INDIA ಒಕ್ಕೂಟ ಸ್ಥಾಪನೆ ಬಳಿಕ ಆರು ರಾಜ್ಯಗಳ 7 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ವಿರೋಧ ಪಕ್ಷದ ಒಕ್ಕೂಟ INDIA 4 ಸ್ಥಾನಗಳನ್ನು ಗೆದ್ದುಕೊಂಡಿದೆ ಮತ್ತು NDA ಒಕ್ಕೂಟ 3 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಇದು ವಿಪಕ್ಷಗಳ ಒಕ್ಕೂಟ ರಚನೆಯಾದ ಬಳಿಕ ಎನ್‌ಡಿಎ ಒಕ್ಕೂಟಕ್ಕೆ ಸಿಕ್ಕ ಮೊದಲ ಆಘಾತವಾಗಿದೆ.
ಬಿಜೆಪಿ ಮೂರು ಉಪಚುನಾವಣೆಗಳಲ್ಲಿ ಗೆದ್ದರೆ ಅವುಗಳಲ್ಲಿ ಎರಡು ಅದರ ಹಾಲಿ ಸ್ಥಾನಗಳಾಗಿದ್ದವು. INDIA ಒಕ್ಕೂಟ ಮಿತ್ರಪಕ್ಷಗಳು ನಾಲ್ಕನ್ನು ಗೆದ್ದುಕೊಂಡಿದೆ. ಅದರಲ್ಲೂ ಉತ್ತರ ಪ್ರದೇಶದ ನಿರ್ಣಾಯಕ ಸ್ಥಾನವನ್ನು INDIA ಒಕ್ಕೂಟ ತಮ್ಮದಾಗಿಸಿಕೊಂಡಿದೆ.
ಜಾರ್ಖಂಡ್‌ನ ಡುಮ್ರಿ ಮತ್ತು ಉತ್ತರ ಪ್ರದೇಶದ ಘೋಸಿಯಲ್ಲಿ ಗೆಲುವು INDIA ಒಕ್ಕೂಟದ ಮೊದಲ ಯಶಸ್ವಿ ಎಂದು ಬಣ್ಣಿಸಲಾಗಿದೆ.
ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್ ಪಕ್ಷ ಕೇರಳದಲ್ಲಿ ಜಯ ಸಾಧಿಸಿದೆ. ದಿವಂಗತ ಮುಖ್ಯಮಂತ್ರಿ ಒಮನ್ ಚಾಂಡಿಯವರ ಪುತ್ರ ತಮ್ಮ ತಂದೆಯ ಭದ್ರಕೋಟೆಯನ್ನು ಉಳಿಸಿಕೊಂಡಿದ್ದಾರೆ.
ದೇಶದಲ್ಲಿ ಭಾರೀ ಕುತೂಹಲ ಮೂಡಿಸಿದ ಘೋಸಿ ಕ್ಷೇತ್ರದಲ್ಲಿ ಬಿಜೆಪಿ ಸೋಲು ಅನುಭವಿಸಿದೆ. ಈ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ದಾರಾ ಸಿಂಗ್ ಚೌಹಾಣ್ ಉಪಚುನಾವಣೆಗೆ ಸ್ಪರ್ಧಿಸಿದ್ದರು. ಯೋಗಿ ಆದಿತ್ಯನಾಥ್ ಸಂಪುಟದ ಹಲವು ಸಚಿವರು ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿ ಪ್ರಚಾರ, ತಂತ್ರ ನಡೆಸಿದ್ದಾರೆ. ಅದ್ಯಾವುದೂ ಫಲಿಸಿಲ್ಲ. ಈ ಕ್ಷೇತ್ರದಲ್ಲಿ ಬಿಜೆಪಿಯ ದಾರಾ ಸಿಂಗ್ ಚೌಹಾಣ್ ವಿರುದ್ಧ ಸಮಾಜವಾದಿ ಪಕ್ಷದ ಸುಧಾಕರ್ ಸಿಂಗ್ 42,759 ಮತಗಳ ಭಾರಿ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ.
