Homeಅಂಕಣಗಳುಏನಾದ್ರು ಮಾಡಿ ಮಂತ್ರಿಯಾಗಲೆಬೇಕು ಕಂಡ್ರೀ

ಏನಾದ್ರು ಮಾಡಿ ಮಂತ್ರಿಯಾಗಲೆಬೇಕು ಕಂಡ್ರೀ

- Advertisement -
- Advertisement -

ಅಂತಾರಾಷ್ಟ್ರೀಯ ಮಟ್ಟದ ಅರ್ಥಶಾಸ್ತ್ರಜ್ಞೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಇಡೀ ದೇಶದ ತುಂಬ ಚರ್ಚೆಯಾಗುತ್ತಿರುವ ಸಮಯದಲ್ಲಿ, ಬಡವರ ಪಾಲಿಗೆ ಯಾವ ಬೆನಿಫಿಟ್ಟೂ ಬಜೆಟ್ಟಿನಲ್ಲಿ ಇಲ್ಲವಂತಲ್ಲಾ. ಇದೇನು ಆಶ್ಚರ್ಯಪಡುವ ಸಂಗತಿಯಲ್ಲ. ಬಿಜೆಪಿ ಹುಟ್ಟಿನಲ್ಲೇ ಬಡವರ ವಿರೋಧಿಯಾಗಿದೆ. ಬಡವರು ಬಡವರಾಗಿದ್ದರೆ ಮಾತ್ರ ನಾವು ಮೆರೆಯಬಹುದು; ಗರ್ಭಗುಡಿಯಲ್ಲಿ ಕುಳಿತು ಶಿಖೆ ನೀವುತ್ತಾ, ಬೆವರಿಳಿಯುವಂತೆ ಭೂರಿ ಭೋಜನ ಬಾರಿಸಬಹುದು ಎಂದು ನಂಬಿದವರ ಸರಕಾರದಿಂದ ಬಡವರಿಗೆ ಅನುಕೂಲವಾಗುವುದುಂಟೆ. ಎಂದಿನವರೆಗೆ ಬಡತನ ತಾಂಡವವಾಡುತ್ತಿರುತ್ತದೊ ಅಲ್ಲಿಯವರೆಗೆ ನಾವೂ ನೃತ್ಯ ಮಾಡಬಹುದೆಂದು ನಂಬಿರುವ ಜನ ನಡೆಸುವ ಸರಕಾರದಲ್ಲಿ ಬಡವರಿಗಾಗಿ ನಿರ್ಮಲಾ ಏನಾದರೂ ಕೊಡುವುದರ ಬದಲು ಹಿಂದೆ ಕೊಟ್ಟಿದೆಲ್ಲವನ್ನ ಕಿತ್ತುಕೊಂಡಿದ್ದಾರೆ. ಎಂದಿನಂತೆ ದೇಶದ ಭವಿಷ್ಯದ ದೃಷ್ಟಿಯಿಂದ ಯಾವ ಭರವಸೆಯೂ ಇಲ್ಲದ ಬಜೆಟ್ಟು ದೇಶವ್ಯಾಪ್ತಿ ಚರ್ಚೆಯಾಗದಂತೆ ಮಾಡಲು ಈಗಾಗಲೇ ವೈದಿಕ ಶಿಖಾಮಣಿಗಳು ರಾಮಮಂದಿರವನ್ನು ಉಡಾಯಿಸುವ ಬೆದರಿಕೆ ಕರೆಗಳು ಬರುತ್ತಿವೆಯೆಂದು ಹುಯಿಲೆಬ್ಬಿಸತೊಡಗಿದ್ದಾರೆ. ಇಂತಹ ನಾಟಕಗಳು ಈ ಹಿಂದಿನಿಂದಲೂ ನಡೆದುಬರುತ್ತಿರುವುದರಿಂದ ಸಂಘಿಗಳ ಚೇಷ್ಟೆಗೆ ಯಾರೂ ಗಮನಕೊಡದಿರುವುದನ್ನು ಕಂಡ ಅವುಗಳು ಭಾರತದ ಜನಕ್ಕೆ ಮನದಟ್ಟಾಗುವವರೆಗೂ ಹೇಳಲು ತಯಾರಾಗಿವೆಯಂತಲ್ಲಾ, ಥೂತ್ತೇರಿ.

