Homeಪುಸ್ತಕ ವಿಮರ್ಶೆಭಾರತದ ಮೊದಲ ಟ್ರಾನ್ಸ್‌ಜೆಂಡರ್ ಪ್ರಿನ್ಸಿಪಾಲ್ ಮಾನವಿ ಬಂದೋಪಾಧ್ಯಾಯ ಅವರ ಆತ್ಮಕತೆಯಿಂದ; 'ನನ್ನ ಮೇಲೆ ನನಗೇ ಅನುಮಾನ!'

ಭಾರತದ ಮೊದಲ ಟ್ರಾನ್ಸ್‌ಜೆಂಡರ್ ಪ್ರಿನ್ಸಿಪಾಲ್ ಮಾನವಿ ಬಂದೋಪಾಧ್ಯಾಯ ಅವರ ಆತ್ಮಕತೆಯಿಂದ; ‘ನನ್ನ ಮೇಲೆ ನನಗೇ ಅನುಮಾನ!’

- Advertisement -
- Advertisement -

ಭಾರತದ ಪ್ರಪ್ರಥಮ ಟ್ರಾನ್ಸ್‌ಜೆಂಡರ್ ಪ್ರಿನ್ಸಿಪಾಲ್ ಮಾನವಿ ಬಂದೋಪಾಧ್ಯಾಯ ಅವರ ಆತ್ಮಕತೆ ’ಗಂಡು ಜೀವ, ಹೆಣ್ಣು ಭಾವ’ದಿಂದ ಆಯ್ದ ಭಾಗ..

ನಾನು ಗಂಡಾಗಿ ಹುಟ್ಟಿದ್ದರೂ ಅಂತರಂಗದ ಭಾವನೆಗಳ ದೃಷ್ಟಿಯಿಂದ ನೋಡಿದರೆ ನಾನೊಂದು ಹೆಣ್ಣು ಎಂದು ನನಗೆ ದೃಢವಾಗಿತ್ತು. ಹೀಗಾಗಿ ನಾನೂ ಅದೇ ಹಾದಿಯಲ್ಲಿ -ಹೆಣ್ಣೆಂದು ಗುರುತಿಸಿಕೊಳ್ಳುವ ದಾರಿಯಲ್ಲಿ- ಹೆಜ್ಜೆಗಳನ್ನಿಡುತ್ತಿದ್ದೆ. ಆದರೂ ಒಮ್ಮೊಮ್ಮೆ ನನ್ನ ಮೇಲೆ ನನಗೇ ‘ಅರೇ, ನಾನು ಸಾಗುತ್ತಿರುವ ಈ ಹಾದಿ ಸರಿಯಾಗಿದೆಯೇ?’ ಎನ್ನುವ ಅನುಮಾನ ಬರುತ್ತಿತ್ತು. ಅಂತಹ ಘಳಿಗೆಗಳಲ್ಲಿ ನನ್ನ ಮನಸ್ಸು ಅಲ್ಲೋಲಕಲ್ಲೋಲಗೊಂಡು, ‘ನಾನು ನಿಜಕ್ಕೂ ಗಂಡಸಿನ ರೂಪದಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿರುವ ಒಂದು ಹೆಣ್ಣೇ ಅಥವಾ ನಾನೊಂದು ಹೆಣ್ಣೆಂಬುದೆಲ್ಲ ನನ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಯಃಕಶ್ಚಿತ್ ಸನ್ನಿಯಂತಹ ಭಾವೋನ್ಮಾದವೇ? ನಾನು ಹೆಣ್ತನದ ಲಕ್ಷಣಗಳುಳ್ಳ ಮನುಷ್ಯನಾಗಿದ್ದರೂ ಸುತ್ತಲಿನ ಪ್ರಪಂಚವೇಕೆ ನನ್ನನ್ನು ಗಂಡಸೆಂದೇ ತಿಳಿದುಕೊಂಡಿದೆ?’ ಎನ್ನುವಂತಹ ಪ್ರಶ್ನೆಗಳು ನನ್ನನ್ನು ಕಾಡುತ್ತಿದ್ದವು. ಆಗ ನಾನು ನಿಜಕ್ಕೂ ಏನೆಂದು ತಿಳಿದುಕೊಳ್ಳಲು ಗಂಟೆಗಟ್ಟಲೆ ಕಾಲ ಕನ್ನಡಿಯ ಮುಂದೆ ಬೆತ್ತಲೆಯಾಗಿ ನಿಂತುಕೊಂಡು, ನನ್ನನ್ನೇ ನೋಡಿಕೊಳ್ಳುತ್ತಿದ್ದೆ. ಆದರೆ, ಅಲ್ಲಿ ನನಗೆ ಗಂಡಸಿನ ಆಕಾರ ಕಾಣುತ್ತಿತ್ತು! ಇದನ್ನಂತೂ ನಾನು ನಖಶಿಖಾಂತವಾಗಿ ದ್ವೇಷಿಸುತ್ತಿದ್ದೆ. ಏಕೆಂದರೆ, ಈ ಪುರುಷಾಕೃತಿಯೊಂದಿಗೆ ನನ್ನ ಅಂತರಂಗವು ಒಂದು ಸಾಸುವೆ ಕಾಳಿನಷ್ಟೂ ಒಗ್ಗಿಕೊಳ್ಳುತ್ತಿರಲಿಲ್ಲ. ಹೀಗಾಗಿ, ಕನ್ನಡಿಯ ಮುಂದೆ ನಿಂತುಕೊಂಡಾಗಲೆಲ್ಲ ನಾನು ಕೊನೆಗೆ, ‘ಖಂಡಿತವಾಗಿಯೂ ಇದು ನಾನಲ್ಲವೇ ಅಲ್ಲ! ನಾನು ನಿಜಕ್ಕೂ ಬೇರೆ!!’ ಎನ್ನುವ ತೀರ್ಮಾನಕ್ಕೆ ಬರುತ್ತಿದ್ದೆ.

