Homeಮುಖಪುಟಕೇಂದ್ರದ ಪರ ತೀರ್ಪು ಕೊಟ್ಟ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ಲಾಭವಾಗಿದೆಯೇ?

ಕೇಂದ್ರದ ಪರ ತೀರ್ಪು ಕೊಟ್ಟ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ಲಾಭವಾಗಿದೆಯೇ?

- Advertisement -
- Advertisement -

2012, ಅಕ್ಟೋಬರ್‌ 1ರಂದು ರಾಜ್ಯಸಭೆಯಲ್ಲಿ ನಡೆದ ಘಟನೆ. ಬಿಜೆಪಿಯ ಬಹುದೊಡ್ಡ ನಾಯಕರಾಗಿದ್ದ ಅರುಣ್ ಜೇಟ್ಲಿಯವರು ಮಾತನಾಡುತ್ತಾ, “ಹಾಲಿ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಲ್ಲಿ ಕೆಲವರಿಗೆ ಕಾನೂನು ಗೊತ್ತು, ಕೆಲವರಿಗೆ ಕಾನೂನು ಮಂತ್ರಿಗಳು ಗೊತ್ತು” ಎನ್ನುತ್ತಾರೆ. ಸರ್ವೊಚ್ಚ ನ್ಯಾಯಾಲಯದ ಕೆಲವು ನ್ಯಾಯಮೂರ್ತಿಗಳು ವಸೂಲಿ ಬಾಜಿ ಮಾಡುತ್ತಿದ್ದಾರೆಂಬುದು ಜೇಟ್ಲಿಯವರ ಆರೋಪವಾಗಿತ್ತು.

ಮುಂದುವರಿದು ಅದೇ ಜೇಟ್ಲಿಯವರು, “ನಿವೃತ್ತಿ ಪೂರ್ವದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ನೀಡುವ ತೀರ್ಮಾನಗಳು, ನಿವೃತ್ತಿಯ ನಂತರ ಸಿಗುವ ಲಾಭದ ಆಸೆಗಳನ್ನು ಹೊಂದಿರುತ್ತವೆ” ಎಂದು ದೂರಿದ್ದರು. ನ್ಯಾಯಮೂರ್ತಿಗಳು ನೀಡುವ ಜಡ್ಜ್‌ಮೆಂಟ್‌ಗಳು ಸರ್ಕಾರದ ಪರ ಪಕ್ಷಪಾತಿಯಾಗಿರುತ್ತವೆ ಎಂಬುದು ಜೇಟ್ಲಿಯವರ ನೇರ ಆರೋಪವಾಗಿತ್ತು.

ಪ್ರಮುಖ ಪ್ರಕರಣಗಳಲ್ಲಿ ಸರ್ಕಾರದ ಪರ ತೀರ್ಪು ನೀಡಿದ್ದರೆ ನಿವೃತ್ತಿಯ ನಂತರದಲ್ಲಿ ಅಂತಹ ನ್ಯಾಯಮೂರ್ತಿಗಳಿಗೆ ಪ್ರಭುತ್ವ ಆಯಕಟ್ಟಿನ ಜಾಗಗಳನ್ನು ನೀಡುತ್ತದೆ ಎಂಬ ಟೀಕೆಗಳು ಆಗಾಗ್ಗೆ ಕೇಳಿಬರುತ್ತವೆ. ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ ಸಂವಿಧಾನ ಪೀಠದ ಭಾಗವಾಗಿದ್ದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಿರುವ ಹಿನ್ನೆಲೆಯಲ್ಲಿ ಈ ಹಳೆಯ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ (ಬಾಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ಸರ್ಕಾರವೇ ಪಾರ್ಟಿ ಅಲ್ಲದಿದ್ದರೂ ಹಿಂದುತ್ವ ಪ್ರಣೀತ ರಾಜಕೀಯ ಮಾಡುವ ಬಿಜೆಪಿಗೆ ಸೈದ್ಧಾಂತಿಕವಾಗಿ ಗೆಲುವು ಸಿಕ್ಕಿದ್ದು ಗಮನಾರ್ಹ).