*****

ರಾಜ್ಯದಲ್ಲಿ ಪಂಚರತ್ನ ಯಾತ್ರೆ, ಸಂಕಲ್ಪಯಾತ್ರೆ, ಬಿಜೆಪಿಗಳ ಪರಿಷೆ ನಡೆಯುತ್ತಿರುವಾಗ ಒಂದು ಜೀವ ಅತೃಪ್ತಿ, ಅಶಾಂತಿ, ಹಿಂಸೆ ಮತ್ತು ಅಸಹನೆಯಿಂದ ಕ್ರೋಧಗೊಂಡಿದೆಯಲ್ಲಾ. ಆ ಆಸಾಮಿಯ ಬಯಕೆ ಈಡೇರಿದ್ದೇ ಆದರೆ ಕರ್ನಾಟಕವನ್ನ ಕಿತ್ತು ತಿನ್ನುತ್ತಿರುವ ಸಮಸ್ಯೆಗಳೆಲ್ಲಾ ಜಾದೂ ಮಾಡಿದಂತೆ ಮಾಯವಾಗಲಿವೆಯಂತಲ್ಲಾ. ಈ ಆಸಾಮಿಯ ಬಯಕೆ ಈಡೇರಿಸುವ ಶಕ್ತಿಯಿರುವುದು ಬಸವರಾಜ ಬೊಮ್ಮಾಯಿಗೆ ಮಾತ್ರ. ಈ ಸಮಸ್ಯೆಗೆ ತುತ್ತಾದ ವ್ಯಕ್ತಿ ಈಶ್ವರಪ್ಪ. ಈ ಬಗ್ಗೆ ಅವರನ್ನೇ ಕೇಳಲೆಂದು ಫೋನ್ ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್ “ನಮಸ್ತೆ ಸಧಾ ವತ್ಸಲೇ ಮಾತೃ ಭೂಮಿ”.

“ಹಲೋ ಯಾರ್ರಿ?”

“ನಾನು ಸಾರ್ ಯಾಹೂ.”

“ಎಲ್ರಿ ಕಾಣ್ತನೆಯಿಲ್ಲಾ ನೀವು?”

“ಯಾತ್ರೆ, ಜಾತ್ರೆ, ಪರಿಷೆ ತಿರಗದೆ ಆಗಿದೆ ಸಾರ್ ಪುರಸತ್ತೆಯಿಲ್ಲ.”

“ಪುರಸತ್ತು ಮಾಡಿಕಂಡು ಬರಬೇಕಪ್ಪ, ಪತ್ರಕರ್ತರನ್ನ ನಾವು ಹ್ಯಂಗೆ ನೋಡಿಕಂಡಿದ್ದಿವಿ, ಸೈಟ್ ಕೊಟ್ಟಿದ್ದಿವಿ, ಮನೆಕೊಟ್ಟಿದ್ದಿವಿ, ಕೈಗೆ ದುಡ್ಡನ್ನೂ ಕೊಟ್ಟಿದ್ದಿವಿ. ಬಂಗ್ಲೆಲಿ ಆರಾಮವಾಗಿ ಇದ್ದುಬುಡೊದಲ್ಲ. ಬಂದು ನಮ್ಮ ಕಷ್ಟನೂ ಕೇಳಬೇಕು.”

“ಸಾರಿ ಸರ್, ಪತ್ರಕರ್ತರಿಂದ ಕೃತಜ್ಞತೆ ನಿರೀಕ್ಷೆ ಮಾಡಬೇಡ್ರಿ. ನೀವು ನಿಮ್ಮ ಕೆಲಸ ಮಾಡಿದ್ರೆ, ನಾವು ನಮ್ಮ ಕೆಲಸ ಮಾಡಿದೊ. ಕಾಲ ಹತ್ರ ಬರ್ತಾಯಿದೆ. ಮುಂದೆ ಯಾವ ಸರಕಾರ ಬರುತ್ತೊ ಏನೊ..”

“ಅದ್ಕೆ ಕಂಡ್ರಿ, ಕಡೇ ಅವಧಿಲಾರ ಮಂತ್ರಿಯಾಗನ ಅಂತ ಹೋರಾಡ್ತಯಿದ್ದಿನಿ, ಗೊತ್ತ?”