ಕನ್ನಡಿಯಲ್ಲಿ ಕಾಣುತ್ತಿದ್ದ ನನ್ನ ಪ್ರತಿಬಿಂಬಕ್ಕೂ ನನ್ನ ಒಳಗಿನ ಚೈತನ್ಯ ಮತ್ತು ಲೈಂಗಿಕ ಅಸ್ಮಿತೆಗೂ ಹೊಂದಾಣಿಕೆಯಾಗುತ್ತಿರಲಿಲ್ಲ. ನನ್ನನ್ನು ನೋಡಿಕೊಂಡಾಗ ನನಗೆ ನನ್ನ ನಿಜವಾದ ಪ್ರತಿಬಿಂಬ -ಹೆಣ್ಣಿನಂತೆ- ಕಾಣಬೇಕೆಂದು ನಾನು ತಹತಹಿಸುತ್ತ, ಗಂಟೆಗಟ್ಟಲೆ ಕಾಲ ಕಣ್ಣೀರು ಸುರಿಸುತ್ತ ಗೋಳಾಡುತ್ತಿದ್ದೆ. ಹುಟ್ಟಿನಿಂದ ಬಂದಿದ್ದ ಪುರುಷಾಕೃತಿಯನ್ನು ಕಿತ್ತೆಸೆದು, ಅದರಿಂದ ಹೇಗಾದರೂ ಮಾಡಿ ಹೊರಬರಬೇಕೆನ್ನುವ ಕೋಲಾಹಲ ನನ್ನೊಳಗೆ ಒಂದೇಸಮನೆ ನಡೆಯುತ್ತಿತ್ತು. ಹೀಗೆಂದುಕೊಂಡು, ರಾಜಾರೋಷವಾಗಿ ಒಂದು ಹೆಣ್ಣಿನಂತೆ ಬಟ್ಟೆಬರೆ ಹಾಕಿಕೊಂಡು, ಹೆಣ್ಣಿನಂತೆಯೇ ವರ್ತಿಸಲು ಮುಂದಾಗುವುದು ಕೂಡ ನನಗೆ ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ, ಹಾಗೇನಾದರೂ ಮಾಡಿದ್ದರೆ ಸಾರ್ವಜನಿಕವಾಗಿ ನಾನು ಅವಮಾನಕ್ಕೆ ಒಳಗಾಗುತ್ತಿದ್ದೆ. ಅಂದಮಾತ್ರಕ್ಕೆ, ಈಗೇನೂ ಸುತ್ತಲಿನ ಜನ ನನ್ನನ್ನು ಆದರಿಸುತ್ತಿದ್ದರು ಎಂದಲ್ಲ. ನಿಜ ಹೇಳಬೇಕೆಂದರೆ, ಇಂತಹ ಅವಮಾನ, ಲೇವಡಿ, ಬೈಗುಳ, ಅಣಕ ಇವೆಲ್ಲವೂ ನನ್ನ ಬದುಕಿನ ಭಾಗವೇ ಆಗಿಹೋಗಿದ್ದವು.

ಹೀಗಾಗಿ ನಾನು, ಮೇಲ್ನೋಟಕ್ಕೆ ಗಂಡಸಿನಂತೆಯೇ ಕಾಣಿಸಿಕೊಳ್ಳಬೇಕೆಂದು ತೀರ್ಮಾನಿಸಿ, ಸಿಗರೇಟು ಸೇದಲು ಶುರು ಮಾಡಿದೆ. ನಾನು ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗಲಂತೂ ಅಲ್ಲಿ ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರೂ ಸಿಗರೇಟು ಸೇದುತ್ತಿದ್ದರು. ಆದರೆ, ತೀರಾ ಹಿಂದುಳಿದ ಪ್ರದೇಶವಾಗಿದ್ದ ಜಾರ್‌ಗ್ರಾಮ್‌ನ ವಾತಾವರಣವೇ ಬೇರೆಯಾಗಿತ್ತು. ಅಲ್ಲಿನ ಜನರ ಪ್ರಕಾರ, ಸಿಗರೇಟು ಸೇದುವುದೇನಿದ್ದರೂ ಗಂಡಸರ ಚಟವಾಗಿತ್ತು. ಹೀಗಾಗಿ, ಹೆಣ್ಣು ಮಗಳೊಬ್ಬಳು ಸಿಗರೇಟನ್ನು ಸೇದುವುದಿರಲಿ, ಮುಟ್ಟುವುದನ್ನೂ ಅವರು ಕಲ್ಪಿಸಿಕೊಳ್ಳುತ್ತಿರಲಿಲ್ಲ. ಇದನ್ನು ಗಮನಕ್ಕೆ ತೆಗೆದುಕೊಂಡ ನಾನು, ನಾಲ್ಕು ಜನರೆದುರೇ ಸಿಗರೇಟು ಸೇದಲು ಶುರು ಮಾಡುವುದರಿಂದ ಸುತ್ತಲಿನವರೆಲ್ಲ ನನ್ನನ್ನು ಗಂಡಸೆಂದು ತಿಳಿದುಕೊಳ್ಳುತ್ತಾರೆ; ಅದರಿಂದ ಸ್ವಲ್ಪ ದಿನಗಳ ಮಟ್ಟಿಗಾದರೂ ಉಳಿದವರು ನನ್ನ ತಂಟೆಗೆ ಬರುವುದಿಲ್ಲ ಎಂದು ಯೋಚಿಸಿದೆ. ಆಗ ಕೂಡ ಗಂಡಸಿನಂತೆ ಪ್ಯಾಂಟು-ಶರ್ಟು ಹಾಕಿಕೊಳ್ಳುವುದು ನನಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಹೀಗಾಗಿ, ನಾನು ತುಸು ಗಂಡಸಿನಂತೆ ಕಾಣಿಸಿಕೊಳ್ಳಬೇಕೆಂಬ ಯೋಚನೆಯಿಂದ ಹೆಣ್ಣಿನಂತೆ ಅಲಂಕಾರ ಮಾಡಿಕೊಳ್ಳುವುದನ್ನು ಒಂದಿಷ್ಟು ಕಡಿಮೆ ಮಾಡಲು ಪ್ರಯತ್ನಿಸಿದೆ.

