Homeಅಂಕಣಗಳುಗೌರಿ ಕಾರ್ನರ್; ರೇವತಿ ಎಂಬ ತಂಗಿಯ ಆತ್ಮಕಥನ

ಗೌರಿ ಕಾರ್ನರ್; ರೇವತಿ ಎಂಬ ತಂಗಿಯ ಆತ್ಮಕಥನ

- Advertisement -
- Advertisement -

ಅವಳ ಹೆಸರು ರೇವತಿ. ಬೆಳ್ಳಗೆ, ಸುಂದರವಾಗಿರುವ ರೇವತಿಯನ್ನು ನಾನು ಐದಾರು ವರ್ಷಗಳ ಹಿಂದೆ ಮೊದಲ ಬಾರಿಗೆ ಭೇಟಿ ಆದಾಗ ಆಕೆ ತೆಳು ಹಳದಿ ಬಣ್ಣದ ಹಸಿರು ಅಂಚಿನ ಕಾಟನ್ ಸೀರೆಯನ್ನು ಅಚ್ಚುಕಟ್ಟಾಗಿ ಉಟ್ಟಿದ್ದಳು. ತಲೆ ಕೂದಲನ್ನು ನೀಟಾಗಿ ಬಾಚಿ ತುರುಬು ಕಟ್ಟಿಕೊಂಡಿದ್ದಳು. ಕುಂಕುಮ, ಓಲೆ, ಸರ, ಬಳೆ ಎಲ್ಲವನ್ನೂ ತೊಟ್ಟಿದ್ದ ಆಕೆ ಮಧ್ಯಮ ವರ್ಗದ ಸಭ್ಯ ಗೃಹಿಣಿಯಂತೆ ಕಾಣಿಸುತ್ತಿದ್ದಳು.

ರೇವತಿ ಕೆಲಸ ಮಾಡುತ್ತಿದ್ದ ಆಫೀಸಿನಲ್ಲಿ ತನ್ನ ಸಹೋದ್ಯೋಗಿಯೊಬ್ಬನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆಕೆಯ ಗಂಡನ ಪರಿಚಯ ಅದಕ್ಕಿಂತ ಹಲವು ವರ್ಷಗಳ ಹಿಂದೆಯೇ ನನಗಾಗಿತ್ತು. ಆದರೆ ಅದ್ಯಾವುದೋ ಕಾರಣಕ್ಕೆ ಗಂಡ ಮತ್ತು ಹೆಂಡತಿ ನಡುವೆ ಭಿನ್ನಾಭಿಪ್ರಾಯಗಳು ಉದ್ಭವಿಸಿ ಆಕೆಯನ್ನು ತೊರೆದು ಆತ ಬೇರೆ ಹೋಗಲು ನಿರ್ಧರಿಸಿದ್ದ.

ಆಕೆಯ ಗಂಡನ ಪರಿಚಯ ನನಗೆ ಇದ್ದುದ್ದರಿಂದ “ಹೇಗಾದರೂ ಮಾಡಿ ನನ್ನನ್ನು ಬಿಟ್ಟುಹೋಗದಂತೆ ಅವರನ್ನು ಒಪ್ಪಿಸಿ” ಎಂದು ರೇವತಿ ನನ್ನನ್ನು ಕೇಳಿಕೊಂಡಳು. ಆದರೆ ಬೇರೆಯವರ ದಾಂಪತ್ಯ ಸಮಸ್ಯೆಗಳಲ್ಲಿ ತಲೆ ಹಾಕುವುದು ನನಗಿಷ್ಟವಿಲ್ಲ. ಮಾತ್ರವಲ್ಲ ಆತ ಆಗಲೇ ಮನಸ್ಸು ಮಾಡಿದ್ದರೆ ಆತನನ್ನು ಬಲವಂತವಾಗಿ ರೇವತಿ ತನ್ನ ಜೊತೆಗೆ ಇಟ್ಟುಕೊಳ್ಳುವುದು ಸಮಸ್ಯೆಯನ್ನು ಬಗೆಹರಿಸುವುದಿಲ್ಲ ಎಂಬುದೂ ನನಗೆ ಗೊತ್ತಿತ್ತು. “ನಾನು ನಿನಗೆ ಹೇಗೆ ಸಹಾಯ ಮಾಡಲಿ ರೇವತಿ. ಅದು ಅವನಿಗೆ ಮತ್ತು ನಿನಗೆ ಬಿಟ್ಟಿರೋದು” ಎಂದು ನನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದೆ.