“ಸಾರ್ ನೀವು ಹೋರಾಡಬೇಕಾಗಿದ್ದುದ್ದು ಮಂತ್ರಿ ಪದವಿಗಲ್ಲ. ಶರಾವತಿ ಸಂತ್ರಸ್ತರ ಬಗ್ಗೆ, ಅಡಕೆ ತೋಟಕ್ಕೆ ಹಳದಿ ರೋಗ ಬಂದು ಅಟಗಾಯಿಸಿಗಂಡಿರದಕ್ಕೆ, ಮತ್ತೆ ವಿ.ಐ.ಎಸ್.ಎಲ್ ಮುಚ್ಚತಾಯಿರಕ್ಕೆ, ಹಿಂಗೆ ಜನರ ಬದುಕು ನಾಶವಾಗ್ತಯಿರದರ ವಿರುದ್ಧ ಹೋರಾಡಬೇಕು ಸಾರ್.”

“ಮಂತ್ರಿಯಾದ ಮೇಲೆ ಚೆನ್ನಾಗೆ ಹೋರಾಡಬಹುದಲ್ರೀ? ಅಧಿಕಾರನೂ ಇರತ್ತೆ, ಜನಗಳೂ ಮಾತ್ ಕೇಳ್ತರೆ.”

“ಯಲಕ್ಷನ್ ಕೆಲವೇ ತಿಂಗಳದೆ ಸಾರ್.”

“ಮೂರೆ ದಿನ ಇರ್ಲಿ ಕಂಡ್ರೀ, ಮತ್ತೆ ಮಂತ್ರಿಯಾದ್ರೆ ಕಳಂಕ ಯಲ್ಲ ಹೋಗಿ ನಾನು ನಿರ್ದೋಷಿ ಅಂತ ಸಾಬೀತಾಯ್ತದೆ.”

“ಯಾವ ವಿಷಯದಲ್ಲೀ?”

“ಗುತ್ತಿಗೆದಾರ ಸಂತೋಷನಿಂದ ನಲವತ್ತು ಪರಸೆಂಟು ಕಮಿಷನ್ ತಂಗಂಡೆ ಅನ್ನೋ ವಿಷಯದಲ್ಲಿ.”

“ನಿರ್ದೋಷಿ ಸರಿ, ಆದರೆ ಸಂತೋಷ ಆತ್ಮಹತ್ಯೆ ಮಾಡಿಕೊಂಡವರೆ ಸಾರ್.”

“ತನಿಖೆಲಿ ನಾನು ನಿರ್ದೋಷಿ ಅಂತ ಆಯ್ತಲ್ರೀ?”

ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಆಡು ಕುರಿ ಕರ ಕಾಣೆಯಾಗುತ್ತವಲ್ಲಾ!

“ಸಾರ್ ನಿಮ್ಮದೇ ಸರಕಾರ, ನೀವೇ ಮಂತ್ರಿ. ತನಿಖೆ ಮಾಡೋರು ಹ್ಯಂಗೆ ಮಾಡಿರಬಹುದು ಹೇಳಿ? ಹಂಗಂತ ನಿಮ್ಮವರೆ ಮಾತಾಡಿಕೊಳ್ತಾ ಅವುರೆ.”

“ಅವುರ್ಯಾರು ಅಂತ ನನಿಗ್ಗೊತ್ತು. ಅವುರ ಮಾತ ಕೇಳಕ್ಕೋಗಬ್ಯಾಡಿ. ನನ್ನ ಮ್ಯಾಲೆ ದೂರಿತ್ತು, ಅದು ನಿವಾರಣೆ ಆಯ್ತು. ಈಗ ಮಂತ್ರಿಯಾಗಬೇಕು, ಆಗಲಿಲ್ಲ ಕಳಂಕ ಅಂಗೇ ಉಳಿತದೆ”

“ನೀವು ಒಂದು ಕ್ಯಲಸ ಮಾಡಬಹುದು ಸಾರ್.”

“ಅದೇನೇಳ್ರಿ?”

“ಬೊಮ್ಮಾಯಿ ಅಳ್ಳಾಡಸೊ ಅಂತ ಯಾವುದಾದ್ರು ಗುಟ್ಟಿದ್ರೆ ಅದ ಪತ್ತೆ ಮಾಡಿ ಹಿಡಕಳಿ.”