ಆದರೆ, ಇಂತಹ ಉಪಾಯಗಳಿಂದ ನನ್ನ ಅಂತರಂಗದಲ್ಲಿ ನಡೆಯುತ್ತಿದ್ದ ಕೋಲಾಹಲವೇನೂ ಕಡಿಮೆಯಾಗಲಿಲ್ಲ. ವಾಸ್ತವವಾಗಿ, ಅದೊಂದು ಯುದ್ಧವೇ ಆಗಿತ್ತು! ಆಗ ನಾನು, ‘ನಾನೇನಿದ್ದರೂ ಒಂದು ಹೆಣ್ಣೇ! ಏನೇ ಆಗಲಿ, ನಾನು ಈಗಿರುವ ಚಿಪ್ಪಿನೊಳಗಿಂದ ಹೊರಬರಬೇಕು,’ ಎಂದು ತೀರ್ಮಾನಿಸಿದೆ. ಇದನ್ನಂತೂ ನಾನು ಒಂದು ಸಂಕಲ್ಪವೆಂದು ಪರಿಗಣಿಸಿದೆನಲ್ಲದೆ, ಈ ಹಾದಿಯಲ್ಲಿ ಬರುವ ಎಲ್ಲ ಸವಾಲುಗಳನ್ನೂ ಧೈರ್ಯದಿಂದ ಎದುರಿಸಲು ನಿರ್ಧರಿಸಿದೆ. ಆ ಕ್ಷಣದಲ್ಲಿ ನನಗೆ, ‘ನಾನು ಇದುವರೆಗೂ ಎದುರಿಸಿದ ಕಷ್ಟಗಳಿಗಿಂತ ಮುಂಬರುವ ದಿನಗಳಲ್ಲಿ ಎದುರಿಸಬೇಕಾದ ಸವಾಲುಗಳು ಇನ್ನೂ ದೊಡ್ಡದಾಗಿರುತ್ತವೆ,’ ಎಂದು ಮನದಟ್ಟಾಯಿತು. ನಾನು ಒಂದು ಆಪರೇಷನ್ ಮಾಡಿಸಿಕೊಳ್ಳುವ ಮೂಲಕ ಹೆಣ್ಣಾಗಲು ಹೋದರೆ ದೈಹಿಕವಾಗಿ ನಾನು ಮತ್ತಷ್ಟು ಬಲಿಪಶುವಾಗಬಹುದು ಮತ್ತು ಅದನ್ನು ಸುತ್ತಲಿನ ಸಮಾಜ ಒಪ್ಪಿಕೊಳ್ಳುವುದಿಲ್ಲ; ಹೀಗಾಗಿ ಇದನ್ನೆಲ್ಲ ನಾನು ಅವುಡುಗಚ್ಚಿಕೊಂಡು ಸಹಿಸಿಕೊಳ್ಳಬೇಕು ಎನ್ನುವುದು ಕೂಡ ನನಗೆ ಗೊತ್ತಿತ್ತು. ಆದರೆ, ನನ್ನ ಮನಸ್ಸು ದೃಢವಾಗಿತ್ತು! ನನ್ನ ನಿಜವಾದ ಲೈಂಗಿಕ ಅಸ್ಮಿತೆಯನ್ನು ನಾನು ಈ ಜಗತ್ತಿಗೆ ತೋರಿಸುವ ಹಾದಿಯಲ್ಲಿ ಪ್ರಾಣವನ್ನೇ ಕಳೆದುಕೊಳ್ಳಬೇಕಾಗಿ ಬಂದರೆ ಅದಕ್ಕೂ ಸಿದ್ಧ ಎಂದು ನನಗೆ ನಾನೇ ಹೇಳಿಕೊಂಡೆ. ಒಟ್ಟಿನಲ್ಲಿ, ಸುತ್ತಲಿನ ಪ್ರಪಂಚಕ್ಕೆ ನಾನೊಂದು ಹೆಣ್ಣು ಎಂದು ಸಾರಿ ಹೇಳಬೇಕಾದರೆ ಏನೇನನ್ನು ಮಾಡಬೇಕಾಗುತ್ತದೋ ಅವೆಲ್ಲವನ್ನೂ ಮಾಡಲು ನಾನು ಪಣ ತೊಟ್ಟೆ! ಹೀಗೆ, ಅಂತಿಮಸತ್ಯ ಏನೆಂದು ನನಗೆ ಮನದಟ್ಟಾದ ಮೇಲೆ ನನ್ನೊಳಗಿನ ಕೋಲಾಹಲವೆಲ್ಲ ತಣ್ಣಗಾಗಿ, ನನ್ನಲ್ಲಿ ಶಾಂತಿ ಮನೆಮಾಡಿತು.

