Homeಮುಖಪುಟವಿಶ್ವೇಶ್ವರ ಭಟ್ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನ: ತೀವ್ರ ಆಕ್ರೋಶ

ವಿಶ್ವೇಶ್ವರ ಭಟ್ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನ: ತೀವ್ರ ಆಕ್ರೋಶ

- Advertisement -
- Advertisement -

ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ್ ಭಟ್ ತಮ್ಮ ಪುಸ್ತಕಗಳ ಬಿಡುಗಡೆ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಆಹ್ವಾನಿಸಿರುವುದಕ್ಕೆ ಪ್ರಗತಿಪರ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಜುಲೈ 22ರಂದು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ವಿಶ್ವವಾಣಿ ಪ್ರಕಟಿಸಿರುವ ಆರು ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಈ ಪುಸ್ತಕಗಳ ಲೋಕಾರ್ಪಣೆಗೆ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದು, ಆಹ್ವಾನ ಪತ್ರಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ವಿಶ್ವೇಶ್ವರ ಭಟ್ ಪತ್ರಕರ್ತರಾಗಿ ಕೆಲಸ ಮಾಡುವುದಕ್ಕಿಂತಲೂ ಮಹಿಳೆಯರನ್ನು ಹೀಗಳೆಯುತ್ತಾ, ಸಾವುಗಳನ್ನು ಸಂಭ್ರಮಿಸುತ್ತಾ ವಿಕೃತತೆ ಮೆರೆದಿದ್ದಾರೆ. ತಮ್ಮ ಲೇಖನದಲ್ಲಿ ರಾಷ್ಟ್ರಪತಿ ಮುರ್ಮುರವರ ಬಣ್ಣವನ್ನು ಹೀಯಾಳಿಸಿ ಜನಾಂಗೀಯತೆ ಮೆರೆದಿದ್ದಾರೆ. ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಕೊಲೆಯನ್ನು ಸಮರ್ಥಿಸಿದ್ದಾರೆ. ಅಂತಹ ವ್ಯಕ್ತಿಯ ಪುಸ್ತಕಗಳನ್ನು ಜಾತ್ಯಾತೀತರೆನಿಸಿಕೊಂಡ ಸಿದ್ದರಾಮಯ್ಯನವರು ಬಿಡುಗಡೆ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಜೋರಾಗಿ ಕೇಳಿಬಂದಿದೆ.

ವಿಶ್ವೇಶ್ವರ್ ಭಟ್ ಕೋಮುವಾದಿ, ಜಾತೀವಾದಿ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ ಪತ್ರಕರ್ತರಾಗಿದ್ದಾರೆ. ಜೀವಪರ ವ್ಯಕ್ತಿಗಳ ವಿರುದ್ಧ ಸದಾ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿರುದ್ಧ ಕೆಟ್ಟ ಪದಗಳಿಂದ ಅವಹೇಳನ ಮಾಡಿದ್ದರೆ. ಇದೀಗ ಸಮಾಜವಾದಿ ಚಿಂತನೆಗಳಿಂದಲೇ ನಾಡಿನಾದ್ಯಂತ ಹೆಸರು ಗಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಮುವಾದಿ ಪತ್ರಕರ್ತರ ಕಾರ್ಯಕ್ರಮಕ್ಕೆ ಹೋಗುತ್ತಾರೆ ಎನ್ನುವ ವಿಚಾರಕ್ಕೆ ನಾಡಿನಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ.