“ಬೊಮ್ಮಾಯಿದೇನಾದ್ರು ಅಕ್ರಮ ಇದ್ರೆ, ಕೊಲೆ ಕೇಸಿದ್ರೆ, ಅಕ್ರಮ ಸಂಬಂಧ ಇದ್ರೆ ಪತ್ತೆ ಹಚ್ಚಿ ಸಾಕ್ಷಿ ಸಮೇತ ಅವರ ಮುಖಕ್ಕೆ ಹಿಡಿರಿ. ಮರುದಿನವೇ ನೀವು ವಿಧಾನಸೌಧದ ಎದುರು ಮಂತ್ರಿಯಾಗಿ ಪ್ರಮಾಣ ವಚನ ತಗೊಳ್ತೀರಿ.”

“ಬೊಮ್ಮಾಯಿ ವಿಷಯದಲ್ಲಿ ಅಂತವ್ಯಾವೂ ಇಲ್ಲ ಕಂಡ್ರಿ.”

“ಹೋಗ್ಲಿ ರೇಣುಕಾಚಾರಿ ಕೇಳಿ, ಏನಾದ್ರೂ ಹೇಳ್ತರೆ.”

“ಅವುನ್ಯಾಕೆ ಕೇಳಲಿ?”

“ಆತ ಎಡೂರಪ್ಪನ ಇದೇತರ ಹೆದರಿಸಿ ಮಂತ್ರಿಯಾದದ್ದು. ನಿಮಗೂ ಗೊತ್ತಲವೇನ್ರಿ?”

“ಹೌದು ಗೊತ್ತು. ಬೊಮ್ಮಾಯಿನ ಅಂಗೆ ಹೆದರಸಕ್ಕಾಗಲ್ಲ. ಆತ ಅಂತಹ ಯಾವ ತಪ್ಪನ್ನು ಮಾಡಿರಲಾರ.”

“ಸಿದ್ದರಾಮಯ್ಯರಿಂದ ಬೊಮ್ಮಾಯಿಗೇಳಸಕ್ಕಾಗಲವ.”

“ಹೇಳಸಬಹುದಿತ್ತು, ಆದ್ರೆ ಈಚೆಗೆ ಸಿದ್ದರಾಮಯ್ಯ ನನ್ನ ಹೆಣಾನೂ ಬಿಜೆಪಿಗೆ ಹೋಗಲ್ಲ ಅಂದಿದ್ಕೆ, ಸಿದ್ದರಾಮಯ್ಯನ ಹೆಣನ ನಾಯಿನೂ ತಿನ್ನಲ್ಲ ಅಂದುಬುಟ್ಟೆ ಕಂಡ್ರಿ.”

“ಓ ಅದಕೆ ಏನು ಸಾರ್? ಅದಕ್ಕೆ ಪ್ರತಿಯಾಗಿ ಅವುರ ಕಡೆಯ ಕೆಲವು ಕಿಡಿಗೇಡಿಗಳು ಹಂದಿನೂ ತಿನ್ನಲ್ಲ ನಿಮಿಗೇ ಹೇಳತಾ ಅವುರೆ.”

“ಹೇಳ್‌ಕಳ್ಳಿ ಬುಡ್ರಿ ಹಂದಿ ಹ್ಯಣ ತಿಂತವ?”

“ಐದು ನಿಮಿಷಕ್ಕೆ ತಿನ್ನಕತ್ತವೆ, ಅದರಲ್ಲೂ ಕಾಡಂದಿ ರಾಜಕಾರಣಿಗಳ ಹ್ಯಣನ ಹುಡಿಕ್ಕಂಡು ತಿರುಗ್ತವೆ.”

“ಹೋಗ್ಲಿ ಬಿಡ್ರಿ, ನಾನು ಮಂತ್ರಿಯಾಗಕ್ಕೆ ಒಂದು ಪ್ಲಾನೇಳಿ.”

“ಎಡೂರಪ್ಪನ ಕಾಲಿಗೆ ಬೀಳಕ್ಕಾಗಲ್ಲವಾ?”

“ಆಗಲ್ಲ.”

“ವಿಧಾನಸೌಧದ ಎದಿರೀಗೆ ಬಿದ್ದಿದ್ರಿ?”

“ಅದಾ? ಕಾಲ. ಈಗ ಬಿದ್ರು ಪ್ರಯೋಜನಯಿಲ್ಲ. ಬೊಮ್ಮಾಯಿ ಕಡೆ ಕೈ ತೋರತಾರೆ.”

“ಕುಮಾರಸ್ವಾಮಿಯಿಂದ ಹೇಳಿಸಿದರಾಗಲ್ಲವೆ?”