****

ನಾನು ಜಾರ್‌ಗ್ರಾಮ್‌ನಲ್ಲಿದ್ದರೂ ಜಾದವ್‌ಪುರ ಯೂನಿವರ್ಸಿಟಿಯ ಮತ್ತು ಕಲ್ಕತ್ತಾದ ಸಂಪರ್ಕವನ್ನು ಬಿಟ್ಟಿರಲಿಲ್ಲ. ಅದರಲ್ಲೂ ಜಾದವ್‌ಪುರದ ಕ್ಯಾಂಪಸ್ ಜೊತೆ ನನ್ನ ಒಡನಾಟ ನನಗೆ ಇಷ್ಟದ ಸಂಗತಿಯಾಗಿತ್ತು.
ನಾನು ಬೌದ್ಧಿಕವಾಗಿ ಮಹತ್ತ್ವವಾದುದನ್ನು ಸಾಧಿಸಬೇಕೆಂದರೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಬಗ್ಗೆ ಗಾಢವಾಗಿ ಚಿಂತಿಸುವ ಜನರೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿರಬೇಕು ಎನ್ನುವುದನ್ನು ನಾನು ಅರಿತಿದ್ದೆ. ಇದು ನನ್ನ ಜನಪ್ರಿಯತೆಯನ್ನು ಸಹಿಸದೆ, ನನ್ನ ಮೇಲೆ ಸದಾ ಹೊಟ್ಟೆಕಿಚ್ಚಿನಿಂದ ಉರಿಯುತ್ತಿದ್ದ ನನ್ನ ಶತ್ರುಗಳ ವಿರುದ್ಧ ಹೋರಾಡುವ ಒಂದು ರೀತಿಯಾಗಿತ್ತು.

The Indian Express

ಅಷ್ಟು ಹೊತ್ತಿಗೆ ನಾನಾಗಲೇ ಎಂ.ಫಿಲ್., ಮಾಡಿಕೊಂಡಿದ್ದೆ. ಆದರೆ, ಬೌದ್ಧಿಕ ಮತ್ತು ಶೈಕ್ಷಣಿಕ ಲೋಕದಲ್ಲಿ ನಾನು ನನ್ನದೇ ಆದ ಛಾಪನ್ನು ಮೂಡಿಸಬೇಕೆಂದರೆ ಇದಿಷ್ಟೇ ಸಾಲುತ್ತಿರಲಿಲ್ಲ. ಹೀಗಾಗಿ ನಾನು, ಪಿಎಚ್.ಡಿ., ಮಾಡಲು ತೀರ್ಮಾನಿಸಿದೆ. ಇದಕ್ಕಾಗಿ ನಾನು, ಬಂಗಾಳದ ಪ್ರಸಿದ್ಧ ಲೇಖಕಿ ಆಶಾಪೂರ್ಣಾದೇವಿಯವರ ಕೃತಿತ್ರಯಗಳಲ್ಲಿ (ಟ್ರಾಯ್ಲಜಿ) ಹತ್ತೊಂಬತ್ತನೇ ಶತಮಾನದ ಮಹಿಳೆಯರನ್ನು ಚಿತ್ರಿಸಿರುವ ರೀತಿಯನ್ನು ನನ್ನ ಅಧ್ಯಯನದ ವಿಷಯವಾಗಿ ಆರಿಸಿಕೊಂಡೆ. ಇದನ್ನು ತಿಳಿದ ನನ್ನ ಎಂ.ಫಿಲ್., ಮಾರ್ಗದರ್ಶಕರಾದ ಶರ್ಮಿಳಾ ಬಸು ದತ್ತ ಅವರು ಸಂತೋಷಪಟ್ಟರು. ಏಕೆಂದರೆ, ಇದು ನನ್ನ ಎಂ.ಫಿಲ್., ಅಧ್ಯಯನದ ವಿಸ್ತರಣೆಯೇ ಆಗಿತ್ತು.
ಆದರೆ ಪಿಎಚ್.ಡಿ., ಅಧ್ಯಯನಕ್ಕೆ ಮತ್ತೊಬ್ಬ ಮಾರ್ಗದರ್ಶಕರು ಬೇಕಾಗಿತ್ತು. ಇದಕ್ಕಾಗಿ ನಾನು, ಬಂಗಾಳದ ಮತ್ತೊಬ್ಬ ಪ್ರಸಿದ್ಧ ಲೇಖಕಿಯಾದ ನವನೀತಾ ದೇವ್ ಸೇನ್ ಅವರನ್ನು ಆರಿಸಿಕೊಂಡೆ. ಜಾದವ್‌ಪುರ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿದ್ದ ಇವರು, ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞರಾದ ಅಮರ್ತ್ಯ ಸೇನ್ ಅವರ ವಿಚ್ಛೇದಿತ ಪತ್ನಿಯೂ ಅಹುದು.