ಲೇಖಕ ರಂಜಾನ್ ದರ್ಗಾ ಅವರು ‘ಸಿದ್ದರಾಮಯ್ಯನವರ ಗಮನಕ್ಕೆ’ ಎಂದು ಬರೆದ ಬರಹವೊಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆಯಾಗಿದೆ. ”ನೆಹರೂ ಅವರು ಸ್ವಿಜರ್‌ಲ್ಯಾಂಡ್‌ನಿಂದ ಭಾರತಕ್ಕೆ ಬರುವಾಗ ರೊಮ್ ಏರ್‌ಪೋರ್ಟ್‌ನಲ್ಲಿ ಇಳಿದು ಪ್ರಯಾಣ ಮುಂದುವರಿಸಬೇಕಿತ್ತು. ಆ ಸಂದರ್ಭದಲ್ಲಿ ಇಟಲಿಯ ಫ್ಯಾಸಿಸ್ಟ್ ಮುಸೋಲಿನಿ ಭೇಟಿಯಾಗ ಬಯಸಿದ. ನೆಹರೂ ಅವರು ಒಪ್ಪಲಿಲ್ಲ. ಬರಿ ಕೈ ಕುಲುಕಲು ಬರುವುದಾಗಿ ಮತ್ತೆ ಹೇಳಿಕಳಿಸಿದ. ನೆಹರೂ ಅದಕ್ಕೂ ಒಪ್ಪಲಿಲ್ಲ. ಒಬ್ಬ ಫ್ಯಾಸಿಸ್ಟನ ಕೈಕುಲುಕಿದರೆ ಅದು ಜಗತ್ತಿನ ಮೇಲೆ ಯಾವ ದುಷ್ಪರಿಣಾಮ ಬೀರಬಹುದು ಎಂಬ ಪರಿಜ್ಞಾನ ನೆಹರೂ ಅವರಿಗೆ ಇತ್ತು” ಎಂದು ಬರೆಯುವ ಮೂಲಕ ಸಿದ್ದರಾಮಯ್ಯನವರ ಯಾರ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ ಎಂದು ಸೂಕ್ಷ್ಮವಾಗಿ ತಿಳಿಸಿದ್ದಾರೆ.

ನಿಮ್ಮನ್ನು ಯಾರೆಷ್ಟೇ ಬೈದರೂ ನಿಮ್ಮ ಸೆಕ್ಯುಲರ್ ಕಮಿಟ್‌ಮೆಂಟ್ ಬಗ್ಗೆ ನಿಮ್ಮ ವಿರೋಧಿಗಳಿಗೂ ಒಳಗೊಳಗೇ ಮೆಚ್ಚುಗೆಯಿತ್ತು. ಇಂದು ಭಟ್ಟನ ಸೈದ್ಧಾಂತಿಕ ಮಿತ್ರರೂ ಸಿದ್ದರಾಮಯ್ಯನವರೂ ಇಷ್ಟೇನಾ ಎಂದು ಆಡಿಕೊಳ್ಳುವಂತಾಗಿದೆ ಸರ್. ನಿಮ್ಮ ಘನತೆಗಿಂತ ಕೆಳಮಟ್ಟಕ್ಕಿಳಿಯದಿರಿ ಪ್ಲೀಸ್ ಎಂದು ಲೇಖಕ ಇಸ್ಮತ್ ಪಜೀರ್ ಮನವಿ ಮಾಡಿದ್ದಾರೆ.