ಅಂದಹಾಗೆ ಇವರಿಬ್ಬರದ್ದು ’ಜೋಡಿ’ ಬದುಕಾಗಿದ್ದರೂ ಅವರಿಬ್ಬರು ’ಸಾಮಾನ್ಯ’ ದಂಪತಿಗಳಾಗಿರಲಿಲ್ಲ. ಯಾಕೆಂದರೆ ರೇವತಿ ಓರ್ವ ಹಿಜ್ರಾ, ಆತ ದ್ವಿಲಿಂಗಿ. ಅದೇನೇ ಇರಲಿ, ಕೊನೆಗೆ ಅವರಿಬ್ಬರು ಬೇರೆಬೇರೆ ಆದರು. ಆದರೆ ಇವತ್ತಿಗೂ ಇಬ್ಬರೂ ನನ್ನ ಸ್ನೇಹಿತರಾಗಿಯೇ ಉಳಿದಿದ್ದಾರೆ.

ಹೋದ ವರ್ಷ ರೇವತಿ ಬರೆದ ಆತ್ಮಕತೆಯನ್ನು ಪೆಂಗ್ವಿನ್ ಸಂಸ್ಥೆ ಇಂಗ್ಲಿಷ್‌ನಲ್ಲಿ ಪ್ರಕಟಿಸಿತು. ಅದನ್ನು ಕನ್ನಡದಲ್ಲಿ ಪ್ರಕಟಿಸುವ ಆಶೆ ನನ್ನದಾಗಿತ್ತು. ಆದರೆ ಅಷ್ಟು ಹೊತ್ತಿಗಾಗಲೇ ಬೇರೆ ಸಂಸ್ಥೆಯವರು ಅದನ್ನು ಪ್ರಕಟಿಸುವ ಆಶೆ ವ್ಯಕ್ತಪಡಿಸಿದ್ದರಿಂದ ರೇವತಿ ಅವರಿಗೆ ತನ್ನ ಒಪ್ಪಿಗೆಯನ್ನು ಸೂಚಿಸಿದ್ದಳು. “ಅಕ್ಕಾ, ನೀವು ಮೊದಲೇ ನನಗ್ಯಾಕೆ ಹೇಳಲಿಲ್ಲ. ಈಗಾಗಲೇ ಬೇರೆಯವರಿಗೆ ಹ್ಞೂಂ ಅಂದಿದ್ದೇನೆ. ಈಗೇನು ಮಾಡಲಿ” ಎಂದು ರೇವತಿ ಅವತ್ತು ಬೇಸರಪಟ್ಟುಕೊಂಡಿದ್ದಳು. ಆಗ ನಾನು “ಪರವಾಗಿಲ್ಲ ಬಿಡು, ನಿನ್ನ ಆತ್ಮಕತೆ ಆದಷ್ಟು ಭಾಷೆಗಳಲ್ಲಿ ಪ್ರಕಟಗೊಂಡು ಹಿಜ್ರಾಗಳ ಬದುಕಿನ ಕಷ್ಟ ಆದಷ್ಟು ಜನರಿಗೆ ತಿಳಿಯುವಂತಾದರೆ ಸಾಕು” ಎಂದು ಹೇಳಿದ್ದೆ.