ಬಾಬ್ರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಮಂದಿರದ ಪರವಾಗಿ ತೀರ್ಪು ನೀಡಿದ ಐವರು ನ್ಯಾಯಮೂರ್ತಿಗಳ ಸದ್ಯದ ಸ್ಥಿತಿಗಳ ಕುರಿತು ಪಟ್ಟಿ ಮಾಡಿರುವ ಚಿಂತಕ ಶಿವಸುಂದರ್‌, “ಮೋದಿ ಸರ್ಕಾರ ನ್ಯಾ. ರಂಜನ್ ಗೊಗೋಯ್ ಅವರನ್ನು ನಿವೃತ್ತಿಯಾದ ನಾಲ್ಕೇ ತಿಂಗಳಲ್ಲಿ- 2020ರ ಮಾರ್ಚ್‌ನಲ್ಲಿ ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸಿತು. ನ್ಯಾ. ಅಶೋಕ್ ಭೂಷಣ್ ಅವರನ್ನು ನಿವೃತ್ತಿಯಾದ ನಾಲ್ಕೇ ತಿಂಗಳಲ್ಲಿ ಮೋದಿ ಸರ್ಕಾರ ದೇಶದ ಅತ್ಯಂತ ದೊಡ್ಡ ಕಾರ್ಪೊರೇಟ್ ಗಳ ಕೋಟ್ಯಂತರ ಮೌಲ್ಯದ ವ್ಯಾಜ್ಯಗಳನ್ನು ಬಗೆಹರಿಸುವ National Company Law Appellate Tribunalನ ಅಧ್ಯಕ್ಷರನ್ನಾಗಿ 2021ರ ನವಂಬರ್‌ನಲ್ಲಿ ನೇಮಿಸಿತು. ಅಯೋಧ್ಯಾ ಪೀಠದಲ್ಲಿ ಏಕೈಕ ಮುಸ್ಲಿಂ ಸದಸ್ಯರಾಗಿದ್ದ ನ್ಯಾ. ಅಬ್ದುಲ್ ನಜಿರ್ ಅವರನ್ನು ನಿವೃತ್ತಿಯಾಗಿ ತಿಂಗಳು ಕಳೆಯುವ ಮುನ್ನವೇ ಇಂದು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ” ಎಂದು ವಿವರಿಸಿದ್ದಾರೆ.

“ಇನ್ನುಳಿದವರಲ್ಲಿ ಜಸ್ಟೀಸ್ ಬೋಬ್ಡೆ ಅವರು ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾದ ಮೇಲೆ ನಾಗಪುರದ ಪರವಾಗಿ ಸಿಕ್ಕಾಪಟ್ಟೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಪ್ರಾಯಶಃ ದೇಶಕ್ಕೆ ಇನ್ನೂ ದೊಡ್ಡದಾದ ಆಶ್ಚರ್ಯ ಕಾದಿರಬಹುದು. ಆ ಪೀಠದ ಸದಸ್ಯರಾಗಿದ್ದ ನ್ಯಾ. ಚಂದ್ರಚೂಡ್ (ಇವರೇ ಇಡೀ ಅಯೋಧ್ಯಾ ಆದೇಶವನ್ನು ಬರೆದವರು ಎಂಬ ಪರೋಕ್ಷ ಸೂಚನೆಯನ್ನು ಗೊಗೋಯ್ ಅವರು ತಮ್ಮ ಪುಸ್ತಕದಲ್ಲಿ ನೀಡಿದ್ದಾರೆ) ಅವರೀಗ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಇಷ್ಟೆಲ್ಲಾ ಆದರೂ ದೇಶ ಇವರ ಬಗ್ಗೆ ಅಪಾರ ನಿರೀಕ್ಷೆಗಳನ್ನು ಇನ್ನೂ ಇಟ್ಟುಕೊಂಡಿದೆ” ಎಂದಿದ್ದಾರೆ ಶಿವಸುಂದರ್‌.

