Homeಅಂಕಣಗಳುಗಾಂಧೀಜಿ ಪೋಟೊ ಜೊತೆಗೆ ಸಾವರ್ಕರ್ ಇರುವುದು ಸರಿ!

ಗಾಂಧೀಜಿ ಪೋಟೊ ಜೊತೆಗೆ ಸಾವರ್ಕರ್ ಇರುವುದು ಸರಿ!

- Advertisement -
- Advertisement -

ಸರಕಾರದ ಸಾಧನೆಯ ಪಟ್ಟಿ ಮುಂದಿಟ್ಟು ಮತ ಕೇಳಿ ಎಂದು ಜೆ.ಪಿ ನಡ್ಡಾ ಬಿಜೆಪಿ ಕಾರ್ಯಕರ್ತರಿಗೆ ತಾಕೀತು ಮಾಡಿದರಂತಲ್ಲಾ. ಆ ಕೂಡಲೇ ಬಿಜೆಪಿಯ ಉಗ್ರ ಕಾರ್ಯಕರ್ತರಿಗೆ ಕಾಣಿಸಿದ ಸಾಧನೆಗಳಾವುವೆಂದರೆ ಬೊಮ್ಮಾಯಿ ಮುಖ್ಯಮಂತ್ರಿಯಾದ ಕೂಡಲೇ ಮುಸ್ಲಿಂ ಹುಡುಗಿಯರ ಹಿಜಾಬು ತೆಗೆಸಲು ಹೋರಾಡಿದ್ದು. ನಂತರ ಮುಸ್ಲಿಮರು ಜಾತ್ರೆ ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡದಂತೆ ದಾಳಿ ಮಾಡಿ, ಮುಸ್ಲಿಂ ವ್ಯಾಪಾರಿಯೊಬ್ಬರ ಕಲ್ಲಂಗಡಿ ಹಣ್ಣುಗಳನ್ನು ಒಡೆದು ತುಳಿದು ನಾಶಮಾಡಿದ್ದು. ಅಲ್ಲದೆ ಮುಸಲ್ಮಾನರ ಅಂಗಡಿಯಲ್ಲಿ ಮಾಂಸ ತಂದು ತಿನ್ನಬೇಡಿರೆಂದು ಕಾಳಿಸ್ವಾಮಿ ಎಂಬುವವ ಕೋಳಿಸ್ಟಾಲ್ ಮಾಡಿದ್ದು. ಇನ್ನ ಗೋಳವಲಕರ ಅರ್ಥ ವ್ಯವಸ್ಥೆಯನ್ನು ಅಳವಡಿಸಿಕೊಂಡು ಹಿಂದುಳಿದ ವರ್ಗದ ಹುಡುಗರ ಹಾಸ್ಟಲು ಫೀಜು ಬಂದ್ ಮಾಡಿದ್ದು. ಬಡವರ ಹಸಿವು ನೀಗಿಸುತ್ತಿದ್ದ ಇಂದಿರಾ ಕ್ಯಾಂಟೀನ್ ಬಂದ್ ಮಾಡಿದ್ದು. ಕಬ್ಬಿನ ಬೆಂಬಲ ಬೆಲೆ ನೀಡಲಾಗದ ರೈತರ ಕಡೆ ತಿರುಗಿ ನೋಡದೆ ಇದ್ದದ್ದು. ಬೆಂಗಳೂರಲ್ಲಿ ಗುಂಡಿ ಬಿದ್ದ ಗುಂಡಿಗೆ ಬಿದ್ದು ಹಲವು ಜನ ಪ್ರಾಣ ಕಳೆದುಕೊಂಡದ್ದು. ಗುಂಡಿ ಮುಚ್ಚುವ ಪರ್ಸೆಂಟೇಜಿಗಾಗಿ ಜಗಳವಾಡುತ್ತ ಕೂತಿದ್ದು. ಇನ್ನ ನಲವತ್ತು ಪರಸೆಂಟ್ ಗಲಾಟೆಯಲ್ಲಿ ಮಂತ್ರಿಗಿರಿ ಕಳೆದುಕೊಂಡ ಈಶ್ವರಪ್ಪನ ನೇತೃತ್ವದಲ್ಲಿ ಮುಸ್ಲಿಮರ ಕೇರಿಗೆ ನುಗ್ಗಿ ಎಸ್ಪಿ, ಡಿ.ಸಿ, ತಹಸೀಲ್ದಾರ, ಎಂ.ಪಿ ನೇತೃತ್ವದಲ್ಲಿ ಅವರ ಜೀವನೋಪಾಯದ ಪದಾರ್ಥಗಳನ್ನು ಬೀದಿಗೆ ಎಸೆದು ಭಯೋತ್ಪಾದನೆ ಮಾಡಿದ್ದು. ಇವೆಲ್ಲಾ ಬಿಜೆಪಿಗಳ ಸಾಧನೆಯಾಗಿ ಇದನ್ನೇ ಹೇಳಿಕೊಂಡು ಮತ ಕೇಳಲು ತಯಾರಾದ ಅವರುಗಳ ತಲೆಗೆ ಒಳ್ಳೆಯ ಕೆಲಸಗಳೇ ಕಾಣಲಿಲ್ಲವಂತಲ್ಲಾ, ಥೂತ್ತೇರಿ.