INDIA ಒಕ್ಕೂಟದ ಭಾಗವಾದ SP ಕೇವಲ ಘೋಸಿಯನ್ನು ಗೆಲ್ಲಲಿಲ್ಲ, ಅದು 2022ರಿಂದ ತನ್ನ ಮತಗಳ ಪಾಲನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸಿದೆ. 42% ದಿಂದ 58%ಕ್ಕೆ ಮತಗಳನ್ನು ಹೆಚ್ಚಿಸಿಕೊಂಡಿದೆ.
ಜಾರ್ಖಂಡ್‌ನ ದುಮ್ರಿ ಕ್ಷೇತ್ರದಲ್ಲಿ ಇಂಡಿಯಾ ಬೆಂಬಲಿತ ಜೆಎಂಎಂನ ಅಭ್ಯರ್ಥಿ ಬೇಬಿ ದೇವಿ ಅವರು ಎನ್‌ಡಿಎ ಬೆಂಬಲಿತ ಎಜೆಎಸ್‌ಯು ಅಭ್ಯರ್ಥಿ ಯಶೋದಾ ದೇವಿ ವಿರುದ್ಧ 17,000ಕ್ಕೂ ಹೆಚ್ಚು ಮತಗಳ ಅಂತರದ ಗೆಲುವು ಪಡೆದುಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ಧೂಪಗುರಿ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ನಿರ್ಮಲ್ ಚಂದ್ರ ರಾಯ್ 4,313 ಮತಗಳಿಂದ ಬಿಜೆಪಿ ಅಭ್ಯರ್ಥಿ ತಾಪಸಿ ರಾಯ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಉತ್ತರಾಖಂಡದ ಬಾಗೇಶ್ವರದಲ್ಲಿ ಬಿಜೆಪಿ ಅಭ್ಯರ್ಥಿ ಪಾರ್ವತಿ ದಾಸ್, ಕಾಂಗ್ರೆಸ್ ಅಭ್ಯರ್ಥಿ ಬಸಂತ ಕುಮಾರ್ ವಿರುದ್ಧ ಅಲ್ಪ(2400) ಮತಗಳಿಂದ ಗೆಲುವು ಪಡೆದುಕೊಂಡಿದ್ದಾರೆ. ತ್ರಿಪುರಾದಲ್ಲಿ ಆಡಳಿತಾರೂಢ ಬಿಜೆಪಿ ಬಕ್ಸ್ ನಗರ ಕ್ಷೇತ್ರವನ್ನು ಸಿಪಿಎಂನಿಂದ ಕಸಿದುಕೊಂಡಿದ್ದರೆ. ಧನಪುರ ಕೇತ್ರವನ್ನು ಉಳಿಸಿಕೊಂಡಿದೆ.
ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸೆಪ್ಟೆಂಬರ್ 5 ರಂದು ನಡೆದ ಏಳು ಉಪಚುನಾವಣೆಗಳಲ್ಲಿ ನಾಲ್ಕರಲ್ಲಿ ಬಿಜೆಪಿ ಸೋತಿದೆ. ಇದು ಇಂಡಿಯಾ ಮೈತ್ರಿಗೆ ಸಿಕ್ಕ ದೊಡ್ಡ ಗೆಲುವು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಬಿಜೆಪಿಗೆ ಪರ್ಯಾಯವಾಗಿ ಜನರು ಇಂಡಿಯಾ ಮೈತ್ರಿಕೂಟವನ್ನು ಒಪ್ಪಿಕೊಂಡಿದ್ದಾರೆ ಎಂಬುದು ಉಪಚುನಾವಣೆಯಲ್ಲಿ ಪ್ರತಿಪಕ್ಷ ಮೈತ್ರಿಕೂಟ ಇಂಡಿಯಾದ ಅಭ್ಯರ್ಥಿಗಳ ಗೆಲುವು ಸಾಬೀತುಪಡಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ.
ಇದನ್ನು ಓದಿ: ಐಐಟಿ ಜಾತಿ ತಾರತಮ್ಯ ಸರ್ವೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವಾಪಾಸ್ಸು


