Homeಕರ್ನಾಟಕಎನ್​ಡಿಎ ಮೈತ್ರಿಕೂಟ ಸೇರಲು ಜೆಡಿಎಸ್ ಸಜ್ಜು?

ಎನ್​ಡಿಎ ಮೈತ್ರಿಕೂಟ ಸೇರಲು ಜೆಡಿಎಸ್ ಸಜ್ಜು?

- Advertisement -
- Advertisement -

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಇದೀಗ ಲೋಕಸಭೆ ಚುನಾವಣೆಗೆ ಒಗ್ಗಟ್ಟಾಗಲಿವೆ ಎನ್ನುವ ಚರ್ಚೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಬಹಳ ಚರ್ಚೆಯಾಗುತ್ತಿದೆ. ಈ ನಡುವೆ ಜೆಡಿಎಸ್ ಪಕ್ಷವು ಎನ್​ಡಿಎ ಮೈತ್ರಿಕೂಟವನ್ನು ಸೇರಲು ಸಜ್ಜಾಗುತ್ತಿದೆ ಎಂದು ವರದಿಯಾಗಿದೆ.

ಜೆಡಿಎಸ್ ಪಕ್ಷವು ಎನ್​ಡಿಎ ಮೈತ್ರಿಕೂಟ ಸೇರುವುದು ಬಹುತೇಕ ಖಚಿತ ೆನ್ನುವ ಮಾತುಗಳು ರಾಜ್ಯ ರಾಜಕಾರಣದಲ್ಲಿ ಬಹಳ ಸದ್ದು ಮಾಡುತ್ತಿದೆ. ಸೋಮವಾರ ಅಥವಾ ಮಂಗಳವಾರ ಹೆಚ್​ಡಿ ಕುಮಾರಸ್ವಾಮಿ ಅವರು ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ದೆಹಲಿಯಲ್ಲಿ ಇದೇ 18ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ ಎನ್‌ಡಿಎ ಸಭೆಯಲ್ಲಿ ಜೆಡಿಎಸ್‌ ಭಾಗಿಯಾಗುವುದೇ ಇಲ್ಲವೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಬಿರುಸುಗೊಂಡಿದೆ.

ವಿಧಾನಸಭೆ ಚುನಾವಣೆ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ, ಲೋಕಸಭೆ ಚುನಾವಣೆ ಹೊತ್ತಿಗಾದರೂ ಚೇತರಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಜೆಡಿಎಸ್ ಮೊರೆ ಹೋಗಿದೆ. ಕಾಂಗ್ರೆಸ್ ಜತೆ ಸಂಬಂಧ ಹಳಸಿರುವುದರಿಂದಾಗಿ, ಮತ್ತೆ ತಲೆ ಎತ್ತಬೇಕಾದರೆ ಬಿಜೆಪಿ ಆಸರೆಯೇ ಸೂಕ್ತ ಎಂಬ ತರ್ಕಕ್ಕೆ ದಳಪತಿಗಳೂ ಬಂದಿದ್ದಾರೆ. ಈ ಮಧ್ಯೆ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಕಠಿಣ ಸ್ಪರ್ಧೆ ಎದುರಿಸಬೇಕಾಗುತ್ತದೆ. ಹೀಗಾಗಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸಿದರೆ ಆ ಪಕ್ಷದ ಪ್ರಾಬಲ್ಯ ಇರುವ ಕಡೆಯಲ್ಲಿ ಕಾಂಗ್ರೆಸ್ ಅನ್ನು ಒಟ್ಟಾಗಿ ಎದುರಿಸಬಹುದು ಎಂಬುದು ಬೆಜೆಪಿ ಲೆಕ್ಕಾಚಾರವಾಗಿದೆ.

ಎನ್‌ಡಿಎ ಮೈತ್ರಿಕೂಟದ ಭಾಗವಾಗಿ, ಈಗ ಚದುರಿಹೋಗಿರುವ ವಿವಿಧ ಪಕ್ಷಗಳ ನಾಯಕರಿಗೆ ಪತ್ರ ಬರೆದಿರುವ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಮತ್ತೆ ಕೂಟವನ್ನು ಒಗ್ಗೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಕುಮಾರಸ್ವಾಮಿಯವರ ಆಪ್ತ ಮೂಲಗಳು ಹೇಳುವಂತೆ, ”ಇಲ್ಲಿಯವರೆಗೆ ಬಿಜೆಪಿಯಿಂದ ಆಹ್ವಾನ ಬಂದಿಲ್ಲ, ಬಂದ ಬಳಿಕವಷ್ಟೇ, ಸಭೆಯಲ್ಲಿ ಪಾಲ್ಗೊಳ್ಳಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ” ಎಂದು ಹೇಳಲಾಗಿದೆ.

”ನಾವೇ ಏಕಾಂಗಿಯಾಗಿ ಸ್ಪರ್ಧಿಸಿದರೆ 2-4 ಸ್ಥಾನದಲ್ಲಾದರೂ ಗೆಲ್ಲಬಹುದು. ಬಿಜೆಪಿ ಜತೆಗೆ ಹೋದರೆ, 2019ರಲ್ಲಿ ಕಾಂಗ್ರೆಸ್‌ ಜತೆಗೆ ಹೋದಂತೆ ಆಗಿ, ಇರುವ ಸ್ಥಾನವನ್ನೂ ಕಳೆದುಕೊಳ್ಳಬೇಕಾಗಬಹುದೆಂಬ ಆತಂಕ ಇದೆ. ಈ ಗೊಂದಲ ಇರುವುದರಿಂದ ಯಾವುದೇ ತೀರ್ಮಾನವೂ ಆಗಿಲ್ಲ” ಎಂದು ಮೂಲಗಳು ವಿವರಿಸಿವೆ.