ನವನೀತಾ ದೇವ್ ಅವರು ನಿಜಕ್ಕೂ ಒಳ್ಳೆಯ ಪಾಂಡಿತ್ಯವನ್ನು ಹೊಂದಿರುವ ಲೇಖಕಿ. ಆದರೆ,
ನಾನು ಇದೊಂದೇ ಕಾರಣಕ್ಕೆ ಅವರನ್ನು ನನ್ನ ಪಿಎಚ್.ಡಿ., ಮಾರ್ಗದರ್ಶಕಿಯಾಗಿ ಮಾಡಿಕೊಳ್ಳಬೇಕೆಂದು ತೀರ್ಮಾನಿಸಲಿಲ್ಲ. ಇದರ ಜೊತೆಗೆ ಇನ್ನೊಂದು ಕಾರಣವೂ ಇತ್ತು. ಅದೇನೆಂದರೆ, ಇವರು ತಮ್ಮ ಕೃತಿಗಳಲ್ಲೆಲ್ಲ ತುಂಬಾ ಆಧುನಿಕವಾದ ಉದಾರವಾದಿ ನಿಲುವುಗಳನ್ನು ತಾಳುವ ಮೂಲಕವೂ ನನಗೆ ಅಚ್ಚುಮೆಚ್ಚಿನ ಲೇಖಕಿಯಾಗಿದ್ದರು. ಅದರಲ್ಲೂ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು, ಅವರ ಸಮಸ್ಯೆಗಳು ಮತ್ತು ಅವರು ಎದುರಿಸುತ್ತಿದ್ದ ಕಠೋರ ವಾಸ್ತವಗಳ ಬಗ್ಗೆ ಇವರು ಸಹಾನುಭೂತಿಯನ್ನು ಹೊಂದಿದ್ದರು. ಇವರ ಸಮಕಾಲೀನ ಲೇಖಕ-ಲೇಖಕಿಯರಲ್ಲಿ ಹೆಚ್ಚಿನವರಿಗೆ ಇಂತಹ ನಿಲುವಿರಲಿಲ್ಲ. ಅಂದಹಾಗೆ, ನವನೀತಾ ದೇವ್ ಅವರು ನನ್ನ ಬಗ್ಗೆಯೂ ಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡಿದ್ದರು. ಅವರಿಗೆ, ನಾನು ಎದುರಿಸುತ್ತಿದ್ದ ಸಮಸ್ಯೆಗಳ ಬಗ್ಗೆ ಅರಿವಿತ್ತು. ಹೀಗಾಗಿ, ನಾನು ಅವರನ್ನು ಮೊಟ್ಟಮೊದಲ ಬಾರಿಗೆ ಭೇಟಿ ಮಾಡಿದಾಗ ಸಹಜವಾಗಿಯೇ ಅವರಿಗೆ ತುಂಬಾ ಸಂತೋಷವಾಯಿತು. ಆದರೆ, ನನ್ನ ಉದ್ದೇಶಿತ ಪಿಎಚ್.ಡಿ., ಅಧ್ಯಯನಕ್ಕೆ ನಾನು ಆರಿಸಿಕೊಂಡಿದ್ದ ವಿಷಯದ ಬಗ್ಗೆ ಅವರು ಕೆಲವು ಪ್ರಶ್ನೆಗಳನ್ನೆತ್ತಿದರು. ಕೊನೆಗೆ ಅವರು, ‘ಸೋಮೂ, ನೀನು ಈ ವಿಷಯದ ಬಗ್ಗೆ ಪಿಎಚ್.ಡಿ., ಮಾಡಿದರೂ ಒಂದೇ, ಬಿಟ್ಟರೂ ಒಂದೇ. ಇದರಿಂದ ಕಾಲಹರಣವಾಗುತ್ತದಷ್ಟೆ. ಇದರ ಬದಲು ನೀನು ಟ್ರಾನ್ಸ್‌ಜೆಂಡರ್‌ಗಳಿಗೆ ಸಂಬಂಧಿಸಿದ ವಿಷಯಗಳು ಮತ್ತು ಆ ಸಮುದಾಯದಲ್ಲಿರುವ ಪ್ರವೃತ್ತಿಗಳ ಬಗ್ಗೆ ಪಿಎಚ್.ಡಿ., ಮಾಡು,’ ಎಂದರು.