ದು. ಸರಸ್ವತಿ

ಆದರೆ ಅದ್ಯಾಕೋ ಆ ಸಂಸ್ಥೆಯವರಿಗೆ ರೇವತಿಯ ಆತ್ಮಕಥನವನ್ನು ಪ್ರಕಟಿಸಲಾಗಲಿಲ್ಲ. ಈಗ ತಮಿಳುನಾಡಿನಲ್ಲಿ ವಾಸಿಸುತ್ತಿರುವ ರೇವತಿ ಒಂದು ದಿನ ನನಗೆ ಫೋನ್ ಮಾಡಿ “ಅಕ್ಕಾ, ನನ್ನ ಆತ್ಮಕತೆಯನ್ನು ನೀವೇ ಪ್ರಕಟಿಸುತ್ತಿರಾ?” ಎಂದು ಕೇಳಿದಳು. ನಾನು ಸಂತೋಷದಿಂದ ಒಪ್ಪಿಕೊಂಡೆ. ಅದಾದ ಎರಡು ವಾರಗಳ ನಂತರ ಆಕೆಗೆ ತುಂಬಾ ಆಪ್ತವಾಗಿರುವ ಕವಿಯತ್ರಿ ಸರಸ್ವತಿಯೊಂದಿಗೆ ರೇವತಿ ನನ್ನ ಆಫೀಸಿಗೆ ಬಂದಳು. ಆಕೆಯ ಆತ್ಮ ಕಥನವನ್ನು ಸರಸ್ವತಿಯೇ ಕನ್ನಡಕ್ಕೆ ಅನುವಾದ ಮಾಡಬೇಕೆಂದು ಎಲ್ಲರೂ ನಿರ್ಧರಿಸಿದೆವು. ಡೆಡ್‌ಲೈನನ್ನೂ ನಿಗದಿಮಾಡಿದೆವು. ಆನುವಾದವನ್ನು ತುಂಬಾ ಚೆನ್ನಾಗಿ ಮಾಡಿ ಮುಗಿಸಿದ ಸರಸ್ವತಿ ಅದನ್ನು ಒಮ್ಮೆ ರೇವತಿಗೆ ಸಂಪೂರ್ಣವಾಗಿ ಓದಿ ಹೇಳಿದ ನಂತರ ಮೊನ್ನೆ ನನಗೆ ಕಳುಹಿಸಿಕೊಟ್ಟರು.

ಈಗಾಗಲೇ ಅದರ ಮುಕ್ಕಾಲು ಭಾಗವನ್ನು ಓದಿ ಮುಗಿಸಿದ್ದೇನೆ. ಹಾಗೆ ಓದುವಾಗ ಅದೆಷ್ಟೋ ಬಾರಿ ಕಣ್ಣೀರಿಟ್ಟದ್ದೇನೆ, ಬೇಸರ ಪಟ್ಟಿದ್ದೇನೆ, ನಕ್ಕಿದ್ದೇನೆ, ನಿಟ್ಟುಸಿರುಬಿಟ್ಟಿದ್ದೇನೆ. ನಿಜವಾಗಲೂ ರೇವತಿಯ ಕಷ್ಟಕರ ಬದುಕು ಮತ್ತು ಅದನ್ನು ಆಕೆ ವಿವರಿಸಿರುವ ರೀತಿ ಅದ್ಭುತವಾಗಿದೆ ಮನಮುಟ್ಟುವಂತಿದೆ. ಇದನ್ನು ಓದಿದ ಪ್ರತಿಯೊಬ್ಬರೂ ಹಿಜ್ರಾಗಳ ಬದುಕಿನ ಬಗ್ಗೆ ಮರುಕಪಡುವುದು ಖಂಡಿತ.

ತಮಿಳುನಾಡಿನ ಸೇಲಂ ಜಿಲ್ಲೆಯ ಪುಟ್ಟ ಹಳ್ಳಿಯ ಸಾಮಾನ್ಯ ಕುಟುಂಬದಲ್ಲಿ ದೊರೈಸ್ವಾಮಿಯಾಗಿ ಜನಿಸಿದ ರೇವತಿಯ ಜೀವನದೃಷ್ಟಿ ಅಮೋಘವಾದದ್ದು. ತನ್ನ ಎಲ್ಲ ನೋವುಗಳ ನಡುವೆಯೂ ತನ್ನತನವನ್ನು ಕಾಪಾಡಿಕೊಳ್ಳಬೇಕೆಂಬ ಛಲ, ಕಷ್ಟಗಳ ನಡುವೆಯೂ ಸ್ವಾಭಿಮಾನದಿಂದ ಬದುಕಬೇಕೆಂಬ ಆಶೆ, ತಂದೆ ತಾಯಿ ಆಣ್ಣಂದಿರು ತನ್ನನ್ನು ನಿಂದಿಸಿದರೂ ಅವರೆಲ್ಲ ತನ್ನ ಸಂಸಾರದವರೇ ಅಲ್ಲವೇ ಎಂದು ಅವರ ಬಗ್ಗೆ ಪ್ರೀತಿಯನ್ನು ಉಳಿಸಿಕೊಳ್ಳುವ ಹೃದಯ, ಬಡತನದ ಬೇಗೆಯಲ್ಲೂ ಚಿಕ್ಕಪುಟ್ಟದರಲ್ಲಿ ಸಂತೋಷವನ್ನು ಕಾಣುವ ಉದಾರತೆ.. ಹೀಗೆ ಬದುಕೆಂಬುದೇ ಹೋರಾಟ ಎನ್ನುತ್ತಾರೆ. ಆದರೆ ರೇವತಿಯ ಬದುಕು ಸಮರ ಎಂದೇ ಹೇಳಬಹುದು.

