Homeಮುಖಪುಟನಿರಂತರ ರಾಜಕೀಯ ದಾಳವಾಗಿರುವ ’ಏಕರೂಪ ನಾಗರಿಕ ಸಂಹಿತೆ’

ನಿರಂತರ ರಾಜಕೀಯ ದಾಳವಾಗಿರುವ ’ಏಕರೂಪ ನಾಗರಿಕ ಸಂಹಿತೆ’

- Advertisement -
- Advertisement -

ದೇಶದ ರಾಜಕೀಯದಲ್ಲಿ ಯಾವಾಗ ’ಏಕರೂಪ ನಾಗರಿಕ ಸಂಹಿತೆ’ ಎಂಬ ವಿಷಯ ಮೈಕೊಡವಿ ಎದ್ದು ನಿಲ್ಲುತ್ತದೋ ಆಗ ಎಲೆಕ್ಷನ್ ಹತ್ತಿರ ಬಂದಿದೆ ಎಂದರ್ಥ ಮತ್ತು ದೇಶದ ಅತ್ಯಂತ ಹಳೆಯ ಹಿಂದೂ-ಮುಸ್ಲಿಂ ಸಂಘರ್ಷದ ’ಚ್ಯೂಯಿಂಗ್ ಗಮ್’ಅನ್ನು ಮತ್ತಷ್ಟು ಜಗಿಯುವ ಸಮಯ ಬಂದಿದೆ ಎಂದೂ ಊಹಿಸಬಹುದು.

ಹಿಮಾಚಲ ಪ್ರದೇಶದಲ್ಲಿ ಸೋತರೂ ಸಹ ಗುಜರಾತ್ ಎಂಬ ಖಾತ್ರಿ ಗದ್ದುಗೆ ಏರಿದ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ತನ್ನ ಮುಂದಿನ ಮುಖ್ಯ ಗುರಿ ಏನಿದ್ದರೂ 2024ರ ಲೋಕಸಭಾ ಎಲೆಕ್ಷನ್ ಎಂದೆನಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ. ಅದಕ್ಕೆಂದೇ ರಾಜ್ಯಸಭೆಯ ಸದಸ್ಯರಾದ ರಾಜಸ್ಥಾನದ ಕಿರೋಡಿ ಲಾಲ್ ಮೀನಾ ಅವರ ಮೂಲಕ ಮತ್ತೆ ’ಏಕರೂಪ ನಾಗರಿಕ ಸಂಹಿತೆ’ಯ ಖಾಸಗಿ ಸದಸ್ಯ ಮಸೂದೆಯನ್ನು ಮುಂಚೂಣಿಗೆ ತಂದಿದೆ. ಈ ಕಿರೋಡಿ ಲಾಲ್ ಮೀನಾ ಅವರು ಈ ಮಸೂದೆಯನ್ನು ಮಂಡಿಸಿದ್ದು ಇದೇ ಮೊದಲ ಬಾರಿ ಏನಲ್ಲ. 2020ರಲ್ಲಿಯೇ ಅವರು ಈ ಖಾಸಗಿ ಮಸೂದೆಯನ್ನು ಮಂಡಿಸಿದ್ದರು. ಆದರೆ ದೇಶದೆಲ್ಲೆಡೆ ಸಿಎಎ ಮತ್ತು ಎನ್‌ಆರ್‌ಸಿ ಪ್ರತಿಭಟನೆ ಮತ್ತು ಹೋರಾಟಗಳು ಹೆಚ್ಚಾದಾಗ ಮತ್ತು ಮುಖ್ಯವಾಗಿ ಅಂದಿನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರುವ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ಗಲಭೆ ಹಾಗೂ ಅಶಾಂತಿ ಬೇಡ ಎನಿಸಿ ಮಸೂದೆಯನ್ನು ತಣ್ಣಗೆ ಇಡಲಾಗಿತ್ತು. ಬಿಜೆಪಿಗೆ ಗೊತ್ತು ಅದನ್ನು ಎಷ್ಟೇ ತಣ್ಣಗೆ ಇಟ್ಟರೂ ಮತ್ತೆ ಹೊರಗೆ ತೆಗೆದ ದಿನ, ಜನರಿಗೆ ಬಿಸಿ ತಟ್ಟಿಸುವ ಶಕ್ತಿ ಅದಕ್ಕಿದೆ ಎಂಬುದು. ಅದಕ್ಕೇ ಗುಜರಾತ್ ಗೆಲುವಿನ ನಂತರ ಮತ್ತೆ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ.