ಅವರ ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ನನ್ನ ಮುಂದೆ ಹೊಸ ಸಾಧ್ಯತೆಯೊಂದು ಗೋಚರಿಸಿತು. ನಿಜ, ಅವರು ಹೇಳಿದಂತೆ ನಾನು ಟ್ರಾನ್ಸ್‌ಜೆಂಡರ್‌ಗಳ ಬಗ್ಗೆ ಮಹಾಪ್ರಬಂಧವನ್ನು ಬರೆಯಬಹುದಾಗಿತ್ತು! ಇದಕ್ಕಿಂತ ಹೆಚ್ಚಾಗಿ, ಈ ವಿಷಯವನ್ನು ನನಗಿಂತ ಚೆನ್ನಾಗಿ ಅರಿತವರು ತಾನೇ ಯಾರಿದ್ದರು!? ಏಕೆಂದರೆ, ಟ್ರಾನ್ಸ್‌ಜೆಂಡರ್‌ಗಳ ಬಗ್ಗೆ ಹೊರಜಗತ್ತಿಗೆ ಏನೇನೂ ಗೊತ್ತಿಲ್ಲ. ಅವರ ಬದುಕು ಅಂಧಕಾರ ಮತ್ತು ನಿಗೂಢತೆಗಳ ಒಡಲಾಗಿದ್ದು, ಆ ಸಮುದಾಯದ ಒಳಗಿನವರು ಮಾತ್ರ ಅವರ ಬದುಕಿನ ಬಗ್ಗೆ ವಾಸ್ತವ ದೃಷ್ಟಿಕೋನದಿಂದ ಬರೆಯಬಹುದು; ಈ ಮೂಲಕ, ಟ್ರಾನ್ಸ್‌ಜೆಂಡರ್‌ಗಳ ಬಗ್ಗೆ ಸಮಾಜದಲ್ಲಿರುವ ಅಪಕಲ್ಪನೆಗಳನ್ನು ತೊಡೆದುಹಾಕಬಹುದು. ನವನೀತಾ ದೇವ್ ಅವರು ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಂತೆಯೇ ನಾನು ಟ್ರಾನ್ಸ್‌ಜೆಂಡರ್‌ಗಳ ಬಗ್ಗೆಯೇ ಪಿಎಚ್.ಡಿ., ಅಧ್ಯಯನ ನಡೆಸಲು ಒಪ್ಪಿಕೊಂಡೆ. ಅಲ್ಲದೆ, ಇಂತಹ ಒಂದು ಅದ್ಭುತವಾದ ವಿಷಯವನ್ನು ಸೂಚಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಿದೆ. ಆದರೆ, ನನ್ನದು ದುರದೃಷ್ಟ! ಏಕೆಂದರೆ, ನವನೀತಾ ದೇವ್ ಅವರ ಈ ಕನಸನ್ನು ನಾನು ನನಸು ಮಾಡಲು ಸಾಧ್ಯವೇ ಆಗಲಿಲ್ಲ. ಇದಕ್ಕೆ ಕಾರಣರಾದವರು ನನ್ನ ಉದ್ದೇಶಿತ ಮೊದಲ ಮಾರ್ಗದರ್ಶಕರಾಗಿದ್ದ ಪ್ರೊ. ಶರ್ಮಿಳಾ ಬಸು ದತ್ತ. ಟ್ರಾನ್ಸ್‌ಜೆಂಡರ್‌ಗಳ ಬಗ್ಗೆ ಪಿಎಚ್.ಡಿ., ಮಾಡಬಹುದೆಂಬ ವಿಚಾರ ನನಗೂ ನವನೀತಾ ಅವರಿಗೂ ರೋಮಾಂಚನವನ್ನು ಉಂಟುಮಾಡಿತೆನ್ನುವುದು ನಿಜ. ಆದರೆ, ಶರ್ಮಿಳಾ ಅವರಿಗೆ ಇದು ಸ್ವಲ್ಪವೂ ಹಿಡಿಸಲಿಲ್ಲ. ಹೀಗಾಗಿ ಅವರು, ‘ಸೋಮೂ, ಇಂತಹ ವಿಷಯಗಳನ್ನು ಕುರಿತು ನಾನು ಗೈಡ್ ಆಗಿ ಕೆಲಸ ಮಾಡುವುದಿಲ್ಲ. ನೀನು ಬೇರೆ ಯಾರನ್ನಾದರೂ ನೋಡಿಕೊ,’ ಎಂದರು. ಇದರ ಪರಿಣಾಮವಾಗಿ ನಾನು ಪಿಎಚ್.ಡಿ., ಅಧ್ಯಯನವನ್ನು ತಕ್ಷಣವೇ ಶುರು ಮಾಡಲು ಆಗಲಿಲ್ಲ.