ಮುಂದುವರಿದು, “ವಿಪರ್ಯಾಸವೆಂದರೆ ದೇಶ ಹಾಗೂ ಸಂಘಪರಿವಾರ ಇಬ್ಬರೂ ತದ್ವಿರುದ್ಧ ಕಾರಣಗಳಿಗಾಗಿ ನ್ಯಾ. ಚಂದ್ರಚೂಡ್‌ ಅವರ ಬಗ್ಗೆ ಏಕಕಾಲದಲ್ಲಿ ಆತಂಕ ಹಾಗೂ ಆಶಯಗಳನ್ನಿಟ್ಟುಕೊಂಡು ಗಮನಿಸುತ್ತಿದೆ. ಆದರೆ ಈವರೆಗೆ ನ್ಯಾ. ಚಂದ್ರಚೂಡ್‌ ಅವರು, ಅಗತ್ಯವಿದ್ದರೂ, ಅವಕಾಶವಿದ್ದರೂ ದೇಶಕ್ಕೆ ನಿರಾಳ ಒದಗಿಸಬಹುದಾದ ಹಾಗೂ ಮೋದಿ ಸರ್ಕಾರದ ಸಂವಿಧಾನ ವಿರೋಧಿ ಕೃತ್ಯಗಳಿಗೆ ಲಗಾಮು ಹಾಕುವಂತಹ ಯಾವುದೇ ದೊಡ್ಡ ನ್ಯಾಯ ತೀರ್ಮಾನ ಕೈಗೊಂಡಿಲ್ಲ” ಎಂದು ಅಭಿಪ್ರಾಯ ತಾಳಿದ್ದಾರೆ.

ನಿವೃತ್ತಿಯೋತ್ತರ ನ್ಯಾಯಮೂರ್ತಿಗಳ ಬದುಕಿನ ಕುರಿತು ಅಧ್ಯಯನವೂ ಆಗಿದೆ. “2004ರಿಂದ 2014ರ ನಡುವಿನ ಅವಧಿಯನ್ನು ಮುಖ್ಯವಾಗಿಟ್ಟುಕೊಂಡು ಸಿಂಗಾಪುರ ವಿಶ್ವವಿದ್ಯಾನಿಲಯ ಸಂಶೋಧನೆಯೊಂದನ್ನು ಮಾಡಿತು. ಕೇಂದ್ರ ಸರ್ಕಾರ ಪಾರ್ಟಿಯಾಗಿದ್ದ ಪ್ರಕರಣಗಳ ಪೈಕಿ ಸರ್ಕಾರದ ಪರ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ಯಾವುದಾದರೂ ಲಾಭವಾಗಿದೆಯೇ ಎಂಬುದನ್ನು ಈ ಸಂಶೋಧನೆ ಶೋಧಿಸಿತು. ಸುಮಾರು 2,500 ತೀರ್ಪುಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಕೇಂದ್ರದ ಪರ ತೀರ್ಪು ಕೊಟ್ಟ ಶೇ. 92 ನ್ಯಾಯಮೂರ್ತಿಗಳು ನಿವೃತ್ತಿಯ ನಂತರ ಫಲಾನುಭವಿಗಳಾಗಿದ್ದಾರೆ” ಎಂದಿದೆ ವರದಿ.

ಚಿಂತಕರಾದ ಶಿವಸುಂದರ್‌ ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿ, “ನಿವೃತ್ತಿಯ ನಂತರ ಫಲಾನುಭವಿಗಳಾಗಲು 2000ನೇ ಇಸವಿಯ ಬಳಿಕ ಸಾಕಷ್ಟು ಅವಕಾಶಗಳು ನ್ಯಾಯಮೂರ್ತಿಗಳಿಗೆ ಒದಗಿ ಬಂದಿವೆ. ಯಾಕೆಂದರೆ ಸಾಕಷ್ಟು ಟ್ರಿಬ್ಯೂನಲ್‌ಗಳು ಶುರುವಾಗಿದ್ದು ಇದಕ್ಕೆ ಕಾರಣ. ಕರ್ನಾಟಕ ಹೈಕೋರ್ಟ್‌ನಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದಾಗ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಿತು ರಾಜ್ ಅವಸ್ಥಿಯವರೀಗ ಕಾನೂನು ಆಯೋಗದ ಅಧ್ಯಕ್ಷರಾಗಿದ್ದಾರೆ” ಎಂದು ಮಾಹಿತಿ ನೀಡಿದರು.