ಇನ್ನು ಪುಟ್ಟ ಹುಡುಗಿಯಾಗಿದ್ದಾಗಲೇ ತಾನೋರ್ವ ಮಹಿಳೆಯಾಗಿದ್ದು ಪುರುಷನ ದೇಹದಲ್ಲಿ ಜನಿಸಿರುವ ನತದೃಷ್ಟೆ ಎಂಬುದು ರೇವತಿಯ ಅರಿವಿಗೆ ಬರುತ್ತದೆ. ಅಲ್ಲಿಂದ ಆಕೆಯ ಜೀವನದ ಹಾದಿಯೇ ಬದಲಾಗುತ್ತದೆ. ತನ್ನನ್ನು ಅರ್ಥ ಮಾಡಿಕೊಳ್ಳುವ, ತನ್ನಂತೆಯೇ ಇರುವ ಹಿಜ್ರಾಗಳನ್ನು ಸೇರಿಕೊಳ್ಳಲು ಒಂದು ದಿನ ರೇವತಿ ಮನೆಯಿಂದ ಓಡಿಹೋಗುತ್ತಾಳೆ. ಆಗ ಆಕೆಗಿನ್ನೂ ಹದಿನಾರೋ, ಹದಿನೇಳೋ ವಯಸ್ಸು. ಕೈಯಲ್ಲಿ ಕಾಸಿಲ್ಲ. ತಮಿಳು ಬಿಟ್ಟು ಬೇರೆ ಬಾಷೆ ಗೊತ್ತಿಲ್ಲ. ಆದರೂ ದೂರದ ದೆಹಲಿಯಲ್ಲಿರುವ ತನ್ನ ಹಿಜ್ರಾ ಗುರುವನ್ನು ನೋಡಲು ಹೋಗುತ್ತಾಳೆ. ಅಲ್ಲಿ ಇತರೆ ಹಿಜ್ರಾಗಳೊಂದಿಗೆ ಸೇರಿ ಚಪ್ಪಾಳೆ ತಟ್ಟುತ್ತಾ ಭಿಕ್ಷೆ ಬೇಡಲಾರಂಭಿಸುತ್ತಾಳೆ. ಆಕೆ ದೆಹಲಿಯಲ್ಲಿರುವುದು ಅವಳ ಮನೆಯವರಿಗೆ ಗೊತ್ತಾಗಿ ಉಪಾಯವಾಗಿ ಆಕೆಯನ್ನು ವಾಪಸ್ ಕರೆಸಿಕೊಳ್ಳುತ್ತಾರೆ. ಮನೆಗೆ ಬಂದ ರೇವತಿಯನ್ನು ಹಿಗ್ಗಾಮುಗ್ಗಾ ಥಳಿಸಿ, ಆಕೆ ಉದ್ದಕ್ಕೆ ಬಿಟ್ಟಿರುವ ಕೂದಲನ್ನು ಬಲವಂತವಾಗಿ ಕತ್ತರಿಸಿ ಅವಳನ್ನು ’ಸರಿ’ ಮಾಡಲು ಪ್ರಯತ್ನಿಸುತ್ತಾರೆ.