ಪರಿಸ್ಥಿತಿ ಹೀಗಾದಾಗ, ನಾನು ಏನಾದರೂ ಒಂದು ಅರ್ಥಪೂರ್ಣ ಕೆಲಸವನ್ನು ಯಾರ ಹಂಗೂ ಇಲ್ಲದೆ ಮಾಡಬೇಕೆನ್ನುವ ನಿರ್ಧಾರಕ್ಕೆ ಬಂದೆ. ಇದ್ಯಾವುದೆಂದರೆ, ಟ್ರಾನ್ಸ್‌ಜೆಂಡರ್‌ಗಳನ್ನು ಕುರಿತು ಭಾರತದ ಪ್ರಪ್ರಥಮ ನಿಯತಕಾಲಿಕೆಯನ್ನು ನಡೆಸುವ ಕೆಲಸ! ಈ ನಿಯತಕಾಲಿಕಕ್ಕೆ ನಾನು ‘ಅಭೋಮಾನವ್’ (=ಅಪೂರ್ಣ ಮನುಷ್ಯ ಅಥವಾ ಇಂಗ್ಲೀಷಿನಲ್ಲಿ ಹೇಳುವುದಾದರೆ ‘ಸಬ್‌ಹ್ಯೂಮನ್’) ಎನ್ನುವ ಹೆಸರನ್ನಿಟ್ಟೆ. ಏಕೆಂದರೆ, ಸುತ್ತಲಿನ ಸಮಾಜವು ಟ್ರಾನ್ಸ್‌ಜೆಂಡರ್‌ಗಳಿಗೆ ಹಚ್ಚಿರುವುದು ಇದೇ ಹಣೆಪಟ್ಟಿಯನ್ನು! ಅಂದಹಾಗೆ, ಈ ನಿಯತಕಾಲಿಕಕ್ಕೆ ನಾನು ಇದೇ ಹೆಸರನ್ನೇಕೆ ಇಟ್ಟೆ? ಇಂತಹ ಪ್ರಶ್ನೆ ನಿಮ್ಮಲ್ಲಿ ಬರಬಹುದು. ನಿಜ ಹೇಳಬೇಕೆಂದರೆ, ಮೇಲ್ನೋಟಕ್ಕೆ ಮಾತ್ರ ಎಲ್ಲರ ಬಗ್ಗೆಯೂ ಔದಾರ್ಯವನ್ನು ತೋರಿಸುತ್ತಿರುವ, ಆದರೆ ಆಳದಲ್ಲಿ ನನ್ನಂಥವರ ಬಗ್ಗೆ ಕ್ರೌರ್ಯವನ್ನು ಹೊಂದಿರುವ ನಮ್ಮ ಸಮಾಜದ ನಾಟಕದ ವಿರುದ್ಧ ಇದು ನನ್ನ ಪ್ರತಿಭಟನೆಯಾಗಿತ್ತು. ನಾನು ಆರಂಭಿಸಿದ ಈ ‘ಅಭೋಮಾನವ್’ ಪತ್ರಿಕೆಯು ಟ್ರಾನ್ಸ್‌ಜೆಂಡರ್‌ಗಳಿಗೆ ಸಂಬಂಧಿಸಿದ ಪ್ರತಿಯೊಂದು ವಿಚಾರವನ್ನೂ ಪ್ರಕಟಿಸುತ್ತಿತ್ತು. ಅದರಲ್ಲೂ ಮುಖ್ಯವಾಗಿ ಟ್ರಾನ್ಸ್‌ಜೆಂಡರ್‌ಗಳ ಆರೋಗ್ಯ ಮತ್ತು ಅವರು ಕಾಪಾಡಿಕೊಳ್ಳಬೇಕಾದ ನೈರ್ಮಲ್ಯ, ಅವರು ವಾಸಿಸುವ ವಾತಾವರಣ, ಅವರು ಮಾತನಾಡುವ ಅವರದೇ ಆದ ಒಂದು ಉಪಭಾಷೆ (ಡಯಲೆಕ್ಟ್), ಅವರಲ್ಲಿ ಅಂಕುರಿಸುವ ಪ್ರೀತಿ ಮತ್ತು ಲೈಂಗಿಕ ಭಾವನೆಗಳು, ಅವರು ಹಿಡ ಮಾಡಿಸಿಕೊಳ್ಳುವುದು ಮತ್ತು ಅವರ ಭವಿಷ್ಯ ಇಂತಹ ವಿಚಾರಗಳ ಬಗ್ಗೆ ಈ ನಿಯತಕಾಲಿಕದಲ್ಲಿ ನಾನು ವಿಶೇಷವಾದ ಗಮನ ಹರಿಸುತ್ತಿದ್ದೆ.

ನನ್ನ ಈ ಪತ್ರಿಕೆಗೆ ಬಂಗಾಳದ ಉಳಿದ ಮಾಧ್ಯಮಗಳು ಸಾಕಷ್ಟು ಪ್ರಚಾರ ನೀಡಿದವು. ಹೀಗಾಗಿ ಸಾವಿರಾರು ಜನರು ಈ ನಿಯತಕಾಲಿಕವನ್ನು ಆಸಕ್ತಿಯಿಂದ ಓದತೊಡಗಿದರಲ್ಲದೆ, ಟ್ರಾನ್ಸ್‌ಜೆಂಡರ್‌ಗಳಿಗೆ ಸಂಬಂಧಿಸಿದಂತೆ ಲೆಕ್ಕವಿಲ್ಲದಷ್ಟು ಪ್ರಶ್ನೆಗಳನ್ನು ಕುತೂಹಲದಿಂದ ಕೇಳತೊಡಗಿದರು. ಎಷ್ಟೋ ಜನ ನೆಪಮಾತ್ರಕ್ಕೆ ನಮ್ಮ ಈ ಪತ್ರಿಕೆಗೆ ಚಂದಾದಾರರಾದರು; ಮತ್ತೆ ಕೆಲವರು ಇಂತಹ ಅಸಾಂಪ್ರದಾಯಿಕ ಪತ್ರಿಕೆಗಳನ್ನು ಓದುವುದರಿಂದ ತಾವೂ ಉದಾರವಾದಿ ಅಥವಾ ಪ್ರಗತಿಪರರೆನ್ನಿಸಿಕೊಳ್ಳಬಹುದು ಎಂದುಕೊಂಡಿದ್ದರು; ಇನ್ನೂ ಕೆಲವರು, ಇಂತಹ ಪತ್ರಿಕೆಗಳ ಮೇಲೆ ಕಣ್ಣಾಡಿಸುವುದರಿಂದ ತಮಗೆ ಪರ್ಯಾಯವಾದ ಲೈಂಗಿಕ ಆಯ್ಕೆಗಳು ಸಿಕ್ಕುತ್ತವೆ ಎಂದು ಭಾವಿಸಿಕೊಂಡಿದ್ದರು. ಜನ ಏನಾದರೂ ಅಂದುಕೊಳ್ಳಲಿ, ನಾನು ನಿರ್ಲಿಪ್ತವಾಗಿ ಕೆಲಸ ಮಾಡಬೇಕೆಂಬುದು ನನ್ನ ತೀರ್ಮಾನವಾಗಿತ್ತು. ಒಟ್ಟಿನಲ್ಲಿ, ಈ ‘ಅಭೋಮಾನವ್’ ನಿಯತಕಾಲಿಕದ ಮೂಲಕ ನಾನೊಂದು ಒಳ್ಳೆಯ ಸಾಧನೆ ಮಾಡಿದೆ.

