Homeಮುಖಪುಟಗಂಡನ ಆಸ್ತಿಯಲ್ಲಿ ಹೆಂಡತಿಗೆ ಸಮಪಾಲು: ಮದ್ರಾಸ್ ಹೈಕೋರ್ಟ್‌ನ ಮಹತ್ವದ ತೀರ್ಪು

ಗಂಡನ ಆಸ್ತಿಯಲ್ಲಿ ಹೆಂಡತಿಗೆ ಸಮಪಾಲು: ಮದ್ರಾಸ್ ಹೈಕೋರ್ಟ್‌ನ ಮಹತ್ವದ ತೀರ್ಪು

- Advertisement -
- Advertisement -

ಮದ್ರಾಸ್ ಹೈಕೋರ್ಟಿನ ಜಸ್ಟಿಸ್ ಕೃಷ್ಣನ್ ರಾಮಸ್ವಾಮಿ ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ಆಸ್ತಿ ಮೇಲಿನ ವಿವಾಹಿತ ಮಹಿಳೆಯ ಹಕ್ಕಿನ ಬಗ್ಗೆ ಉಲ್ಲೇಖ ಮಾಡುತ್ತ ಕುಟುಂಬದಲ್ಲಿ ಹೆಂಡತಿಯ ಕೊಡುಗೆಗಳನ್ನು ಗುರುತಿಸುವಂತಹ ಯಾವುದೇ ವಿಧಾನಗಳು ಲಭ್ಯವಿಲ್ಲ ಆದರೆ ನ್ಯಾಯಾಲಯಗಳು ಅದನ್ನು ಗುರುತಿಸಬಹುದು ಎಂದು ಹೇಳುವ ಮೂಲಕ ಮಹಿಳಾ ಸಶಕ್ತೀಕರಣದತ್ತ ಒಂದು ಬಲವಾದ ಹೆಜ್ಜೆಯನ್ನು ಇಟ್ಟಿದ್ದಾರೆ.

ಇದುವರೆಗೂ ಆಸ್ತಿ ಮೇಲಿನ ಹೆಣ್ಣುಮಕ್ಕಳ ಹಕ್ಕಿಗೆ ಸಂಬಂಧಿಸಿ ಬಂದಿರುವ ಪ್ರತಿಯೊಂದು ತೀರ್ಪುಗಳು ಕಾಲಕಾಲಕ್ಕೆ ಸಮಾನತೆಯ ಕಡೆಗೆ ಹೆಜ್ಜೆಹಾಕುವ ನಿರ್ದಿಷ್ಟ ಘಟ್ಟಗಳಂತೆ ಕೆಲಸ ಮಾಡಿವೆ, ಆದರೆ ಅನೇಕಬಾರಿ ಕೆಲವೊಂದು ಗೊಂದಲ ಅನಿರ್ದಿಷ್ಟತೆಗಳಿಗೂ ಅವಕಾಶ ಮಾಡಿಕೊಟ್ಟಿದ್ದವು. ತೀರ ಇತ್ತೀಚಿನವರೆಗೂ ಹೆಣ್ಣುಮಕ್ಕಳ ಆಸ್ತಿಯ ಮೇಲಿನ ಹಕ್ಕುಗಳ ಬಗ್ಗೆ ಮಾತನಾಡುವಾಗ ಮಗಳಿಗೆ ತಂದೆಯ ಆಸ್ತಿಯಲ್ಲಿ ಅಥವಾ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡುಮಕ್ಕಳಿಗೆ ಸಮವಾದ ಹಕ್ಕುಗಳ ಬಗ್ಗೆ ಮಾತ್ರ ಪ್ರಸ್ತಾಪವಾಗುತ್ತಿತ್ತು. ಅದಕ್ಕೆ ಕಾರಣವೂ ಇದೆ; ಅದೇನೆಂದರೆ ತಂದೆಯ ಆಸ್ತಿಯಲ್ಲಿ ಹಕ್ಕು ಪಡೆದ ಮಹಿಳೆ ಅದೇ ಕಾಲಕ್ಕೆ ಇನ್ನೊಬ್ಬರ ಹೆಂಡತಿಯೂ ಆಗಿರುತ್ತಾಳೆ ಎಂಬುದು ವಾದ. ಅಂದರೆ ಒಬ್ಬ ವಿವಾಹಿತ ಹೆಣ್ಣುಮಗಳ ಗಂಡ ತನ್ನ ಪಿತ್ರಾರ್ಜಿತ ಆಸ್ತಿಯನ್ನು ತನ್ನ ಸಹೋದರಿಯರ ಜೊತೆ ಹಂಚಿಕೊಂಡಿರುತ್ತಾನೆ ಎಂಬುದು ಊಹೆ.