ಸಿದ್ಧರಾಮಯ್ಯನವರೇ, ಗೆದ್ದ ಮೇಲೆ ಊರಾಳುಗಳ ಹಂಗ್ಯಾಕೆ ಅನ್ನುವ ಅಟಿಟ್ಯೂಡ್ ಬಿಟ್ಟುಬಿಡಿ. ಇಂಥ ಅಪವಿತ್ರ ಒಳವ್ಯವಹಾರಗಳು ನಿಮ್ಮನ್ನು ಗೆಲ್ಲಿಸಿಲ್ಲ. ತೀರಾ ತೀರಾ ನಗಣ್ಯವೆನಿಸುವ ಪುಟ್ಟ ಪುಟ್ಟ ಫೇಸ್‌ಬುಕ್‌ ಅಳಿಲುಗಳ ಪ್ರಯತ್ನಗಳು ಕೂಡಾ ನಿಮ್ಮ ಗೆಲುವಿನ ಹಿಂದಿದೆ ಅನ್ನುವುದನ್ನು ಮರೆಯಬಾರದು. ನಿಮ್ಮ ಗೆಲುವಿನ ಕನಸು ಹೊತ್ತಿದ್ದ ಇದೇ ‘ಫೇಸ್‌ಬುಕ್‌ ಜಾಣ’ರೆಲ್ಲ ಈಗ ಕಾಲದ ಕಸದಬುಟ್ಟಿಯ ನಿಷ್ಪ್ರಯೋಜಕ ಸೊತ್ತುಗಳನ್ನಿಸಿಕೊಳ್ಳುವುದು ನಿಮಗೆ ಮುಂದೆ ದುಬಾರಿಯಾದೀತು. ನಿಮ್ಮ ಸುತ್ತಮುತ್ತಲಿನ ಕೊಂಬು ಕೋಡುಗಳ ಬುದ್ಧಿವಂತರ, ಬು.ಜೀ.ವೇಷದ ಪುಢಾರಿಗಳ ನೆತ್ತಿಗಣ್ಣುಗಳು ನಿಮ್ಮ ಪಾದದಡಿಯ ಹಸುರು ಹೂವುಗಳನ್ನು ಗಮನಿಸದಂತೆ ದಾರಿತಪ್ಪಿಸುತ್ತವೆ. ನಮಗೆ ನಿಮ್ಮ ಸರಕಾರದ ಯಾವ ಪ್ರಯೋಜನಗಳೂ ಬೇಡ. ವಿಚಾರಬದ್ಧತೆಯ ಸಾತ್ವಿಕ ಸಿಟ್ಟಿನ ಜೆಂಟಲ್ ಮ್ಯಾನ್ ನಡಿಗೆ ಬೇಕಷ್ಟೆ. ಅಷ್ಟೇ ಅಷ್ಟೇ! ಎಂದು ಕಾರ್ಟೂನಿಷ್ಟ್ ದಿನೇಶ್ ಕುಕ್ಕಜಡ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಯರ್ ಸಿದ್ದು…
ನೀವು ಬಿಡುಗಡೆ ಮಾಡುತ್ತಿರುವುದು ಇಂತಹ
ವರ್ಣಶ್ರೇಷ್ಠತೆಯ ವ್ಯಸನಿ..ಜನಾಂಗೀಯವಾದಿ ಬರೆದಿರುವ ಪುಸ್ತಕಗಳನ್ನ…
ಒಮ್ಮೆ ಯೋಚಿಸಿ..ನಮ್ಮನ್ನ ಅವಮಾನಿಸಬೇಡಿ ಎಂದು ತೇಜ ಯಾಲಕ್ಕಯ್ಯನವರು ಅಭಿಪ್ರಾಯಪಟ್ಟಿದ್ದಾರೆ.

“ಸಿದ್ದರಾಮಯ್ಯನವರು ತಮ್ಮ ಸಿದ್ದಾಂತ ನಂಬಿಕೆಗಳನ್ನು ಬದಲಾಯಿಸಿಕೊಂಡುಬಿಡಬಹುದು ಎಂಬ ಹೆದರಿಕೆ ಯಾರಿಗೂ ಇಲ್ಲ. ವಿಷಜಂತುಗಳಿಗೆ ಮಾನ್ಯತೆ ದೊರೆತು ಮತ್ತಷ್ಟು ವಿಷ ಹಂಚುತ್ತವೆ ಸಮಾಜದಲ್ಲಿ ಎಂಬ ಕಾಳಜಿ. ಸಿದ್ದರಾಮಯ್ಯನವರನ್ನು ಯಾರೂ ವಿರೋಧಿಸುತ್ತಿಲ್ಲ. ಸಿದ್ದರಾಮಯ್ಯನವರಿಗೆ ಬುದ್ದಿ ಹೇಳೋದು ಅನ್ನೋಕಿಂತ, ಸಿದ್ದರಾಮಯ್ಯನವರು ಮತ್ತು ಆ ವ್ಯಕ್ತಿಯ ಒಡನಾಟ ಎಲ್ಲರಿಗೂ ತಿಳಿದಿರುವುದರಿಂದ ಈಗ ಮುಖ್ಯಮಂತ್ರಿಗಳು ಆ ಸಮಾರಂಭಕ್ಕೆ ಹೋಗಬಾರದು ಎಂಬ ಕಾಳಜಿ” ಎಂದು ಪರಮೇಶ್ವರ ಗುರುಸ್ವಾಮಿಯವರು ಅಭಿಪ್ರಾಯಪಟ್ಟಿದ್ದಾರೆ.