ಮತ್ತೊಮ್ಮೆ ಮನೆಯಿಂದ ತಪ್ಪಿಸಿಕೊಳ್ಳುವ ರೇವತಿ ಮುಂಬೈಗೆ ಹೋಗುತ್ತಾಳೆ. ಅಲ್ಲಿನ ಆಕೆಯ ಗುರು ಹಣಕಾಸು ನೆರವು ನೀಡುವುದರಿಂದ ರೇವತಿ ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾಳೆ. ತನ್ನ ಲೈಂಗಿಕ ಆಸಕ್ತಿಗಳನ್ನು ಈಡೇರಿಸಿಕೊಳ್ಳಲು ಮುಂಬೈಯಲ್ಲಿ ಸೆಕ್ಸ್‌ವರ್ಕರ್ ಆಗುತ್ತಾಳೆ. ಆದರೂ ತನ್ನವರನ್ನು ನೋಡುವ ಅದೆಂತಹದ್ದೋ ಸೆಳೆತ ಕಾಡುತ್ತದೆ. ಶಸ್ತ್ರಚಿಕಿತ್ಸೆಯಾದ ನಂತರ ಈಗ ತಾನು “ಹೆಣ್ಣಾಗಿದ್ದೇನೆ” ಆದ್ದರಿಂದ ತನ್ನ ಅಣ್ಣಂದಿರು ತನಗೆ ಏನೂ ಮಾಡಲಾಗುವುದಿಲ್ಲ ಎಂದು ಭಾವಿಸಿ ಮತ್ತೆ ಮನೆಗೆ ಬರುತ್ತಾಳೆ. ಆದರೆ ಅಲ್ಲಿ ಮತ್ತೊಮ್ಮೆ ಆಕೆಗೆ ತನ್ನ ಅಣ್ಣಂದಿರು ಕಾಟ ಕೊಡುತ್ತಾರೆ. ತಡೆಯಲಾರದೆ ಮತ್ತೊಮ್ಮೆ ಆಕೆ ಮನೆ ಬಿಟ್ಟು ಹೋಗುತ್ತಾಳೆ. ಆಗ ಆಕೆ ಬರುವುದು ಬೆಂಗಳೂರಿಗೆ. ಇಲ್ಲಿದ ಹಮಾನ್ ಒಂದನ್ನು ಸೇರಿಕೊಂಡು ಜೀವನ ನಡೆಸಲು ಪ್ರಯತ್ನಿಸುತ್ತಾಳೆ.

ಅಷ್ಟೊತ್ತಿಗಾಗಲೇ ಬೆಂಗಳೂರಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆಂದು ’ಸಂಗಮ’ ಎಂಬ ಸಂಘಟನೆ ಪ್ರಾರಂಭವಾಗಿತ್ತು. ರೇವತಿ ಆ ಸಂಘಟನೆಯನ್ನು ಸೇರಿಕೊಂಡು ಹಿಜ್ರಾ ಮತ್ತು ಇತರೆ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಪರವಾದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಳು. ಅವರು ನಡೆಸಿದ ಪ್ರತಿಭಟನೆಯೊಂದರಲ್ಲಿ ಭಾಗವಹಿಸಲು ಹೋಗಿದ್ದಾಗಲೇ ರೇವತಿಯ ಪರಿಚಯ ನನಗಾದದ್ದು.

ರೇವತಿ ತನ್ನ ಬದುಕಿನ ಕಷ್ಟಗಳನ್ನು ತಮ್ಮ ಆತ್ಮಕತೆಯಲ್ಲಿ ಒಮ್ಮೆ ಹೀಗೆ ದಾಖಲಿಸಿದ್ದಾರೆ: ’ಲೋಕ ನನ್ನನ್ನ ಓರೆಯಾಗೇ ನೋಡುತ್ತೆ. ಗಂಡಸಾಗಿ ಹುಟ್ಟಿ ಹೆಂಗಸಾದದ್ದು ತಪ್ಪು ಅನ್ಸುತ್ತೆ. ದೇವರೇ ನನಗೆ ಈ ಭಾವನೆಗಳನ್ನು ಕೊಟ್ಟಿರೋದು. ಆದ್ರೆ ಈ ಭಾವನೆಗಳನ್ನು ಗೌರವಿಸದಿರೋ ಜಗತ್ತಲ್ಲಿ ನಾನು ಬದುಕಬೇಕು. ನನ್ನಂತಹವರು ಭಿಕ್ಷೆ ಬೇಡೋದನ್ನ ಮದುವೆ ಮಾಡ್ಕೊಳೋದನ್ನ ತಪ್ಪು ಎಂದು ಜಗತ್ತು ಪರಿಗಣಿಸುತ್ತೆ. ನಾನು ಕೊಲೆ ಮಾಡಿಲ್ಲ, ಮೋಸ ಮಾಡಿಲ್ಲ ಅಥವಾ ಕಳ್ಳತನ ಮಾಡಿಲ್ಲ. ಆದರೂ ಅಪರಾಧಿ ತರಹ ಜಗತ್ತು ನನ್ನನ್ನು ಕಾಣುತ್ತೆ.