ದೇಶಕ್ಕೆ ಸೇವೆ ಸಲ್ಲಿಸಿದ ನ್ಯಾಯಾಧೀಶರ ಅನುಭವವನ್ನು ಅವರ ನಿವೃತ್ತಿಯ ನಂತರವೂ ದೇಶಕ್ಕಾಗಿ ಬಳಸಿಕೊಳ್ಳಬಹುದಲ್ಲ? ಎಂಬ ಪ್ರಶ್ನೆಯೂ ಮಹತ್ವದ್ದಾಗಿದೆ. ಹೈಕೋರ್ಟ್ ವಕೀಲರಾದ ರಾಜಲಕ್ಷ್ಮಿ ಅಂಕಲಗಿಯವರು ಈ ಕುರಿತು ಪ್ರತಿಕ್ರಿಯಿಸಿ, “ನ್ಯಾಯಮೂರ್ತಿಗಳು ನಿವೃತ್ತಿಯ ನಂತರ ಆಯೋಗಗಳಲ್ಲಿ, ತನಿಖಾ ಸಮಿತಿಗಳಲ್ಲಿ ತಮ್ಮ ಅನುಭವವನ್ನು ಧಾರೆ ಎರೆಯಬಹುದು. ರಾಜಕಾರಣಿಯಾಗುವ ಅವಶ್ಯವಿರುವುದಿಲ್ಲ. ತಮ್ಮ ಅನುಭವದ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ದೇಶಕ್ಕೂ ಒಳಿತಾಗುತ್ತದೆ. ನಿವೃತ್ತ ನಂತರವೂ ಕಾನೂನಾತ್ಮಕವಾಗಿ ಮಾಡಬಹುದಾದ ಕೆಲಸಗಳು ಸಾಕಷ್ಟಿರುತ್ತವೆ. ಆದರೆ ರಂಜನ್ ಗೊಗಾಯ್‌ ಅವರು ಸಂಸದರಾಗಿ ಆಯ್ಕೆಯಾಗಿದ್ದು ಸರಿಯಲ್ಲ. ದೇಶದ ಮುಖ್ಯ ನ್ಯಾಯಮೂರ್ತಿಯಾಗಿದ್ದವರು ಸ್ಪೀಕರ್‌ಗಳಿಗೆ ಪ್ರಮಾಣ ವಚನ ಬೋಧಿಸಿರುತ್ತಾರೆ. ಅಂಥವರು ಹೋಗಿ ಸದನದಲ್ಲಿ ಕೂತಾಗ ಎದುರಾಳಿಯ ಕಟು ಟೀಕೆಗಳಿಗೆ ಗುರಿಯಾಗಬೇಕಾಗಿರುತ್ತದೆ. ವೈಯಕ್ತಿಕ ನೆಲೆಯಲ್ಲಿ ವಾಗ್ಯುದ್ಧಗಳನ್ನು ನಡೆಸಬೇಕಾಗುತ್ತದೆ. ಹೀಗಾಗಿ ನ್ಯಾಯಮೂರ್ತಿಗಳು ತಮ್ಮ ಅನುಭವವನ್ನು ಸರಿಯಾದ ಕ್ರಮದಲ್ಲಿ ವಿನಿಯೋಗಿಸಬೇಕು. ತಮ್ಮ ಅಧಿಕಾರವಧಿಯಲ್ಲಿ ಸರ್ಕಾರದ ಪರ ಕೆಲಸ ಮಾಡಿದರೆಂಬ ಕಾರಣಕ್ಕೆ ಈ ಹುದ್ದೆ ಸಿಕ್ಕಿದೆ ಎಂಬ ಟೀಕೆಗಳಿಗೆ ಗುರಿಯಾಗಬಾರದು. ಆ ರೀತಿಯ ಅಭಿಪ್ರಾಯಗಳು ಉಂಟಾಗುವುದರಿಂದ ಇಡೀ ನ್ಯಾಯಾಂಗದ ಹೆಸರು ಹಾಳಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀವು ಕಾನೂನಿಗಿಂತ ಮೇಲಲ್ಲ: ಜಾರಿ ನಿರ್ದೇಶನಾಲಯಕ್ಕೆ ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್‌

0
ಜಾರಿ ನಿರ್ದೇಶನಾಲಯವು (ಇಡಿ) ಕಾನೂನಿನ ಚೌಕಟ್ಟಿಗೆ ಒಳಪಟ್ಟಿದೆ ಮತ್ತು ಸಾಮಾನ್ಯ ನಾಗರಿಕರ ವಿರುದ್ಧ ಬಲಪ್ರದರ್ಶನ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ಜಾರಿ ನಿರ್ದೇಶನಾಲಯಕ್ಕೆ ಹೇಳಿದ್ದು, ನೀವು ಕಾನೂನಿಗಿಂತ ಮೇಲಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಮಧ್ಯಂತರ...