*****

ಕರ್ನಾಟಕದ ಎಲ್ಲ ವಿಧಾನಸಭಾ ಸದಸ್ಯರಿಗೆ ಬೆಳಗಾವಿ ಅಧಿವೇಶನವೆಂದರೆ ವಿದ್ಯೆ ಕಲಿಯಲು ಇಷ್ಟವಿಲ್ಲದ ಹುಡುಗರು ಸ್ಕೂಲಿಗೆ ಹೋದ ರೀತಿಯಂತಲ್ಲಾ. ಏಕೆಂದರೆ ಅಧಿವೇಶನಗಳು ಅರ್ಥ ಕಳೆದುಕೊಂಡಿವೆ. ಅಲ್ಲಿ ಯಾರಾದರೂ ಎದ್ದುನಿಂತು ಮಾತನಾಡಿದರೆ ಕೇಳಿಸಿಕೊಳ್ಳಬೇಕಿನಿಸುವುದಿಲ್ಲ; ಗೈರುಹಾಜರಾದರೆ, ಗೋವಾಕ್ಕೆ ಹೋಗಬೇಕಿನಿಸುತ್ತದೆ. ಕೊಠಡಿಯಲ್ಲೇ ಇರಲು ಬೇಜಾರು. ಎಲ್ಲಾದರೂ ಹೋಗೋಣವೆಂದರೆ ತಾಜ್‌ವೆಸ್ಟ್ ಹೋಟಲಿನಂತವೂ ಇಲ್ಲ. ಹೀಗಾಗಿ ಬಿಜೆಪಿಗಳು ಸದನವನ್ನೇ ಗಬ್ಬೆಬ್ಬಿಸುವ ಪ್ಲಾನ್ ಮಾಡಿ ಸಾವರ್ಕರ್‌ನ ಫೋಟೋವನ್ನು ಮುಖ್ಯಮಂತ್ರಿಗೂ ಗೊತ್ತಿಲ್ಲದೆ ಅಳವಡಿಸುವ ಸಂಚು ರೂಪಿಸಿದರಂತಲ್ಲಾ. ಅಲ್ಲಿಗೆ ಇದು ಆರೆಸ್ಸೆಸ್ ಕಾರ್ಯಕ್ರಮದಂತೆ ಕಂಡು ಕಾಂಗೈಗಳು ಸಾವರ್ಕರ್‌ನ ಜೊತೆಗೆ ಅಥವ ಬದಲಿಗೆ ಇನ್ನಿತರ ಕನ್ನಡದ ಸಾಂಸ್ಕೃತಿಕ ನಾಯಕರ ಫೋಟೋನೂ ಮಡಗಿ ಎಂದು ಸುವರ್ಣಸೌಧದ ಮೆಟ್ಟಿಲ ಮೇಲೆ ಕುಳಿತರಂತಲ್ಲಾ. ಇದನ್ನ ಕಂಡ ಬಿಜೆಪಿಗಳು ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಕರಿನೀರ ಶಿಕ್ಷೆಗೆ ಗುರಿಯಾದವರು. ಗಾಂಧಿ ಕೊಂದವರೆಂದು ನೀವೇ ಆಪಾದಿಸುತ್ತಿದ್ದೀರಿ; ಗಾಂಧಿ ಕೊಲ್ಲಲು ಪಿಸ್ತೂಲು ಕೊಟ್ಟವರು ಸಾವರ್ಕರ್ ಎಂದು ಇತ್ತೀಚೆಗೆ ಗಾಂಧೀಜಿ ಮರಿಮಗ ಹೇಳಿದ್ದಾರೆ. ನಮ್ಮ ಪುರಾಣದಲ್ಲಿ ಕೊಂದವರು ಕೊಲ್ಲಿಸಿಕೊಂಡವರನ್ನು ನೆನೆಸುತ್ತ ಬಂದಿದ್ದೇವೆ. ಉದಾಹರಣೆ ಬೇಕಾದಷ್ಟಿವೆ. ರಾಮ-ರಾವಣ, ಕೃಷ್ಣ-ಕಂಸ, ನರಸಿಂಹ-ಹಿರಣ್ಯಕಶಿಪು ಹೀಗೆ. ಆದ್ದರಿಂದ ಗಾಂಧಿ ಫೋಟೋ ಸುವರ್ಣ ಸೌಧದಲ್ಲಿರುವುದಾದರೆ ಪಕ್ಕದಲ್ಲಿ ಸಾವರ್ಕರ್ ಫೋಟೋ ಇರುವುದು ಸತ್ಯ. ಓಂ ಶಾಂತಿ ಶಾಂತಿ ಶಾಂತಿ ಎಂದವಂತಲ್ಲಾ, ಥೂತ್ತೇರಿ.