ಅದೇನೆಂದರೆ, ಈ ಸಮಾಜದಲ್ಲಿ ಟ್ರಾನ್ಸ್‌ಜೆಂಡರ್‌ಗಳಿಗೂ ಒಂದು ಸ್ಥಾನಮಾನ ಸಿಗುವಂತೆ ಮಾಡಿದ್ದು! ಅಲ್ಲಿಯವರೆಗೂ ನನ್ನಂತಹ ಸಾವಿರಾರು ಟ್ರಾನ್ಸ್‌ಜೆಂಡರ್‌ಗಳ ಬದುಕು ಎಷ್ಟೊಂದು ಹೀನಾಯವಾಗಿತ್ತೆಂದರೆ, ಅವರೆಲ್ಲರೂ ನಾಲ್ಕು ಕಾಸು ಸಂಪಾದಿಸಲು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಿಂತುಕೊಂಡು, ಅಲ್ಲಿ ಕೆಂಪು ದೀಪ ಹೊತ್ತಿಕೊಂಡು ವಾಹನಗಳು ನಿಂತಕೂಡಲೇ ಅವುಗಳ ಬಳಿಗೆ ಹೋಗಿ, ಚಪ್ಪಾಳೆ ತಟ್ಟುವ ಮೂಲಕ ಭಿಕ್ಷೆಯನ್ನು ಕೇಳುವುದೊಂದೇ ಗತಿಯಾಗಿತ್ತು. ಇಲ್ಲದಿದ್ದರೆ ಅವರಿಗೆ ನಾಲ್ಕು ತುತ್ತು ಅನ್ನವೂ ಸಿಕ್ಕುತ್ತಿರಲಿಲ್ಲ. ಇದನ್ನು ಬಿಟ್ಟರೆ, ಯಾರ ಮನೆಯಲ್ಲಿ ಮಗು ಹುಟ್ಟಿದೆ ಎನ್ನುವುದನ್ನು ತಿಳಿದುಕೊಂಡು, ಅಂತಹ ಮನೆಗಳಿಗೆ ಹೋಗಿ, ಅವರನ್ನು ದುಡ್ಡಿಗೆ ಪೀಡಿಸಬೇಕಾಗಿತ್ತು. ಇದೇನೇ ಇರಲಿ, ಟ್ರಾನ್ಸ್‌ಜೆಂಡರ್‌ಗಳ ವಿಚಾರ, ಸಮಸ್ಯೆಗಳು, ಹಕ್ಕುಗಳು ಮತ್ತು ಈ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳಿಗೇ ಮೀಸಲಾದ ಒಂದು ನಿಯತಕಾಲಿಕೆಯನ್ನು ನಡೆಸುವ ಮೂಲಕ ಈ ಜನರು ದನಿಯೆತ್ತುವಂತೆ ಮಾಡಬಹುದು ಎನ್ನುವ ವಿಚಾರವನ್ನು ಯೋಚಿಸುವುದೇ ಆ ದಿನಗಳಲ್ಲಿ ಕಷ್ಟವಾಗಿತ್ತು. ಆದರೂ ನಾನು ಟ್ರಾನ್ಸ್‌ಜೆಂಡರ್‌ಗಳಿಗೆ ಸಂಬಂಧಿಸಿದಂತಹ ವಿಶ್ವಾಸಾರ್ಹ ಮತ್ತು ನೈಜ ಮಾಹಿತಿಯನ್ನು ಹೆಚ್ಚುಹೆಚ್ಚಾಗಿ ಕಲೆಹಾಕತೊಡಗಿದೆ. ಏಕೆಂದರೆ, ನಾನು ಮುಂದೆ ಕೈಗೊಳ್ಳಲಿದ್ದ ಪಿಎಚ್.ಡಿ., ಅಧ್ಯಯನಕ್ಕೆ ಇದು ವಸ್ತುನಿಷ್ಠ ಆಧಾರವಾಗುತ್ತಿತ್ತು.

ಗಂಡು ಜೀವ, ಹೆಣ್ಣು ಭಾವ
ಮೂಲ: ಮಾನವಿ ಬಂದೋಪಾಧ್ಯಾಯ
ಕನ್ನಡಕ್ಕೆ: ಬಿ ಎಸ್ ಜಯಪ್ರಕಾಶ ನಾರಾಯಣ
ಪ್ರಕಾಶನ: ವಂಶಿ ಪಬ್ಲಿಕೇಶನ್ಸ್


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಆತ್ಮಮರುಕದಾಚೆ ಸಿಡಿಯುವ ಕಾರುಣ್ಯದ ಕಿಡಿಯ ರೂಪಕಗಳು

ಇದನ್ನೂ ಓದಿ: ಸಂಪಾದಕೀಯ; ಸಾಂವಿಧಾನಿಕ ನೈತಿಕತೆಯಲ್ಲಿ ಕಮಾನು ಕಟ್ಟಬೇಕಿದೆ ಬಣ್ಣಗಳು

ಇದನ್ನೂ ಓದಿ: ಅಕ್ಕಯ್ ಸಂದರ್ಶನ; ಮಂಗಳ ಮತ್ತು ಅಮಂಗಳ ಅನ್ನುವಂತದ್ದೆಲ್ಲ ಬ್ರಾಹ್ಮಣ್ಯ ಪ್ರೇರಿತ; ಇರುವುದು ಮನುಷ್ಯರು ಮತ್ತು ವೈವಿಧ್ಯತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...