ಸಮರಸೇನಾನಿ, ಸಮಾಜವಾದಿ ಸಿದ್ದರಾಮಯ್ಯನವರು ತಮ್ಮ ಕನ್ನಡಕ ಹಾಕಿಕೊಂಡು ಮತ್ತೊಮ್ಮೆ ಮಗದೊಮ್ಮೆ ಇಂತಹ ಸುಳ್ಳು ಸುದ್ದಿ ಹಬ್ಬಿಸಿದ್ದವರು ಯಾರು ಅಂತ ನೋಡಲಿ….
ಇಂತಹವರ ಜೊತೆಗೆ ಬುಲ್ಲಿ ಬುಲ್ಲಿ ಆಡಲು ನಿಂತಿದ್ದಾರೆ ಅಂದರೆ ಏನು ಹೇಳೋದು ಪ್ರೆಂಡ್ಸ…. ಎಂದು ನಾಗೇಗೌಡ ಶಿವಲಿಂಗಯ್ಯ ಕೀಲಾರರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸರ್ವಜನಾಂಗದ ಶಾಂತಿಯ ತೋಟ’ದ ಮರಗಳ ಬೇರುಗಳಿಗೆ ನಿಧಾನವಿಷ ಇಕ್ಕುವ ಮೂಲಕ ರಾಜ್ಯದ ಸಾಮರಸ್ಯಕ್ಕೆ ಕೊಳ್ಳಿ ಹಚ್ಚುವುದನ್ನೇ ಹೊಸ ಶೈಲಿಯ ಪತ್ರಿಕೋದ್ಯಮ ಎಂದು ಬಿಂಬಿಸಿದವರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೋದರೆ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿದ್ದ ಎಲ್ಲಕ್ಕಿಂತ ಮುಖ್ಯ ‘ಗ್ಯಾರಂಟಿ’ಯ ಭರವಸೆಗೆ ಅವರೇ ಬೆಲೆ ಕೊಡುವುದಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದು ಕಾರ್ಟೂನಿಸ್ಟ್ ಪಿ.ಮಹಮ್ಮದ್ ಅಭಿಪ್ರಾಯಪಟ್ಟಿದ್ದಾರೆ.

ಸಿದ್ದರಾಮಯ್ಯನವರೆ ನೀವು ವಿಶ್ವೇಶ್ವರ ಭಟ್ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋದರೆ ನೀವು ಕೂಡ ಇಸ್ಲಾಮೋಫೋಬಿಯಾ, ಜಾತಿವಾದಿ ಮತ್ತು ಸ್ತ್ರೀದ್ವೇಷದ ನಡವಳಿಕೆಯನ್ನು ಅನುಮೋದಿಸುತ್ತಿದ್ದೀರಿ ಎಂದರ್ಥ. ಹಾಗಾಗಿ ಕೂಡಲೇ ಹೋಗುವುದಿಲ್ಲ ಎಂದು ಘೋಷಿಸಿ ಎಂದು ಸಾಮಾಜಿಕ ಕಾರ್ಯಕರ್ತ ವಿನಯ್ ಶ್ರೀನಿವಾಸ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ; ಎನ್​ಡಿಎ ಮೈತ್ರಿಕೂಟ ಸೇರಲು ಜೆಡಿಎಸ್ ಸಜ್ಜು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಬಿಜೆಪಿಯ12 ಸಭೆ: ದಾಖಲೆ ಕೇಳಿದ ಕಾಂಗ್ರೆಸ್

0
ಬಿಜೆಪಿ ಚೀನಾದೊಂದಿಗೆ ನಿಕಟ ಸಂಪರ್ಕ ಹೊಂದಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದ್ದು, 2008 ರಿಂದ ಬಿಜೆಪಿ ನಾಯಕರು ಮತ್ತು ಚೀನಾದ ಅಧಿಕಾರಿಗಳ ನಡುವೆ 12 ಉನ್ನತ ಮಟ್ಟದ ಸಭೆಗಳು ನಡೆದಿವೆ ಎಂದು ಆರೋಪಿಸಿದೆ....