*****

ಹದಿನೈದು ಲಕ್ಷ ಮತದಾರರನ್ನು ಡಿಲೀಟ್ ಮಾಡಿಸಿದ ಆರೋಪ ಎದುರಿಸುತ್ತಿರುವ ಸರಕಾರ ಈ ಕೃತ್ಯ ವ್ಯಾಪಕವಾಗಿ ಪ್ರಚಾರವಾಗದಂತೆ ತಡೆಯಲು ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ಬ್ಲಾಸ್ಟು ಮಾಡಿ ಎಂದು ಟಿವಿಯವರಿಗೆ ಸೂಚನೆ ಕೊಟ್ಟ ಕೂಡಲೇ ಮಾರಿಕೊಂಡ ಮಾಧ್ಯಮದವರು ಮತದಾರರು ಕಾಣೆಯಾಗಿರುವ ಪ್ರಕರಣವನ್ನೇ ಮರೆಯಾಗುವಂತೆ ಮಾಡಿದರು ಎಂದು ಡಿ.ಕೆ.ಶಿ ಆಪಾದನೆ ಮಾಡಿದರಂತಲ್ಲ. ಹಾಗಂದ ಕೂಡಲೇ ಅವರ ಮೇಲೆ ಇ.ಡಿ ದಾಳಿ ನಡೆಯಿತು. ಈಗ ಸರಕಾರದ ಸಂಪೂರ್ಣ ವೈಫಲ್ಯ ಮುಚ್ಚಲು ಸಾವರ್ಕರ್‌ನ ಮೊರೆ ಹೋಗಿರುವ ಸರಕಾರ ಆರೆಸ್ಸೆಸ್ ಸೂಚನೆಯಂತೆ ಆತನ ಭಾವಚಿತ್ರವನ್ನು ಸುವರ್ಣಸೌಧದದಲ್ಲಿ ಅಳವಡಿಸಲು ಸಂಚು ರೂಪಿಸಿದೆಯಂತಲ್ಲಾ. ಇದರಲ್ಲಿ ಅವರು ಗೆದ್ದರೆ ಮುಂದಿನ ಅಧಿವೇಶನಕ್ಕೆ ಸಾವರ್ಕರ್‌ನ ಪಕ್ಕಕ್ಕೆ ಗೋಳವಲಕರನ ಫೋಟೋ ಬರುತ್ತೆ ನಂತರ ಹೆಡಗೆವಾರನ ಚಿತ್ರ ತೂಗುಬೀಳುತ್ತೆ. ಆ ನಂತರ ರೈಲ್ವೆ ಭೋಗಿ ಮೇಲಿರುವ ದೀನದಯಾಳರ ಭಾವಚಿತ್ರ ವಿರಾಜಮಾನವಾಗುತ್ತೆ. ಹಾಲಿ ಸದಸ್ಯರೆಲ್ಲಾ ಅಸ್ತಂಗತರಾದ ಮೇಲೆ ಸುವರ್ಣಸೌಧದ ಗೋಡೆ ಮೇಲೆ ಎಡೂರಪ್ಪ, ಜೋಷಿ, ಸಿ.ಟಿ ರವಿ, ರೇಣುಕಾಚಾರ್ಯ, ಈಶ್ವರಪ್ಪ ಸರದಿಯೂ ಬರಬಹುದು. ಅಷ್ಟಕ್ಕೂ ಸಾವರ್ಕರ್ ಸುವರ್ಣ ಸಂಸ್ಕೃತಿ ಭವನ ಹೊಕ್ಕಿದ್ದು ಈಶ್ವರಪ್ಪರ ಸಾಧನೆಯಿಂದ. ಶಿವಮೊಗ್ಗದ ಮಾರ್ಕೆಟ್‌ನಲ್ಲಿ ನಿಲ್ಲಿಸಿದ್ದ ಸಾವರ್ಕರ್‌ನ ಫೋಟೋವನ್ನು ಯಾರೋ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬ ಕಿತ್ತೆಸೆದ. ಅಷ್ಟು ಸಾಕಿತ್ತು ಮಂತ್ರಿಗಿರಿ ಕಳೆದುಕೊಂಡು ನಿರುದ್ಯೋಗಿಯಾಗಿದ್ದ ಈಶ್ವರಪ್ಪರಿಗೆ. ಕೂಡಲೇ ತರತರದ ಕಾರ್ಯಕ್ರಮಗಳನ್ನು ಮಾಡಿ ಸಾವರ್ಕರ್‌ನನ್ನು ಮೆರೆಸಿದರು. ಅಂತಹ ವ್ಯಕ್ತಿ ಈಗ ಸದನಕ್ಕೆ ಹೋಗದೆ ಜಾರಕಿಹೊಳಿ ಮನೆಯಲ್ಲಿ ಜಾಲಿಯಾಗಿ ಕಾಲ ಕಳೆದದ್ದು ಇತಿಹಾಸದ ವ್ಯಂಗ್ಯವಂತಲ್ಲಾ, ಥೂತ್ತೇರಿ.

