ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೆಹಲಿಯಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ರಾಹುಲ್ ಗಾಂಧಿ ಅವರೊಂದಿಗೆ ಸ್ವಲ್ಪ ದೂರ ಹೆಜ್ಜೆ ಹಾಕಿದ್ದು, ತಮ್ಮ ತಾಯಿಯ ಕುರಿತು ರಾಹುಲ್ ಭಾವನಾತ್ಮಕವಾದ ಪೋಸ್ಟ್ ಹಂಚಿಕೊಂಡಿದ್ದಾರೆ.
ಭಾರತ್ ಜೋಡೋ ಯಾತ್ರೆಯನ್ನು ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, “ನಾನು ಅವರಿಂದ ಪಡೆದ ಪ್ರೀತಿಯನ್ನು ದೇಶದೊಂದಿಗೆ ಹಂಚಿಕೊಳ್ಳುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ಕನ್ಯಾಕುಮಾರಿಯಿಂದ ಸೆಪ್ಟೆಂಬರ್‌ನಲ್ಲಿ ಆರಂಭವಾದ ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿಯವರು ಎರಡನೇ ಬಾರಿಗೆ ಪಾಲ್ಗೊಂಡಿದ್ದಾರೆ. ಈ ಹಿಂದೆ ಅಕ್ಟೋಬರ್‌ನಲ್ಲಿ ಕರ್ನಾಟಕದಲ್ಲಿದ್ದಾಗ ಅವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಸೋನಿಯಾ ಗಾಂಧಿ ಅವರು ಮುಖಕ್ಕೆ ಮಾಸ್ಕ್ ಧರಿಸಿ, ತಮ್ಮ ಪುತ್ರ ರಾಹುಲ್ ಗಾಂಧಿ ಮತ್ತು ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಕೆಲವು ನಿಮಿಷಗಳ ಕಾಲ ಹೆಜ್ಜೆ ಹಾಕಿದರು. ಯಾತ್ರೆಯು ದೆಹಲಿ ಆಶ್ರಮ ಚೌಕ್‌ನಲ್ಲಿ ಬೆಳಿಗ್ಗೆ ವಿರಾಮ ಪಡೆಯಿತು.
ಶನಿವಾರ ಬೆಳಗ್ಗೆ ಹರಿಯಾಣದಿಂದ ದೆಹಲಿ ಪ್ರವೇಶಿಸಿದ ಯಾತ್ರೆಗೆ ಬಾದರ್‌ಪುರ ಗಡಿಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಆತ್ಮೀಯ ಸ್ವಾಗತ ಕೋರಿದರು.
ಭಾರತ್ ಜೋಡೋ ಯಾತ್ರೆಯು ಸಂಜೆ 4:30ರ ಸುಮಾರಿಗೆ ಕೆಂಪು ಕೋಟೆಯನ್ನು ತಲುಪಲಿದೆ. ಯಾತ್ರೆಯು ರಾಜ್‌ಘಾಟ್‌ಗೆ ಭೇಟಿ ತಲುಪಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಲಿದೆ.
“ದೆಹಲಿ ಘಟಕದ ಮುಖ್ಯಸ್ಥ ಅನಿಲ್ ಚೌಧರಿ ನೇತೃತ್ವದಲ್ಲಿ ದೆಹಲಿ ಕಾಂಗ್ರೆಸ್‌ನ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು, ರಾಹುಲ್ ಗಾಂಧಿ ಮತ್ತು ಇತರ ಯಾತ್ರಿಗಳನ್ನು ಬಾದರ್‌ಪುರದ ಗಡಿಯಲ್ಲಿ ಸ್ವಾಗತಿಸಿದರು” ಎಂದು ಪಿಟಿಐ ವರದಿ ಮಾಡಿದೆ.
ಟ್ವಿಟರ್ ಖಾತೆಯಲ್ಲಿ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, “ಹಣದುಬ್ಬರ, ನಿರುದ್ಯೋಗ ಮತ್ತು ದ್ವೇಷವನ್ನು ತೊಡೆದುಹಾಕಿ. ಭಾರತದ ಈ ಧ್ವನಿಯನ್ನು ಹೊತ್ತುಕೊಂಡು ನಾವು ‘ರಾಜ’ನ ಗದ್ದುಗೆ ಇರುವಲ್ಲಿಗೆ ಬಂದಿದ್ದೇವೆ, ನಾವು ದೆಹಲಿಗೆ ಬಂದಿದ್ದೇವೆ, ರಾಜಧಾನಿಗೆ ಬನ್ನಿ ನಮ್ಮೊಂದಿಗೆ ಸೇರಿಕೊಳ್ಳಿ” ಎಂದು ಮನವಿ ಮಾಡಿದೆ.
ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆ ಇದುವರೆಗೆ ಒಂಬತ್ತು ರಾಜ್ಯಗಳಲ್ಲಿ ಸಂಚರಿಸಿದ್ದು, ಜನವರಿ ಅಂತ್ಯದ ವೇಳೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.
ಮೆರವಣಿಗೆಯು ರಾಷ್ಟ್ರ ರಾಜಧಾನಿಯ ಮೂಲಕ ಸಾಗುತ್ತಿದ್ದಂತೆ ದೆಹಲಿಯ ಕೆಲವು ಭಾಗಗಳಿಂದ ಸಂಚಾರ ದಟ್ಟಣೆ ವರದಿಯಾಗಿದೆ.