ಕೆಲವೊಂದು ಪ್ರಕರಣಗಳಲ್ಲಿ ದಶಕಗಳ ಹಿಂದೆಯೇ ಮದುವೆ ಆಗಿಹೋದ ಹೆಣ್ಣುಮಕ್ಕಳು ವರದಕ್ಷಿಣೆ ರೂಪದಲ್ಲಿ ಗಂಡನಿಗೆ ಅಪಾರ ಹಣ ನೀಡಿದ ನಂತರವೂ, ಹೊಸ ಕಾನೂನಿನ ಅಡಿಯಲ್ಲಿ ತಮ್ಮ ಸಹೋದರರಿಂದ ಸಮಾನ ಅಧಿಕಾರಗಳನ್ನು ಕೇಳಲು ನ್ಯಾಯಾಲಯದ ಮೊರೆ ಹೋದಾಗ ಈ ಹಕ್ಕುಗಳ ವಿರುದ್ಧ ಒಂದು ದೊಡ್ಡ ನೆಗೆಟಿವ್ ಪ್ರಚಾರವೇ ಶುರುವಾದಂತೆ ಇತ್ತು. ಇದು ಕೇವಲ ಈ ಒಂದು ಕಾನೂನಿಗೆ ಮಾತ್ರ ಅಲ್ಲ ಮಹಿಳಾ ಹಕ್ಕುಗಳನ್ನು ಎತ್ತಿ ಹಿಡಿಯುವ ಯಾವುದೇ ಹೊಸ ಕಾನೂನು ಬಂದರೂ ಇಂತಹ ಅಪಸ್ವರಗಳು ಸಾಮಾನ್ಯ.

ಈಗ ಒಂದು ವಿಶ್ಲೇಷಣಾತ್ಮಕ ದೃಷ್ಟಿಕೋನದಿಂದ ಇದನ್ನು ನೋಡಲು ಪ್ರಯತ್ನಿಸೋಣ. ಹಿಂದೂ ವಾರಸುದಾರ ಕಾಯ್ದೆ ಜಾರಿಯಾದಾಗಿನಿಂದ (1956) ಇಲ್ಲಿಯವರೆಗೂ ಪಿತ್ರಾರ್ಜಿತ ಆಸ್ತಿಗಳು ಭಾಗವಾಗದೇ ಇರುವ ಸಾಧ್ಯತೆಗಳು ಎಷ್ಟಿರುತ್ತವೆ? ಏಕೆಂದರೆ ಈಗಾಗಲೇ ವಿಭಾಗವಾಗಿರುವ ಆಸ್ತಿಗಳಿಗೆ ಇದು ಅನ್ವಯವಾಗುವುದಿಲ್ಲ. ಅಂದರೆ ಹೆಣ್ಣುಮಕ್ಕಳಿಗೆ ಸಮಾನ ಹಕ್ಕು ಎಂದು ಕಾಯ್ದೆ ಬಂದಾಗ ಆ ಮಹಿಳೆಯ ಕುಟುಂಬಕ್ಕೆ ಸಂಬಂಧಿಸಿದ ಪಿತ್ರಾರ್ಜಿತ ಆಸ್ತಿ ವಿಭಾಗ ಆಗದೇ ಇದ್ದ ಪಕ್ಷದಲ್ಲಿ ಮಾತ್ರ ಅವಳಿಗೆ ಹಕ್ಕು ಸಿಗುತ್ತಿತ್ತು. ಇಂತಹ ಒಂದು ಅವಕಾಶವನ್ನು ತಪ್ಪಿಸಲು ಬಾಯಿಮಾತಿನ ವಿಭಾಗ ಅಥವಾ ನೋಂದಣಿ ಆಗದ ಹಳೆಯ ದಿನಾಂಕದ ಕರಾರುಪತ್ರಗಳನ್ನು ಎಷ್ಟೋ ಜನ ಸೃಷ್ಟಿಸಿದರು. ಅದಕ್ಕೆಂದೇ ನ್ಯಾಯಾಲಯ ಮತ್ತೆ ಮಧ್ಯಪ್ರವೇಶಿಸಿ ಈ ತರಹದ ವಿಭಾಗ ಪತ್ರಗಳಿಗೆ ಮಾನ್ಯತೆಯನ್ನು ನೀಡಲಿಲ್ಲ. ಇನ್ನು ಕೆಲವೊಂದು ಪ್ರದೇಶಗಳಲ್ಲಿ ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕಳಿಸುವ ಮೊದಲು ಆಸ್ತಿ ಹಕ್ಕು ಬಿಡುಗಡೆ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಗುತ್ತದೆ.