*****

ನಮ್ಮ ಹಿರಿಯ ಚೇತನಗಳಾದ ಶ್ರೀನಿವಾಸ್ ಪ್ರಸಾದ್ ಮತ್ತು ವಿಶ್ವನಾಥ್ ಹರಿಯ ಮುರಿಯ ಜಗಳಕ್ಕೆ ಬಿದ್ದಿದ್ದಾರಲ್ಲಾ. ಹಳ್ಳಿಯ ಕಡೆ ಒಂದು ಗಾದೆಯಿದೆ. ’ತಿರಿಯಲು ಬಂದು ಕೇರಿಯಲ್ಲಿ ಜಗಳಕ್ಕೆ ಬಿದ್ದರು’ ಅಂತ. ಪ್ರಸಾದ್ ಮತ್ತು ವಿಶ್ವನಾಥ್ ತಿರಿಯಲು ಬಂದಿದ್ದು ಬಿಜೆಪಿ ಕೇರಿಯಲ್ಲಿ. ಅದವರ ಕೇರಿಯಲ್ಲ. ಅವರು ಬಂದಿದ್ದು ಕಾಂಗ್ರೆಸ್ ಕೇರಿಯಿಂದ. ಅವರಿಬ್ಬರೂ ಬಿಜೆಪಿಗೆ ಬಂದಿದ್ದು ಒಂದೇ ಕಾರಣದಿಂದ. ಪ್ರಸಾದ್ ಸಿದ್ದರಾಮಯ್ಯಗೆ ತಾಕೀತು ಮಾಡಿ ರೆವಿನ್ಯೂ ಮಂತ್ರಿಯಾದ ಕೂಡಲೇ ವೀಕ್ ಆದರು. ವಿಶ್ವನಾಥ್ ತಮ್ಮನ್ನು ಮಂತ್ರಿ ಮಾಡಲಿಲ್ಲ ಎಂದು ಸೋನಿಯಾಗಾಂಧಿಗೆ ’ಸಿದ್ದು ಭ್ರಷ್ಟ, ಬದಲಾಯಿಸಿ’ ಎಂದು ದೂರು ಬರೆಯುತ್ತ ಕುಳಿತರು. ಈ ಇಬ್ಬರ ಚಟುವಟಿಕೆಯನ್ನು ನೋಡಿದ ಸಿದ್ದು ಇಬ್ಬರೂ ಕಾಂಗ್ರೆಸ್ ಬಿಟ್ಟುಹೋಗುವಂತೆ ಮಾಡಿದರು. ಸಮಾನ ಸಂತ್ರಸ್ತರಾದ ಇಬ್ಬರಿಗೂ ಬಿಜೆಪಿ ಅನ್ಯಾಯ ಮಾಡಲಿಲ್ಲ. ಒಬ್ಬರನ್ನು ಸಂಸದರನ್ನಾಗಿಸಿತು, ಮತ್ತೊಬ್ಬರನ್ನು ಎಮ್ಮೆಲ್ಸಿ ಮಾಡಿತು. ರಾಜಕಾರಣದ ಅಂಚಿಗೆ ಸರಿದಿರುವ ಶ್ರೀನಿವಾಸ ಪ್ರಸಾದ್ ನಿವೃತ್ತಿ ಅಂಚಿನಲ್ಲಿದ್ದರೆ, ವಿಶ್ವನಾಥ್ ಕಾಂಗ್ರೆಸ್ ಕೇರಿಗೆ ಬಂದು ಇನ್ನೊಂದು ಚಾನ್ಸಿಗೆ ಅಡಿಪಾಯ ಹಾಕುತ್ತಿದ್ದಾರೆ. ಪ್ರಸಾದ್, ವಿಶ್ವನಾಥರನ್ನ ಮೂದಲಿಸಿ ಅಲೆಮಾರಿ ಎಂದುಬಿಟ್ಟಿದ್ದಾರಲ್ಲಾ. ಸಾಮಾನ್ಯವಾಗಿ ಪಕ್ಷದಿಂದ ಪಕ್ಷಕ್ಕೆ ಅಲೆಯುವ ಒಬ್ಬ ಅಲೆಮಾರಿಯನ್ನು ಕಂಡ ಇನ್ನೊಬ್ಬ ಅಲೆಮಾರಿಗೆ ಆಗುವುದಿಲ್ಲವಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಉಗ್ರರನ್ನೇ ಬಿಡದ ಮೋದಿ ರೌಡಿಗಳನ್ನು ಬಿಟ್ಟಾರಾ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ರಾಹುಲ್ ಗಾಂಧಿಯ ವಯನಾಡ್‌ ಕ್ಷೇತ್ರದ ಹಿಂದೂ ಮಂದಿರದಲ್ಲಿ ಚಿಕನ್ ಶಾಪ್...

0
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುವ ಕೇರಳದ ವಯನಾಡ್‌ನ ಕ್ಷೇತ್ರ ವ್ಯಾಪ್ತಿಯ ಐತಿಹಾಸಿಕ ದೇವಸ್ಥಾನವೊಂದರಲ್ಲಿ ಕೋಳಿ ಅಂಗಡಿ (ಚಿಕನ್ ಶಾಪ್) ತೆರೆಯಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ವೈರಲ್ ವಿಡಿಯೋದಲ್ಲಿ ದೇವಾಲಯದಂತಹ ಕಟ್ಟಡವೊಂದು...