ಯಾರಾದ್ರೂ ನನ್ನ ಹೊಡೆದರೆ, ಬೈದರೆ, ಜಿಗುಟಿದರೆ ನನಗೂ ನೋವಾಗುತ್ತೆ. ನನಗೆ ಹಸಿವಾಗುತ್ತೆ ಊಟ ಮಾಡಬೇಕು, ಮಾನ ಕಾಪಾಡೋಕೆ ಬಟ್ಟೆ ತೊಡಬೇಕು. ನನ್ನನ್ನ ಪ್ರೀತಿಸೋರ ಜೊತೇಲಿ ನಾನು ಇರಬೇಕು. ಅವರ ಮಮತೆ ನನಗೆ ಬೇಕು. ಸಂತೋಷ ಅನುಭವಿಸಬೇಕು. ಘನತೆಯಿಂದ ಬದುಕಬೇಕು. ನಾನು ಗೌರವಕ್ಕಾಗಿ ಹಾತೊರೀತೀನಿ. ಬೇರೆ ಹೆಂಗಸರ ತರಹ ಕೆಲಸಕ್ಕೆ ಹೋಗೋದು ನನಗಿಷ್ಟ.

ಆದರೆ ನನ್ನಂತಹವರಿಗೆ ಪ್ರೀತಿ ತೋರಿಸೋರು ಯಾರು? ಗೌರವ ಕೊಡೋರು ಯಾರು? ನಮ್ಮ ಮಾನ ಮುಚ್ಚಿಕೊಳ್ಳೋಕೆ ಬಟ್ಟೆ ನೀಡೋರು ಯಾರು? ಹಸಿವಾದಾಗ ಊಟ ನೀಡೋರು ಯಾರು? ಇದೆಲ್ಲ ನನಗೆ ಬೇಕು ಅಂದರೆ ನಾನು ಏನು ಮಾಡ್ಬೇಕು? ಹುಟ್ಟುವಾಗಲೇ ಪೊಟೈ ಆಗಬೇಕು ಅಂತ ಪ್ರಮಾಣ ಮಾಡ್ಕೊಂಡಿದ್ನಾ? ನನ್ನ ತಂದೆ ತಾಯಿ ನಾನು ಪೊಟೈ ಆಗಬೇಕೆಂದು ಕಲ್ಪಿಸಿಕೊಂಡಿದ್ದರಾ? ಬೀದಿಬೀದಿ ಸುತ್ಕೊಂಡು ಭಿಕ್ಷೆ ಎತ್ಕೊಂಡು, ಸೆಕ್ಸ್ ವರ್ಕ್ ಮಾಡ್ಕೊಂಡಿರ್ತೀನಿ ಅಂತ ನಾನು ಕಲ್ಪಿಸಿಕೊಂಡೇ ಇರ್ಲಿಲ್ಲ. ನನ್ನ ಬದುಕು ಹೀಗೆ ಆಗೋದಕ್ಕೆ ಯಾರು ಹೊಣೆ? ಇದನ್ನ ನಾನಾಗಿ ನಾನು ಆಯ್ಕೆ ಮಾಡ್ಕೊಂಡಿದ್ದಲ್ಲ, ಒಬ್ಬ ಗಂಡಸಿನೊಂದಿಗೆ ಜೀವನ ನಡೆಸಬೇಕು ಅಂದ್ಕೊಂಡಿದ್ದೆ. ನಿತ್ಯದ ಜೀವನಕ್ಕೆ ಅಗತ್ಯವಾದ ಏನೂ ನನಗೆ ಸಿಗಲಿಲ್ಲ. ಗಂಡಸರು ಕೇವಲ ಸೆಕ್ಸ್‌ಗಷ್ಟೇ ನನ್ನ ಬಳಸಿಕೊಂಡರು. ಮಿಕ್ಕಿದ್ದು ಯಾವುದೂ ಅವರಿಗೆ ಬೇಡ. ಸೆಕ್ಸ್‌ವರ್ಕ್ ಮಾಡೋದು ನನಗಿಷ್ಟವಿಲ್ಲ. ಅದು ನನ್ನ ಹಣೆಬರಹ ಅಂತ ಒಪ್ಪಿಕೊಂಡಿದ್ದೇನೆ”.