“ಹೇಳಸಬಹುದು, ಈಗ್ಯಾಕೆ ಬಿಡಿ ಈಶ್ವರಪ್ಪ, ಮುಂದೆ ನನ್ನದೇ ಸರಕಾರ ಬರುತ್ತೆ, ಆಗ ನನ್ನ ಸಂಪುಟದಲ್ಲೇ ಪಿ.ಡಬ್ಳು.ಡಿ ಮಂತ್ರಿಯಾಗಿ ಅಂದುಬುಡ್ತಾರೆ.”

“ಪಿ.ಡಬ್ಳು.ಡಿ ಖಾತೆಯ ರೇವಣ್ಣನಿಂದ ಕಿತಗಳಕ್ಕೆ ಯಾರಿಂದ್ಲೂ ಆಗಲ್ಲ ಸಾರ್. ನಿಂಬೆ ಹಣ್ಣಲ್ಲೆ ಹ್ವಡಿತರೆ.”

“ಅದೇನೊ, ಅವುರು ಮನೆ, ಅವುರ ಪಾರ್ಟಿ ನಮಗ್ಯಾಕೆ. ನಾನು ಮಂತ್ರಿಯಾಗೊ ಪ್ಲಾನೇಳಿ.”

“ಸಾರ್, ನಿಜಕ್ಕೂ ಅಸಾಧ್ಯವಾದದ್ದು ಯಾವುದೂ ಇಲ್ಲ ಸಾರ್, ಶಿವಮೊಗ್ಗದಲ್ಲಿ 144 ಸೆಕ್ಷನ್ ಹಾಕಿದ್ದಾಗ್ಲೂ ಮೆರವಣಿಗೆ ತಗದು ಎಸ್ಪಿ, ಡಿಸಿ ಮತ್ತೆ ಜಿಲ್ಲಾ ಆಡಳಿತನೆ ಮುಸ್ಲಿಂ ಕೇರಿಗೆ ನುಗ್ಗಿಸಿ ದೊಂಬಿ ಮಾಡಿಸಿದ್ರಿ, ಆಗ ಪಿಎಫ್‌ಐ ಜನ ಪರಾರಿಯಾದ್ರು. ಅಲ್ಲೆ ಇದ್ದ ಸಾಮಾನ್ಯರು ಮೆಗ್ಗಾನ್ ಆಸುಪತ್ರೆಗೆ ಅಡ್ಮಿಟ್ ಆದ್ರು, ಇಡೀ ಶಿವಮೊಗ್ಗನೆ ನಡುಗಿಸಿದ್ರಿ. ಅಂತಹ ಈಶ್ವರಪ್ಪನಿಗೆ ಜುಜುಬಿ ಒಂದು ಮಂತ್ರಿ ಖಾತೆ ಪಡಿಯಕ್ಕಾಗಲ್ಲವ ಸಾರ್. ಈಗ್ಲು ಒಂದು ಅವಾಜ್ ಹಾಕಿ, ಶಿವಮೊಗ್ಗದ ಜನಗಳೆ ಸೇರಿ, ಶಿವಮೊಗ್ಗ ತಣ್ಣಗಿರಬೇಕಾದ್ರೆ ಮೊದ್ಲು ಈಶ್ವರಪ್ಪನ್ನ ಮಂತ್ರಿ ಮಾಡಿಬಿಡಿ ಅಂತಾರೆ. ಆಗ ವಿಧಾನಸೌಧದ ಎದುರು ನೀವೊಬ್ಬರೆ ಮಂತ್ರಿಯಾಗಿ ಪ್ರಮಾಣ ವಚನ ತಗೋಳ್ತಿರಿ. ಲೇಟ್ ಮಾಡಬೇಡಿ”

“ಸರಕಾರ ನಡಸೋರೆ ತಿಳಕಬೇಕು ಕಂಡ್ರಿ. ನಲವತ್ತು ಪರಸೆಂಟ್ ವಿಷಯನ ಇಡೀ ಸರಕಾರ ಹೊರಬೇಕು. ಏನೊ ನಾನೊಬ್ನೆ ಪರಸೆಂಟೇಜ್ ತಗೊಂಡನೆ? ದೂರು ಹೊತ್ತಗಂಡೋನು ನಾನೊಬ್ಬನೆ ಕಂಡ್ರಿ. ಈಗ ಸಮಸ್ಯೆನ ಸರಕಾರವೇ ಪರಿಹಾರ ಮಾಡಬೇಕು.”

“ಥೂತ್ತೇರಿ”

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...