ರಾಜಕೀಯ ವಿಮರ್ಶಕರ ಪ್ರಕಾರ ಬಿಜೆಪಿಯ ಪ್ರಮುಖ ಅಜೆಂಡಾಗಳಲ್ಲಿ ’ಏಕರೂಪ ನಾಗರಿಕ ಸಂಹಿತೆ’ ಎಂಬುದು ಸ್ವಲ್ಪ ಕಷ್ಟಕರವಾದದ್ದು. ಏಕೆಂದರೆ ಇದನ್ನು ಜಾರಿಗೆ ತರುವ ಮುಂಚೆ ಅದರ ಬಗ್ಗೆ ಅಧ್ಯಯನಗಳು ಆಗಬೇಕು ಮತ್ತು ವಿವಾದಗಳಿಗೆ ಆಸ್ಪದ ಕೊಡದ ರೀತಿಯಲ್ಲಿ ಕಾಯ್ದೆಯ ರಚನೆ ಆಗಬೇಕು.

ಕೇಂದ್ರ ಸರ್ಕಾರದ ಮೂರು ಪ್ರಮುಖ ಆಶ್ವಾಸನೆಗಳಲ್ಲಿ, ಒಂದು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನವನ್ನು (370ನೇ ಪರಿಚ್ಛೇದ) ರದ್ದು ಮಾಡಿದ್ದು, ಎರಡನೆಯದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಕೊನೆಯದು ’ಏಕರೂಪ ನಾಗರಿಕ ಸಂಹಿತೆ’; ಅಭಿವೃದ್ಧಿ ಮತ್ತು ವಿಕಾಸ ಎಂದು ಹೇಳಿದ್ದು ಈ ಮೂರನ್ನು ಒಳಗೊಂಡ ಮಾತ್ರೆಗೆ ಲೇಪಿಸಿದ ಸಕ್ಕರೆಯ ಕವಚದಂತೆ ಮಾತ್ರ, ಅದು ಎಂದೋ ಕರಗಿಹೋಗಿದೆ.

ಕಿರೋಡಿ ಲಾಲ್ ಮೀನಾ

ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ತೆಗೆದಾಗಿದೆ. ಈಗ ಇನ್ನೊಂದಿಷ್ಟು ತಿಂಗಳುಗಳಲ್ಲಿ ಅಲ್ಲಿ ಚುನಾವಣೆಗಳನ್ನೂ ಮಾಡಬಹುದು; ಆದರೆ ಅದರಿಂದ ಆದ ಬದಲಾವಣೆಗಳು ಏನು ಎಂಬುದು ಯಾರಿಗೂ ತಿಳಿದಿಲ್ಲ. ವರ್ಷಾನುಗಟ್ಟಲೆ ಅಲ್ಲಿನ ಜನರ ನಾಗರಿಕ ಸವಲತ್ತುಗಳನ್ನು ಕಸಿದು ಕತ್ತಲೆಯ ರಾಜ್ಯ ಸೃಷ್ಟಿ ಮಾಡಿದ್ದರ ಉದ್ದೇಶ ಈಡೇರಿದೆಯೇ? ಅಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿದೆಯೇ? ನಾಗರಿಕ ಬದುಕಿನಲ್ಲಿ ಭರವಸೆ, ಉದ್ಯೋಗಗಳ ಸೃಷ್ಟಿ, ಭಯೋತ್ಪಾದನೆಯ ನಿರ್ಮೂಲನೆ, ಗಡಿ ಸಮಸ್ಯೆ ಮುಕ್ತಾಯ ಏನಾದರೂ ಸಾಧ್ಯವಾಗಿದೆಯೇ? ಬಹುಶಃ ಉತ್ತರ ಯಾರಿಗೂ ಸಿಗಲಿಕ್ಕಿಲ್ಲ. ಆದರೆ ಪಕ್ಷ ತನ್ನ ಆಶ್ವಾಸನೆ ಈಡೇರಿಸಿತು ಎಂಬ ಹೆಮ್ಮೆ ಮಾತ್ರ ಹೇಳಿಕೊಳ್ಳಲು ಇದೆ.