ಹಿಜ್ರಾಗಳ ಬದುಕಿನಲ್ಲಿ ಸಾಮಾನ್ಯ ಜನರ ನಿರ್ಲಕ್ಷ್ಯ ಒಂದೆಡೆಯಾದರೆ, ಪೊಲೀಸರ ನಿರಂತರ ಕಿರುಕುಳ ಇನ್ನೊಂದೆಡೆ. ಒಮ್ಮೆ ಬೆಂಗಳೂರಿನಲ್ಲಿ ತನಗಾದದ್ದನ್ನು ರೇವತಿ ಹೀಗೆ ವಿವರಿಸಿದ್ದಾರೆ: “ಆತ ಸಾಮಾನ್ಯ ಉಡುಪು ಧರಿಸಿದ ಪೊಲೀಸ್, ಆತನಿಗೆ ನಲವತ್ತು ವರ್ಷ ಇರಬಹುದು. ಕಟ್ಟುಮಸ್ತಾದ ಆಳು. ಬಲವಂತವಾಗಿ ನನ್ನನ್ನು ಆಟೋ ಹತ್ತಿಸಿಕೊಂಡು ಪೊಲೀಸ್ ಸ್ಟೇಷನ್‌ಗೆ ಕರ್ಕೊಂಡು ಹೋಗ್ತಿದೀನಿ ಅಂದ. ಆದರೆ ನಿರ್ಜನವಾದ ಕತ್ತಲ ಗಲ್ಲಿಯೊಳಗೆ ಕರೆದುಕೊಂಡು ಹೋಗ್ತಿದ್ದಾನೆ ಅಂತ ಗೊತ್ತಾಯಿತು. ನಂತರ ಸೆಕ್ಸ್‌ಗಾಗಿ ಬಲವಂತ ಮಾಡಿದ.

’ಸ್ವಾಮಿ ಬಿಟ್ಬಿಡಿ, ನಾನು ಹೆಂಗಸಲ್ಲ, ಪೊಟೈ. ಹೊಟ್ಟೆಪಾಡಿಗೆ ಈ ಕೆಲಸ ಮಾಡ್ತಿದೀನಿ, ದಯವಿಟ್ಟು ಬಿಟ್ಟಿಡಿ!’ ಎಂದು ಕೈ ಮುಗಿದೆ. ಅದಕ್ಕೆ ಆತ ಕನ್ನಡದಲ್ಲಿ ’ಹೋ ನೀನು ಖೋಜಾನಾ? ಆದ್ರೆ ಹಾಗೆ ಕಾಣಲ್ಲ?!’ ಎಂದ.

’ನಾನು ಹೇಳ್ತಿರೋದು ನಿಜಾ ಸಾರ್’ ಎಂದೆ. ’ಸರಿಸರಿ, ನಿನ್ನ ಹತ್ರ ಏನಿದೆಯೋ ಅದನ್ನೆಲ್ಲ ಕೊಡು’ ಎಂದು ಹೇಳಿ, ನನ್ನ ಪರ್ಸ್‌ನೆಲ್ಲ ನೋಡಿ ಅದರಲ್ಲಿದ್ದ 250 ರೂಪಾಯಿಯನ್ನು ತಗೊಂಡ. ಅದೂ ಸಾಲದು ಅಂತ ನನ್ನ ಕುತ್ತಿಗೆಯಲ್ಲಿದ್ದ ತಾಮ್ರದ ಸರವನ್ನು ಚಿನ್ನದ್ದು ಅಂದ್ಕೊಂಡು ಕಿತ್ಕೊಂಡ, ಕೈನಲ್ಲಿದ್ದ ಬಳೇನು ತೆಗಿ ಅಂದ. ಅದು ತಾಮ್ರದ್ದು ಅಂತ ಹೇಳಿದರೂ ಬೆಂಕಿಕಡ್ಡಿ ಗೀರಿ ನೋಡಿ ಪರೀಕ್ಷೆ ಮಾಡಿದ. ನಂತರ ಆ ಕತ್ತಲಲ್ಲಿ ಗೊತ್ತಿಲ್ಲದ ಜಾಗದಲ್ಲಿ ನನ್ನನ್ನು ಬಿಟ್ಟು ಅವನು ಹೊರಟುಹೋದ.

ಎಲ್ಲಾನೂ ಕಿದ್ಕೊಂಡಿದ್ದೂ ಅಲ್ಲದೆ, ಒಬ್ಬಳನ್ನೇ ಬಿಟ್ಟು ಹೋಗಿದ್ದಕ್ಕೆ ಅವನಿಗೆ ಆಗಬಾರದ್ದು ಆಗಲಿ, ಅವನ ಮನೇಲಿ ಪೊಟೈ ಹುಟ್ಟಲಿ ಅಂತ ಶಾಪ ಹಾಕಿದೆ”.

