RBI ಗವರ್ನರ್ ಆಗಿ ಮೂರು ವರ್ಷದ ಅವಧಿಗೆ ಶಕ್ತಿಕಾಂತ ದಾಸ್‌ರವರನ್ನು ಸರ್ಕಾರ ಮರುನೇಮಕ ಮಾಡಿದೆ. ಡಿಸೆಂಬರ್ 2024ರವರೆಗೆ ಅವರು ಅದೇ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾರವರನ್ನು ಒಳಗೊಂಡ ಕ್ಯಾಬಿನೆಟ್ ಸಮಿತಿ ಗುರುವಾರ ಸಂಜೆ ತಿಳಿಸಿದೆ.
ಶಕ್ತಿಕಾಂತ್ ದಾಸ್‌ರವರನ್ನು ಡಿಸೆಂಬರ್ 10, 2021ರಿಂದ ಡಿಸೆಂಬರ್ 10,2024ರವರೆಗೆ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಯಾವುದೇ ಮೊದಲ ಆದೇಶದವರೆಗೆ RBI ಗವರ್ನರ್ ಆಗಿ ನೇಮಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಶಕ್ತಿಕಾಂತ ದಾಸ್‌ರವರು 2018ರ ಡಿಸೆಂಬರ್‌ನಲ್ಲಿ RBI ಗವರ್ನರ್ ಆಗಿ ನೇಮಕಗೊಂಡಿದ್ದರು. ಇದೇ ಡಿಸೆಂಬರ್‌ಗೆ ಅವರ ಅಧಿಕಾರವಧಿ ಮುಕ್ತಾಯವಾಗಲಿದ್ದ ಹಿನ್ನೆಲೆಯಲ್ಲಿ ಅವರನ್ನು ಮರುನೇಮಕ ಮಾಡಲಾಗಿದೆ. ಈ ಮೊದಲು ಅವರು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.
ಎನ್‌ಡಿಎ ಸರ್ಕಾರದಲ್ಲಿ ಎರಡನೇ ಬಾರಿಗೆ RBI ಗವರ್ನರ್ ಆಗಿ ನೇಮಕಗೊಂಡ ಮೊದಲ ವ್ಯಕ್ತಿ ಶಕ್ತಿಕಾಂತ ದಾಸ್ ಆಗಿದ್ದಾರೆ. ಈ ಮೊದಲಿದ್ದ ಊರ್ಜಿತ್ ಪಟೇಲ್‌ರವರು ಸರ್ಕಾರದೊಂದಿಗಿನ ಭಿನ್ನಾಭಿಪ್ರಾಯದ ಕಾರಣಕ್ಕಾಗಿ ಈ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದಿದ್ದರು. ಅದಕ್ಕೂ ಮೊದಲು ಖ್ಯಾತ ಅರ್ಥಶಾಸ್ತ್ರಜ್ಞ ರಘುರಾಂ ರಾಜನ್ ಸಹ ಮೋದಿ ಸರ್ಕಾರದ ನೋಟು ಅಮಾನ್ಯೀಕರಣ ಸೇರಿ ಹಲವು ಕ್ರಮಗಳನ್ನು ವಿರೋಧಿಸಿದ್ದರು.
ಇದನ್ನೂ ಓದಿ: ತಮಿಳುನಾಡು ಸರ್ಕಾರದ ಆರ್ಥಿಕ ಸಲಹಾ ಮಂಡಳಿಯ ಭಾಗವಾದ ರಘುರಾಂ ರಾಜನ್, ಎಸ್ತರ್ ಡುಫ್ಲೊ