ಇನ್ನು ರಾಮಮಂದಿರದ ನಿರ್ಮಾಣವನ್ನು ಹಾಗೋ ಹೀಗೋ ಮಾಡಿ 2024ರ ಎಲೆಕ್ಷನ್‌ಗೆ ಮುಂಚೆ ಮುಗಿಸಿ, ಕೇಸರಿ ಬಟ್ಟೆ ಧರಿಸಿ, ಧರ್ಮಾಧಿಕಾರಿಯ ರೂಪದಲ್ಲಿ ಮಾನ್ಯ ಪ್ರಧಾನಮಂತ್ರಿಗಳು ಅದರ ಉದ್ಘಾಟನೆಯೊಂದನ್ನು ನೆರವೇರಿಸಿಬಿಟ್ಟರೆ ದೇಶದ ಅರ್ಧ ಸಮಸ್ಯೆಗಳು ಮುಗಿದ ಹಾಗೆಯೇ. ಕೊನೆಗೆ ಉಳಿಯುವುದು ’ಏಕರೂಪ ನಾಗರಿಕ ಸಂಹಿತೆ’ ಮಾತ್ರ.

ಇದನ್ನೂ ಓದಿ: ರಾಮಸೇತು ಇದೆ ಎಂಬುದಕ್ಕೆ ದೃಢವಾದ ಪುರಾವೆಗಳಿಲ್ಲ: ಸಂಸತ್ತಿನಲ್ಲಿ ಮೋದಿ ಸರ್ಕಾರದ ಹೇಳಿಕೆ

ಹಿನ್ನೆಲೆ

ಏಕರೂಪ ನಾಗರಿಕ ಸಂಹಿತೆ ಬಗ್ಗೆ ವಿವರವಾದ ಚರ್ಚೆಗಳು ನಡೆದದ್ದು ನವೆಂಬರ್ 23, 1948ರಲ್ಲಿ. ಸಂವಿಧಾನ ರಚನಾ ಸಭೆಯಲ್ಲಿ ಈ ವಿಷಯದ ಕುರಿತು ನಡೆದ ಸುದೀರ್ಘ ಚರ್ಚೆಯಲ್ಲಿ ಪರ ಮತ್ತು ವಿರೋಧವಾದ ಅನೇಕ ಅಭಿಪ್ರಾಯಗಳು ವ್ಯಕ್ತವಾದವು. ಅನೇಕ ಮುಸ್ಲಿಂ ಮುಖಂಡರು ಇದಕ್ಕೆ ವಿರೋಧ ವ್ಯಕ್ತಪಡಿಸಿದರೆ ಡಾ. ಅಂಬೇಡ್ಕರ್ ಮತ್ತು ಸರ್ದಾರ್ ಪಟೇಲ್‌ರವರು ವೈಯಕ್ತಿಕ ಕಾನೂನುಗಳನ್ನು ಕ್ರೋಢೀಕರಿಸುವ ಮಹತ್ವದ ಬಗ್ಗೆ ಚರ್ಚಿಸಿದರು. ಆದರೆ ಸಂವಿಧಾನದ 19ನೇ ಪರಿಚ್ಛೇದ ನೀಡುವ ಧಾರ್ಮಿಕ ಸ್ವಾತಂತ್ರ್ಯ ಎಂಬ ಮೂಲಭುತ ಹಕ್ಕಿಗೆ ’ಏಕರೂಪ ನಾಗರಿಕ ಸಂಹಿತೆ’ ಹೇಗೆ ಪರ್ಯಾಯವಾಗಲು ಸಾಧ್ಯ ಅಥವಾ ಅವೆರಡೂ ಏಕಕಾಲದಲ್ಲಿ ಹೇಗೆ ಅಸ್ತಿತ್ವದಲ್ಲಿರಲು ಸಾಧ್ಯ ಎಂಬ ಚರ್ಚೆಯೂ ಪ್ರಮುಖವಾಗಿ ನಡೆಯಿತು. ಇನ್ನೂ ಮುಖ್ಯವಾಗಿ, ’ಏಕರೂಪ ನಾಗರಿಕ ಸಂಹಿತೆ’ಯ ಜಾರಿ ಹೇರಿಕೆಯ ರೀತಿಯಲ್ಲಿ ಆಗದೆ ನಿಧಾನವಾಗಿ ಒಮ್ಮತದ ನಿರ್ಣಯದಿಂದ ಆಗಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ದೇಶ ವಿಭಜನೆಯ ಬೃಹತ್ ಸಮಸ್ಯೆಯಲ್ಲಿದ್ದಾಗ, ’ಏಕರೂಪ ನಾಗರಿಕ ಸಂಹಿತೆ’ಯ ಹೇರಿಕೆ ಇನ್ನೂ ಹೆಚ್ಚಿನ ಧಾರ್ಮಿಕ ಒಡಕನ್ನು ಸೃಷ್ಟಿಸಬಹುದು ಎಂಬ ಹಿಂಜರಿಕೆಯೂ, ಅದರ ಹಿನ್ನಡೆಗೆ ಕಾರಣವಾಯಿತು.

ಜಾರಿಗೆ ತರುವಲ್ಲಿ ಇರುವ ತೊಡಕುಗಳು

ಪ್ರತಿಯೊಂದು ಧರ್ಮದಲ್ಲೂ ಮದುವೆ, ಆಸ್ತಿ ವಾರಸುದಾರ ಪದ್ಧತಿ, ದತ್ತು ಪದ್ಧತಿಗಳು, ಮಹಿಳೆಯರ ಹಕ್ಕುಗಳು ವಿಭಿನ್ನವಾಗಿವೆ. ಅಷ್ಟೇ ಅಲ್ಲದೆ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಪ್ರತಿಯೊಂದು ಸಂಗತಿಯನ್ನೂ ಧಾರ್ಮಿಕ ಚೌಕಟ್ಟಿನ ಒಳಗೇ ಅರ್ಥೈಸಿ ಅನುಸರಿಸಬೇಕಾಗಿರುವುದರಿಂದ, ಅದರಿಂದ ಮಹಿಳಾ ಸಮಾನತೆ ಎಂಬುದು ಕೇವಲ ಮರೀಚಿಕೆ ಆಗುತ್ತದೆ ಎಂಬುದು ಪ್ರಮುಖವಾದ ವಾದ. ಆದರೆ ಹಿಂದೂ ಧರ್ಮದಲ್ಲಿ ಮದುವೆ ಎಂಬುದು ಸಂಸ್ಕಾರವಾದರೆ, ಇಸ್ಲಾಂನಲ್ಲಿ ಅದು ಒಪ್ಪಂದ. ಹೀಗಿದ್ದಾಗ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಬಗೆ ಹೇಗೆ ಎಂಬುದೂ ಒಂದು ಮುಖ್ಯ ಪ್ರಶ್ನೆಯಾಗಿ ತಲೆದೋರಿದೆ. ಈ ಎಲ್ಲ ವಾಸ್ತವಿಕ ತೊಡಕುಗಳ ಬಗ್ಗೆ ಚರ್ಚೆ ನಡೆದಾಗ ಸಂಹಿತೆಯ ಪರವಾಗಿ ವಾದಿಸುವವರು ’ದೇಶದಲ್ಲಿ ಸಿವಿಲ್ ಪ್ರಕ್ರಿಯಾ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ದಂಡ ಸಂಹಿತೆಗಳು ಒಂದೇ ಇದ್ದು ಕೆಲವೊಂದು ರಾಜ್ಯಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲವೊಂದು ತಿದ್ದುಪಡಿಗಳನ್ನು ಮಾಡಿಕೊಳ್ಳುವ ಹಾಗೆ ಏಕರೂಪ ಸಂಹಿತೆಯನ್ನು ಆಯಾ ಧರ್ಮಗಳ ಅನುಯಾಯಿಗಳು ಹೆಚ್ಚಿಗೆ ಇರುವ ರಾಜ್ಯಗಳಲ್ಲಿ ಕೆಲವೊಂದು ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದು’ ಎಂದು ವಾದಿಸುತ್ತಾರೆ. ಆದರೆ ಕೇವಲ ಇದನ್ನು ಮಾತ್ರ ಜಾರಿಗೆ ತಂದರೆ ದೇಶದ ಎಲ್ಲ ತಾರತಮ್ಯಗಳು ಅಳಿಸಿಹೋಗುತ್ತವಾ? ಹಾಗಾದರೆ ಬ್ರಾಹ್ಮಣ ಮತ್ತು ದಲಿತರ ಮಧ್ಯೆ ಏಕರೂಪತೆ ಸಾಧಿಸಲು ಏಕೆ ಪ್ರಯತ್ನಗಳು ಆಗುವುದಿಲ್ಲ ಎಂಬ ಯಕ್ಷಪ್ರಶ್ನೆಗೆ ಉತ್ತರ ಎಲ್ಲಿದೆ.