ಇದನ್ನೂ ಓದಿ: ಕೇಂದ್ರದ ಪರ ತೀರ್ಪು ಕೊಟ್ಟ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ಲಾಭವಾಗಿದೆಯೇ?

ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಮದುವೆಯಾಗಿ ಇನ್ನೂ ತಂದೆ ತಾಯಿ ಹಾಗೂ ಸಹೋದರರನ್ನೇ ನಂಬಿರುವ ಹೆಣ್ಣುಮಕ್ಕಳು ಸಹಿ ಹಾಕುವುದಿಲ್ಲ ಎಂದು ಹೇಳುವ ಸಾಧ್ಯತೆಗಳು ಎಷ್ಟಿವೆ? ಇನ್ನು ವರದಕ್ಷಿಣೆ ಎನ್ನುವುದು ಗಂಡನಿಗೆ ಸಲ್ಲುವಂಥದ್ದು, ಅದರಿಂದ ಆ ಹೆಣ್ಣುಮಕ್ಕಳಿಗೆ ಏನು ಲಾಭ? ಈ ಎಲ್ಲ ಹಿನ್ನೆಲೆಗಳಲ್ಲಿ ಆಸ್ತಿಯ ಸಮಾನ ಹಕ್ಕಿನ ಲಾಭ ಪಡೆದ ಹೆಂಗಸರು ಎಷ್ಟಿರಬಹುದು ಎಂದು ನೋಡಿದಾಗ ವಸ್ತುಸ್ಥಿತಿ ನಿರಾಶಾದಾಯಕವೇ ಆಗಿರುತ್ತದೆ.

ಗಂಡನ ಮನೆಯಲ್ಲಿದ್ದು ಹೊರಗಡೆ ಕೆಲಸ ಮಾಡುವ ಬಹುತೇಕ ಹೆಣ್ಣುಮಕ್ಕಳು ಸಹ ತಮ್ಮ ತಿಂಗಳ ಸಂಬಳವನ್ನು ತಂದು ಗಂಡನ ಕೈಗೇ ಕೊಡುವ ಉದಾಹರಣೆಗಳು ಹೇರಳವಾಗಿವೆ. ಹಣವನ್ನು ಬೇರೆಬೇರೆ ಲಾಭದಾಯಕ ಸ್ಕೀಮ್‌ಗಳಲ್ಲಿ ತೊಡಗಿಸುವ ಕೆಲಸವನ್ನೆಲ್ಲಾ ಗಂಡಸರೇ ಮಾಡುತ್ತಾರೆ. ಹೀಗಿರುವಾಗ ಯಾವುದೇ ಉದ್ಯೋಗ ಮಾಡದೆ ಗೃಹಿಣಿ ಆಗಿದ್ದುಕೊಂಡು ತನ್ನ ಇಡೀ ಜೀವನವನ್ನು ಗಂಡ, ಮನೆ, ಮಕ್ಕಳು ಹಾಗೂ ಅವರ ಅಭಿವೃದ್ಧಿಗಾಗಿ ಶ್ರಮಿಸುವ ಹೆಣ್ಣುಮಕ್ಕಳಿಗೆ ತನ್ನ ಆಪತ್ಕಾಲದಲ್ಲಿ ಯಾರು ಆಸರೆ? ಉದ್ಯೋಗ ತೊರೆದು ಗೃಹಿಣಿ ಆದ ಹೆಣ್ಣುಮಕ್ಕಳಾಗಲೀ ಮೊದಲಿನಿಂದಲೂ ಮನೆ ನೋಡಿಕೊಂಡ ಮಹಿಳೆ ಆಗಲಿ ಅಕಸ್ಮಾತ್ ಮದುವೆ ಆಗಿ ದಶಕಗಳ ನಂತರ ಗಂಡನಿಂದ ದೂರಾಗುವ ಸಂದರ್ಭ ಬಂದರೆ ಕೇವಲ ಆತ ಕೊಡುವ ಜೀವನಾಂಶ ಅಥವಾ ಶಾಶ್ವತ ಪರಿಹಾರದ ರೂಪದಲ್ಲಿ ದೊರೆಯುವ ಮೊತ್ತವಷ್ಟೇ ಅವಳಿಗೆ ಆಧಾರವಾಗಿರುತ್ತಿತ್ತು. ಈ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟಿನ ಈ ತೀರ್ಪು ಮಹಿಳಾ ಸ್ವಾಭಿಮಾನದ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಾಗಿದೆ.

