಂದೂ ಹೇಳಿದರು. ದೆಹಲಿಯ ಜನರನ್ನು “ರಾಷ್ಟ್ರವಾದಿ” ಮತ್ತು “ದೇಶಭಕ್ತ” ಎಂದು ಸಂಬೋಧಿಸಿದ ವರ್ಮಾ “ನಾವು ದೆಹಲಿಯನ್ನು ಬೇರ್ಪಡಿಸಲು ಬಿಡುವುದಿಲ್ಲ, ಇದಕ್ಕಾಗಿ ನೀವೂ ದೊಡ್ಡ ದೊಡ್ಡ ಸಾಲುಗಳಲ್ಲಿ ನಿಂತು ನಾವು ರಾಷ್ಟ್ರಭಕ್ತ ಪಕ್ಷಕ್ಕೆ ಮತ ನೀಡುತ್ತೇವೆ ಎಂದು ಹೇಳಿ ಎಂದ ಅವರು ಜೋರಾಗಿ ಜೈ ಶ್ರೀ ರಾಮ್ ಹೇಳಿ” ಎಂದಿದ್ದಾರೆ.
ಮತದಾನದ ದಿನದಂದು ವರ್ಮಾ, ಈ ವಿಡಿಯೋವನ್ನು ಬಿಡುಗಡೆ ಮಾಡಿದ್ದು ವಿರೋಧ ಪಕ್ಷದವರಲ್ಲಿ ಕಳವಳವನ್ನು ಸೃಷ್ಟಿಸಿದೆ. ಇದಕ್ಕೆ ಚುನಾವಣಾ ಆಯೋಗ ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೆ ಮತದಾನ ದಿನದಂದು ಇದನ್ನು ಹರಿಯಬಿಟ್ಟಿದ್ದರಿಂದ ಮತದಾರರ ಧ್ರುವೀಕರಿಸುವ ಸಾಧ್ಯತೆಯೂ ಇದೆ.
ಶಾಹೀನ್ ಬಾಗ್ ಪ್ರತಿಭಟನಾಕಾರರಿಗೆ ಎಎಪಿ ಬಿರಿಯಾನಿ ವ್ಯವಸ್ಥೆ ಮಾಡುತ್ತಿದೆ ಎಂದು ವರ್ಮಾ ಆರೋಪಿಸುತ್ತಿರುವುದು ಇದೇ ಮೊದಲಲ್ಲ.
ಮುಂಚೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು “ಭಯೋತ್ಪಾದಕ” ಎಂದು ಕರೆದಿದ್ದಕ್ಕಾಗಿ ಚುನಾವಣಾ ಆಯೋಗವು ಎರಡು ಬಾರಿ ಪ್ರಚಾರ ಮಾಡುವುದನ್ನು ನಿಷೇಧಿಸಿತು.
ಇಂದು ದೆಹಲಿ ಮತದಾನ ನಡೆಯುತ್ತಿದ್ದು, ಫೆಬ್ರವರಿ 11 ರಂದು ಫಲಿತಾಂಶಗಳು ಹೊರಬರಲಿವೆ.