ಮೊನ್ನೆ ಫೋನ್ ಮಾಡಿದ ರೇವತಿ “ಅಕ್ಕಾ ಪುಸ್ತಕ ಯಾವಾಗ ರೆಡಿ ಆಗುತ್ತೆ, ಅದರ ಬಿಡುಗಡೆಗೆ ಯಾರನ್ನ ಕರೀಬೇಕು ಅಂತಿದ್ದೀರಿ” ಎಂದು ಕೇಳಿದಳು. “ಇನ್ನೂ ಪ್ರೂಫ್ ನೋಡುತ್ತಿದ್ದೇನೆ. ಲೇಔಟ್ ಆಗಿ ಮತ್ತೊಮ್ಮೆ ಪ್ರೂಫ್ ಆಗಬೇಕು ರೇವತಿ. ಅದಿರಲಿ, ಬಿಡುಗಡೆಗೆ ಯಾರನ್ನು ಕರೆಯಬೇಕು ಅಂತ ನಿನಗೆ ಇಷ್ಟ ಇದೆ?” ಎಂದೆ.

“ಅಕ್ಕಾ, ಇದು ಬರೀ ಹಿಜ್ರಾಗಳನ್ನು ಕುರಿತ ಸಭೆ ಆಗಬಾರ್ದು. ನನ್ನ ಬದುಕಿಗೂ, ಇತರೆ ಶೋಷಿತರ ಬದುಕಿಗೂ ಅಷ್ಟೇನು ವ್ಯತ್ಯಾಸ ಇಲ್ಲ. ಆದ್ದರಿಂದ ಬೇರೆ ಶೋಷಿತ ವರ್ಗಗಳೂ ಅದರಲ್ಲಿ ಭಾಗವಹಿಸಿದರೆ ಚೆನ್ನಾ” ಎಂದಳು!

“ನೀನು ಹೇಳೋದು ಸರಿ. ಯೋಚಿಸೋಣ” ಎಂದೆ. ಫೋನ್ ಇಡುವ ಮುನ್ನ ರೇವತಿ “ನಿಮ್ಮನ್ನು ಅಕ್ಕಾ ಅಂತ ಕರೆದರೆ ಬೇಸರ ಇಲ್ಲಾ ತಾನೆ?” ಎಂದು ಕೇಳಿದಳು. “ಬೇಸರ ಯಾತಕ್ಕೆ, ನೀನು ನನ್ನನ್ನು ಅಕ್ಕಾ ಅಂತ ಕರೆದರೇ ನನಗಿಷ್ಟ” ಎಂದೆ.

ಈ ನನ್ನ ತಂಗಿ ರೇವತಿಯ ’ಬದುಕು ಬಯಲು: ಹಿಜ್ರಾ ಒಬ್ಬಳ ಆತ್ಮಕಥನ’ವನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ. ಅದು ನಿಜವಾಗಲೂ ಮನಮುಟ್ಟುವ ಜೀವನಗಾಥೆ.

(ಏಪ್ರಿಲ್ 13, 2011ರಂದು ಗೌರಿಯವರು ಬರೆದ ಕಂಡಹಾಗೆ ಅಂಕಣದ ಸಂಗ್ರಹ ಭಾಗ ಇದು)


ಇದನ್ನೂ ಓದಿ: ಸಂಪಾದಕೀಯ; ಸಾಂವಿಧಾನಿಕ ನೈತಿಕತೆಯಲ್ಲಿ ಕಮಾನು ಕಟ್ಟಬೇಕಿದೆ ಬಣ್ಣಗಳು

ಇದನ್ನೂ ಓದಿ: ಅಕ್ಕಯ್ ಸಂದರ್ಶನ; ಮಂಗಳ ಮತ್ತು ಅಮಂಗಳ ಅನ್ನುವಂತದ್ದೆಲ್ಲ ಬ್ರಾಹ್ಮಣ್ಯ ಪ್ರೇರಿತ; ಇರುವುದು ಮನುಷ್ಯರು ಮತ್ತು ವೈವಿಧ್ಯತೆ

ಇದನ್ನೂ ಓದಿ : ಭಾರತದ ಮೊದಲ ಟ್ರಾನ್ಸ್‌ಜೆಂಡರ್ ಪ್ರಿನ್ಸಿಪಾಲ್ ಮಾನವಿ ಬಂದೋಪಾಧ್ಯಾಯ ಅವರ ಆತ್ಮಕತೆಯಿಂದ; ‘ನನ್ನ ಮೇಲೆ ನನಗೇ ಅನುಮಾನ!’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...