ಕೃಷ್ಣನ್ ರಾಮಸ್ವಾಮಿ

ಜಸ್ಟಿಸ್ ಕೃಷ್ಣನ್ ರಾಮಸ್ವಾಮಿ ತಮ್ಮ ತೀರ್ಪಿನಲ್ಲಿ “ಗಂಡ ಆಸ್ತಿ ಖರೀದಿಸುವುದಕ್ಕೆ ಆತನಿಗೆ ಅನುಕೂಲ ಮಾಡಿಕೊಡುವಲ್ಲಿ ಹೆಂಡತಿ ನಿರ್ವಹಿಸುವ ಪಾತ್ರವನ್ನು ಗುರುತಿಸಲು ನ್ಯಾಯಾಲಯದ ಮೇಲೆ ಯಾವುದೇ ಕಾನೂನಿನ ಪ್ರತಿಬಂಧಗಳು ಇಲ್ಲ ಎಂದು ಹೇಳಿದ್ದಾರೆ. ಮುಂದುವರಿದು ’ಹೆಂಡತಿ ಮನೆಯ ಎಲ್ಲ ಕೆಲಸ ಹಾಗೂ ಜವಾಬ್ದಾರಿಗಳನ್ನು ತಾನೇ ತೆಗೆದುಕೊಂಡು, ಕುಟುಂಬದ ದಿನನಿತ್ಯದ ಜಂಜಾಟಗಳಿಂದ ಅವನನ್ನು ಮುಕ್ತಗೊಳಿಸಿದ್ದರಿಂದ ಆತ ಆರ್ಥಿಕವಾಗಿ ಸಶಕ್ತನಾಗಲು ಮತ್ತು ಆಸ್ತಿ ಹೊಂದಲು ಸಾಧ್ಯವಾಗುತ್ತದೆ; ಹಾಗಿರುವಾಗ ಆತ ಗಳಿಸಿದ ಆಸ್ತಿಯಲ್ಲಿ ಹೆಂಡತಿಗೆ ಸಮಪಾಲು ಕೊಡುವುದು ಸಮಂಜಸವಾಗಿದೆ’ ಎಂದು ಹೇಳಿದ್ದಾರೆ. ನಿತ್ಯ ಹೊರಗಡೆ ಹೋಗಿ 8 ಗಂಟೆ ಕೆಲಸ ಮಾಡುವ ಗಂಡನ ಜೊತೆ 24 ಗಂಟೆಯೂ ಗೃಹಿಣಿಯಾಗಿ ಜವಬ್ದಾರಿ ನಿರ್ವಹಿಸುವ ಹೆಚ್ಚಿನ ಕೊಡುಗೆಯನ್ನು ನಗಣ್ಯಗೊಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಗಂಡ ಸತ್ತಾಗ ಆತನ ಸ್ವಯಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಒಂದು ಭಾಗ ಬರುವ ಕಾನೂನು ಈಗಾಗಲೇ ಇದ್ದರೂ ಈ ತೀರ್ಮಾನ ವಿಶೇಷವಾಗಿ ಕಾಣಲು ಕಾರಣವೆಂದರೆ, ಇಲ್ಲಿ ಹೆಣ್ಣಿನ ಕೊಡುಗೆಯನ್ನು ಮಾನ್ಯಮಾಡಿರುವ ರೀತಿ ಮತ್ತು ವಿಚ್ಚೇದನಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ಈ ತೀರ್ಪಿನಿಂದ ಸ್ವಲ್ಪ ಲಾಭ ಆಗಬಹುದು ಎಂಬುದಕ್ಕೆ. ಪ್ರತಿಯೊಂದು ತೀರ್ಪುಗಳು ಆಯಾ ಪ್ರಕರಣಗಳಿಗೆ ಸೂಕ್ತವಾಗುವ ರೀತಿಯಲ್ಲಿ ಬಂದಿರುತ್ತವೆ. ಆದರೆ ಕೆಲವೊಂದು ವಿಶೇಷ ತೀರ್ಪುಗಳು ತಮ್ಮ ವಿಶೇಷ ದೃಷ್ಟಿಕೋನದಿಂದಾಗಿ ವಿಭಿನ್ನವಾಗಿ ನಿಲ್ಲುತ್ತವೆ. ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಇಂತಹ ಇನ್ನೂ ಹತ್ತಾರು ತೀರ್ಪುಗಳ ಅಗತ್ಯವಿದೆ.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...