ಕಳೆದ ಒಂದು ತಿಂಗಳ ಹಿಂದೆ ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಯ ವಿಚಾರವಾಗಿ ದೆಹಲಿಯಲ್ಲಿ  ಬಿಜೆಪಿ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಹೀಗಾಗಿ ರಾಜ್ಯ ರಾಜಕೀಯ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿವೆ.

ಇದನ್ನೂ ಓದಿ: ಕುಮಾರಸ್ವಾಮಿ ಹೇಳಿದ್ದೇ ಸರಿ..: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸುಳಿವು ನೀಡಿದ ಬಿಎಸ್‌ವೈ

ಕಮಲ-ದಳ ಒಂದಾಗುವ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಭಾರೀ ಚರ್ಚೆ

ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಕಂಡು ಅಧಿಕಾರ ಹಿಡಿದಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ 25 ಸ್ಥಾನಗಳನ್ನು ಮರಳಿ ಗಳಿಸುವುದು ಕಷ್ಟ. ಹಾಗಾಗಿ ಜೆಡಿಎಸ್ ಪ್ರಭಾವವಿರುವ ಕ್ಷೇತ್ರಗಳಲ್ಲಿ ಒಂದಾಗಿ ಚುನಾವಣೆಗೆ ಹೋದರೆ ಒಂದಷ್ಟು ಸ್ಥಾನಗಳನ್ನು ಗಳಿಸಬಹುದು ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ.

ಈ ಬಗ್ಗೆ ಬಿಜೆಪಿ ನಾಯಕರೊಬ್ಬರು ಮಾತನಾಡಿದ್ದು, ”’ಈ ವಿಷಯದಲ್ಲಿ ಕುಮಾರಸ್ವಾಮಿ ಜತೆಗೆ ಬಿಜೆಪಿ ವರಿಷ್ಠರು ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ. ಒಂದು ಪಕ್ಷವನ್ನು ಬಿಜೆಪಿ ಜತೆ ವಿಲೀನಗೊಳಿಸುವುದು. ಆಗ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನಾಗಿ ಮಾಡುತ್ತೇವೆ. ನಿಮ್ಮ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ವರಿಷ್ಠರು ಭರವಸೆ ನೀಡಿದ್ದಾರೆ” ಎಂದು ಹೇಳಿದ್ದಾರೆ.

”ಈ ಪ್ರಸ್ತಾವಕ್ಕೆ ಕುಮಾರಸ್ವಾಮಿ ಒಪ್ಪಿಲ್ಲ. ಕರ್ನಾಟಕದಲ್ಲಿ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಜತೆ ಸೆಣಸಬೇಕಾಗಿರುವುದರಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಮೈತ್ರಿಕೂಟವನ್ನು ಸೇರಲು ಸಾಧ್ಯವೇ ಇಲ್ಲ. ಹೀಗಾಗಿ, ನಮ್ಮ ಅಸ್ತಿತ್ವ ಉಳಿಸಿಕೊಂಡು, ಎನ್‌ಡಿಎ ಮೈತ್ರಿಕೂಟ ಸೇರಲು ಸಿದ್ಧ. ವಿರೋಧ ಪಕ್ಷ ನಾಯಕ ಸ್ಥಾನದ ಬದಲು ಕೇಂದ್ರ ಸಚಿವ ಸ್ಥಾನ ಕೊಟ್ಟರೆ, ಕರ್ನಾಟಕದಲ್ಲೂ ನಿಮ್ಮ ಪಕ್ಷಕ್ಕೆ ಬಲ ತಂದುಕೊಡುತ್ತೇನೆ ಎಂದು ಕುಮಾರಸ್ವಾಮಿ ಪ್ರತಿಪಾದಿಸುತ್ತಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

”ಇದೇ ಕಾರಣಕ್ಕೆ ರಾಜ್ಯದಲ್ಲಿ ಪ್ರತಿಪಕ್ಷ ನಾಯಕ ಸ್ಥಾನದ ಆಯ್ಕೆ ನಡೆದಿಲ್ಲ. ಕುಮಾರಸ್ವಾಮಿ ವಿಲೀನಕ್ಕೆ ಒಪ್ಪಿದರೆ ಅವರೇ ಆ ಸ್ಥಾನಕ್ಕೆ ಬರುವ ಸಾಧ್ಯತೆ ಹೆಚ್ಚು. ಕರ್ನಾಟಕದ ನಾಯಕರ ಜತೆಗೆ ಚರ್ಚೆ ನಡೆದಿಲ್ಲ. ದೆಹಲಿ ವರಿಷ್ಠರ ಹಂತದಲ್ಲೇ ಈ ಸಮಾಲೋಚನೆ ನಡೆದಿದೆ. ತೀರ್ಮಾನವನ್ನು ಅವರೇ ತೆಗೆದುಕೊಳ್ಳಬೇಕಿದೆ. ಎನ್‌ಡಿಎ ಮೈತ್ರಿಕೂಟದ ಸಭೆ ಮುಗಿದ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ” ಎಂದು ಹೇಳಿದ್ದಾರೆ.

ಈ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಧ್ಯಮಗಳ ಜೊತೆಗೆ ಮಾತನಾಡಿ, ರಾಜಕೀಯ ಭಿನ್ನಮತಗಳನ್ನ ದೂರವಿಟ್ಟು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ಕೊಡಬೇಕು. ಅನೇಕ ಪಕ್ಷಗಳು ಬೆಂಬಲಿಸುತ್ತಿದ್ದು, ಜೆಡಿಎಸ್​ನಿಂದಲೂ ನಾವು ಅಪೇಕ್ಷೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...