ಏಕರೂಪ ನಾಗರಿಕ ಸಂಹಿತೆಯ ಹಿಂದಿನ ನಿಜವಾದ ಉದ್ದೇಶ ಅದನ್ನು ಪ್ರಸ್ತುತಪಡಿಸಿದ ಸಮಯದಲ್ಲಿ ಎಷ್ಟೇ ಉದಾತ್ತವಾಗಿದ್ದರೂ ಅದರ ನಂತರದ ದಿನಗಳಲ್ಲಿ ಅದು ಕೇವಲ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಉಪಯೋಗವಾಗುತ್ತಿದೆ. ಅದರ ಸುತ್ತ ಯಾವುದೇ ಚರ್ಚೆ ನಡೆದರೂ ಸದ್ಯ ಆಳುವ ಪಕ್ಷಕ್ಕೆ ಅದು ಲಾಭದಾಯಕವೇ. ಸಂಹಿತೆಯನ್ನು ಕೇವಲ ಮುಸ್ಲಿಮರ ವಿರುದ್ಧ ಎಂಬಂತೆ ಬಿಂಬಿಸಲಾದರೂ ದೇಶದ ಎಲ್ಲ ಧರ್ಮಗಳಿಗೂ ಅದು ಅನ್ವಯಿಸುತ್ತದೆ. ಇದೊಂದು ಅತ್ಯಂತ ಸೂಕ್ಷ್ಮವಾದ ವಿಚಾರವಾದ್ದರಿಂದ ಇದರ ಜಾರಿ ಎಂಬುದು ರಾಜಕೀಯ ಪಗಡೆಯಾಟವಾಗದೆ ನಿಜವಾದ ಕಾಳಜಿಯಿಂದ ಕೂಡಿದರೆ ಬಹುಶಃ ಸಂವಿಧಾನ ನಿರ್ಮಾತೃಗಳು ಕಂಡ ಕನಸು ನನಸಾಗಬಹುದೇನೋ.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಸುವ ಹಡಗಿಗೆ ಬಂದರಿನಲ್ಲಿ ನಿಲುಗಡೆ ನಿಷೇಧಿಸಿದ ಸ್ಪೇನ್

0
ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಹಡಗನ್ನು ಸ್ಪೇನ್ ಬಂದರಿನಲ್ಲಿ ನಿಲ್ಲಿಸಲು ಅನುಮತಿ ನಿರಾಕರಿಸಲಾಗಿದೆ ಎಂದು ಅಲ್ಲಿನ ವಿದೇಶಾಂಗ ಸಚಿವ ಜೋಸ್ ಮ್ಯಾನುಯೆಲ್ ಅಲ್ಬರೆಸ್ ಗುರುವಾರ ಹೇಳಿದ್ದಾರೆ. "ಇದೇ ಮೊದಲ ಬಾರಿಗೆ ನಾವು ಇಸ್ರೇಲ್‌ಗೆ ತೆರಳುತ್ತಿದ್ದ ಹಡಗಿಗೆ...